ಜೀವವಿಕಾಸದ ಕೌತುಕ ಬೆನ್ನತ್ತಿದ ಡಾರ್ವಿನ್; ಇಂದು ಅಂತಾರಾಷ್ಟ್ರೀಯ ಡಾರ್ವಿನ್ ದಿನ

Darwin
Published on
ನಿಸರ್ಗತಜ್ಞ ಡಾರ್ವಿನ್ ಸಿದ್ಧಾಂತದ ಮೇಲೆ ಬೆಳಕು ಚೆಲ್ಲುವ, ಅವರ ವೈಜ್ಞಾನಿಕ ಚಿಂತನೆ, ಕುತೂಹಲ, ಸತ್ಯದೆಡೆಗಿನ ಹಸಿವಿನ ಸ್ಮರಣೆಗೆ ಪ್ರತಿವರ್ಷ ಫೆಬ್ರವರಿ 12 ರಂದು ಜಗತ್ತಿನಾದ್ಯಂತ ಡಾರ್ವಿನ್ ಡೇ ಆಚರಿಸಲಾಗುತ್ತದೆ. 1990 ರಲ್ಲಿ ಅಧಿಕೃತವಾಗಿ ಪ್ರಾರಂಭವಾದ ಡಾರ್ವಿನ್ ಡೇ ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಆಸಕ್ತಿ ಬೆಳೆಸುವಲ್ಲಿ ಪ್ರಮುಖ ದಿನವಾಗಿದೆ.

| ಅನೀಶ್ ಬಿ. ಕೊಪ್ಪ

ಬಾಲ್ಯದಲ್ಲಿ ಸೋಮಾರಿ ಎನಿಸಿಕೊಂಡು, ವೈದ್ಯಕೀಯ ಶಿಕ್ಷಣವನ್ನು ಅರ್ಧಕ್ಕೇ ಕೈಬಿಟ್ಟು, ತನ್ನ ಆಸಕ್ತಿಯ ಕ್ಷೇತ್ರದ ಮೇಲೆ ಏಕಾಗ್ರಗೊಳಿಸಿಕೊಂಡು ವೈಜ್ಞಾನಿಕ ಸಾಧನೆಗೈದ ಡಾರ್ವಿನ್ ಜೀವನವೇ ಒಂದು ಸಂದೇಶವಾಗಿದೆ. ಮಕ್ಕಳ ಆಸಕ್ತಿಗೆ ನೀರೆರೆಯಬೇಕು, ಒತ್ತಾಯಪೂರ್ವಕವಾಗಿ ಯಾವುದನ್ನೂ ಹೇರಬಾರದು ಎಂಬ ಮನೋವಿಜ್ಞಾನದ ನೆಲೆಗಟ್ಟಿಗೆ ಪಾಲಕರು ಇಂಬು ತುಂಬಬೇಕಾದ ಹಾಗೂ ಮಕ್ಕಳು ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಳ್ಳಬೇಕಾದ ಪ್ರಸ್ತುತತೆಗೆ ಡಾರ್ವಿನ್​ರ ಎಲ್ಲಾ ಸಾಧನೆಗಳನ್ನು ಮಾದರಿಯಾಗಿ ತೆಗೆದುಕೊಳ್ಳಬಹುದು. 1809 ರ ಫೆಬ್ರವರಿ 12 ರಂದು ಇಂಗ್ಲೆಂಡಿನ ಶ್ರೌಸ್​ಬರಿಯಲ್ಲಿ ಜನಿಸಿದ ಚಾರ್ಲ್ಸ್ ರಾಬರ್ಟ್ ಡಾರ್ವಿನ್ ಬಾಲ್ಯದಿಂದಲೂ ಪ್ರಕೃತಿಪ್ರೇಮಿ. ಸಸ್ಯ, ಕಲ್ಲು, ಮಣ್ಣು, ಖನಿಜ, ಕೀಟ, ಮರದ ರೆಂಬೆ ಕೊಂಬೆಗಳನ್ನು ಮನೆಯೊಳಗೆ ತಂದು ಹಾಕಿಕೊಂಡು ಅವುಗಳ ಬಗೆಗೆ ತಿಳಿದುಕೊಳ್ಳುವುದರಲ್ಲಿ ಉತ್ಸುಕ. ಈ ವಿಶೇಷ ಆಸಕ್ತಿಯೇ ಮುಂದೆ ‘ಡಾರ್ವಿನ್​ನ ವಿಕಾಸವಾದ’ ಎಂಬ ಹೆಗ್ಗುರುತಿನಲ್ಲಿ ಜಗತ್ತಿಗೆ ಪರಿಚಿತವಾಗುವಂತೆ ಮಾಡಿತು. ಡಾರ್ವಿನ್ 1882 ರ ಎಪ್ರಿಲ್ 19 ರಂದು ಕೊನೆಯುಸಿರೆಳೆದರು.

ವಿಕಾಸವಾದ

ಜೀವಸಂಕುಲದಲ್ಲಿನ ಪ್ರತಿಯೊಂದು ಜೀವಿಯೂ ಸೃಷ್ಟಿಸಲ್ಪಟ್ಟದ್ದು ದೇವರಿಂದ. ಅದರಲ್ಲಿ ಮಾನವ ಕುಲವು ದೈವದ ಅತ್ಯುತ್ಕೃಷ್ಟ ಸೃಷ್ಟಿ ಎಂಬ ಮಾತಿಗೆ ಸೆಡ್ಡು ಹೊಡೆದು ವಿಕಾಸವಾದದ ಮೂಲ ಸತ್ಯ ತಿಳಿಸಿಕೊಟ್ಟವರು ಡಾರ್ವಿನ್. ‘ನಮ್ಮ ಪೂರ್ವಜರು ಕಪಿಗಳೇ ಹೌದು’ ಎಂದು ಸಾಧಿಸಿದ್ದೇ ವಿಕಾಸವಾದ. ಭೂಮಿಯ ಮೇಲೆ ಜೀವ ಉತ್ಪತ್ತಿಯಾದ ನಂತರದಿಂದ ಈಗ ಕಂಡುಬರುವ ಹಾಗೂ ಅಳಿದು ಹೋಗಿರುವ ಜೀವಜಾತಿಗಳು ಯಾವ ಆಧಾರಗಳ ಮೇಲೆ ಉತ್ಪತ್ತಿಯಾಗುವುವೆಂದು ಜೀವ ವಿಕಾಸವಾದ ವಿವರಿಸುತ್ತದೆ. ಅನುವಂಶೀಯ ಗುಣಗಳ ಅಧ್ಯಯನಕ್ಕೂ ಡಾರ್ವಿನ್ ತತ್ವಗಳೇ ತಳಪಾಯ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಅನೇಕ ರೂಪಾಂತರಗಳಿಗೆ ಒಳಗಾಗಿದೆ ಎಂಬುದರ ಬಗ್ಗೆ ‘ಆನ್ ದಿ ಆರಿಜಿನ್ ಆಫ್ ಸ್ಪೀಶೀಸ್’ ಪುಸ್ತಕದಲ್ಲಿ ಡಾರ್ವಿನ್ ತಿಳಿಸಿದ್ದಾರೆ.

ಸರ್ವೆವಲ್ ಆಫ್ ದಿ ಫಿಟೆಸ್ಟ್

ಇದು ಡಾರ್ವಿನ್ ಕಂಡುಕೊಂಡ ಕಟುಸತ್ಯ. ಒಂದು ಮರ ಸಾವಿರಾರು ಬೀಜಗಳನ್ನು ಉದುರಿಸುತ್ತದೆ. ಅದರಲ್ಲಿ ಆರೋಗ್ಯವಂತ ಬೀಜಗಳು ಮಾತ್ರವೇ ಗಿಡವಾಗಿ ಬೆಳೆದು ಮರವಾಗುತ್ತವೆ. ಅಂತೆಯೇ ಪಶು, ಪಕ್ಷಿ, ಕೀಟಗಳು ಅಸ್ತಿತ್ವಕ್ಕೆ ಹೋರಾಡಿ, ಬಲಿಷ್ಠವಾದವು ಮಾತ್ರ ಉಳಿದುಕೊಳ್ಳುತ್ತವೆ. ಪ್ರಕೃತಿ ಕೂಡ ತನಗೆ ಬೇಡದ, ಹೆಚ್ಚಾಗಿ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳದೇ ಇರುವ ಜೀವಿ ಗಳನ್ನು ತೆಗೆದುಹಾಕುತ್ತದೆ ಅಥವಾ ಆ ಜೀವಿಯು ತಂತಾನೇ ನಶಿಸುತ್ತದೆ ಎಂಬ ನೈಸರ್ಗಿಕ ಆಯ್ಕೆಯ ಸಿದ್ಧಾಂತ ಇಟ್ಟುಕೊಂಡು ಡಾರ್ವಿನ್ ಸಂಶೋಧನೆ ಸಾಗಿತ್ತು.

ಕೆಲವು ಪ್ರಮುಖ ಪುಸ್ತಕಗಳು

  • ದಿ ಆರಿಜಿನ್ ಆಫ್ ಸ್ಪೀಶೀಸ್ (1859)
  • ದ ವೇರಿಯೇಷನ್ ಆಫ್ ಅನಿಮಲ್ಸ್ ಆಂಡ್ ಪ್ಲಾಂಟ್ಸ್ (1868)
  • ದ ಡಿಸೆಂಟ್ ಆಫ್ ಮ್ಯಾನ್ (1871)
  • ಎಕ್ಸ್​ಪ್ರೆಷನ್​ ಆಫ್ ದ ಎಮೋಷನ್ಸ್ ಇನ್ ಮ್ಯಾನ್ ಆಂಡ್ ಅನಿಮಲ್ಸ್ (1872)
  • ಇನ್​ಸೆಕ್ಟಿವೋರಸ್ ಪ್ಲಾಂಟ್ಸ್ (1875)
  • ಫರ್ಟಿಲೈಸೇಷನ್ ಆಫ್ ಆರ್ಕಿಡ್ಸ್ (1862)

ಅಸಮರ್ಥ ವಿದ್ಯಾರ್ಥಿಯೆನಿಸಿದವನ ಅಸಾಮಾನ್ಯ ಸಾಮರ್ಥ್ಯ: ಶಿಕ್ಷಕರು ಮತ್ತು ಸುತ್ತಮುತ್ತಲಿನವರು ಅಸಮರ್ಥ ವಿದ್ಯಾರ್ಥಿ ಎಂದು ಕೈಬಿಟ್ಟ ಡಾರ್ವಿನ್ ಪ್ರಸಿದ್ಧ ವಿಜ್ಞಾನಿಯಾಗಿ ಹೊರಹೊಮ್ಮಿದರು. ಚಿಟ್ಟೆಗಳು, ಖನಿಜಗಳು, ಚಿಪ್ಪುಗಳ ಸಂಗ್ರಹ ಇವುಗಳನ್ನೇ ಹವ್ಯಾಸವಾಗಿಸಿಕೊಂಡು ಶಾಲೆಯಲ್ಲಿ ನಿಂದನೆಗೆ ಒಳಗಾದ ವಿದ್ಯಾರ್ಥಿ ಡಾರ್ವಿನ್. ತಂದೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಮಾಡಿಸಿದರೂ ಅದನ್ನೂ ಕೈಬಿಟ್ಟ ವಿದ್ಯಾರ್ಥಿ ಡಾರ್ವಿನ್! ಜೀರುಂಡೆಗಳನ್ನು ಸಂಗ್ರಹಿಸುವುದೇ ಹೆಚ್ಚಿನ ಆಸಕ್ತಿ ಎಂಬಂತಿದ್ದ ಡಾರ್ವಿನ್ ಜೀವ ಸಂಕುಲದ ಬೆರಗನ್ನು ಬಿಚ್ಚಿಟ್ಟ ವಿಜ್ಞಾನಿಯಾದರು.

ವಿಕಾಸವಾದದ ಬೀಜ ಬಿತ್ತಿದ ಬೀಗಲ್ ಯಾನ

1831 ರಲ್ಲಿ ಚಾರ್ಲ್ಸ್ ಡಾರ್ವಿನ್​ಗೆ ಬೀಗಲ್ ಎಂಬ ಹಡಗಿನಲ್ಲಿ ವಿಶ್ವ ಪರ್ಯಟನೆ ಮಾಡುವ ಸದವಕಾಶ ದೊರೆಯಿತು. 5 ವರ್ಷಗಳ ಸುದೀರ್ಘ ಪರ್ಯಟನೆಯಲ್ಲಿ ಡಾರ್ವಿನ್​ನ ಸಂಶೋಧನೆಯ ಮನೋವೃತ್ತಿ ಬಲಗೊಂಡಿತು. ಈ ಯಾನದಲ್ಲಿ, ನಿರ್ನಾಮವಾದ ಪ್ರಾಣಿಗಳ ಮೂಳೆಗಳನ್ನು ಸಂಗ್ರಹಿಸಿ ತಂದು, ರೂಢಿಯಲ್ಲಿ ಉಳಿದ ಮತ್ತು ಬದುಕಿರುವ ಪ್ರಾಣಿಗಳ ನಡುವಿನ ಸಂಬಂಧ ತಿಳಿಯಲು ಆಸಕ್ತರಾದರು. ನೈಸರ್ಗಿಕ ಆಯ್ಕೆಯ ಸಿದ್ಧಾಂತಕ್ಕೆ ಈ ಯಾನ ಸಹಕಾರಿಯಾಯಿತು. ಯಾನದಲ್ಲಿ ಟಾಹಿಟಿ ಎಂಬ ಪ್ರದೇಶದ ಭೂಭಾಗದಲ್ಲಿ ವಾಸಿಸುತ್ತಿದ್ದ ಡಕ್ ಬಿಲ್, ಪ್ಲಾಟಿಪಸ್ ಮುಂತಾದ ಆದಿಸಸ್ತನಿಗಳನ್ನು ಅವರು ಪರಿಶೀಲಿಸಿದಾಗ ಅವು ಕೆಳವರ್ಗದ ಸಸ್ತನಿ ಗಳಾಗಿದ್ದವು. ಅಂದರೆ ಸಾಮಾನ್ಯವಾಗಿ ಸಸ್ತನಿಗಳೆಂದರೆ ಮರಿಗಳನ್ನು ಹಾಕಿ ಎದೆಹಾಲನ್ನು ಕುಡಿಸುವ ಪ್ರಾಣಿಗಳಾದರೆ, ಈ ಕೆಳವರ್ಗದ ಸಸ್ತನಿಗಳು ಮೊಟ್ಟೆಗಳನ್ನಿಡುತ್ತಿದ್ದವು! ಇವು ಡಾರ್ವಿನ್​ರ ಆಶ್ಚರ್ಯಕ್ಕೆ ಕಾರಣವಾಗಿದ್ದವು. ಆ ಪರ್ಯಟನೆಯ ಕಾಲದ ಅವಲೋಕನಗಳು, ವಿಕಾಸದ ಕುರಿತ ಅವರ ಯೋಚನೆಗಳಿಗೆ ಆಹಾರವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net