ಭಾರತದ ಅಜರಾಮರ ಕ್ರೀಡಾರತ್ನ ಮೇಜರ್ ಧ್ಯಾನ್​ಚಂದ್

Dhyan Chand
Published on
ಹಾಲಿ ದಶಕದಲ್ಲಿ ಭಾರತ ಕ್ರೀಡೆಯಲ್ಲೂ ಶಕ್ತಿಕೇಂದ್ರವಾಗುವತ್ತ ಮುನ್ನಡೆಯುತ್ತಿದೆ. ಈ ಹಾದಿಯಲ್ಲಿ ಹಲವಾರು ಹೊಸಹೊಸ ಕ್ರೀಡಾತಾರೆಯರ ಉದಯವಾಗುತ್ತಿದೆ. ಇವರೆಲ್ಲರಿಗೂ ಸದಾ ಸ್ಪೂರ್ತಿಯ ಚಿಲುಮೆ, ಆದರ್ಶ ಎನಿಸಿರುವವರು ದೇಶದ ಮೊಟ್ಟಮೊದಲ ಕ್ರೀಡಾ ದಿಗ್ಗಜ ಹಾಗೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್​ಚಂದ್. ಇಂದು ಅವರ 118ನೇ ಜನ್ಮದಿನ. ಇದನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸುವ ಮೂಲಕ ಪ್ರತಿ ವರ್ಷ ಅವರಿಗೆ ವಿಶೇಷವಾದ ಗೌರವವನ್ನು ಸಲ್ಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರ ಕ್ರೀಡಾ ಸಾಧನೆಗಳ ಮೆಲುಕು ಇಲ್ಲಿದೆ.

ಇದು ಭಾರತ ಚಂದಿರನ ಅಂಗಳಕ್ಕೆ ಕಾಲಿಟ್ಟಿರುವ ಸಮಯ. ಸರಿಸುಮಾರು ಒಂದು ಶತಮಾನದ ಹಿಂದೆ ಭಾರತದ ಅಂಗಳದಲ್ಲಿ ಅದೇ ಚಂದಿರನ ಬೆಳಕಿನಲ್ಲಿ ಅರಳಿದ ಕ್ರೀಡಾತಾರೆ ಮೇಜರ್ ಧ್ಯಾನ್​ಚಂದ್. ಭಾರತೀಯ ಕ್ರೀಡಾಕ್ಷೇತ್ರದ ಮೊಟ್ಟಮೊದಲ ಸೂಪರ್​ಸ್ಟಾರ್, ಹಾಕಿ ಮಾಂತ್ರಿಕ, ಕ್ರೀಡಾಸ್ಪೂರ್ತಿ ಮತ್ತು ದೇಶಭಕ್ತಿಯ ಪ್ರತೀಕ.

ಬ್ರಿಟಿಷ್ ಇಂಡಿಯನ್ ಆರ್ವಿುಯಲ್ಲಿ ಶಿಸ್ತಿನ ಸಿಪಾಯಿ ಆಗಿದ್ದವರು ಧ್ಯಾನ್ ಸಿಂಗ್. ಹಗಲಿನಲ್ಲಿ ಸೇನಾ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದರು. ರಾತ್ರಿಯಾದರೆ ಹಾಕಿ ಆಟದ ಮೇಲೆ ಪ್ರೀತಿ. ಫ್ಲಡ್​ಲೈಟ್​ಗಳಿಲ್ಲದ ಆ ಕಾಲದಲ್ಲಿ ಚಂದ್ರನ ಬೆಳಕಿನಲ್ಲೇ ರಾತ್ರಿ ಹಾಕಿ ಆಟದ ಅಭ್ಯಾಸ ಮಾಡುತ್ತಿದ್ದರು. ಇದರಿಂದಾಗಿ ಧ್ಯಾನ್ ಸಿಂಗ್​ನಿಂದ ಧ್ಯಾನ್‘ಚಂದ್’ ಆಗಿ ಬದಲಾದರು. ನಂತರದಲ್ಲಿ ಭಾರತ ಮಾತ್ರವಲ್ಲ ವಿಶ್ವದಲ್ಲೇ ಹಾಕಿ ಆಟದ ಜಾದೂಗಾರನಾಗಿ ಮೆರೆದರು. 1928, 1932, 1936ರ ಒಲಿಂಪಿಕ್ಸ್​ನಲ್ಲಿ ಸ್ವರ್ಣ ಪದಕ ಗೆದ್ದ ಭಾರತ ತಂಡದ ಗೆಲುವಿನ ರೂವಾರಿ ಎನಿಸಿದರು. 1926ರಿಂದ 1949ರ ನಡುವೆ ಭಾರತ ಪರ ಆಡಿದ 185 ಪಂದ್ಯಗಳಲ್ಲಿ ಧ್ಯಾನ್​ಚಂದ್ 570 ಗೋಲು ಸಿಡಿಸಿದರು. ಇನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳ ಸಹಿತ ಹಾಕಿ ವೃತ್ತಿಜೀವನದಲ್ಲಿ ಅವರು ಸಿಡಿಸಿದ ಗೋಲಿನ ಸಂಖ್ಯೆ ಸಾವಿರಕ್ಕೂ ಅಧಿಕ. ಹಾಕಿ ಮೈದಾನದಲ್ಲಿ ಅವರು ಚೆಂಡಿನ ಮೇಲೆ ಸಾಧಿಸುತ್ತಿದ್ದ ನಿಯಂತ್ರಣಕ್ಕೆ ಅಭಿಮಾನಿಯಾಗದ ಪ್ರೇಕ್ಷಕರೇ ಇರಲಿಲ್ಲ.

ಸೈನಿಕನ ಪುತ್ರ: 1905ರ ಆಗಸ್ಟ್ 29ರಂದು ಉತ್ತರ ಪ್ರದೇಶದ ಅಲಹಾಬಾದ್​ನಲ್ಲಿ ಜನಿದವರು ಧ್ಯಾನ್​ಚಂದ್. ತಂದೆ ಸಮೇಶ್ವರ್ ಸಿಂಗ್ ಬ್ರಿಟಿಷ್ ಇಂಡಿಯನ್ ಆರ್ವಿುಯಲ್ಲಿದ್ದರು. ಆಗಾಗ ವಿವಿಧ ನಗರಗಳಿಗೆ ವರ್ಗಾವಣೆ ಆಗುತ್ತಿದ್ದ ಕಾರಣ, ಅವರ ಕುಟುಂಬವೂ ಜತೆಯಲ್ಲೇ ತೆರಳುತಿತ್ತು. ಈ ನಡುವೆ ಧ್ಯಾನ್​ಚಂದ್​ಗೆ ಹಾಕಿ ಆಟದ ಮೇಲೆ ಒಲವು ಮೂಡಿತು. 16ನೇ ವಯಸ್ಸಿನಲ್ಲೇ ಸೇನೆಗೆ ಪ್ರವೇಶ ಪಡೆದ ಧ್ಯಾನ್​ಚಂದ್, ವಿವಿಧ ಸೇನಾ ಹಾಕಿ ಟೂರ್ನಿಗಳಲ್ಲಿ ಆಡುವುದನ್ನೂ ಮುಂದುವರಿಸಿದರು. 1922ರಿಂದ 1926ರವರೆಗೆ ಅವರ ಹಾಕಿ ಆಟ ಕೇವಲ ಸೇನಾ ಟೂರ್ನಿಗಳಿಗೆ ಸೀಮಿತವಾಗಿತ್ತು. ನಂತರ 1926ರಲ್ಲಿ ಭಾರತೀಯ ಸೇನಾ ತಂಡದ ಜತೆಗೆ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದರು. ಅಲ್ಲಿ ಭಾರತ ಬರೋಬ್ಬರಿ 18 ಗೆಲುವುಗಳನ್ನು ಕಂಡರೆ, 2 ಪಂದ್ಯಗಳಲ್ಲಿ ಮಾತ್ರ ಡ್ರಾಕ್ಕೆ ತೃಪ್ತಿಪಟ್ಟಿತು. ಈ ಪ್ರವಾಸದಲ್ಲಿ ತೋರಿದ ಅದ್ಭುತ ನಿರ್ವಹಣೆಯಿಂದ ಧ್ಯಾನ್​ಚಂದ್​ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವಕಾಶದ ಬಾಗಿಲುಗಳು ತೆರೆಯಲಾರಂಭಿಸಿದವು.

1928ರಲ್ಲಿ ಆಮ್​ಸ್ಟರ್​​ಡ್ಯಾಂನಲ್ಲಿ ನಡೆದ ಒಲಿಂಪಿಕ್ಸ್​ಗೆ ಮೊದಲ ಬಾರಿಗೆ ಹಾಕಿ ಕ್ರೀಡೆ ಸೇರ್ಪಡೆಗೊಂಡಿತು. ಭಾರತ ತಂಡ ಕಣಕ್ಕಿಳಿದು, ಸವಾಲೇ ಇಲ್ಲದೆ ಸರಾಗವಾಗಿ ಸ್ವರ್ಣ ಪದಕವನ್ನು ಬಾಚಿಕೊಂಡಿತು. ಕ್ರೀಡಾಕೂಟದ 5 ಪಂದ್ಯಗಳಲ್ಲಿ ಧ್ಯಾನ್​ಚಂದ್ ಒಬ್ಬರೇ 14 ಗೋಲು ಬಾರಿಸಿದರು. ಆಸ್ಟ್ರಿಯಾ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಧ್ಯಾನ್​ಚಂದ್ ಹ್ಯಾಟ್ರಿಕ್ ಗೋಲು ಸಿಡಿಸಿ ಮಿಂಚಿದರು. ಆತಿಥೇಯ ನೆದರ್ಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 3-0ಯಿಂದ ಗೆದ್ದು ಮೊಟ್ಟಮೊದಲ ಒಲಿಂಪಿಕ್ಸ್ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತು. ಈ ಪೈಕಿ 2 ಗೋಲುಗಳು ಧ್ಯಾನ್​ಚಂದ್ ಸ್ಟಿಕ್​ನಿಂದ ಸಿಡಿದಿದ್ದವು.

1932ರಲ್ಲಿ ಲಾಸ್ ಏಂಜಲಿಸ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಭಾರತ ಸ್ವರ್ಣ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಬಾರಿ ಆತಿಥೇಯ ಅಮೆರಿಕ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 24-1ರಿಂದ ದಾಖಲೆಯ ಗೆಲುವು ದಾಖಲಿಸಿತು. ಈ ಕ್ರೀಡಾಕೂಟದಲ್ಲಿ ಧ್ಯಾನ್​ಚಂದ್​ಗೆ ಸಹೋದರ ರೂಪ್ ಸಿಂಗ್ ಕೂಡ ಸಮರ್ಥ ಸಾಥ್ ನೀಡಿದರು. ಭಾರತ ತಂಡ ಕ್ರೀಡಾಕೂಟದಲ್ಲಿ ದಾಖಲಿಸಿದ 35 ಗೋಲುಗಳ ಪೈಕಿ ಇವರಿಬ್ಬರು ಸಹೋದರರೇ 25 ಗೋಲುಗಳನ್ನು ಸಿಡಿಸಿದರು.

1936ರಲ್ಲಿ ಬರ್ಲಿನ್​ನಲ್ಲಿ ಒಲಿಂಪಿಕ್ಸ್ ನಡೆದಾಗ ಧ್ಯಾನ್​ಚಂದ್ ಭಾರತ ತಂಡದ ಪ್ರಮುಖ ಆಟಗಾರರಷ್ಟೇ ಆಗಿರಲಿಲ್ಲ. ನಾಯಕತ್ವದ ಹೊಣೆಯೂ ಅವರ ಮೇಲಿತ್ತು. 1933ರಿಂದಲೇ ಭಾರತ ತಂಡದ ನಾಯಕತ್ವ ಅವರ ಹೆಗಲೇರಿತ್ತು. ಕ್ರೀಡಾಕೂಟದಲ್ಲಿ ಭಾರತ ಒಟ್ಟು 38 ಗೋಲು ದಾಖಲಿಸಿದರೆ, ಈ ಪೈಕಿ ತಲಾ 11 ಗೋಲುಗಳನ್ನು ಧ್ಯಾನ್​ಚಂದ್ ಮತ್ತು ಅವರ ಸಹೋದರ ರೂಪ್ ಸಿಂಗ್ ಬಾರಿಸಿದರು. ಫೈನಲ್ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಜರ್ಮನಿಗೆ 8-1 ಗೋಲುಗಳಿಂದ ಸೋಲುಣಿಸಿ ಹ್ಯಾಟ್ರಿಕ್ ಸ್ವರ್ಣ ಪದಕ ಸಾಧನೆ ಮಾಡಿತು. ಈ ಪೈಕಿ 3 ಗೋಲುಗಳನ್ನು ಧ್ಯಾನ್​ಚಂದ್ ಬಾರಿಸಿದರು.

ಧ್ಯಾನ್​ಚಂದ್ ಭಾಗವಹಿಸಿದ ಮೂರು ಒಲಿಂಪಿಕ್ಸ್​ಗಳಲ್ಲಿ ಆಡಿದ ಒಟ್ಟು 12 ಪಂದ್ಯಗಳಲ್ಲಿ 33 ಗೋಲುಗಳನ್ನು ಬಾರಿಸಿದರು. ದುರದೃಷ್ಟಕರವಾಗಿ, 2ನೇ ಮಹಾಯುದ್ಧದಿಂದಾಗಿ 1940 ಮತ್ತು 1944ರ ಮುಂದಿನ ಎರಡು ಒಲಿಂಪಿಕ್ಸ್ ಆವೃತ್ತಿಗಳು ನಡೆಯಲಿಲ್ಲ. ಇಲ್ಲದಿದ್ದರೆ ಭಾರತಕ್ಕೆ ಮತ್ತೆರಡು ಸ್ವರ್ಣ ಪದಕಗಳು ಸರಾಗವಾಗಿ ಒಲಿದುಬರುತ್ತಿದ್ದವು ಮತ್ತು ಧ್ಯಾನ್​ಚಂದ್ ಹಾಕಿ ಸ್ಟಿಕ್​ನಿಂದ ಮತ್ತಷ್ಟು ಅಚ್ಚಳಿಯದ ದಾಖಲೆಗಳು ನಿರ್ವಣವಾಗುತ್ತಿದ್ದವು.

ಹಿಟ್ಲರ್ ಆಹ್ವಾನ ತಿರಸ್ಕಾರ: 1936ರ ಬರ್ಲಿನ್ ಒಲಿಂಪಿಕ್ಸ್​ನ ಹಾಕಿ ಫೈನಲ್ ಪಂದ್ಯ ನೋಡಲು ಆತಿಥೇಯ ಜರ್ಮನಿಯ ಸರ್ವಾಧಿಕಾರಿ ಅಡಾಲ್ಪ್ ಹಿಟ್ಲರ್ ಕೂಡ ಆಗಮಿಸಿದ್ದರು. ಧ್ಯಾನ್​ಚಂದ್ ಆಟವನ್ನು ನೋಡಿ ಪ್ರಭಾವಿತರಾದ ಅವರು ಜರ್ಮನಿ ತಂಡದ ಪರ ಆಡಲು ಜರ್ಮನಿಯ ಪೌರತ್ವ ಮತ್ತು ಜರ್ಮನಿ ಸೇನೆಯಲ್ಲಿ ಕರ್ನಲ್ ಪದವಿಯ ಆಫರ್​ಅನ್ನೂ ನೀಡಿದರು. ಆದರೆ ಧ್ಯಾನ್​ಚಂದ್ ಅದನ್ನು ನಯವಾಗಿಯೇ ನಿರಾಕರಿಸಿ, ಹಾಕಿ ಮೈದಾನದ ಹೊರಗಿನ ದೇಶಭಕ್ತಿ ಪ್ರದರ್ಶಿಸಿದ್ದರು.

1928ರ ಆಮ್್ಟರ್​ಡ್ಯಾಂ ಒಲಿಂಪಿಕ್ಸ್​ನಲ್ಲಿ ಧ್ಯಾನ್​ಚಂದ್ ಆಟವನ್ನು ನೋಡಿ ವಿಶ್ವವೇ ಬೆರಗಾಗಿತ್ತು. ಆಗ ನೆದರ್ಲೆಂಡ್ ಪತ್ರಿಕೆಯೊಂದರಲ್ಲಿ, ‘ಇದು ಹಾಕಿ ಕ್ರೀಡೆಯಲ್ಲ, ಮ್ಯಾಜಿಕ್. ಧ್ಯಾನ್​ಚಂದ್ ಹಾಕಿಯ ಜಾದೂಗಾರ’ ಎಂದು ಬಣ್ಣಿಸಿ ವರದಿ ಮಾಡಿತ್ತು. ಆಗ ನೆದರ್ಲೆಂಡ್​ನ ಕ್ರೀಡಾಧಿಕಾರಿಗಳು, ಧ್ಯಾನ್​ಚಂದ್ ಅವರ ಸ್ಟಿಕ್​ನಲ್ಲಿ ಏನಾದರೂ ಮ್ಯಾಗ್ನೆಟ್ ಇದೆಯೇ ಎಂದು ಅದನ್ನು ಮುರಿದು ಪರಿಶೀಲಿಸಿದ್ದರು. ಇದಲ್ಲದೆ ಹಿರಿಯ ಮಹಿಳೆಯೊಬ್ಬರು ತನ್ನ ವಾಕಿಂಗ್ ಸ್ಟಿಕ್​ನಿಂದ ಆಡುವಂತೆ ಸವಾಲು ಎಸೆದಾಗ, ಧ್ಯಾನ್​ಚಂದ್ ಅದರಲ್ಲೂ ಆಡಿ ಗೋಲು ಬಾರಿಸಿದ್ದರು. ಇವೆಲ್ಲ ಧ್ಯಾನ್​ಚಂದ್ ಶ್ರೇಷ್ಠತೆಯನ್ನು ಸಾರುವ ಯಶೋಗಾಥೆಗಳಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿವೆ.

ಕ್ರಿಕೆಟ್​ನಲ್ಲಿ ರನ್ ಗಳಿಸಿದಂತೆ ಗೋಲು ಬಾರಿಸುತ್ತಿದ್ದರು!: 1936ರ ಬರ್ಲಿನ್ ಒಲಿಂಪಿಕ್ಸ್​ಗೆ ಪೂರ್ವಸಿದ್ಧತೆಯಾಗಿ ಭಾರತ ಹಾಕಿ ತಂಡ 1935ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಗ ಅಡಿಲೇಡ್​ನಲ್ಲಿ ಮೊದಲ ಬಾರಿ ಹಾಕಿ ಪಂದ್ಯವೊಂದಕ್ಕೆ ಹಾಜರಾದ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್, ಧ್ಯಾನ್​ಚಂದ್ ಆಟವನ್ನು ನೋಡಿ ವಿಸ್ಮಿತರಾದರು ಮತ್ತು ಪಂದ್ಯದ ನಂತರ ಭೇಟಿಯಾಗಿ, ‘ಕ್ರಿಕೆಟ್​ನಲ್ಲಿ ರನ್ ಗಳಿಸಿದಂತೆ ನೀವು ಗೋಲು ಬಾರಿಸುತ್ತಿರುವಿರಿ’ ಎಂದು ಹೊಗಳಿದ್ದರು.

ಭಾರತರತ್ನ ಸಿಗದ ಕೊರಗು: ಕ್ರೀಡಾಕ್ಷೇತ್ರದಲ್ಲಿ ಧ್ಯಾನ್​ಚಂದ್ ಯಾವಾಗಲೂ ಭಾರತರತ್ನ. ಆದರೆ ಅವರ ಅಭಿಮಾನಿಗಳಿಗೆ ಮಾತ್ರ, ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ ಪ್ರಶಸ್ತಿ ಸಿಗದ ಕೊರಗು ಯಾವಾಗಲೂ ಕಾಡುತ್ತಲೇ ಇರುತ್ತದೆ. ಭಾರತೀಯ ಸೇನೆಗೆ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇಜರ್ ಪದವಿಯೊಂದಿಗೆ ನಿವೃತ್ತಿ ಹೊಂದಿದ ಧ್ಯಾನ್​ಚಂದ್, 1956ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು. ನವದೆಹಲಿಯಲ್ಲಿ ಅವರ ಹೆಸರಿನ ಹಾಕಿ ಕ್ರೀಡಾಂಗಣವಿದೆ. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್​ರತ್ನಕ್ಕೂ 2021ರಲ್ಲಿ ಅವರ ಹೆಸರನ್ನೇ ಮರುನಾಮಕರಣ ಮಾಡಲಾಗಿದೆ. ಅವರ ಜನ್ಮದಿನವೇ ರಾಷ್ಟ್ರೀಯ ಕ್ರೀಡಾದಿನವೆನಿಸಿದೆ. 1979ರ ಡಿಸೆಂಬರ್ 3ರಂದು 74ನೇ ವಯಸ್ಸಿನಲ್ಲಿ ಧ್ಯಾನ್​ಚಂದ್ ನಿಧನರಾದರು. ಆದರೆ ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನ ಆಚರಣೆಯ ಸಮಯದಲ್ಲಿ ಅವರು ಕ್ರೀಡಾಪ್ರೇಮಿಗಳ ಮನದಲ್ಲಿ ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇದ್ದಾರೆ. ಅದೇ ಅವರ ಮತ್ತು ಹಾಕಿ ಆಟದ ಹಿರಿಮೆ.

(ಲೇಖಕರು ‘ವಿಜಯವಾಣಿ’ ಮುಖ್ಯ ಉಪಸಂಪಾದಕ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net