ಕವಿ, ಅನುಭಾವಿ ಕುಮಾರವ್ಯಾಸ; ಇಂದು ಜಯಂತಿ

Kumaravyasa
Published on
ಕುಮಾರವ್ಯಾಸ ಜನಪ್ರಿಯ ಗದುಗಿನ ಭಾರತವನ್ನು ಬರೆದ 15ನೇ ಶತಮಾನದ ಕವಿ. ನೀತಿ ಕಲಿಸುವ, ಭಕ್ತಿಯನ್ನು ಅನುಭವಿಸುವಂತೆ ಮಾಡುವ, ಬಾಳನ್ನೇ ಹಸನು ಮಾಡುವ ಕುಮಾರವ್ಯಾಸನ ಕಾವ್ಯ, ಅವನ ನಂತರದ ನಾಲ್ಕೈದು ಶತಮಾನಗಳ ಉದ್ದಕ್ಕೂ ಜನರ ಬಳಕೆಯಲ್ಲಿ ಇದ್ದುದು ಅದರ ಗಟ್ಟಿತನಕ್ಕೆ ಸಾಕ್ಷಿ.

ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. ಗದುಗಿನ ನಾರಣಪ್ಪ ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ‘ಕುಮಾರವ್ಯಾಸ’ನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿಯೂ ಇದೆ.

ಕುಮಾರವ್ಯಾಸನ ಹುಟ್ಟೂರು ಈಗಿನ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡವೆಂಬ ಗ್ರಾಮ. ಅಲ್ಲಿ ಅವನ ವಂಶಸ್ಥರು ಈಗಲೂ ವಾಸಿಸುತ್ತಾರೆಂದು ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಎ.ವಿ. ಪ್ರಸನ್ನ ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿದ್ದಾರೆ. ಈ ಎಲ್ಲ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳಿವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳಿವಾಡದಲ್ಲಿಯೇ ನೆಲೆಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಭೇದವನ್ನು ಕಾಣುವವರು. ಇವರು ಅಗಸ್ಱ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷ ಎಂ.ಎಚ್. ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ ಕಿರು ಹೊತ್ತಿಗೆಯಲ್ಲಿ ಹೆಚ್ಚಿನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ.

ಪ್ರಮುಖ ಕೃತಿಗಳು: ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, 147 ಸಂಧಿ, 7971 ಪದ್ಯಗಳನ್ನು ಒಳಗೊಂಡಿದೆ.

ಕುಮಾರವ್ಯಾಸ ಭಾರತದ ಭಾಷೆ ನಡುಗನ್ನಡ. ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ.

ಕನ್ನಡ ಸಾಹಿತ್ಯದ ಮೇಲೆ ಆದ ಪ್ರಭಾವ ಅಪಾರ: ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಪ್ರಸಿದ್ಧವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net