ಮುಕ್ತಿಪಥಕ್ಕೆ ಮಾರ್ಗ; ಇಂದು ವೈಕುಂಠ ಏಕಾದಶಿ

Vaikunta Ekadashi
Published on
ಹಿಂದೂ ಪಂಚಾಂಗದ ಪ್ರಕಾರ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ‘ವೈಕುಂಠ ಏಕಾದಶಿ’ ಎನ್ನುತ್ತಾರೆ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಆ ಕಾರಣಕ್ಕಾಗಿಯೇ ವೈಕುಂಠ ಏಕಾದಶಿಯ ದಿನ ದೇಗುಲಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುವುದಲ್ಲದೆ, ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಹೋಗಿ, ದೇವರ ದರ್ಶನ-ಆಶೀರ್ವಾದ ಪಡೆಯುತ್ತಾರೆ.

| ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್.

ಶ್ರೀಮನ್ನಾರಾಯಣನು ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಡುವ ದಿನವೇ ವೈಕುಂಠ ಏಕಾದಶಿ ದಿನ. ಆದ್ದರಿಂದ ಇದನ್ನು ‘ಮುಕ್ಕೋಟಿ ಏಕಾದಶಿ’ ಎಂತಲೂ ಕರೆಯುತ್ತಾರೆ. ಈ ದಿನದಂದು ವಿಷ್ಣು ದೇವಾಲಯಗಳಲ್ಲಿ ಈಶಾನ್ಯದ ಬಾಗಿಲನ್ನು ತೆರೆಯುತ್ತಾರೆ. ಅಂದು ಭಕ್ತರು ಪೂರ್ವ ಬಾಗಿಲಿನಿಂದ ದೇವಾಲಯವನ್ನು ಪ್ರವೇಶಿಸಿ ಉತ್ತರ ಬಾಗಿಲಿನಲ್ಲಿರುವ ಶೇಷಶಯನನ ದರ್ಶನ ಮಾಡುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ಉತ್ತರ ಬಾಗಿಲಿನ ಮೂಲಕ ದರ್ಶನ ಆಗುವುದರಿಂದ ಇದಕ್ಕೆ ವಿಶೇಷ ಮಹತ್ವವಿದೆ.

ಏಕಾದಶಿ ಎಂದರೆ ಹನ್ನೊಂದು ಎಂದರ್ಥ. ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯ ಮತ್ತು ಮನಸ್ಸು. ಧರ್ಮ, ಕರ್ಮ, ಜ್ಞಾನ, ಸಾಧನ ಕರಣಗಳಿಂದ ಭಗವತ್ ಚಿಂತನೆಗೆ ತೊಡಗಿಸುವ ಕ್ರಿಯೆಯೇ ಏಕಾದಶಿ. ಈ ಏಕಾದಶಿಗೆ ಸಾಕ್ಷಾತ್ ಶ್ರೀಹರಿಯೇ ಅಭಿಮಾನಿ ದೇವರು. ಆ ಕಾರಣಕ್ಕೆ ಆ ದಿನವನ್ನು ಹರಿದಿನ ಎಂತಲೂ ಕರೆಯುತ್ತಾರೆ.

ಏಕಾದಶಿಯ ಮಹತ್ವ: ಏಕಾದಶಿ ಎನ್ನುವ ದೇವಿಯು ವಿಷ್ಣುವಿನಿಂದ ಉದ್ಭವಳಾಗಿ ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯ ಮಾಡುತ್ತಾಳೆ. ಇದರಿಂದ ಸಂಪ್ರೀತನಾದ ವಿಷ್ಣುವು ಏನಾದರೂ ವರ ಕೇಳು ಎಂದಾಗ ವೈಕುಂಠ ಏಕಾದಶಿ ದಿನ ಯಾರು ನಿನ್ನನ್ನು ಪೂಜಿಸುತ್ತಾರೋ ಹಾಗೂ ಉಪವಾಸ ವ್ರತ ಮಾಡುತ್ತಾರೋ ಅವರ ಪಾಪ ಪರಿಹರಿಸಿ ಮೋಕ್ಷವನ್ನು ಕರುಣಿಸು ಎಂದು ‘ಏಕಾದಶಿ ದೇವಿ’ಯು ವರವನ್ನು ಕೇಳುತ್ತಾಳೆ. ಅದಕ್ಕೆ ವಿಷ್ಣುವು ಆಗಲಿ ಎಂದು ವರವನ್ನು ನೀಡುತ್ತಾನೆ. ಇದನ್ನು ನಾವು ಭವಿಷ್ಯೋತ್ತರ ಪುರಾಣದಲ್ಲಿ ಕಾಣಬಹುದು. ಉಪವಾಸದ ಸಮಯದಲ್ಲಿ ಕೆಟ್ಟ ಯೋಚನೆ, ಕೆಟ್ಟ ಕೆಲಸ ಮಾಡಬಾರದು ಹಾಗೂ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟಿರಬೇಕು.

ಬುಧ ಗ್ರಹದ ಅನುಗ್ರಹ: ಯಾರ ಜಾತಕದಲ್ಲಿ ಬುಧ ಗ್ರಹವು ನೀಚ ಸ್ಥಾನದಲ್ಲಿದೆಯೋ ಅಥವಾ ಪಾಪ ಗ್ರಹಗಳ ಜೊತೆಯಲ್ಲಿದೆಯೋ ಅಥವಾ ಪಾಪಗ್ರಹಗಳ ದೃಷ್ಟಿಗೆ ಒಳಗಾಗಿದೆಯೋ ಅವರು ವೈಕುಂಠ ಏಕಾದಶಿಯ ದಿನ ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಬುಧ ಗ್ರಹದ ಅನುಗ್ರಹವನ್ನು ಪಡೆಯಬಹುದು.

ಏಕಾದಶಿ ವ್ರತ ಮಾಡಿದವರು: ವಸಿಷ್ಠರು, ಎಲ್ಲ ದೇವಾನುದೇವತೆಗಳು, ಋಷಿ ಮುನಿಗಳು, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ರಾಘವೇಂದ್ರ ಸ್ವಾಮಿಗಳು, ದಾಸ ಶ್ರೇಷ್ಠರು ಏಕಾದಶಿ ವ್ರತವನ್ನು ಮಾಡಿ ಮೋಕ್ಷವನ್ನು ಪಡೆದಿದ್ದಾರೆ.

ಪ್ರತಿ ಅಕ್ಷರದಲ್ಲೂ ವಿಶೇಷ: ಶ್ರೀ ವಿಷ್ಣು ಎಂಬುದಕ್ಕೆ ವಿಶೇಷ ಅರ್ಥವಿದೆ. ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು ಮತ್ತು ಎಲ್ಲ ವಸ್ತುವಿನಲ್ಲೂ ಅಂತರ್ಗತನಾಗಿರುವವನು ಎಂದರ್ಥ. ಈ ವಿಷ್ಣುವಿಗೆ ಅನ್ವಯವಾಗುವ ಜನಪ್ರಿಯವಾದ ಮತ್ತೊಂದು ಹೆಸರು ‘ನಾರಾಯಣ’. ಈ ಹೆಸರಿನ ಒಂದೊಂದು ಅಕ್ಷರದಲ್ಲೂ ವಿಶೇಷತೆಯಿದೆ. ನಾ ಎಂದರೆ ಕಾರಣರೂಪ ಜಲದ ಮೇಲೆ ನಿವಾಸವನ್ನು ಕಲ್ಪಿಸಿಕೊಂಡಿರುವವನು, ರಾ ಎಂದರೆ ಎಲ್ಲ ಮಾನವ ಜೀವಿಗಳೂ ನೆಲೆಗೊಳ್ಳುವ ಸ್ಥಾನ, ಯ ಎಂದರೆ ಎಲ್ಲ ಮಾನವರ ಹೃದಯಗಳಲ್ಲಿ ವಾಸಿಸುವವನು ಮತ್ತು ಣ ಎಂದರೆ ಮಾನವ ಕೋಟಿಯ ಅಂತಿಮ ಗಮ್ಯ ಸ್ಥಾನ ಎಂದರ್ಥ. ಈ ನಾರಾಯಣನ ಜಪ ನಿರಂತರವಾಗಿ ಮಾಡುತ್ತಿದ್ದರೆ ಅಂತ್ಯದಲ್ಲಿ ವೈಕುಂಠ ಸೇರಬಹುದು ಎಂದು ವಿಷ್ಣು ಪುರಾಣದಲ್ಲಿ ಉಲ್ಲೇಖವಾಗಿದೆ.

ಮಹಾವಿಷ್ಣುವನ್ನು ನೀಲಮೇಘಶ್ಯಾಮನೆಂದು ಕರೆಯುತ್ತಾರೆ. ವಿಷ್ಣುವಿಗೆ ನಾಲ್ಕು ಕೈಗಳು. ಈ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ ಇರುತ್ತವೆ. ಶಂಖವು ಪಂಚಭೂತಗಳನ್ನು ಸೂಚಿಸುತ್ತದೆ. ಚಕ್ರವು ಸಮಸ್ತ ಚಿತ್ತಗಳನ್ನು, ಗದೆಯು ಬುದ್ಧಿಯನ್ನು ಮತ್ತು ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚವನ್ನು ಸಂಕೇತಿಸುತ್ತದೆ. ವಿಷ್ಣುವು ಸೃಷ್ಟಿಕರ್ತನೂ ಆಗಿರುವನು. ಧರ್ಮವು ಇಳಿಮುಖವಾಗಿ ಅಧರ್ಮವು ತಾಂಡವವಾಡುತ್ತಿರುವಾಗ ಧರ್ಮವನ್ನು ಉದ್ಧರಿಸಲು ವಿಷ್ಣುವು ದೇಹಧಾರಿಯಾಗಿ ಅವತರಿಸುತ್ತಾನೆ. ವಿಷ್ಣುವಿನ ಅವತಾರಗಳು ಹತ್ತು- ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಬಲರಾಮ/ಬುದ್ಧ, ಶ್ರೀಕೃಷ್ಣ ಮತ್ತು ಕಲ್ಕಿ.

ಉಪವಾಸದ ಮಹತ್ವವೇನು?

‘ಉಪ’ ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು. ಅಂದರೆ ಭಗವಂತನ ಸಮೀಪ ವಾಸಿಸುವುದೇ ‘ಉಪವಾಸ’. ಆ ದಿನ ಧ್ಯಾನ, ಭಜನೆ. ವಿಷ್ಣು ಸಹಸ್ರನಾಮ, ಪೂಜೆ ಮಾಡಿ ಜಾಗರಣೆಯನ್ನು ಯಾರು ಮಾಡುತ್ತಾರೋ ಅವರಿಗೆ ಎಲ್ಲ ಸೌಭಾಗ್ಯವನ್ನು ಕೊಟ್ಟು ಅಂತ್ಯದಲ್ಲಿ ಮೋಕ್ಷವನ್ನು ದೇವರು ಕರುಣಿಸುತ್ತಾನೆ. ಉಪವಾಸ ವ್ರತ ಮಾಡುವುದರಿಂದ ಶಾಂತಿ, ತಾಳ್ಮೆ ಸಿಗುತ್ತದೆ. ರಕ್ತದೊತ್ತಡ, ರಕ್ತಹೀನತೆ ಹಾಗೂ ಅನೇಕ ರೋಗಗಳು ನಿವಾರಣೆ ಆಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net