ಧರ್ಮದ ಬೆಳಕು ನೀಡಿದ ಸಂತ ಶ್ರೀ ಶ್ರೀಧರ ಸ್ವಾಮಿಗಳು

Shreedhara
Published on

ಲೌಕಿಕ ಬದುಕಿನ ಆಕರ್ಷಣೆ ಹೆಚ್ಚಿ, ಅದರ ಅಂಧಾನುಕರಣೆಯಲ್ಲಿ ಧಾವಿಸುತ್ತ ಮನಸ್ಸಿನ, ಬದುಕಿನ ನೆಮ್ಮದಿ ಕಳೆದುಕೊಂಡ ಸಮಾಜಕ್ಕೆ ಭಕ್ತಿ-ಅಧ್ಯಾತ್ಮದ ಸಂಜೀವಿನಿ ಒದಗಿಸಿದವರು ಮಹಾನ್ ಸಂತ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು. ಅಧ್ಯಾತ್ಮವನ್ನು ಸರಳಗೊಳಿಸಿ, ಜನರ ಹೃದಯಮಂದಿರದಲ್ಲಿ ಸದ್ಗುಣ, ಸಾತ್ವಿಕತೆ, ನೈತಿಕತೆಯನ್ನು ಪ್ರತಿಷ್ಠಾಪಿಸಿದರು. ಧರ್ಮದ ಬೆಳಕಿನಿಂದಲೇ ಅಜ್ಞಾನದ ಕತ್ತಲೆಯನ್ನು ಕಳೆದರು. ಮನುಷ್ಯ ಜನ್ಮ ಏತಕ್ಕಾಗಿ ಆಗಿದೆ, ಬದುಕಿನ ನಿಜವಾದ ಉದ್ದೇಶವೇನು, ಸಾಗಬೇಕಾದ ಮಾರ್ಗ ಯಾವುದು, ಜೀವನದ ಸಾರ್ಥಕತೆ ಹೇಗೆ, ಮೋಕ್ಷ ಎಂದರೆ ಏನು... ಎಂಬುದನ್ನೆಲ್ಲ ಅತ್ಯಂತ ಸ್ಪಷ್ಟ, ನಿಖರವಾಗಿ ತಿಳಿಸಿಕೊಟ್ಟರು. ಆ ವಿಚಾರಗಳ ಶಕ್ತಿಯಿಂದಲೇ ಅಸಂಖ್ಯ ಮನಸ್ಸುಗಳ ಕಲ್ಮಶವನ್ನು ಕಳೆದರು. ಅಷ್ಟೇ ಅಲ್ಲ, ನೈಜ ಆನಂದತತ್ತ್ವದ ದರ್ಶನ ಮಾಡಿಸಿ ಅನಂತ ಶಕ್ತಿಯ ಪರಿಚಯ ಮಾಡಿಸಿದರು. ಅವರ ವಾಣಿ ಕೇಳಿದವರ, ದರ್ಶನ ಪಡೆದುಕೊಂಡವರ, ಅಷ್ಟೇ ಏಕೆ ಭಕ್ತಿಯಿಂದ ನಾಮಸ್ಮರಣೆ ಮಾಡಿದವರ ಬದುಕೇ ಬದಲಾಯಿತು. ನಡೆದಾಡುವ ದೇವರಾದರೂ ಮಾನವೀಯತೆಯ ಸೇವೆಯಲ್ಲೇ ಸಾರ್ಥಕತೆ ಕಂಡರು.

‘ಭಕ್ತಿ ಮತ್ತು ಅದರ ಸಾಧನೆ ಕಠಿಣವಲ್ಲ. ಏಕೆಂದರೆ ಭಕ್ತಿ ಎಂದರೆ ಪ್ರೇಮ ಹಾಗೂ ಪ್ರೇಮ ಮಾಡುವುದೇ ಭಕ್ತಿ. ಭಕ್ತಿ ಮತ್ತು ಪ್ರೇಮ ಇವು ತಾತ್ವಿಕ ದೃಷ್ಟಿಯಿಂದ ಒಂದೇ ಆಗಿವೆ’ ಎಂಬ ಅಮೃತವಾಕ್ಯದಿಂದ ನೊಂದವರ ದುಃಖ ನಿವಾರಣೆ ಮಾಡಿದರು. ಹಿಂದೆಲ್ಲ ನಮ್ಮ ಋಷಿಮುನಿಗಳು ಅಧ್ಯಾತ್ಮದ ಪ್ರಖರ ತೇಜಸ್ಸಿನಿಂದ ಜಗದೋದ್ಧಾರಗೈದ ನಿದರ್ಶನಗಳು ಬೇಕಾದಷ್ಟಿವೆ. ಆದರೆ, ಈ ಕಲಿ ಕಾಲದಲ್ಲಿ ಎಲ್ಲೆಲ್ಲೂ ಅನ್ಯಾಯ, ಸ್ವಾರ್ಥ, ಲೋಭಗಳೇ ತಾಂಡವವಾಡುತ್ತಿರುವಾಗ ಇಂಥ ಸಾಧನೆ ಸಾಧ್ಯವೇನು, ಅಂಥ ಋಷಿಸದೃಶ ಬದುಕು ಸಾಕಾರಗೊಳ್ಳುವುದೇನು ಎಂಬ ಕಳವಳ, ಪ್ರಶ್ನೆಗಳಿಗೆ ಶ್ರೀಧರ ಸ್ವಾಮಿಗಳ ಬದುಕೇ ಉತ್ತರವಾಯಿತು (07/12/1908-19/04/1973).

ಲೋಕಕ್ಕೆ ಪ್ರೀತಿ, ಅಂತಃಕರಣದ ಬತ್ತದ ಸೆಲೆಯನ್ನು, ರಾಷ್ಟ್ರಧರ್ಮದ ಪ್ರಜ್ಞೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಮಾನವಸಹಿತ ಪ್ರತೀ ಜೀವಿಯಲ್ಲೂ ಭಗವಂತನ ಅಂಶವನ್ನು ಕಾಣುವ ದೃಷ್ಟಿ ಒದಗಿಸಿಕೊಟ್ಟರು. ಶ್ರೀಧರರು ಉದ್ಧರಿಸಿದ ಜೀವಗಳೆಷ್ಟೋ, ಜ್ಞಾನಧಾರೆಯಿಂದ ಅಮೃತಪಥಕ್ಕೆ ಕೊಂಡೊಯ್ದ ದಿವ್ಯಪ್ರಭಾವವೆಷ್ಟೋ ಎಂಬುದನ್ನು ಭೌತಿಕವಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಏಕೆಂದರೆ, ಅವರು ಮಾನವರ ಹೃದಯಗಳಲ್ಲಿ ಭಕ್ತಿ, ಪ್ರೀತಿ, ಅಂತಃಕರಣದ ನದಿಯನ್ನೇ ಹರಿಸಿದರು. ತಪಸ್ಸಿನ ಬಲದಿಂದ ವರದಹಳ್ಳಿಯ ಬೆಟ್ಟದ ಮೇಲೆ ಗಂಗೆಯನ್ನು ಆಹ್ವಾನಿಸಿದರು, ದುಷ್ಟಜನರ ಮನೋವೃತ್ತಿ ಬದಲಿಸಿ ಸನ್ಮಾರ್ಗಕ್ಕೆ ತಂದರು. ಧರ್ಮಧ್ವಜವನ್ನು ಸ್ಥಾಪಿಸಿ ಧರ್ಮಕ್ಕೆ ಸದಾ ಜಯ ಎಂದು ಲೋಕಕ್ಕೆ ಕರೆಯಿತ್ತರು. ಇವರ ಲೀಲೆಗಳು, ಕೃಪಾಕಾರುಣ್ಯಗಳು ಅಸಾಧಾರಣ. ಮಠಾಧಿಪತಿಯಾಗದೆ ನಂಬುವ ಭಕ್ತರೆಲ್ಲರ ಕಾಮಧೇನುವಾದರು, ಹೃದಯಾಧಿಪತಿ ಮತ್ತು ಬಡವರ ಪಾಲಿನ ಭಗವಂತರಾದರು.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಪತಕಿ ವಂಶಸ್ಥರಾದ ಇವರು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಚಿಂಚೋಳಿಯಲ್ಲಿ ದತ್ತಜಯಂತಿಯ ದಿನದಂದೇ, ಅದೂ ದತ್ತಪಲ್ಲಕ್ಕಿ ಇವರ ಮನೆಮುಂದೆ ಬಂದು ಮಂಗಳಾರತಿ ನಡೆಯುತ್ತಿದ್ದಾಗಲೇ ಜನಿಸಿದರು. ಕಲಬುರಗಿ, ಪುಣೆಯಲ್ಲಿ ಶಿಕ್ಷಣ ಪಡೆದು, ಸಜ್ಜನಗಡದಲ್ಲಿ ತಪಸ್ಸು ಮಾಡಿದರು. ಸಮರ್ಥ ರಾಮದಾಸರ ಸಾಕ್ಷಾತ್ಕಾರವಾದ ಬಳಿಕ ಸಮರ್ಥರ ಆದೇಶದಂತೆ ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳೆಸಿ, ಕರ್ನಾಟಕಕ್ಕೆ ತಲುಪಿ, ಶಿವಾನಂದ ಸ್ವಾಮಿಗಳ ಸಂಪರ್ಕಕ್ಕೆ ಬಂದರು. ವರದ ಹಳ್ಳಿಯಲ್ಲಿ ನೆಲೆಸಿ, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. ಹಲವು ವರ್ಷಗಳ ಕಾಲ ಏಕಾಂತವಾಸವನ್ನು ಕೈಗೊಂಡು, ವರದಹಳ್ಳಿಯಲ್ಲೇ ಶ್ರೀಧರರು ಸಮಾಧಿ ಸ್ವೀಕರಿಸಿದರು.

ಶ್ರೀಧರ ವಾಣಿ

ನೀವೆಲ್ಲರೂ ಆನಂದಮಯವಾಗಿದ್ದೀರಿ. ಈ ಜಗತ್ತಿನಲ್ಲಿ ಎಲ್ಲೆಲ್ಲೂ ಆನಂದ ತುಂಬಿದ್ದು ಅದನ್ನು ಬಿಟ್ಟು ಬೇರೇನೂ ಇಲ್ಲ. ಸೂರ್ಯಪ್ರಕಾಶ ಒಂದನ್ನೇ ಒಂಟಿಯಾಗಿಟ್ಟು ಉಳಿದ ಜಗವೆಲ್ಲವನ್ನೂ ಪಕ್ಕಕ್ಕೆ ಸರಿಸಿದರೆ ಕೇವಲ ಪ್ರಕಾಶವಷ್ಟೇ ಉಳಿಯುವುದು, ಅದೇ ರೀತಿಯಾಗಿ ಕೇವಲ ಆನಂದದ ಇಚ್ಛೆಯಿಂದ ಉಳಿದುದೆಲ್ಲವನ್ನೂ ಅಳಿಸಿಹಾಕಿದರೆ ಅಲ್ಲಿ ಕೇವಲ ಆನಂದವಷ್ಟೇ ಉಳಿಯುವುದು.

ಕರುಣೆಯ ಮೂರ್ತಿ

ಶ್ರೀಧರರಿಗೆ ದೀನದಲಿತರ ಬಗ್ಗೆ ಇನ್ನಿಲ್ಲದ ಪ್ರೀತಿ, ಮಮತೆ. ಚಳಿಗಾಲದ ಅವಧಿಯಲ್ಲಿ ಸಾಗರ ಪೇಟೆಯಲ್ಲಿ ದೊರೆಯುತ್ತಿದ್ದ ಎಲ್ಲ ಕಂಬಳಿಗಳನ್ನು ಖರೀದಿಸಿ ಬಡವರಿಗೆ, ಭಿಕ್ಷುಕರಿಗೆ ಹಂಚುತ್ತಿದ್ದರು. ಒಮ್ಮೆ ಆಶ್ರಮದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಹಿರಿಯರೊಬ್ಬರು, ‘ಆಶ್ರಮಕ್ಕೆ ಬಂದವರು ಏನೂ ಕೆಲಸವಿಲ್ಲದೆ ಮೂರು ದಿನಕ್ಕಿಂತ ಹೆಚ್ಚಿರಬಾರದು ಎಂಬ ನಿಯಮ ಮಾಡುವುದು ಸೂಕ್ತ’ ಎಂದರು. ಅದಕ್ಕೆ ಶ್ರೀಧರರು- ‘ಇಲ್ಲಿ ನಾವೇನು ಷಡ್ರಸೋಪೇತವಾದ ಭೋಜನ ಮಾಡಿಸುತ್ತೇವೆಯೇ? ಪಾಪ, ಏನೋ ತೊಂದರೆಯಿಂದ ಇಲ್ಲಿ ಇರಬಹುದು. ಇರಲಿ ಬಿಡಿ. ಅವರನ್ನೂ ನಮ್ಮ ಸಹೋದರರೆಂದೇ ತಿಳಿಯಿರಿ. ಮರೆಯದಿರಿ, ದೀನದುಃಖಿಗಳೂ ನಮ್ಮ ಸಹೋದರರೇ...’ ಎಂದರಂತೆ.

ಎಲ್ಲರಿಗೂ ರಾಮನಾಮದ ಸವಿ

ಪ್ರಾಪಂಚಿಕ ಜನರ ದುಃಖಕ್ಕೆ ಮರಗುತ್ತಿದ್ದ ಶ್ರೀಧರರು, ‘ಇವರೆಲ್ಲರ ಉದ್ಧಾರ ಯಾವಾಗ? ಇವರಿಗೆಲ್ಲ ನಿಜಸುಖ ಲಭಿಸುವುದು ಹೇಗೆ?’ ಎಂದು ಚಿಂತಿಸುತ್ತಿದ್ದರು. ತಲೆಯ ಮೇಲೆ ವ್ಯಾಪಾರದ ಸಾಮಾನುಗಳನ್ನು ಹೊತ್ತು ತಿರುಗುತ್ತಿದ್ದ ವ್ಯಾಪಾರಿಗಳ ಭಾರವನ್ನೂ ಅವರು ಇಳಿಸುತ್ತಿದ್ದರು. ಅವರಿಗೆ ಶ್ರೀರಾಮನಾಮವನ್ನು ಬೋಧಿಸಿ, ಅವರ ಜನ್ಮಾಂತರದ ಕರ್ಮದ ಭಾರವನ್ನೂ ಕಳೆದುಬಿಡುತ್ತಿದ್ದರು. ಹಾಗೇ, ಕೂಲಿಕಾರರಿಗೂ ಶ್ರೀರಾಮನಾಮವನ್ನು ಬೋಧಿಸಿ ಅವರು ಭಗವದ್ಭಕ್ತರಾಗುವಂತೆ ಮಾಡುತ್ತಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ಶಿವಾನಂದ ಸ್ವಾಮಿಗಳು ಒಮ್ಮೆ ಶ್ರೀಧರರನ್ನು ಉದ್ದೇಶಿಸಿ, ‘ಕೂಲಿ ಮಂದಿಗೆ ನಿನ್ನ ವೇದಾಂತ ರುಚಿಸುವುದೇ?’ ಎಂದು ಕೇಳಿದರು. ಆಗ ಶ್ರೀಧರರು, ‘ಇಂದಿಲ್ಲದಿದ್ದರೆ ಮುಂದೊಂದು ದಿನ ಈ ಸಂಸ್ಕಾರ ಪ್ರಬಲವಾಗಿ ಅವರನ್ನು ಒಳ್ಳೆಯ ಹಾದಿಗೊಯ್ದು, ರಕ್ಷಿಸಿ ಉದ್ಧರಿಸುವುದು’ ಎಂದರಂತೆ. ಭಗವದ್ಭಕ್ತಿಯೇ ಆಗಿರಲಿ ಅಥವಾ ರಾಮನಾಮವೇ ಆಗಿರಲಿ ಅದು ಸದಾ ಸರ್ವದಾ ಎಲ್ಲರಿಗೂ ಸಲ್ಲುವಂಥದ್ದು ಎಂಬುದು ಅವರ ನಿಲುವಾಗಿತ್ತು.

(ಆಧಾರ: ಶ್ರೀಧರ ಸ್ಮರಣೆ; ಜಿಟಿ.ಶ್ರೀಧರ ಶರ್ಮ, ಚಿನ್ಮಯ ಎಂ. ರಾವ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net