ಅರೇಬಿಕಾ ದರ ಕುಸಿತ, ಬೆಳೆಗಾರರಲ್ಲಿ ಆತಂಕ...

Coffee
Published on
ಹಲವರ ದಿನಚರಿ ಪ್ರಾರಂಭವಾಗುವುದೇ ಟೀ ಮತ್ತು ಕಾಫಿಯಿಂದ. ಜನರ ಟೆನ್ಶನ್ ಫ್ರೀ ಮಾಡುವ ಕಾಫಿಯನ್ನು ಬೆಳೆಯುವ ಬೆಳೆಗಾರರಿಗೇ ಟೆನ್ಶನ್ ಹೆಚ್ಚಾಗಿದೆ. ಅರೇಬಿಕಾ ಕಾಫಿ ಬೆಳೆಗೆ ಮಾರುಕಟ್ಟೆಯಲ್ಲಿ ತಕ್ಕ ಧಾರಣೆ ಸಿಗದೆ ಜೇಬಿಗೆ ಕತ್ತರಿ ಬಿದ್ದಿದೆ.

| ಕಾಂತರಾಜ್ ಹೊನ್ನೇಕೋಡಿ, ಸಕಲೇಶಪುರ 
ಮಾರುಕಟ್ಟೆ ಆರಂಭವಾಗುವ ಹೊತ್ತಿನಲ್ಲೇ ಅರೇಬಿಕಾ ಕಾಫಿ ಧಾರಣೆ ಕುಸಿದಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಈಗಾಗಲೆ ಸಕಲೇಶಪುರ ತಾಲೂಕಿನ ಹಲವೆಡೆ ಅರೇಬಿಕಾ ಕಾಫಿ ಕೊಯ್ಲು ಆರಂಭವಾಗಿದ್ದು, ಮಾರುಕಟ್ಟೆಗೆ ಇನ್ನೇನು ಆವಕವಾಗಲಿದೆ. ಆದರೆ, ಕಾಫಿ ಧಾರಣೆ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿರುವುದು ಬೆಳೆಗಾರರನ್ನು ಚಿಂತೆಗೆ ದೂಡಿದೆ. ಸಾಮಾನ್ಯವಾಗಿ ಆಗಸ್ಟ್ ಅಂತ್ಯದಿಂದಲೇ ಕೊಯ್ಲು ಆರಂಭವಾಗಿ ಅಕ್ಟೋಬರ್​ನಲ್ಲಿ ವೇಗ ಪಡೆದು, ನವೆಂಬರ್ ಮೊದಲ ವಾರದೊಳಗೆ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಮಾರುಕಟ್ಟೆ ಪ್ರವೇಶಿಸುತ್ತದೆ.

ಕಳೆದ ಜೂನ್​ನಲ್ಲಿ 50 ಕೆಜಿ ಅರೇಬಿಕಾ ಚರಿ ಧಾರಣೆ 8,000 ದಿಂದ 8,500 ರೂ.ಗೆ ಸ್ಥಿರಗೊಂಡಿದ್ದರೆ, ಪಾರ್ಚಮೆಂಟ್ ಧಾರಣೆ 16 ಸಾವಿರ ರೂ. ತಲುಪಿತ್ತು. ಸದ್ಯ ಮಾರುಕಟ್ಟೆಯಲ್ಲಿ 50 ಕೆಜಿ ಅರೇಬಿಕಾ ಚರಿ ಧಾರಣೆ 6,500-7,000 ರೂ. ಆಗಿದ್ದರೆ, ಪಾರ್ಚಮೆಂಟ್ ಧಾರಣೆ 10,500 ರಿಂದ 11,000 ರೂ.ವರೆಗೆ ಇದೆ. ಇದರಿಂದಾಗಿ ಪ್ರತಿ ಮೂಟೆ ಚರಿ ಕಾಫಿ ಬೆಲೆ 1,500 ರಿಂದ 2,000 ಸಾವಿರ ರೂ. ಕುಸಿತ ಕಂಡಿದ್ದರೆ ಅರೇಬಿಕಾ ಪಾರ್ಚಮೆಂಟ್ ದರ ಬರೋಬ್ಬರಿ 4,500 ರಿಂದ 5,000 ರೂ. ಇಳಿಕೆಯಾಗಿದೆ.

ಕಾರಣವೇನು?: ಅರೇಬಿಕಾ ಕಾಫಿ ಹೆಚ್ಚು ಬೆಳೆಯುವ ಬ್ರೇಜಿಲ್​ನಲ್ಲಿ ಈ ಬಾರಿ ಕಾಫಿ ಫಸಲು ಉತ್ತಮವಾಗಿದ್ದು, ಈಗಾಗಲೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಕಾಫಿ ಬೆಲೆ ನಿಗದಿಪಡಿಸುವ ಲಂಡನ್ ಮಾರುಕಟ್ಟೆಯಲ್ಲಿ ಅರೇಬಿಕಾ ಬೆಲೆ ಕುಸಿದಿದೆ ಎಂಬುದು ಕಾಫಿ ವ್ಯಾಪಾರಿಗಳ ಮಾಹಿತಿ.

ರೊಬಸ್ಟಾ ಕಾಫಿ ಬೆಳೆಗಿಂತ ಅರೇಬಿಕಾ ಬೆಳೆಯುವುದು ಸವಾಲಿನ ಕೆಲಸ. ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗಗಳಿಲ್ಲದೆ ನೂರಾರು ವರ್ಷ ಬದುಕುವ ರೊಬಸ್ಟಾ ಕಾಫಿ ಗಿಡಗಳನ್ನು ಸುಲಭವಾಗಿ ಬೆಳೆಯಬಹುದು. ಆದರೆ, ಅರೇಬಿಕಾ ಕಾಫಿ ಬೆಳೆಯುವುದು ಸುಲಭವಲ್ಲ. ನಿಗದಿತ ಕೆಲಸ ನಿರ್ಲಕ್ಷಿಸಿದರೆ ಮುಂದಿನ ವರ್ಷ ತೋಟಕ್ಕೆ ಕಾಲಿಡುವುದು ಅನವಶ್ಯಕ ಎಂಬಷ್ಟು ಸೂಕ್ಷ್ಮ ಬೆಳೆಯಾಗಿರುವ ಅರೇಬಿಕಾ ಕೇವಲ ಎರಡು ದಶಕದ ಬೆಳೆ. ಆದರೂ, ಅರೇಬಿಕಾ ಕಾಫಿ ಬಗ್ಗೆ ಇದರ ಹೆಚ್ಚಿನ ಧಾರಣೆಯಿಂದಾಗಿ ಕಾಫಿ ಬೆಳೆಗಾರರಿಗೆ ಅಚ್ಚುಮೆಚ್ಚು.

ಏರಿಳಿತ ಕಾಣದ ರೊಬಸ್ಟಾ: ಅರೇಬಿಕಾ ಕಾಫಿಗೆ ಹೋಲಿಸಿದರೆ ರೊಬಸ್ಟಾ ಕಾಫಿ ಧಾರಣೆಯಲ್ಲಿ ಹೆಚ್ಚಿನ ಏರಿಳಿತವಾಗಿಲ್ಲ. ಕಾಫಿ ಮಾರುಕಟ್ಟೆ ಮುಕ್ತಾಯದ ಹಂತದಲ್ಲಿ 50 ಕೆಜಿ ರೊಬಸ್ಟಾ ಪಾರ್ಚ್​ವೆುಂಟ್ ಧಾರಣೆ 6,500 ರೂ. ಇದ್ದರೆ ಪ್ರಸಕ್ತ 5,800 ರಿಂದ 6,200 ರೂ.ವರೆಗೆ ದರವಿದೆ. ಸದ್ಯ ರೊಬಸ್ಟಾ ಕಾಫಿ ಮಾರುಕಟ್ಟೆ ಪ್ರವೇಶಕ್ಕೆ ಇನ್ನೂ ಎರಡು ತಿಂಗಳ ಕಾಲಾವಕಾಶವಿದ್ದು, ಹಳೆಯ ಕಾಫಿ ಮಾತ್ರ ಮಾರುಕಟ್ಟೆಗೆ ಅಲ್ಲಲ್ಲಿ ಪ್ರವೇಶಿಸುತ್ತಿದೆ.

ಅಧಿಕ ಮಳೆ ಬಿದ್ದರೆ ಹಾನಿ: ಸದ್ಯ ಅರೇಬಿಕಾ ಕಾಫಿ ಗಿಡದಲ್ಲಿ ಈಗಾಗಲೆ ಹಣ್ಣುಗಳು ಮೂಡುತ್ತಿದ್ದು, ಈಗ ಮಳೆಯಾದರೆ ಹಣ್ಣುಗಳು ನೆಲ ಸೇರುತ್ತವೆ ಎಂಬ ಭಯ ಬೆಳೆಗಾರರದ್ದು. ನಿರಂತರ ಮಳೆಯಾದರೆ ಕೊಳೆರೋಗ ತೋಟಗಳನ್ನು ಆವರಿಸಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಲಿದೆ. ರೊಬಸ್ಟಾ ಕಾಫಿ ಕಾಯಿ ಇನ್ನೂ ಬೀಜ ಮೂಡುವ ಹಂತದಲ್ಲಿರುವುದರಿಂದ ಅತಿ ಬೇಗ ಕೊಳೆರೋಗ ಆವರಿಸುತ್ತದೆ. ಆದ್ದರಿಂದ, ಕೆಲ ದಿನಗಳ ಕಾಲ ಮಳೆಬೇಡ ಎಂಬುದು ಬೆಳೆಗಾರರ ಮಾತು.

ಲಂಡನ್ ಮಾರುಕಟ್ಟೆಯಲ್ಲಿನ ದರ ಇಳಿಕೆ ಸದ್ಯ ಸ್ಥಳೀಯ ಮಾರುಕಟ್ಟೆಗೂ ತಟ್ಟಿದೆ. ಹಾಗಾಗಿ ಅರೇಬಿಕಾ ಕಾಫಿ ದರ ಇಳಿಕೆಯಾಗಿದೆ ಎನ್ನಲಾಗಿದೆ. | ನಡಹಳ್ಳಿ ಕುಮಾರ್, ಕಾಫಿ ವ್ಯಾಪಾರಿ ಸದ್ಯ ತಾಲೂಕಿನ ಅಲ್ಲಲ್ಲಿ ಅರೇಬಿಕಾ ಕಾಫಿ ಕೊಯ್ಲು ಆರಂಭವಾಗಿದೆ. ಕಾಫಿ ಮಾರುಕಟ್ಟೆ ಪ್ರವೇಶಿಸುವ ವೇಳೆ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ಸದ್ಯ ಕಾಫಿ ಮಾರಾಟ ಮಾಡಲು ತೊಂದರೆಯಾಗಿದೆ. | ಕಾರ್ತಿಕ್, ಕಾಫಿ ಬೆಳೆಗಾರ, ಬ್ಯಾಕರವಳ್ಳಿ

ಹೆಚ್ಚು ಮಳೆಗೆ ಒಗ್ಗದು: ಹೆಚ್ಚು ಮಳೆ ಬೀಳುವ ಹೆತ್ತೂರು, ಯಸಳೂರು ಹಾಗೂ ಹಾನುಬಾಳ್ ಹೋಬಳಿಯ ಪಶ್ಚಿಮಘಟ್ಟದ ತೋಟಗಳಲ್ಲಿ ಅರೇಬಿಕಾ ಕಾಫಿ ದುಬಾರಿ. ಬೆಳೆದರೂ ನಿರೀಕ್ಷಿಸಿದಷ್ಟು ಇಳುವರಿ ಬಾರದಿರುವುದರಿಂದ ಅರೇಬಿಕಾ ಕಾಫಿ ಬಗ್ಗೆ ಅಕ್ಕರೆ ಇದ್ದರೂ ಅನಿವಾರ್ಯವಾಗಿ ಹೆಚ್ಚಿನ ಶೀತ ತಡೆಯುವ ಶಕ್ತಿ ಹೊಂದಿರುವ ರೊಬಸ್ಟಾ ಶೇ.98 ಪ್ರದೇಶವನ್ನು ಆವರಿಸಿದೆ. ತಾಲೂಕಿನಲ್ಲಿ ಕಡಿಮೆ ಮಳೆ ಬೀಳುವ ಬೆಳಗೋಡು ಹೋಬಳಿಯಲ್ಲಿ ಅರೇಬಿಕಾ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ದುಪ್ಪಟ್ಟು ದರ ಸಿಕ್ಕಿತ್ತು: ಕಳೆದ 2 ವರ್ಷದಲ್ಲಿ ರೊಬಸ್ಟಾ ಕಾಫಿಗೆ ಹೋಲಿಕೆ ಮಾಡಿದರೆ ಅರೇಬಿಕಾ ಕಾಫಿ ಧಾರಣೆ ದುಪ್ಪಟ್ಟಿತ್ತು. ಅರೇಬಿಕಾ ಪಾರ್ಚ್​ವೆುಂಟ್ ದರ 16,500 ರೂ. ತಲುಪಿದ್ದ ವೇಳೆ ರೊಬಸ್ಟಾ ಪಾರ್ಚಮೆಂಟ್ ದರ 8ರಿಂದ 9 ಸಾವಿರ ರೂ. ಆಸುಪಾಸಿನಲ್ಲಿತ್ತು. ಇದರಿಂದಾಗಿ ಸಾಕಷ್ಟು ಬೆಳೆಗಾರರು ಅರೇಬಿಕಾ ಕಾಫಿ ಬೆಲೆಗೆ ಮಾರುಹೋಗಿ ರೊಬಸ್ಟಾ ಕಾಫಿ ತೋಟಗಳನ್ನು ನಾಶಪಡಿಸಿ ಅರೇಬಿಕಾ ತೋಟಗಳನ್ನಾಗಿ ಮಾರ್ಪಡಿಸಿದಂತಹ ನಿದರ್ಶನಗಳು ತಾಲೂಕಿನಲ್ಲಿ ಕಂಡುಬಂದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net