ಮಕ್ಕಳೇ.. ಪ್ಲಾಸ್ಟಿಕ್ ಚೀಲಕ್ಕೆ ಗುಡ್​ಬೈ ಹೇಳಿ!

Plastic
Published on

ಪ್ಲಾಸ್ಟಿಕ್​ನ ಅವಾಂತರ ಅಷ್ಟಿಷ್ಟಲ್ಲ. ಪ್ಲಾಸ್ಟಿಕ್ ಬಾಟಲಿ, ಚೀಲಗಳು ಭೂಮಿಯೊಳಗೆ ಸೇರಿ ಫಲವತ್ತತೆ ನಾಶ ಮಾಡುತ್ತಿವೆ. ಪ್ರಾಣಿ-ಪಕ್ಷಿಗಳ ಹೊಟ್ಟೆ ಸೇರುತ್ತಿವೆ. ಸಮುದ್ರದ ತಳಕ್ಕೂ ತಲುಪಿ ಜಲಚರಗಳ ಪ್ರಾಣಕ್ಕೆ ಕುತ್ತು ತರುತ್ತಿವೆ. ‘ನಾವು ಸತ್ತರೂ ಪ್ಲಾಸ್ಟಿಕ್ ಸಾಯಲ್ಲ’ ಎಂಬ ಕಹಿ ಸತ್ಯ ಗೊತ್ತಿದ್ದರೂ ಹಲವರು ಪ್ಲಾಸ್ಟಿಕ್ ಎಂಬ ಪೆಡಂಭೂತವನ್ನು ಸಾಕಿಕೊಂಡೇ ಬಂದಿದ್ದಾರೆ. ಮಕ್ಕಳೇ, ಪ್ಲಾಸ್ಟಿಕ್ ಚೀಲಕ್ಕೆ ಗುಡ್​ಬೈ ಹೇಳುವ ಕೆಲಸ ನಿಮ್ಮಿಂದಲೇ ಶುರುವಾಗಲಿ.

| ಸುನೀಲ್ ಬಾರ್ಕೂರ್​

ಹಿಂದಿನ ಕಾಲದಲ್ಲಿ ಕಿರಾಣಿ ಅಂಗಡಿಯಿಂದ ಸಾಮಾನು ತರಬೇಕೆಂದರೆ ಅದು ತಿಂಗಳಿಗೊಮ್ಮೆ ನಡೆಯುವ ಕೆಲಸ. ಆಗ ಕೂಡು ಕುಟುಂಬವಾದ್ದರಿಂದ ಎಲ್ಲರಿಗೂ ಅಲ್ಪಸ್ವಲ್ಪ ಜಮೀನು ಇರೋದು. ದವಸಧಾನ್ಯಗಳೆಲ್ಲ ತಾವೇ ಬೆಳೆಯೋರು. ಅದರ ಮೇಲಿನ್ನೂ ಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿರುವ ಸಾಮಾನುಗಳೆಲ್ಲ ಗೋಣಿಚೀಲದಲ್ಲೇ ಚಕ್ಕಡಿಯನ್ನೇರುತ್ತಿದ್ದವು. ಚಹಾಪುಡಿ ಸಕ್ಕರೆಯಂತಹ ವಸ್ತುಗಳನ್ನು ಮನೆ ಹಿರಿಯರು ದೊಡ್ಡ ಪಂಜಿ ತಂದು ಕಟ್ಟಿಕೊಳ್ಳುತ್ತಿದ್ದರು. ಊರಿನ ರಸ್ತೆ ಏರಿಳಿದು ಮನೆ ತಲುಪುವಷ್ಟರಲ್ಲಿ ಪಂಜಿಕಟ್ಟು ಬಿಚ್ಚಿ ಸಕ್ರೆ, ಚಹಾಪುಡಿಯೆಲ್ಲ ಅಲ್ಲೇ ಕಲೆತು ಹೋಗೋದ್ರಿಂದ ಮನೆ ಹೆಂಗಸರೇ ಅದನ್ನು ಬೇರೆ ಮಾಡುತ್ತ ಕೂರಬೇಕಿತ್ತು. ಹಾಗಾಗಿ ಅವರೇ ಉದ್ದುದ್ದ ಸಂಚಿ ಚೀಲ ಹೊಲೆದು ಕೊಡುತ್ತಿದ್ದರು. ಹಿಟ್ಟು, ಬೇಳೆ, ಕಾಳು... ಹೀಗೆ ಒಂದೊಂದು ಚೀಲಕ್ಕೂ ತಲೆಬರಹ ಸಿಗುತ್ತಿತ್ತು. ಅಂಗಡಿಯವರು ಈ ಚೀಲದ ಬಾರ್ದಾನು ತೆಗೆದು ಅದರಲ್ಲೇ ಕಿರಾಣಿ ಸುರಿದು ತೂಗಿ ಬಾಯಿಕಟ್ಟಿ ಕೊಡುತ್ತಿದ್ದರು. ಕಾಲಕ್ರಮೇಣ ಕೂಡುಕುಟುಂಬಗಳೆಲ್ಲ ಒಡೆದು ಮನೆ ಮಂದಿ ಕಮ್ಮಿ ಆದ ಮೇಲೆ ಚೀಲದ ಗಾತ್ರನೂ ಕಮ್ಮಿ ಆಗಿ ರದ್ದಿ ಪೇಪರಲ್ಲಿ ಸಾಮಾನು ಕಟ್ಟಿಕೊಡ್ತಿದ್ರು. ಆಗ ಬಂತು ರದ್ದಿ ಪೇಪರ್​ಗೆ ಡಿಮಾಂಡ್.

ಅಂಗಡಿಗೆ ಹೋಗಿ ಬೇಳೆ ಕೇಳಿದ್ರೆ ಇಷ್ಟುದ್ದದ ಪೇಪರ್ ತೆಗೆದು ತ್ರಿಕೋನಾಕಾರದಲ್ಲಿ ಮಡಚಿ ಸುತ್ತಿ ಜೋಕರ್​ನ ಟೊಪ್ಪಿಯಂತೆ ಮಾಡಿ ಅದರಲ್ಲಿ ಬೇಳೆಕಾಳು ಸುರಿದು ತೂಗಿ ಬಾಯಿಯನ್ನು ಹಂಗೇ ಒತ್ತಿ ಸೀಲ್ ಮಾಡಿಕೊಡೋರು. ಅದ್ಯಾವ ಟೆಕ್ನಾಲಜಿನೋ ಗೊತ್ತಿಲ್ಲ. ಈ ಸೀಲು ಎಷ್ಟು ಬಲವಾಗಿರುತ್ತಿತ್ತೆಂದರೆ ಪೊಟ್ಟಣ ಉಲ್ಟಾ ಮಾಡಿದ್ರೂ ಬೀಳ್ತಿರಲಿಲ್ಲ. ಇನ್ನು ಬೆಲ್ಲ, ಮೆಣಸು ಕೇಳಿದ್ರೆ ಹಂಗೇ ಪೇಪರ್ ಹಾಸಿ ಅದ್ರ ಮೇಲೆ ಅವನ್ನಿಟ್ಟು ತೂಗಿಯಾದ ಮೇಲೆ ಪೇಪರ್ ಮಡಚಿ ಅಲ್ಲೇ ಮೇಲೆ ಕಟ್ಟಿರೋ ಬಾಬಿನ್​ನಿಂದ ಕೆಳಗೆ ತೂಗ್ತಾ ಇರೋ ಸುತಳಿಯನ್ನ ಎಳೆದು ಅದರ ಮೇಲೆ ಸುತ್ತಿ ಹಾಗೇ ಕಚಕ್ ಅಂತ ಉಗುರಲ್ಲೇ ಕತ್ತರಿಸಿ ಎರಡೂ ತುದಿ ಸೇರಿಸಿ ಸುತ್ತಿ ಕೊಡೋರು. ತದನಂತರ ರದ್ದಿ ಪೇಪರ್ ಬದಲಿಗೆ ಪುಸ್ತಕದ ಬೈಂಡಿಂಗ್​ಗೆ ಬಳಸುತ್ತಿದ್ದ ಖಾಕಿ ಪೇಪರ್​ನ ಖೊಟ್ಟೆ ಮಾಡಿ ಬಳಸಲು ಶುರು ಮಾಡಿದರು. ಇದೂ ಹಲವು ವರ್ಷಗಳವರೆಗೆ ನಡೀತು. ಇಲ್ಲಿಯವರೆಗೆ ಎಲ್ಲವೂ ಚೆಂದಿತ್ತು. ಪರಿಸರಸ್ನೇಹಿ ವಸ್ತುಗಳನ್ನೇ ದೇಸಿ ಶೈಲಿಯಲ್ಲಿ ಪ್ಯಾಕಿಂಗ್​ಗೆ ಬಳಸುವ ಜತೆಗೆ ಮರುಬಳಕೆಗೆ ಆಸ್ಪದ ಇದ್ದುದರಿಂದ ಯಾರಿಗೂ ತೊಂದರೆ ಇರಲಿಲ್ಲ. ಆಮೇಲೆ ಬಂತು ನೋಡಿ ಪ್ಲಾಸ್ಟಿಕ್ಕು! ಇದು ಬರುತ್ತಿದ್ದಂತೆ ಪೇಪರ್​ಚೀಲ, ಬಟ್ಟೆಚೀಲಗಳೆಲ್ಲ ಮೂಲೆಗೆ ಸರಿದವು. ಈಗ ಒಂದು ತೊಲೆ ಲವಂಗದಿಂದ ಒಂದು ಕ್ವಿಂಟಾಲ್ ಅಕ್ಕಿಯವರೆಗೆ ಎಲ್ಲದಕ್ಕೂ ಪ್ಲಾಸ್ಟಿಕ್ ಚೀಲವೇ. ಮನೆಯಿಂದ ಅಂಗಡಿಗೆ ಆರಾಮಾಗಿ ಕೈಬೀಸುತ್ತ ಬರುವ ಸವಲತ್ತು ಸಿಕ್ಕ ಮೇಲೆ ಜನಾನೂ ಸೋಮಾರಿಗಳಾದರು. ಎಲ್ಲವನ್ನೂ ಅಂಗಡಿಯವ್ನೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್​ನಲ್ಲಿ ಪ್ಯಾಕ್ ಮಾಡಿ ಕೊಡೋ ಕಾಲ ಬಂತು. ಇನ್ನು ಪ್ರಿಪ್ಯಾಕ್ಡ್ ವಸ್ತುಗಳದ್ದು ಕೇಳಬೇಕೇ? ಗುಟ್ಕಾದಿಂದ ಎಣ್ಣೆ ಕ್ಯಾನ್​ವರೆಗೆ ಎಲ್ಲದಕ್ಕೂ ಪ್ಲಾಸ್ಟಿಕ್! ಅಷ್ಟೊತ್ತಿಗಾಗ್ಲೇ ಶಾಪಿಂಗ್ ಮಾಲ್ ಅಂತೆಲ್ಲಾ ಏನೇನೋ ಕಾನ್ಸೆಪ್ಟ್ ಬಂದವು. ಅಲ್ಲೂ ಪ್ಲಾಸ್ಟಿಕ್​ವುಯ. ಈ ಭರಾಟೆಗೆ ರದ್ದಿ ಪೇಪರ್, ನೂಲು ಸುತ್ತೋ ಖೊಟ್ಟೆಗಳೆಲ್ಲ ಮೂಲೆ ಸೇರಿದ್ವು. ಜನ ಬಳಸಿ ಬಿಸಾಕಿದ ಈ ಪ್ಲಾಸ್ಟಿಕ್ ಚೀಲಗಳೆಲ್ಲ ಗಲ್ಲಿಗಟಾರದಲ್ಲೆಲ್ಲ ಸೇರ್ಕೊಂಡು ಉಸಿರು ಕಟ್ಟಿಸಿ ಕೃತಕ ನೆರೆ ಸೃಷ್ಟಿಸಿದವು. ಭೂಮಿಯೊಳಗೆ ಸೇರಿ ಫಲವತ್ತತೆ ನಾಶ ಮಾಡಿದವು. ಪ್ರಾಣಿ-ಪಕ್ಷಿಗಳ ಹೊಟ್ಟೆನೂ ಸೇರಿ ಪ್ರಾಣಕ್ಕೆ ಕುತ್ತು ತಂದವು. ಸಮುದ್ರದ ತಳಕ್ಕೆ ಹೋಗಿ ಜಲಚರಗಳನ್ನೂ ಸಾಯಿಸುತ್ತಿವೆ. ಸುಲಭಕ್ಕೆ ಕರಗದ ಈ ವಸ್ತುಗಳ ಅಪಾಯದ ಬಗ್ಗೆ ಜನರಿಗೂ ಈಗೀಗ ಅರಿವು ಮೂಡುತ್ತಿದೆ. ಸರ್ಕಾರಗಳು ಮತ್ತೆ ಬಟ್ಟೆ ಚೀಲ, ಪೇಪರ್ ಬ್ಯಾಗ್ ಕಡ್ಡಾಯ ಮಾಡುತ್ತಿವೆ. ಜನ ಕೂಡ ನಿಧಾನವಾಗಿ ಪ್ಲಾಸ್ಟಿಕ್​ಗೆ ಬೈಬೈ ಹೇಳತೊಡಗಿದ್ದಾರೆ.

ಪ್ರಾಣಕ್ಕೂ ಕುತ್ತು ತರೋದು ಹೇಗೆ?

1997ರಲ್ಲಿ ನೌಕೆಯೊಂದರಲ್ಲಿ ಪ್ರಯಾಣಿಸುತ್ತಿದ್ದ ಚಾರ್ಲ್ಸ್ ಮೂರ್ ಎಂಬ ವಿಜ್ಞಾನಿಯೊಬ್ಬ ಪೆಸಿಫಿಕ್ ಸಾಗರದಲ್ಲಿ ಪ್ಲಾಸ್ಟಿಕ್ ತಾಜ್ಯದಿಂದಾದ ದ್ವೀಪವೊಂದನ್ನು ಕಂಡ. ಕಡಲಾಳ ಸೇರಿ ಪ್ಲಾಸ್ಟಿಕ್ ತಾಜ್ಯ ಮಾಡುತ್ತಿದ್ದ ಅವಾಂತರಗಳನ್ನು ನಂತರ ನಡೆದ ಸಂಶೋಧನೆಗಳು ಜಗತ್ತಿಗೆ ಪರಿಚಯಿಸಿದವು. 31 ಜಾತಿಯ ಕಡಲ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತಾಜ್ಯ ಕಂಡು ಬಂದಿದೆ. ಇದರ ಜಾಲದಲ್ಲಿ ಸಿಲುಕಿ ಉಸಿರುಕಟ್ಟಿ ಬಲಿಯಾಗುವ ಜೀವಿಗಳು ಇನ್ನೆಷ್ಟೋ. ಈ ಪೈಕಿ ಎಷ್ಟೋ ಜಲಚರಗಳು ಮನುಷ್ಯನಿಗೇ ಆಹಾರ. ಹಾಗಾಗಿ ಅಪಾಯಕಾರಿ ಟಾಕ್ಸಿನ್​ಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಕಡಲ ಜೀವಿಗಳನ್ನು ಸೇವಿಸುವ ಮೂಲಕ ಮಾನವ ತಾನು ಬಿತ್ತಿದ್ದನ್ನು ತಾನೇ ತಿನ್ನುತ್ತಿದ್ದಾನೆ. ಒಂದು ಪ್ಲಾಸ್ಟಿಕ್ ಚೀಲವನ್ನು ಮನುಷ್ಯ ಸರಾಸರಿ 25 ನಿಮಿಷ ಮಾತ್ರ ಬಳಸುತ್ತಾನೆ. ಆದರೆ ಅದು ಪರಿಸರದಲ್ಲಿ ನಾಶವಾಗಲು 100ರಿಂದ 500 ವರ್ಷ ಸಮಯ ಬೇಕು!

ಪ್ಲಾಸ್ಟಿಕ್ ಹುಟ್ಟಿದ್ದು ಹೇಗೆ?

ಅತಿ ಹೆಚ್ಚು ದಿನಬಳಕೆಯ ಪ್ಲಾಸ್ಟಿಕ್ ಸಾಮಗ್ರಿ ತಯಾರಿಸಲು ಬಳಸಲ್ಪಡುವ ಪಾಲಿಇಥಲಿನ್ 1933ರಲ್ಲಿ ಇಂಗ್ಲೆಂಡಿನ ನಾರ್ಥವಿಚ್​ನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಆಕಸ್ಮಿಕವಾಗಿ ತಯಾರಾಯಿತು. ಇದರ ಬಹೂಪಯೋಗಿ ಗುಣದಿಂದ ಬ್ರಿಟಿಷ್ ಪಡೆಗಳು ಎರಡನೇ ಮಹಾಯುದ್ಧದಲ್ಲಿ ಬಳಸಿದವು. ಆದರೆ ಇದನ್ನು ದಿನಬಳಕೆಯ ಸಾಮಾನುಗಳ ತಯಾರಿಕೆಯಲ್ಲೂ ಬಳಸಬಹುದೆಂದು ತೋರಿಸಿಕೊಟ್ಟಿದ್ದು ಸ್ವೀಡನ್ ಮೂಲದ ಸೆಲ್ಲೊಪ್ಲಾಸ್ಟ್ ಎಂಬ ಕಂಪನಿ. 1965ರಲ್ಲಿ ಈ ಕಂಪನಿಯು ಪ್ಲಾಸ್ಟಿಕ್​ನಿಂದ ತಯಾರಾದ ಕೈಚೀಲವೊಂದನ್ನು ಪ್ರಥಮವಾಗಿ ಮಾರುಕಟ್ಟೆಗೆ ಪರಿಚಯಿಸಿತು. ಇದರ ಜನಪ್ರಿಯತೆಯನ್ನು ಗಮನಿಸಿ ಮತ್ತಷ್ಟು ಕಂಪನಿಗಳು ಹೊಸ ವಿನ್ಯಾಸಗಳನ್ನು ಮಾರುಕಟ್ಟೆಗೆ ತಂದವು. 1980ರ ದಶಕದ ಆರಂಭದಲ್ಲಿ ವಿಶ್ವಾದ್ಯಂತ ಎಲ್ಲ ರಾಷ್ಟ್ರಗಳನ್ನೂ ಆವರಿಸಿಕೊಂಡ ಪ್ಲಾಸ್ಟಿಕ್ ಚೀಲಗಳು ಆ ದಶಕದ ಕೊನೆಯಲ್ಲಿ ಎಲ್ಲೆಡೆ ಏಕಸಾಮ್ಯ ಸ್ಥಾಪಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net