

ಭಾರತೀಯ ಜೀವನ ಸಂಹಿತೆಯಲ್ಲಿ ‘ಧರ್ಮ’ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಮನುಷ್ಯನ ಭವ್ಯತೆ, ಬೆಳವಣಿಗೆ, ಸಮೃದ್ಧಿ, ಸಾರ್ಥಕತೆ, ವಿಕಾಸ ಪ್ರತಿಯೊಂದನ್ನೂ ಸಾಧಿಸಿಕೊಡಬಲ್ಲ ಸಾಮರ್ಥ್ಯವಿರುವುದು ಈ ಮೌಲ್ಯಕ್ಕೆ. ಭಾರತ ಅನಾದಿಕಾಲದಿಂದಲೂ ಜಗತ್ತಿಗೆ ನೀಡುತ್ತಿರುವ ಸಂದೇಶವೆಂದರೆ ಧರ್ಮವನ್ನು ಬದಿಗಿಟ್ಟು, ನಿರ್ಲಕ್ಷಿಸಿ ಜನಾಂಗವೊಂದು ಎಂದಿಗೂ ಉದ್ಧಾರವಾಗಲಾರದು ಎಂಬುದೇ. ಭಾರತದ ವಿಷಯದಲ್ಲಂತೂ ಇದು ನೂರಕ್ಕೆ ನೂರು ಸತ್ಯ. ಆದ್ದರಿಂದಲೇ ಧರ್ಮ ಕುಸಿತವನ್ನು ಕಾಣುವ ಸಂದರ್ಭದಲ್ಲಿ ಜಗದ್ರಕ್ಷಕ ಸ್ವಯಂ ತಾನೇ ಉದಿಸಿ, ಅದನ್ನು ಎತ್ತಿ ಹಿಡಿಯುತ್ತಾನೆ ಮತ್ತು ಸಂವರ್ಧನೆಗೊಳಿಸುತ್ತಾನೆ. ಇದಕ್ಕೆ ‘ನಾನು ಬದ್ಧನಾಗಿದ್ದೇನೆ’ ಎಂದು ಸ್ಪಷ್ಟ ಮಾತುಗಳಲ್ಲಿ ಘೊಷಿಸಿಯೂ ಇದ್ದಾನೆ ಶ್ರೀಮದ್ಭಗವದ್ಗೀತೆಯಲ್ಲಿ. ಮೆಕಾಲೆ ಮಹಾಶಯ ಭಾರತವು ನಿರಂತರವಾಗಿ ಇಂಗ್ಲೆಂಡಿನ ಕಪಿಮುಷ್ಟಿಯಲ್ಲಿ ಇರಬೇಕೆಂದು ಹೂಡಿದ ಕುತಂತ್ರವೇ ಭಾರತೀಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬೇರುಗಳನ್ನು ಮೂಲೋತ್ಪಾಟನ ಮಾಡಬಲ್ಲ ಶಿಕ್ಷಣ ಪದ್ಧತಿ ರೂಪಿಸ ಹೊರಟಿದ್ದು ಮತ್ತು ಈ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗಳೇ ಧರ್ಮದ ನೇರ ಹಾಗೂ ಸ್ಪಷ್ಟ ವ್ಯಕ್ತತೆಗಳು. ಇದನ್ನು ಅವನು ಮಾಡಿದ್ದು 1836ರಲ್ಲಿ. ಆದರೆ, ಅದೇ ವರ್ಷದಲ್ಲೇ ಭಗವಾನ್ ಶ್ರೀರಾಮಕೃಷ್ಣರ ಆವಿರ್ಭಾವವಾಯಿತು, ಮೆಕಾಲೆಯ ಯೋಜನೆಯನ್ನು ಪುಡಿಗಟ್ಟಲೋ ಎಂಬಂತೆ. ಅದೆಷ್ಟು ಸಹಜ ಮತ್ತು ಅದ್ಭುತ ರೀತಿಯಲ್ಲಿ ಅದನ್ನು ಸಾಧಿಸಿದರೆಂದರೆ ಅವರ ಕಾರ್ಯಯೋಜನೆ ಇಂಥದ್ದೊಂದು ಬೃಹತ್ ಉದ್ದೇಶ್ಯವನ್ನು ಹೊಂದಿತ್ತು ಎಂದು ಯಾರ ಗಮನಕ್ಕೂ ಬರಲೇ ಇಲ್ಲ. ಏಕೆಂದರೆ, ಈ ಕಾರ್ಯದ ನೊಗ ಹೊತ್ತವರು ಆ ಶಿಕ್ಷಣ ಪದ್ಧತಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳಲ್ಲೇ ಇಂಗ್ಲಿಷ್ ವಿದ್ಯಾಭ್ಯಾಸವನ್ನೇ ಪಡೆದ ಯುವಕರಾಗಿದ್ದರು ಮತ್ತು ಇನ್ನೊಂದು ಪಾರ್ಶ್ವದಲ್ಲಿ ಮತ್ತೊಂದು ಶಕ್ತಿ ತೆರೆಯ ಹಿಂದಿನಿಂದ ಇನ್ನಿಲ್ಲದ ರೀತಿಯಲ್ಲಿ ಕಾರ್ಯವನ್ನು ಸಾಧಿಸಿತು. ನರೇಂದ್ರಾದಿ ಯುವಕರು ಮೊದಲನೇ ವರ್ಗಕ್ಕೆ ಸೇರಿದ್ದರೆ ಶ್ರೀಮಾತೆ ಶ್ರೀ ಶಾರದಾದೇವಿ ಎರಡನೇ ವರ್ಗಕ್ಕೆ ಸೇರಿದವರು.
1853 ಡಿಸೆಂಬರ್ 22ರಂದು ಪಶ್ಚಿಮ ಬಂಗಾಳದ ಜಯರಾಂಬಾಟಿ ಎಂಬ ಸಣ್ಣ ಹಳ್ಳಿಯಲ್ಲಿ ಶಾರದಾದೇವಿಯವರ ಜನನವಾಯಿತು. ಆಧುನಿಕ ಅರ್ಥದಲ್ಲಿ ಯಾವ ಶಿಕ್ಷಣವನ್ನೂ ಪಡೆದವರಲ್ಲ ಅವರು, ತಮ್ಮ ಪತಿ ಶ್ರೀರಾಮಕೃಷ್ಣರಂತೆ. ಅದರ ಅವಶ್ಯಕತೆಯೂ ಇರಲಿಲ್ಲ ಅವರಿಗೆ. ಏಕೆಂದರೆ ಶ್ರೀರಾಮಕೃಷ್ಣರ ಭಾಷೆಯಲ್ಲೇ ಹೇಳಬೇಕೆಂದರೆ ಅವರು ಸಾಕ್ಷಾತ್ ಸರಸ್ವತಿ. ಜಗತ್ತಿಗೆ ಜ್ಞಾನವನ್ನೀಯಲು ಬಂದವರು. ವಿಶ್ವವಿದ್ಯಾಲಯಗಳ ಡಿಗ್ರಿಗಳ ಮೂಲಕ ಜ್ಞಾನವನ್ನಳೆಯುವ ಮೆಕಾಲೆ ಸಂಸ್ಕೃತಿಯ ಆರಾಧಕರಾದ ನಮಗೆ ಎಲ್ಲಾ ಜ್ಞಾನಗಳ ಮೂಲ ಮನುಷ್ಯನ ಪ್ರಜ್ಞಾಸ್ತರಗಳನ್ನು ಜಾಗೃತಗೊಳಿಸುವುದರಲ್ಲಿ್ಲೆ ಎಂಬ ವೇದ ಸಂಸ್ಕೃತಿ ಜೀರ್ಣವಾಗುವುದು ಸ್ವಲ್ಪ ಕಷ್ಟವೇ. ಯಾವ ವಿವೇಕಾನಂದರ ಮುಂದೆ ಅಮೆರಿಕಾದ ಚಿಂತಕರು, ವಿಶ್ವವಿದ್ಯಾಲಯಗಳ ದಿಗ್ದಂತಿಗಳು ಕಾಡು ಬೆಕ್ಕು ಇತ್ತ ಬಂದಾಗ ಇಲಿಗಳು ಮುದುರಿಕೊಳ್ಳುವಂತೆ ಮುದುರಿಕೊಳ್ಳುತ್ತಿದ್ದರೋ ಅಂಥ ವಿವೇಕಾನಂದರೇ ಶ್ರೀ ರಾಮಕೃಷ್ಣ - ಶಾರದಾದೇವಿಯವರನ್ನು ಕುರಿತು, ‘ನಿಮ್ಮೀರ್ವರ ದಾಸ ನಾನು’ ಎಂದು ವಿನಮ್ರಭಾವದಿಂದ ಕೈಜೋಡಿಸಿ ನಿಲ್ಲುತ್ತಿದ್ದರು. ಯಾವ ವಿವೇಕಾನಂದರ ಜ್ಞಾನಜ್ಯೋತಿ, ವಿವೇಕ ವೈರಾಗ್ಯ, ಪಾವಿತ್ರ್ಯವನ್ನು ಕುರಿತು ಶ್ರೀ ರಾಮಕೃಷ್ಣರೇ ‘ಮಹಾಮಾಯೆಯು ಅವನ ಹತ್ತಿರ ಸುಳಿಯಲೂ ಹೆದರುತ್ತಾಳೆ’ ಎಂದು ಹೇಳುತ್ತಿದ್ದರೋ ಅಂಥ ವಿವೇಕಾನಂದರೂ ಶಾರದಾದೇವಿಯವರನ್ನು ಸಂಧಿಸಲು ಹೊರಟಾಗ ಗಂಗಾಜಲವನ್ನು ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಿದ್ದರು. ಶ್ರೀ ರಾಮಕೃಷ್ಣ, ಶಾರದಾದೇವಿ ಮುಂತಾದ ವ್ಯಕ್ತಿಗಳನ್ನು ತಿಳಿಯಲು ನಾವು ಅನುಸರಿಸಬೇಕಾದ ವಿಧಾನವೇ ಇಂಥವು. ನ್ಯಾಯಶಾಸ್ತ್ರ ಇದನ್ನು ‘ಪ್ರಧಾನಮಲ್ಲನಿಬರ್ಹಣನ್ಯಾಯ’ ಎಂದು ಕರೆಯುತ್ತದೆ- ಗೊತ್ತಿಲ್ಲದ ಮಹಾಮಲ್ಲನನ್ನು ತಿಳಿಯಬೇಕಾದರೆ ಈಗಾಗಲೇ ಸುಪ್ರಸಿದ್ಧನಾದ ಮಲ್ಲನೊಡನೆ ಅವನನ್ನು ಹೋಲಿಸಿಯೇ.
ಶ್ರೀರಾಮಕೃಷ್ಣರ ತಪಸ್ಸು ಜಗತ್ತಿನ ಇತಿಹಾಸದಲ್ಲಿ ಕಂಡು ಕೇಳರಿಯದ್ದು. ಹನ್ನೆರಡು ವರ್ಷ ವ್ಯಾಪಿಸಿದ ಈ ತಪಸ್ಸಿನಲ್ಲಿ ಆರು ವರ್ಷಗಳ ಕಾಲ ಅವರ ಕಣ್ಣುರೆಪ್ಪೆಗಳು ಒಂದನ್ನೊಂದು ಮುಚ್ಚಲಿಲ್ಲ! ಇಂಥ ತಪಸ್ಸಿನ ಫಲವನ್ನು ಅವರು ಕೊನೆಗೆ ಸಮರ್ಪಣೆ ಮಾಡಿದ್ದು ಶ್ರೀ ಶಾರದಾದೇವಿಯವರಿಗೆ; ಅವರಿಗೆ ಶಾಸ್ತ್ರೋಕ್ತವಾಗಿ ಪೂಜಿಸಿದ ನಂತರ. ಶಾಸ್ತ್ರದಲ್ಲಿ ಬರುವ ದಶ ಮಹಾವಿದ್ಯೆಯರಾದ ಕಾಳೀ, ತಾರಾ, ಷೋಡಶೀ, ಭುವನೇಶ್ವರೀ, ಭೈರವಿ, ಛಿನ್ನಮಸ್ತಾ, ಧೂಮವತೀ, ಬಗಲಾ, ಮಾತಂಗೀ ಮತ್ತು ಕಮಲಾ ಈ ನಾಮಗಳನ್ನು ಉಚ್ಚರಿಸುತ್ತಾ ಅರ್ಚನೆ ಮಾಡುತ್ತಿದ್ದರೆ ಆ ನಾಮಸೂಚಕ ದೇವಿಯಾಗಿ ಶಾರದಾಮಾತೆ ಅಲ್ಲಿ ಆವಿರ್ಭವಿಸುತ್ತಿದ್ದರು. ಮಾರುವೇಷದಲ್ಲಿ ಬಂದ ‘ಮಹಾದೇವಿ’ಯಲ್ಲದೇ ‘ಜಗನ್ಮಾತೆ’ಯಲ್ಲದೆ ಮತ್ತಾರು ಇರಬಲ್ಲರು ಅವರು! ಆದ್ದರಿಂದಲೇ ಸ್ವಾಮಿ ಶಾಸ್ತ್ರಾನಂದರು, ‘ಶಾರದಾ ರೂಪ ತಾಳಿ ಬಂದಿಹಳು ತಾಯಿ ಕಾಳಿ; ಅದನರಿತೇ ರಾಮಕೃಷ್ಣ ಪೂಜಿಸಿದರು ಭಾವತಾಳಿ’ ಎಂದು ಹಾಡಿದರು.
‘ದುರ್ಗಾಸಪ್ತಶತಿ’ ಅಥವಾ ಚಂಡೀ ಪಾರಾಯಣ ಗ್ರಂಥದಲ್ಲಿ ‘ಮೂರ್ತಿರಹಸ್ಯ’ ಎನ್ನುವ ಅಧ್ಯಾಯದಲ್ಲಿ ಭಕ್ತನಿಗೆ ಅಭಯ ಕೊಡುವ ಸಂದರ್ಭದಲ್ಲಿ ದೇವಿ ಹೇಳುತ್ತಾಳೆ-‘ಪತಿವ್ರತೆಯೊಬ್ಬಳು ಪತಿಯನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳುತ್ತೇನೆ’-‘ತಂ ಸಾ ಪರಿಚರೇದ್ದೇವೀ ಪತಿಂ ಪ್ರಿಯಮಿವಾಂಗನಾ.’ ಶ್ರೀ ಶಾರದಾದೇವಿಯವರ ಜೀವನದಲ್ಲಿ ಈ ಶಾಸ್ತ್ರವಾಕ್ಯ ಪೂರ್ಣ ಅರ್ಥ ಕಂಡುಕೊಂಡಿದೆ.
ಇವೆಲ್ಲವೂ ಶ್ರೀ ಶಾರದಾದೇವಿಯವರ ಒಂದು ಮುಖವಾದರೆ ಮತ್ತೊಂದು ಮುಖವೇ ಪ್ರಮುಖ. ಕಾರಣ ಇದು ದೀನ, ದಲಿತ, ಪಾಪಿ, ದರಿದ್ರರನ್ನೊಳಗೊಂಡ ಸಮಾಜದ ಬಹುಮಟ್ಟಿಗಿನ ಬಹಿಷ್ಕೃತರೆಂದು ಆ ಕಾಲದಲ್ಲಿ ಪರಿಗಣಿಸಲ್ಪಟ್ಟಿದ್ದ ಜನರೊಂದಿಗೆ ಅವರ ಪ್ರೇಮಪೂರ್ಣ, ವಾತ್ಸಲ್ಯಪೂರ್ಣ ಸಂಬಂಧವನ್ನು ಕುರಿತು ಹೇಳುತ್ತದೆ. ಶಾರದಾದೇವಿಯವರು ಶ್ರೀರಾಮಕೃಷ್ಣರನ್ನು ನೋಡಲು ಅವರ ತಂದೆ ರಾಮಚಂದ್ರ ಮುಖರ್ಜಿ, ರಾಮಕೃಷ್ಣರ ಅಣ್ಣನ ಮಕ್ಕಳಾದ ಶಿವು, ಲಕ್ಷ್ಮಿ ಇತ್ಯಾದಿಗಳ ಜೊತೆ ತವರೂರಾದ ಜಯರಾಂಬಾಟಿಯಿಂದ ಕಲ್ಕತ್ತೆಗೆ ನಡೆದು ಹೊರಟಿದ್ದರು. ಶಾರದೆ ಹಿಂದುಳಿದು ಬೇರೆಯವರೆಲ್ಲಾ ಮುಂದೆ ಹೋಗಿಬಿಟ್ಟಿದ್ದರು. ಸೂರ್ಯಮುಳುಗಿ ಕತ್ತಲೆ ಆವರಿಸಿಕೊಂಡಿದ್ದ ಸಮಯ. ಡಕಾಯಿತನೊಬ್ಬ ‘ಯಾರಲ್ಲಿ’ ಎಂದು ಎದೆ ಝುಲ್ಲೆನ್ನುವಂತೆ ಕೂಗಿಕೊಂಡಾಗ ಅಪಾಯದ ತೀವ್ರತೆ ಅರಿತ ಶಾರದಾದೇವಿಯವರು, ‘ನಾನು ನಿನ್ನ ಮಗಳು ಶಾರದೆ; ನಿನ್ನ ಅಳಿಯನನ್ನು ಸೇರಿಕೊಳ್ಳಲು ದಕ್ಷಿಣೇಶ್ವರಕ್ಕೆ ಹೊರಟಿದ್ದೇನೆ. ಕತ್ತಲೆಯಲ್ಲಿ ದಾರಿತಪ್ಪಿ ಅಪಾಯಕ್ಕೊಳಗಾಗುತ್ತಿದ್ದೆ. ನೀನು ಬಾರದಿದ್ದಲ್ಲಿ ಏನಾಗುತ್ತಿತ್ತೋ?!’ ಎಂದು ಹೇಳುತ್ತಾ ಅವನ ಪತ್ನಿಯತ್ತ ಧಾವಿಸಿ ತಾಯಿಯ ತೆಕ್ಕೆಯಲ್ಲಿ ಮಗಳೊಬ್ಬಳು ವಿರಮಿಸುವಂತೆ ಅವಳನ್ನು ತಬ್ಬಿಕೊಂಡಳು. ಡಕಾಯಿತ ದಂಪತಿಗೆ ಹೃದಯಕಲಕಿ ಸ್ವಂತ ಮಗಳಂತೆಯೇ ಆ ರಾತ್ರಿ ಅವರನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಉಪಚರಿಸಿ, ಮಾರನೆಯ ದಿನ ಯಾತ್ರಿಕರ ಗುಂಪಿನಲ್ಲಿ ಬಿಟ್ಟು ಬಂದರು. ಬೀಳ್ಕೊಡುವಾಗ ಕಣ್ಣೀರು ಹಾಕಿದ ಶ್ರೀಮಾತೆ ಅವರನ್ನು ದಕ್ಷಿಣೇಶ್ವರಕ್ಕೆ ಆಹ್ವಾನಿಸಿದರು. ಅವರೂ ಹಲವು ಸಲ ಭೇಟಿಯಿತ್ತರು ಕೂಡ ಮತ್ತು ಆಗೆಲ್ಲಾ ಶ್ರೀರಾಮಕೃಷ್ಣರು ತಮ್ಮ ನಿಜವಾದ ಅತ್ತೆಮಾವಂದಿರನ್ನು ಉಪಚರಿಸುವಂತೆಯೇ ಉಪಚರಿಸಿದ್ದೂ ಹೌದು. ಮುಂದೆ ಡಕಾಯಿತನ ಮಗನಿಗೆ ಶಾರದಾದೇವಿಯವರು ಮಂತ್ರದೀಕ್ಷೆಯನ್ನೂ ಕೊಟ್ಟು ಅವನ ಜೀವನವನ್ನು ಸಾರ್ಥಕವಾಗಿಸಿದರು.
ಶ್ರೀರಾಮಕೃಷ್ಣರು ಯಾರೆಂದರೆ ಅವರ ಕೈಯಲ್ಲಿ ಊಟ ಮಾಡುತ್ತಿರಲಿಲ್ಲ. ಒಮ್ಮೆ ಹೆಂಗಸೊಬ್ಬಳು, ‘ಅಮ್ಮ ಶ್ರೀರಾಮಕೃಷ್ಣರಿಗೆ ಇಂದು ನಾನು ಊಟ ನೀಡುತ್ತೇನೆ’ ಎಂದು ಹೇಳಿ ಅಡುಗೆಯನ್ನು ಅವರ ಕೋಣೆಯಲ್ಲಿ ಇಟ್ಟು ಬಂದಳು. ನಾಲಿಗೆಯ ಮೇಲೆ ಇಟ್ಟುಕೊಂಡ ತುತ್ತು ಕೆಂಡದಂತೆನಿಸಿದಾಗ ಕೂಗಿಕೊಂಡ ರಾಮಕೃಷ್ಣರು ಶಾರದಾಮಾತೆಗೆ ಹೇಳಿ ಕಳುಹಿಸಿದರು. ಊಟ ತಂದಿದ್ದು ಯಾರು ಎಂದು ತಿಳಿದಾಗ ಗೊತ್ತಾಗಿದ್ದು ಯೌವ್ವನದ ಕಾಲದಲ್ಲಿ ಶೀಲಗೆಟ್ಟ ಜೀವನ ನಡೆಸಿದ ಹೆಣ್ಣೊಬ್ಬಳು ಎಂದು. ಯಾರೆಂದರೆ ಅವರ ಕೈಯಲ್ಲಿ ಊಟ ಕಳಿಸುವುದಿಲ್ಲ ಎಂಬ ಮಾತು ಕೊಡು ಎಂದು ಶ್ರೀರಾಮಕೃಷ್ಣರು ಆಗ್ರಹಿಸಿದಾಗ ಶಾರದಾಮಾತೆ ನಿರಾಕರಿಸುತ್ತಾರೆ. ‘ದಯವಿಟ್ಟು ಹಾಗೆ ಹೇಳಬೇಡಿ. ಯಾರಾದರೂ ನನ್ನನ್ನು ಅಮ್ಮ ಎಂದು ಕರೆದು ಏನನ್ನಾದರೂ ಬೇಡಿದಾಗ, ಇಲ್ಲ ಎನ್ನಲು ನನ್ನ ಕೈಲಾಗುವುದಿಲ್ಲ’ ಎಂಬ ಶ್ರೀಮಾತೆಯ ನುಡಿ ಕೇಳಿ ಶ್ರೀ ರಾಮಕೃಷ್ಣರಿಗೆ ಒಳಗೊಳಗೇ ತಡೆಯಲಾರದಷ್ಟು ಸಂತೋಷವಾಯಿತು. ಏಕೆಂದರೆ ಸಮಾಜದ ನಿರ್ಲಕ್ಷಿತ ವರ್ಗಗಳಿಗೆ ಬೃಹತ್ ಭರವಸೆ, ಸಾಂತ್ವನಗಳ ಸಾಗರವೊಂದನ್ನು ನಿರ್ವಿುಸುವುದೇ ಶ್ರೀರಾಮಕೃಷ್ಣರ ಅವತರಣದ ಹಿಂದಿನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿತ್ತು.
ಅಮ್ಜದ್ ಒಬ್ಬ ಮುಸಲ್ಮಾನ. ವೃತ್ತಿ ಕಳ್ಳತನ. ಅದೆಷ್ಟು ಸಲ ಜೈಲಿಗೆ ಹೋಗಿ ಬಂದಿದ್ದನೋ! ಆದರೆ, ಅದಾವ ಜನ್ಮದ ಪುಣ್ಯವೋ ಶಾರದಾದೇವಿಯವರನ್ನು ಕಂಡರೆ ಅವನಿಗೆ ಇನ್ನಿಲ್ಲದ ಗೌರವ ಮತ್ತು ಪ್ರೀತಿ. ಬರುವಾಗೆಲ್ಲ ಸೋರೆಕಾಯಿಯನ್ನೋ, ಕುಂಬಳಕಾಯಿಯನ್ನೋ ತರುತ್ತಿದ್ದ. ಅಡುಗೆ ಮುಗಿದು ಹೋಗಿದ್ದರೆ ಶ್ರೀಮಾತೆ ಬಿಸಿಯಾದ ಅನ್ನ ಮಾಡಿ ಅವನಿಗೆ ಉಣಿಸುತ್ತಿದ್ದರು. ಬಿಸಿ ಅನ್ನ ಆರಲೆಂದು ಬೀಸಣಿಗೆಯಿಂದ ಬೀಸುತ್ತಿದ್ದರು. ಅವನು ಊಟ ಮಾಡಿದ ಎಲೆಯನ್ನು ಎತ್ತಿ ತಮ್ಮ ಕೈಯಿಂದಲೇ ‘ಗೋಮ’ ಹಚ್ಚುತ್ತಿದ್ದರು. ನೆನಪಿಡಿ! ಇದೆಲ್ಲಾ ನಡೆಯುತ್ತಿದ್ದುದು ವಿವೇಕಾನಂದರು ವಿಶ್ವವಿಖ್ಯಾತರಾಗಿ ಶ್ರೀರಾಮಕೃಷ್ಣರ ಮಹಿಮೆ ಜಗದಾದ್ಯಂತ ಪಸರಿಸಿ ತನ್ಮೂಲಕ ಶ್ರೀ ಶಾರದಾಮಾತೆಯನ್ನು ಜನ ಗುರ್ತಿಸುವಂತಾಗಿ, ಅವರಲ್ಲಿ ಸ್ವಯಂ ಜಗನ್ಮಾತೆಯನ್ನೇ ಕಂಡು, ಪೂಜಿಸಿ, ಆರಾಧಿಸಿ, ಅವರ ದರ್ಶನ, ಮಂತ್ರದೀಕ್ಷೆ ಪಡೆಯಲು ಧಾವಿಸಿ ಬರುತ್ತಿದ್ದ ಕಾಲದಲ್ಲಿ. ಅತ್ಯಂತ ಸಂಪ್ರದಾಯಸ್ಥ ಬ್ರಾಹ್ಮಣ ಕುಲದ ವಿಧವಾ ಸ್ತ್ರೀಯೊಬ್ಬಳು ಮುಸಲ್ಮಾನ, ಕಳ್ಳ ಅಮ್ಜದ್ನನ್ನು ಉಪಚರಿಸುತ್ತಿದ್ದ ರೀತಿ ಕಂಡು ಹೌಹಾರಿ ಆಕ್ಷೇಪಗಳ ಸುರಿಮಳೆಗೈಯ್ಯುತಿದ್ದ ಜನರಿಗೆ ಶ್ರೀಮಾತೆ ಉತ್ತರವೀಯುತ್ತಿದ್ದುದು, ‘ನನಗೆ ಶರತ್ (ಶ್ರೀ ಶಾರದಾನಂದ) ಹೇಗೋ ಅಮ್ಜದ್ನೂ ಹಾಗೆಯೇ’ ಎಂದು.
ಮೇಲೆ ಕಂಡ ಡಕಾಯಿತ, ಶೀಲಗೆಟ್ಟ ಹೆಣ್ಣು, ಮುಸಲ್ಮಾನ ಕಳ್ಳ ಇವರಾರೂ ಸಂಭಾವಿತರಲ್ಲ. ಸಮಾಜದಲ್ಲಿ ಗೌರವಸ್ಥರಲ್ಲ. ಆದರೆ, ಶಾರದಾದೇವಿಯವರ ಪಾಲಿಗೆ ಅವರೆಲ್ಲಾ ತಮ್ಮ ಮಕ್ಕಳೇ. ‘ನನ್ನ ಮಗು ಕೊಚ್ಚೆಯಲ್ಲಿ ಬಿದ್ದಿದ್ದರೆ ಅದನ್ನು ತೊಳೆದು ಹಾಗೆ ಬೀಳಬೇಡ ಎಂದು ಬುದ್ಧಿವಾದ ಹೇಳಬೇಕೇ ಹೊರತು ಅವನು ನನ್ನ ಮಗುವೇ ಅಲ್ಲ ಎಂದರೆ ಹೇಗೆ?’ ಇದೇ ಅವರ ಧೋರಣೆ.
‘ನಾನು ನಿನ್ನ ತಾಯಿ; ಮಲತಾಯಿ ಅಲ್ಲ; ನಿನ್ನ ಕಷ್ಟಕಾಲದಲ್ಲಿ ನನಗೊಬ್ಬಳು ತಾಯಿ ಇದ್ದಾಳೆ ಎಂದು ಹೇಳಿಕೋ; ನಾನು ಬಂದು ನಿನ್ನನ್ನು ಕಾಪಾಡುತ್ತೇನೆ’. ಇದು ಅವರು ಬೆಂದ ಹೃದಯಗಳಿಗೆ ನೀಡಿರುವ ಭರವಸೆ.
ಆ ಮಹಾಮಾತೆಯ ಕೃಪೆ, ಆಶೀರ್ವಾದ, ಸಾಂತ್ವನ ಕಷ್ಟಕೋಟಲೆಗಳಲ್ಲಿ ಬೇಯುತ್ತಿರುವ ಕೋಟಿ ಕೋಟಿ ಜನರಿಗೆ ನಿರಂತರ ಸಿಗುತ್ತಿರಲಿ ಎನ್ನುವುದೇ ನನ್ನ ಹೃತ್ಪೂರ್ವಕ ಪ್ರಾರ್ಥನೆ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)