ದಕ್ಷಿಣಾಯನದಲ್ಲಿ ಧರ್ಮಾಚರಣೆಯಿಂದಲೇ ರಕ್ಷೆ; ಇಂದು ದಕ್ಷಿಣಾಯಣ ಆರಂಭ

Dakshinayana
Published on
ಪ್ಲವ ನಾಮ ಸಂವತ್ಸರದ ಉತ್ತರಾಯಣವು 2021ರ ಜನವರಿಯಲ್ಲಿ ಆರಂಭವಾಗಿ, ಜುಲೈ 15ಕ್ಕೆ ಮುಕ್ತಾಯವಾಗಿದೆ. ಇಂದಿನಿಂದ (ಜುಲೈ 16) ದಕ್ಷಿಣಾಯನ ಆರಂಭವಾಗಲಿದೆ. ಉತ್ತರಾಯಣದಲ್ಲಿ ವಿವಾಹ, ಉಪನಯನ, ಗೃಹಪ್ರವೇಶ, ದೇವತಾ ಸ್ಥಾಪನೆ, ಮಂದಿರ ನಿರ್ವಣ, ಶೋಡಷಸಂಸ್ಕಾರಗಳಂತಹ ಅನೇಕ ಶುಭಕಾರ್ಯಗಳನ್ನು ನೆರವೇರಿಸಲು ಅವಕಾಶ ನೀಡಿದ ಪರಮಾತ್ಮ ಜುಲೈ 20ರಂದು ಶಯನ ಏಕಾದಶಿಯಂದು ವಿಶ್ರಾಂತಿಗೆ ಜಾರುತ್ತಾನೆ. ಜುಲೈ 24ರ ವ್ಯಾಸಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಋಷಿಗಳಿಲ್ಲದೆ ರಾಜಮಹಾರಾಜರಿಲ್ಲ. ಆಷಾಢ ಶುಕ್ಲ ಪೌರ್ಣಮಿಯಾದ ಅಂದಿನಿಂದ ಎಲ್ಲ ಸಂನ್ಯಾಸಿಗಳೂ ಚಾತುರ್ವಸ್ಯವನ್ನು ಆರಂಭಿಸುತ್ತಾರೆ. ನಾಲ್ಕು ಪಕ್ಷಗಳು ಒಂದೇ ಕಡೆ ನೆಲೆ ನಿಂತು ಸ್ವಾಧ್ಯಾಯ, ಸಾಧನೆ ಮೂಲಕ ಭಾದ್ರಪದ ಮಾಸದ ಪೌರ್ಣಮಿವರೆಗೆ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಜನಕಲ್ಯಾಣ, ರಾಜನ ಶ್ರೇಯಸ್ಸಿಗೆ ಪ್ರಾರ್ಥಿಸುತ್ತಾರೆ. ಸ್ವತಃ ರಾಜನು ಗುರುಸನ್ನಿಧಿಗೆ ಧಾವಿಸಿ, ತಮಗೆ ಹಾಗೂ ನಾಡಿನ ಜನರಿಗೆ ಒಳಿತಾಗುವಂತೆ ಪ್ರಾರ್ಥನೆ ಮಾಡುವಂತೆ, ಚಾತುರ್ವಸ್ಯಕ್ಕೆ ಅಗತ್ಯ ಎಲ್ಲ ಅನುಕೂಲ ಕಲ್ಪಿಸಿಕೊಡುವುದಾಗಿ ಹೇಳಬೇಕು.

ಕರ್ಕಾಟಕ ರಾಶಿಗೆ ಸೂರ್ಯ ಪ್ರವೇಶಿಸಿದಾಗ ದಕ್ಷಿಣಾಯನ ಪುಣ್ಯಕಾಲ ಆರಂಭವಾಗುತ್ತದೆ. ಆಷಾಢದ ನಂತರ ಶ್ರಾವಣದಲ್ಲಿ ಮಂಗಳಗೌರಿ ಪೂಜೆ, ಉಪಾಕರ್ಮ, ಕೃಷ್ಣಾಷ್ಟಮಿ, ಉಮಾಮಹೇಶ್ವರ ಪೂಜೆಗಳು, ನಂತರ ಸ್ವರ್ಣಗೌರಿ ವ್ರತ, ಅನಂತಪದ್ಮನಾಭ ವ್ರತ ಆಚರಣೆ ನಡೆಯುತ್ತದೆ. ನಂತರದಲ್ಲಿ ಹುಣ್ಣಿಮೆ. ಬಳಿಕ ಪಿತೃಪಕ್ಷದಲ್ಲಿ ಯಾವುದೇ ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ತಮ್ಮ ಪೂರ್ವಜರನ್ನು ಸಂತೃಪ್ತಪಡಿಸಲು ಶ್ರಾದ್ಧಕಾರ್ಯ ಮಾಡುತ್ತಾರೆ. ಅಲ್ಲಿಂದಾಚೆಗೆ ಮಾತೃಪಕ್ಷ ಎನ್ನಲಾಗುವ ನವರಾತ್ರಿ ಸಂದರ್ಭದಲ್ಲಿ ಪೂಜಿಸುವವರಿಗೆ ವಿಶೇಷ ಫಲ ಲಭಿಸುತ್ತದೆ. ಮಾರ್ಗಶಿರ ಮಾಸದಲ್ಲಿ ದತ್ತಾತ್ರೇಯ ಜಯಂತಿ ಆಚರಿಸಲಾಗುತ್ತದೆ. ಮನುಷ್ಯ ತನ್ನನ್ನು ಮರೆತು ದೈವಚಿಂತನೆಯಲ್ಲಿ ಮುಳುಗಬೇಕು, ಆ ಮೂಲಕ ರಾಷ್ಟ್ರದ ಒಳಿತಿಗೆ ಪ್ರಾರ್ಥಿಸಬೇಕು ಎಂಬುದು ಸಂದೇಶ.

‘ಪ್ರಜಾಪಾಪಂ ರಾಜಪಾಪಃ’ ಎಂಬ ಮಾತಿದೆ. ಪ್ರಜೆಗಳು ಮಾಡಿದ ಪಾಪಗಳನ್ನೂ ರಾಜನೇ ಹೊರಬೇಕಾಗುತ್ತದೆ. ರಾಜನಿಗೆ ಪಾಪ ಅಂಟಿದರೆ ಅದು ಮತ್ತೆ ರಾಷ್ಟ್ರಕ್ಕೆ ಮಾರಕವಾಗುತ್ತದೆ. ಹಾಗಾಗಿ, ಪ್ರಧಾನಿಗಳಿಗೆ ಎದುರಾಗಲಿರುವ ಕಂಟಕಗಳು, ಮಹಾಮಾರಿಗಳು ದೂರವಾಗಲಿ, ಅವರಿಗೆ ರಾಷ್ಟ್ರವನ್ನು ಮುನ್ನಡೆಸುವ ಶಕ್ತಿ ದೊರಕಲಿ ಎಂದು ಎಲ್ಲರೂ ಪ್ರಾರ್ಥಿಸಬೇಕು. ಈ ಸಂದರ್ಭದಲ್ಲಿ ಭಯಪಡದೆ ವಿಶ್ವಾಸ ಮೂಡುವ ಸಲುವಾಗಿ ಈ ಕೆಳಕಂಡ ಶ್ಲೋಕ, ಮಂತ್ರಗಳನ್ನು ಪಠಿಸುವುದು ಒಳಿತು.

‘ನಮಸ್ತೇ ಭಗವಾನ್ ದೇವ ದತ್ತಾತ್ರೇಯ ಜಗತ್ಪ್ರಭೋ. ಸರ್ವಬಾಧಾಪ್ರಶಮನಂ ಕುರು ಶಾಂತಿಂ ಪ್ರಯಚ್ಛ ಮೇ’

‘ಅನಸೂಯಾಸುತ ಶ್ರೀಶ ಜನಪಾತಕನಾಶನ. ದಿಗಂಬರ ನಮೋ ನಿತ್ಯಂ ತುಭ್ಯಂ ಮೇ ವರಧೋ ಭವ’

ಮಹಾಮೃತ್ಯುಂಜಯ ಮಂತ್ರ: ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿ ವರ್ಧನಂ. ಉರುವಾರುಕಮಿವಾ ಬಂಧನಾತ್ ಮೃತ್ಯೋಮುಕ್ಷ್ಯ ಮಾಮ್ರಿತಾತ್.

(ಈ ಮಂತ್ರವು ನಮ್ಮನ್ನು ಮರಣಭಯದಿಂದ ರಕ್ಷಿಸುತ್ತದೆ. ಬದುಕನ್ನು ಆನಂದದಿಂದ ಸಾಗಿಸಲು ಸಹಾಯ ಮಾಡುತ್ತದೆ)

ರಾಷ್ಟ್ರದ ಅಭ್ಯುದಯಕ್ಕೆ ತೊಡಕು: ಕರ್ಕಾಟಕ ಸಂಕ್ರಮಣವು ಹಸ್ತಾ ನಕ್ಷತ್ರ, ಕನ್ಯಾ ರಾಶಿಯಲ್ಲಿ ಸಂಭವಿಸುತ್ತಿದ್ದು, ಇದು ಚಂದ್ರನ ನಕ್ಷತ್ರ. ಕನ್ಯಾ ರಾಶಿಯವರಿಗೆ ಪಂಚಮದಲ್ಲಿ ಶನಿ ಹಾಗೂ ಷಷ್ಠಮದಲ್ಲಿ ಗುರು ಇರುವುದು ತುಸು ತೊಡಕು. ರಾಷ್ಟ್ರದ ಅಭ್ಯುದಯಕ್ಕೆ ಚಿಂತನೆ ಮಾಡಿದ್ದೆಲ್ಲವೂ ಫಲ ಕೊಡುವುದಿಲ್ಲ. ರಾಷ್ಟ್ರ, ರಾಜ್ಯ ಆಳುವವರು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಅದೇ ರೀತಿ ಕರ್ಕಾಟಕ ರಾಶಿಯೂ ಚಂದ್ರನ ಮನೆ. ಈ ಬಾರಿ ಕರ್ನಾಟಕದ ಮಂಗಳೂರು, ಕಾರವಾರ, ನಂತರದಲ್ಲಿ ಮುಂಬೈ, ಉತ್ತರಾಖಂಡ ಸೇರಿ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಮಳೆ ಅವಾಂತರ ಸೃಷ್ಟಿಸುತ್ತದೆ. ಜನಸಾಮಾನ್ಯರಿಗೆ ಯಾವುದೇ ಸಂಕಷ್ಟಗಳು ಎದುರಾಗದಂತೆ ನೋಡಿಕೊಳ್ಳಬೇಕು. ಸಾಮಾನ್ಯ ಜನರಿಗೆ 100 ರೂ. ಎನ್ನುವುದು ದೊಡ್ಡ ಮೊತ್ತ. ನೀರಿನಷ್ಟೆ ಪ್ರಮುಖವಾದ ಪೆಟ್ರೋಲ್ ದರವನ್ನು 100 ರೂ.ಗೂ ಮೀರಿ ಹೆಚ್ಚಿಸಿರುವುದು ನಿಜಕ್ಕೂ ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಕನಿಷ್ಠ ಶೇಕಡ 40ರಷ್ಟಾದರೂ ಪೆಟ್ರೋಲ್ ದರವನ್ನು ಇಳಿಸಿ 60-65 ರೂ.ಗೆ ನಿಗದಿಪಡಿಸಿದರಷ್ಟೆ ಜನರು ನಿರಾಳರಾಗುತ್ತಾರೆ. ಇಲ್ಲದಿದ್ದರೆ, ಸರ್ಕಾರ ಏನೆಲ್ಲ ಸಾಧನೆ ಮಾಡಿದರೂ ನಗಣ್ಯವಾಗಿ ಮುಂದಿನ ಚುನಾವಣೆಯಲ್ಲಿ ಜನಸಾಮಾನ್ಯರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ.

ರಾಜಸ್ಥಾನ, ಪಂಜಾಬ್, ಉತ್ತರಪ್ರದೇಶ, ಛತ್ತೀಸ್​ಗಢ ಮುಂತಾದ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಸವಾಲು ಎದುರಾಗುತ್ತದೆ. ರೈತರ ಚಳವಳಿಯನ್ನೂ ಉದಾಸೀನ ಮಾಡಬಾರದು. ಸೆಪ್ಟೆಂಬರ್ 14ರಂದು ಗುರು ಮತ್ತೆ ಬದಲಾವಣೆ ಆಗಲಿದ್ದು, ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ನವೆಂಬರ್ 20ಕ್ಕೆ ಕುಂಭ ರಾಶಿಗೆ ಪಯಣಿಸುತ್ತಾನೆ. ಈ ಎರಡು ತಿಂಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ನಡೆಯುತ್ತದೆ, ಅಸ್ಥಿರತೆ ಕಾಡುತ್ತದೆ.

ಗ್ರಹಣಗಳ ದೋಷವಿಲ್ಲ: ಈ ಆಯನದಲ್ಲಿ ನವೆಂಬರ್ 19ರಂದು ಚಂದ್ರಗ್ರಹಣ, ಡಿಸೆಂಬರ್ 4ರಂದು ಸೂರ್ಯಗ್ರಹಣ ಸಂಭವಿಸುತ್ತದೆ. ಆದರೆ ಅವು ಆಸ್ಟ್ರೇಲಿಯಾ, ರಷ್ಯಾ, ಸ್ಪೇನ್ ಮುಂತಾದೆಡೆ ಮಾತ್ರ ಗೋಚರವಾಗಲಿದ್ದು, ಭಾರತದಲ್ಲಿ ಗೋಚರವಾಗುವುದಿಲ್ಲ. ಆದ್ದರಿಂದ ಆಚರಣೆಯೂ ಇಲ್ಲ, ದೋಷವೂ ಇಲ್ಲ. ಹಿಮಾಲಯದಲ್ಲಿ ಸ್ವಲ್ಪ ಮಟ್ಟಿಗೆ ಹಾದುಹೋಗುವ ಕಾರಣ ಕೆಲವೆಡೆ ಭೂಕಂಪನ, ಜಲಪ್ರವಾಹ ಆಗಬಹುದು. ಅಮೆರಿಕಕ್ಕೆ ಹೆಚ್ಚು ತೊಂದರೆ ಆಗಲಿದೆ. ರಾಷ್ಟ್ರ ಆಳುವವರು ಸಮತೋಲನದಲ್ಲಿ ಇರಬೇಕು. 138 ಕೋಟಿ ಜನರ ಕಲ್ಯಾಣಕ್ಕೆ ದಕ್ಷಿಣದಲ್ಲಿ ಮತ್ತೊಂದು ಸಂಸತ್ ಅವಶ್ಯಕತೆ ಇದೆ. ಈ ಬಗ್ಗೆ ಚಿಂತನೆ ನಡೆಸಬೇಕು. ಆಳುವವರು ಬಾಯಿಮಾತಿಗೆ ಜೈಶ್ರೀರಾಮ್ ಎಂದರೆ ಸಾಲದು. ಹಿಂದುತ್ವ ಜಪ ಮಾಡುವುದಕ್ಕಿಂತಲೂ ನಿಜವಾಗಿ ರಾಮನ ರೀತಿಯಲ್ಲಿ ಆಡಳಿತ ನೀಡಬೇಕು. ಇನ್ನೊಂದು ಮತ, ಧರ್ಮದ ಬಗ್ಗೆ ಅಸಹನೆಯಿಲ್ಲದೆ ಎಲ್ಲರನ್ನೂ ತಮ್ಮವರೆಂದು ಕಾಣಬೇಕು.

ರಾಮಾಯಣದಲ್ಲಿನ ಈ ಘಟನೆಯನ್ನು ನೋಡಿ. ಮಹಾರಾಜ ಶ್ರೀರಾಮನು ರಾಜ್ಯವಾಳುತ್ತಿರುವಾಗ ವಿಧವೆಯರ ಆಕ್ರಂದನವಿರಲಿಲ್ಲ, ಹಾವುಗಳ (ನಿಮಿತ್ತವಾದ ಮರಣ) ಭಯವಿರಲಿಲ್ಲ. ಹಾಗೆಯೇ ರೋಗಭಯವೂ ಇರಲಿಲ್ಲ. ಕಳ್ಳಕಾಕರ ಹೆದರಿಕೆ ಇರಲಿಲ್ಲ, ಯಾರಿಗೂ ಏನೊಂದು ಕೆಡುಕು ಉಂಟಾಗುತ್ತಿರಲಿಲ್ಲ. ಹಿರಿಯರು ಬದುಕಿರುವಾಗ ಬಾಲಕರಿಗೆ ಮೃತ್ಯುಭಯವಿರಲಿಲ್ಲ. ಎಲ್ಲ ಜನರೂ ಶ್ರೀರಾಮ ಪೂಜಾತತ್ಪರರೂ, ರಾಮಚಿಂತಕರೂ ಆಗಿದ್ದರು. ಕಾಲಕ್ಕೆ ಸರಿಯಾಗಿ ಲೋಕದ ಕ್ಷೇಮಕ್ಕೆ ತಕ್ಕಷ್ಟು ಮಳೆಯನ್ನು ಮೋಡಗಳು ಸುರಿಸುತ್ತಿದ್ದವು. ಎಲ್ಲ ಪ್ರಜೆಗಳೂ ವರ್ಣಾಶ್ರಮ ಧರ್ಮನಿಷ್ಠರಾಗಿದ್ದರು. ಶ್ರೀರಾಮಚಂದ್ರನು ತಂದೆ ಮಕ್ಕಳನ್ನು ಸಲಹುವಂತೆ ತನ್ನ ಪ್ರಜೆಗಳನ್ನು ಪಾಲಿಸುತ್ತಿದ್ದ. ಸರ್ವಲಕ್ಷಣ ಸಂಪನ್ನನೂ, ಸರ್ವಧರ್ಮಪರಾಯಣನೂ ಆದ ಭಗವಾನ್ ಶ್ರೀರಾಮನು ಹತ್ತು ಸಾವಿರ ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿದ.

ರಾಜನು ಎಲ್ಲ ಪ್ರಜೆಗಳನ್ನೂ ಸಮಾನವಾಗಿ ಕಾಣುತ್ತಿದ್ದರೆ, ಅದಕ್ಕೆ ತಕ್ಕುದಾಗಿ ಮಳೆ, ಬೆಳೆಯಾಗುತ್ತದೆ, ರೋಗಭಯವಿರುವುದಿಲ್ಲ. ಕಳೆದ ನಾಲ್ಕು ಸಂವತ್ಸರದಲ್ಲೂ ದೇಶಕ್ಕೆ ಒಳಿತಾಗಿಲ್ಲ. ನೋಟು ಅಮಾನ್ಯೀಕರಣ, ಜಿಎಸ್​ಟಿ ಜಾರಿ ನಂತರ ಇದೀಗ ಕರೊನಾ ಮಹಾಮಾರಿ ಆವರಿಸಿದೆ. ಹಿಂದಿನ 70 ವರ್ಷಗಳ ಆಡಳಿತ ಕೆಡುಕನ್ನೇ ಮಾಡಿದೆ ಎಂದು ಹೇಳಲು ಆಗದು. ಭಾರತೀಯ ಆಹಾರ ನಿಗಮ(ಎಫ್​ಸಿಐ) ಸ್ಥಾಪನೆ ಮಾಡದಿದ್ದರೆ ಈಗಿನ ಸರ್ಕಾರವು ಜನರಿಗೆ ಆಹಾರ ಧಾನ್ಯ ಹೇಗೆ ವಿತರಣೆ ಮಾಡುತ್ತಿತ್ತು? ಮಾನವರಾಗಿ ಭಾರತವನ್ನು ನೋಡುವುದನ್ನು ರೂಢಿಸಿಕೊಳ್ಳಬೇಕು.

ಕೋವಿಡ್​ನಿಂದ ಹೊರಬರಬೇಕು: 2024ರ ಚುನಾವಣೆಯಲ್ಲಿ ಜಯಿಸಬೇಕೆಂದರೆ ಕರೊನಾ ಮಹಾಮಾರಿ ಸಂಪೂರ್ಣ ನಿಯಂತ್ರಣಕ್ಕೆ ಬರಲೇಬೇಕು. ಜತೆಗೆ, ಇದೀಗ ಸಂಪೂರ್ಣ ಕುಸಿದಿರುವ ಆರ್ಥಿಕತೆ ಹಳಿಗೆ ಬರಬೇಕು. ಪ್ರಧಾನಿಯವರ ಮೇಲೆ ನೇರವಾಗಿ ದುರಾಡಳಿತ, ಭ್ರಷ್ಟಾಚಾರದ ಆರೋಪಗಳು ಇಲ್ಲವಾದರೂ, ಉತ್ತಮ ಆಡಳಿತ ನೀಡಲು ವಿಫಲರಾದರು ಎಂಬ ಆರೋಪ ದೃಢವಾಗುತ್ತದೆ. ಆರೋಪಗಳನ್ನು ಮುಚ್ಚಿಕೊಳ್ಳಲು ಸಂಪುಟ ಪುನಾರಚನೆಯಂಥ ಕಾರ್ಯಕ್ಕೆ ಇಳಿಯುವ ಬದಲು ವೈಫಲ್ಯಗಳನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ದೈವದಿಂದ ಬಂದಿರುವ ಈ ಮಹಾಮಾರಿ ದೈವಕೃಪೆಯಿಂದಲೇ ತೊಲಗಬೇಕು. ಧರ್ಮದ ಆಚರಣೆ ಮಾಡದಿದ್ದಾಗ ಹಾಗೂ ದೇಶದ ಸಂಪತ್ತಿಗೆ ಕೈ ಹಾಕಿದಾಗ ಸಂಕಷ್ಟ ಎದುರಾಗುತ್ತದೆ, ಅಂಥವರನ್ನು ‘ನಾನೇ ಶಿಕ್ಷಿಸುತ್ತೇನೆ’ ಎಂದು ಶ್ರೀಮನ್ನಾರಾಯಣ ಹೇಳಿದ್ದಾನೆ. ಪ್ರಜೆಗಳನ್ನು ಕಾಯಲು ನಿಮ್ಮನ್ನು ಕೂರಿಸಲಾಗಿದೆ ಎಂಬುದನ್ನು ಅರಿತು ಆಡಳಿತ ನಡೆಸಬೇಕು.

ಕೆಲ ದೇಶಗಳಿಗೆ ಸಂಕಷ್ಟ: ಅಮೆರಿಕದಿಂದ ಭಾರತ ಸದ್ಯಕ್ಕಂತೂ ಯಾವ ಸಹಾಯವನ್ನೂ ನಿರೀಕ್ಷಿಸುವಂತಿಲ್ಲ. ರಷ್ಯಾದಿಂದ ತಕ್ಕಮಟ್ಟಿಗೆ ಅನುಕೂಲವಿದೆ. ದಕ್ಷಿಣ ಆಫ್ರಿಕಾ, ಇಟಲಿ ದೇಶಗಳು ತೊಂದರೆಗೆ ಸಿಲುಕಲಿವೆ. ಮುಸ್ಲಿಂ ಆಡಳಿತವಿರುವ ದೇಶಗಳಲ್ಲಿ ಅನಾಹುತವಾಗುವ ಸಂಭವವಿದ್ದು, ಆ ರಾಷ್ಟ್ರಗಳ ಪ್ರಮುಖರು ಎಚ್ಚರಿಕೆ ವಹಿಸಬೇಕು.

ಬಿಎಸ್​ವೈ ಅವರನ್ನು ಕೆಣಕದಿರಿ

ರಾಜ್ಯದಲ್ಲಿ ಆಡಳಿತ ನಡೆಸಿಕೊಂಡು ಹೋಗುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನವನ್ನು 2023ರ ಚುನಾವಣೆವರೆಗೂ ಕದಲಿಸುವ ಸಾಹಸಕ್ಕೆ ಬಿಜೆಪಿ ವರಿಷ್ಠರು ಮುಂದಾಗಬಾರದು. ಇದರಿಂದ ಪಕ್ಷಕ್ಕೆ ಅಪಾರ ಹಾನಿ ಸಂಭವಿಸುತ್ತದೆ. ಗುರು ಶನಿಯ ಮನೆಯಲ್ಲಿ, ಶನಿ ಸ್ವಂತ ಮನೆಯಲ್ಲಿ ಇದ್ದಾರೆ. ರಾಜ್ಯ ಸರ್ಕಾರದ ಆಡಳಿತ ನಡೆಸುತ್ತಿರುವವರೂ ಸಂಪುಟವನ್ನು ಸಮತೋಲನಗೊಳಿಸಬೇಕು. ಸಚ್ಚಾರಿತ್ರ್ಯವಿರುವ ಯುವ ಶಾಸಕರು, ಯುವತಿಯರಿಗೆ ಅವಕಾಶ ನೀಡಿ, ಹಿರಿಯ ಸಚಿವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಬೇಕು. ಇದು ಸಿಎಂ ಕೀರ್ತಿಯನ್ನು ಹೆಚ್ಚಿಸುತ್ತದೆ. ವಿರೋಧ ಪಕ್ಷದವರೂ ಸಚ್ಚಿಂತನೆ, ಸನ್ಮಾರ್ಗ, ಸದ್ವ್ಯಕ್ತಿಗಳಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟಂತಾಗುತ್ತದೆ. ಶನಿ ಎಂದರೆ ಸೇವಕ. ನಿಜವಾದ ಸೇವೆ ಮಾಡಿದವರನ್ನು ರಕ್ಷಿಸುವ ಶನಿ, ದುರಹಂಕಾರಿಗಳನ್ನು ಶಿಕ್ಷಿಸುತ್ತಾನೆ.

ಮಕ್ಕಳಿಗೆ ಬಾಧಿತವಾಗದು

ಕರೊನಾ ಮಹಾಮಾರಿ ಮಕ್ಕಳನ್ನು ಬಾಧಿಸುವುದಿಲ್ಲ. ಹೆಚ್ಚು ಸಾವುನೋವು ಕಾಣುವುದಿಲ್ಲ. ಆದರೆ ಈ ಸಮಯದಲ್ಲಿ ಶನಿ ಸಂಚಾರವಿರುವುದರಿಂದ ಯಾವ ಅನಾಹುತ ಸಂಭವಿಸುತ್ತದೆ ಎಂದು ಊಹಿಸುವುದು ಕಷ್ಟ, ಎಚ್ಚರದಿಂದಿರಬೇಕು. ಸೆಪ್ಟೆಂಬರ್ 17ರ ಅವಧಿಯಲ್ಲಿ ವ್ಯಾಧಿ ಬಲಿಷ್ಠವಾಗಬಹುದು. ಜಾತ್ರೆ ಜತೆಗೆ ಗಂಗಾ, ಯಮುನಾ, ಸರಸ್ವತಿ ತೀರಗಳಲ್ಲಿ ಜನಜಂಗುಳಿ ಆಗದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ನಿಯಮ ಜಾರಿ ಮಾಡಬೇಕು. ಮಹಾರಾಷ್ಟ್ರ, ಕೇರಳ, ತಮಿಳುನಾಡು, ದೆಹಲಿ, ಉತ್ತರಾಖಂಡ, ಬಿಹಾರದಲ್ಲಿ ರೋಗ ಭೀಕರವಾಗುವ ಅಪಾಯವನ್ನು ತಪ್ಪಿಸಬೇಕೆಂದರೆ, ಶ್ರೀಮನ್ನಾರಾಯಣನ ಸ್ವರೂಪವಾದ ನಿರ್ಗಣ ಪಾದುಕೆಗಳಿರುವ ಗಾಣಗಾಪುರದಲ್ಲಿರುವ ಶ್ರೀ ದತ್ತಾತ್ರೇಯ ದರ್ಶನವನ್ನು ಪ್ರಧಾನಿಯವರು ಪಡೆಯುವುದು ಅನಿವಾರ್ಯ. ನಾರಾಯಣನ ಕೃಪೆಯಿದ್ದರೆ ರೋಗ ಬಂದಂತೆಯೇ ಹೋಗುತ್ತದೆ.ಕರೊನಾ ಸಂದರ್ಭದಲ್ಲಿ ಮಾಧ್ಯಮಗಳು, ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು ಜನರಲ್ಲಿ ಭಯ ಹುಟ್ಟಿಸುವ ಬದಲಿಗೆ ನಿಜ ಸುದ್ದಿಗಳನ್ನು ಬಿತ್ತರಿಸುವ ಹೊಣೆ ಹೊರಬೇಕು.

(ಲೇಖಕರು ದೈವಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net