

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ವಿಷ್ಣು ಭಕ್ತಿಯು ಎಲ್ಲ ಸದ್ಗುಣಗಳಿಗೂ ಹೃದಯ ಸ್ಥಾನ. ಮೋಕ್ಷ ಮಾರ್ಗಕ್ಕೆ ಪ್ರಧಾನ ಸಾಧನವೇ ಈ ವಿಷ್ಣುಭಕ್ತಿ. ಭಕ್ತಿಯು ಹೃದಯದಲ್ಲಿ ಉಗಮವಾಗಿ ಬುದ್ಧಿಯಲ್ಲಿ ಮನೆ ಮಾಡುವುದು. ಈ ವಿಷ್ಣು ಭಕ್ತಿಯ ಬಾಹ್ಯ ಲಕ್ಷಣವೇ ಗೋಪಿ ಚಂದನದಿಂದ ಊರ್ಧ್ವ ಪುಂಡ್ರ ಹಾಗೂ ಶಂಖ ಚಕ್ರಗಳ ಧಾರಣೆ. ಶುದ್ಧಿಯು ಬಾಹ್ಯ ಹಾಗೂ ಆಂತರಿಕ ಎರಡರಲ್ಲೂ ಬರಬೇಕು. ಇಂತಹ ಅಂತರಂಗ ಬಹಿರಂಗಗಳೆರಡರ ಶುದ್ಧಿಗೆ ಅತ್ಯಂತ ಪವಿತ್ರವಾದ ವಿಷ್ಣು ಭಕ್ತಿಯ ಅಸಾಧಾರಣ ದ್ಯೋತಕವೇ ತಪ್ತ ಮುದ್ರಾಧಾರಣೆ.
ತಪ್ತ ಮುದ್ರಾಧಾರಣೆಯು ಮಾಧ್ವ ಪರಂಪರೆಯ ಎಲ್ಲ ಮಠಗಳಲ್ಲೂ ಅನೂಚಾನವಾಗಿ ನಡೆದು ಬಂದ ಸಂಪ್ರದಾಯ. ಎಲ್ಲ ಮಠಗಳಲ್ಲಿ ಅವರದ್ದೇ ಆದ ಸಂಪ್ರದಾಯಗಳಿವೆ. ಕೆಲವರಲ್ಲಿ ಎರಡು ಮುದ್ರೆ ಇನ್ನು ಕೆಲವರಲ್ಲಿ ಪಂಚಮುದ್ರಾಧಾರಣೆ. ಹೀಗೆ ವಿಭಿನ್ನ ಸಂಪ್ರದಾಯಗಳಿವೆ.
ತಪ್ತ ಮುದ್ರಾಧಾರಣೆಯ ಮಹತ್ವವು ವೇದ- ಪುರಾಣಗಳಲ್ಲಿ, ಮಹಾಭಾರತದಲ್ಲಿ ಉಲ್ಲೇಖಗೊಂಡಿದೆ. ಮಧ್ವಾಚಾರ್ಯರು ತಮ್ಮ ಶಿಷ್ಯರಿಗೆ ತಪ್ತ ಮುದ್ರೆಗಳನ್ನು ಅನುಗ್ರಹಿಸಿದ ಉಲ್ಲೇಖವು ಶ್ರೀ ಸುಮಧ್ವ ವಿಜಯದಲ್ಲಿದೆ. ಮುದ್ರಾಧಾರಣೆಯನ್ನು ಪುರುಷರು, ಸ್ತ್ರೀಯರು, ಸಕಲ ವರ್ಣಾಶ್ರಮದವರೂ ಸ್ವೀಕರಿಸಬೇಕು. ಅದರಲ್ಲೂ ಪ್ರತಿ ವರ್ಷ ಚಾತುರ್ವಸ್ಯದ ಮೊದಲ ದಿನ ಅಂದರೆ ಶಯನೈಕಾದಶಿ (ಆಷಾಢ ಶುಕ್ಲ ಏಕಾದಶಿ) ದಿನ ಮುದ್ರಾಧಾರಣೆ ಅತಿವಿಹಿತ ಮತ್ತು ಶ್ರೇಷ್ಠ. ಸಕಲ ವಿಷ್ಣುಭಕ್ತರು ತಮ್ಮ ತಮ್ಮ ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರೆ ಸ್ವೀಕರಿಸುವುದು ಸಂಪ್ರದಾಯ. ಗೃಹಸ್ಥಾಶ್ರಮಗಳಿಗೆ ಎಂದಿಗೂ ಮುದ್ರೆ ನೀಡುವ ಅಧಿಕಾರ ಇಲ್ಲವೆಂಬುದು ಶಾಸ್ತ್ರ ಸಿದ್ಧ. ವ್ಯಕ್ತಿಯು ತಾನು ಎಷ್ಟೇ ವಿದ್ವಾಂಸನಾಗಿದ್ದರೂ ವೇದಶಾಸ್ತ್ರಗಳಲ್ಲಿ ಮಿಂದೆದ್ದರೂ, ಗುರುಗಳಿಂದ ವಿಹಿತ ರೀತಿಯಲ್ಲಿ ಮುದ್ರೆಗಳನ್ನು ಧರಿಸದಿದ್ದರೆ ಯಾವ ಸತ್ಕಾರ್ಯಗಳಿಗೂ ಅರ್ಹನಾಗುವುದಿಲ್ಲ ಎಂದು ಶ್ರೀ ವಾದಿರಾಜ ಸ್ವಾಮಿಗಳು ತಮ್ಮ ಯುಕ್ತಿ ಮಲ್ಲಿಕಾ ಗ್ರಂಥದಲ್ಲಿ ತಿಳಿಸಿದ್ದಾರೆ. ಪ್ರತಿ ವರ್ಷವೂ ಉಪಾಕರ್ಮ ಹೇಗೆ ಕಡ್ಡಾಯವೋ ಹಾಗೆಯೇ ವಿಹಿತವಾಗಿ ಗುರು ಅನುಗ್ರಹದಿಂದ ತಪ್ತ ಮುದ್ರೆಗಳನ್ನು ಧರಿಸುವುದು ಅಷ್ಟೇ ಮಹತ್ವದ್ದು. ಅಂತ್ಯಕಾಲದಲ್ಲಿ ತಪ್ತ ಮುದ್ರಾಧಾರಣೆಯನ್ನು ಹೊಂದಿದವನಿಗೆ ಎಂದಿಗೂ ಯಮದೂತರ ಭಯವಿಲ್ಲವೆಂದು ಬ್ರಹ್ಮಾಂಡ ಪುರಾಣ ವರ್ಣಿಸಿದೆ.
ಹಿಂದೊಮ್ಮೆ ಇಂದ್ರನೇ ಮೊದಲಾದ ಎಲ್ಲ ದೇವತೆಗಳು ವೃತ್ರಾಸುರನಿಂದ ಪರಾಜಿತರಾದರು. ಆಗ ದೇವತೆಗಳೆಲ್ಲರೂ ಮಹಾವಿಷ್ಣುವಿನ ಸನ್ನಿಧಿಗೆ ಬಂದು ತಮ್ಮನ್ನು ಕಷ್ಟದಿಂದ ಪಾರು ಮಾಡಬೇಕೆಂದು ಪ್ರಾರ್ಥಿಸಿದರು. ಆಗ ವಿಷ್ಣು ‘ನೀವೆಲ್ಲರೂ ನನ್ನ ಲಾಂಛನಗಳಾದ ಶಂಖ ಚಕ್ರಗಳನ್ನು ಧಾರಣೆ ಮಾಡಿ ನಂತರ ಯುದ್ಧಕ್ಕೆ ತೆರಳಿ’ ಎಂದು ಆಜ್ಞಾಪಿಸಿದ. ಹೀಗೆ ಶಂಖಚಕ್ರಗಳನ್ನು ಧರಿಸಿ ವಿಷ್ಣು ಭಕ್ತಿಯನ್ನು ಮೆರೆದ ದೇವತೆಗಳು ವೃತ್ರಾಸುರನೊಂದಿಗೆ ಯುದ್ಧದಲ್ಲಿ ವಿಜಯಿಗಳಾದರು. ಆದ್ದರಿಂದಲೇ ಸಮಸ್ತ ವಿಷ್ಣು ಭಕ್ತರಿಗೆ ತತ್ವಜ್ಞಾನ ಸಂಪಾದನೆ ಎಂಬ ಯುದ್ಧದಲ್ಲಿ ಅನೇಕ ಬಾಹ್ಯ ಹಾಗೂ ಆಂತರಿಕ ಶತ್ರುಗಳ ಪರಾಜಯಕ್ಕಾಗಿ ನಿತ್ಯದಲ್ಲಿಯೂ ವಿಷ್ಣುಚಿಹ್ನೆಗಳಾದ ಶಂಖಚಕ್ರಗಳ ಗೋಪಿ ಚಂದನದಿಂದ ಧಾರಣೆ ಹಾಗೂ ಸಂದಭೋಚಿತವಾಗಿ ತಪ್ತ ಮುದ್ರಾಧಾರಣೆ ಅತಿ ಅವಶ್ಯಕ.
ಸೇರಿ ಸಂತಪ್ತ ಸುದರ್ಶನ ಶಂಖವ ಧಾರಣವನು ಭುಜಯುಗದೊಳು ಮಾಡಿ ಮುರಾರಿಯ ಮಂತ್ರಗಳವರಿಂದಲೇ ಕೇಳಿ ಓರಂತೆ ಜಪಿಸುತಿರು. | ಶ್ರೀ ವಾದಿರಾಜರು ತಪ್ತ ಮುದ್ರೆ ಇಲ್ಲದವನ ಜನ್ಮವ್ಯಾತಕೆ | ಶ್ರೀ ವಿಜಯದಾಸರು ಅಂಕಿತವಿಲ್ಲದ ದೇಹ ನಿಷೇಧ | ಶ್ರೀ ಪುರಂದರ ದಾಸರು
ಚಕ್ರ: ಸುದರ್ಶನ ಮಹಾಜ್ವಲ ಕೋಟಿ ಸೂರ್ಯ ಸಮಪ್ರಭ| ಅಜ್ಞಾನಾಂಧಸ್ಯ ಮೇ ನಿತ್ಯಂ ವಿಷ್ಣುಮಾರ್ಗಂ ಪ್ರದರ್ಶಯ||
ಕೋಟಿ ಸೂರ್ಯರಿಗೆ ಸಮನಾದ ಕಾಂತಿಯನ್ನು ಹೊಂದಿದ ಮಹಾ ಜ್ವಾಲೆಗಳಿಂದ ಕೂಡಿದ ಸುದರ್ಶನ ಚಕ್ರವು ಅಜ್ಞಾನವನ್ನು ಓಡಿಸಿ ವಿಷ್ಣು ಮಾರ್ಗವನ್ನು ತೋರಿಸುವುದು.
ಶಂಖ: ಪಾಂಚಜನ್ಯ ನಿಜದ್ವಾನ ಧ್ವಸ್ತಪಾತಕ ಸಂಚಯ| ಪಾಹಿಮಾಮ್ ನರಕಾದ್ಘೋರಾತ್ ಸಂಸಾರಾರ್ಣವ ತಾರಣ||
ಯಾವ ಪಾಂಚಜನ್ಯ ತನ್ನ ನಾದದಿಂದ ಪಾಪಗಳ ಪರ್ವತಗಳನ್ನೇ ನಾಶಪಡಿಸುವುದೋ, ಅದು ಎಲ್ಲರನ್ನೂ ಘೊರ ನರಕದಿಂದ ಪಾರು ಮಾಡುತ್ತದೆ.
ತತ್ವಜ್ಞಾನದ ಪ್ರಾಪ್ತಿ: ಚಕ್ರಕ್ಕೆ ದುರ್ಗಾದೇವಿಯು, ಶಂಖಕ್ಕೆ ಶ್ರೀದೇವಿಯು ಅಭಿಮಾನಿ ದೇವತೆಗಳು ಎನಿಸಿದ್ದಾರೆ. ಅಂತಹ ಶ್ರೀ ಮಹಾಲಕ್ಷ್ಮಿಯ ಎರಡು ರೂಪಗಳಾದ ಶ್ರೀದೇವಿ, ದುರ್ಗಾದೇವಿಯರ ಅನುಗ್ರಹದಿಂದ ಅಜ್ಞಾನ ಮಿಥ್ಯಾಜ್ಞಾನಗಳ ಪರಿಹಾರವಾಗಿ ತತ್ವಜ್ಞಾನದ ಪ್ರಾಪ್ತಿಯಾಗುವುದು.