ಅನಿಸಿಕೆ|ಆನ್​ಲೈನ್ ಶಿಕ್ಷಣ ಯಾಕಿಷ್ಟು ತಲೆನೋವು!

online Classes 8 APR 20
Published on
ಕಾಲ ಬದಲಾದಂತೆ ನಾವೂ ಬದಲಾಗಬೇಕು. ಕಾಲಕ್ಕೆ ಸರಿಯಾಗಿ ನಾವು ಮುಂದೆ ಸಾಗುತ್ತೇವೆ. ಅದೇ ನಮಗೆ ಜೀವನಪಾಠವನ್ನೂ ಕಲಿಸುತ್ತದೆ. ಇತ್ತೀಚೆಗೆ ನಮ್ಮೆಲ್ಲರನ್ನೂ ಕಾಡುತ್ತಿರುವ ಭಯ ಕರೊನಾ ವೈರಸ್​ನದ್ದು. ಈ ಕಾಯಿಲೆಯ ಭೀತಿ ಜನಜೀವನದ ಶೈಲಿಯನ್ನೇ ಬದಲಾಯಿಸಿಬಿಟ್ಟಿತು. ಮತ್ತೆ ನಮ್ಮೆಲ್ಲರನ್ನೂ ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಿಸಿತು.

ಇವುಗಳ ನಡುವೆ ದೊಡ್ಡ ಸವಾಲು ಇದ್ದದ್ದು ಶೈಕ್ಷಣಿಕ ಕ್ಷೇತ್ರಕ್ಕೆ. ಶಾಲೆ-ಕಾಲೇಜಿನ ಪರೀಕ್ಷೆಗಳಾಗಿಲ್ಲ ಎನ್ನುವ ಚಿಂತೆ ಪಾಲಕರು, ಶಿಕ್ಷಕರು, ಸಂಬಂಧಪಟ್ಟ ಅಧಿಕಾರಿಗಳನ್ನು ಕಾಡುತ್ತಿದ್ದರೆ ಕೆಲವು ಮಕ್ಕಳು ನಿರಾಳವಾಗಿದ್ದರು. ಶಿಕ್ಷಣವನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿದ್ದ ಮಕ್ಕಳು ಆತಂಕಕ್ಕೆ ಒಳಗಾದರು. ಅದಕ್ಕೆ ಪರ್ಯಾಯ ವ್ಯವಸ್ಥೆ ಹುಡುಕುವ ಅನಿವಾರ್ಯತೆ ಸರ್ಕಾರದ ಮೇಲೆ ಬಿತ್ತು. ಶಿಕ್ಷಣ ಸಂಸ್ಥೆಗಳೂ ಆಧುನಿಕ ತಂತ್ರಜ್ಞಾನಕ್ಕೆ ತಲೆಬಾಗಬೇಕಾಯಿತು. ಪರಿಣಾಮವಾಗಿ ನಾವು ಹೆಚ್ಚಾಗಿ ಕೇಳುತ್ತಿರುವುದು ಆನ್​ಲೈನ್ ತರಗತಿಗಳ ಬಗ್ಗೆ. ಇದರ ಸಾಧಕಬಾಧಕಗಳ ಕುರಿತು ಸ್ವಲ್ಪ ರ್ಚಚಿಸೋಣ.

ಯಾವ ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡಲು ಹಿಂದೆ ಮುಂದೆ ನೋಡುತ್ತಿದ್ದರೋ ಅದೇ ಪಾಲಕರು ಮಗುವಿನ ಕೈಗೆ ಮೊಬೈಲ್ ಕೊಟ್ಟು ‘ತರಗತಿ ಆರಂಭವಾಗಿದೆ. ಕುಳಿತುಕೋ’ ಅಂತ ಒತ್ತಾಯಪೂರ್ವಕವಾಗಿ ತುರುಕಿಸೋ ಕಾಲ ಬಂದಿದೆ. ಇಲ್ಲೊಂದು ಸಮಸ್ಯೆ, ಅದು ತುಂಬ ಪಾಲಕರು ಅನುಭವಿಸುತ್ತಿರುವಂಥದ್ದು. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಹಾಗೇ ಎದ್ದು ಹೋಗುವ ಹಾಗಿಲ್ಲ. ಪಾಲಕರು ಪಕ್ಕದಲ್ಲೇ ಕುಳಿತುಕೊಳ್ಳಬೇಕು. ನಾಲ್ಕೈದು ಗಂಟೆ ಅವರ ಜೊತೆ ಕೂತಾಗ ಇಲ್ಲಿ ಮನೆಯ ಕೆಲಸವೂ ಆಗಲ್ಲ. ಸಮಯಕ್ಕೆ ಸರಿಯಾಗಿ ಊಟ, ತಿಂಡಿಯೂ ಆಗುವುದಿಲ್ಲ. ಯಾರದ್ದಾದರೂ ತುರ್ತು ಕರೆ ಬಂದರೂ ತರಗತಿ ಮುಗಿಯುವವರೆಗೆ ಸ್ವೀಕರಿಸುವ ಹಾಗಿಲ್ಲ. ಇತ್ತೀಚೆಗೆ ಸಂಬಂಧಿಕರೊಬ್ಬರು ನಿಧನರಾದ ಸುದ್ದಿ ಮಗುವಿನ ತರಗತಿಯಾದ ನಂತರ ತಿಳಿಯಿತು ಎಂದು ಒಬ್ಬರು ಪಾಲಕರು ಕಣ್ಣೀರು ಸುರಿಸಿದರು. ಇದು ಪಾಲಕರ ಸಮಸ್ಯೆಯಾದರೆ ಮಕ್ಕಳಿಗೂ ಈ ಥರದ ತರಗತಿಗಳು ಇಷ್ಟವಾಗುತ್ತಿಲ್ಲ. ಶಿಕ್ಷಕರು ಬೋರ್ಡ್ ಮೇಲೆ ಬರೆದು, ಸಣ್ಣ ಮಕ್ಕಳಾದರೆ ಕೈಹಿಡಿದು ಬರೆಸಿದಾಗ ಸಿಗುವ ಪರಿಣಾಮ ಆನ್​ಲೈನ್ ಶಿಕ್ಷಣದಿಂದ ದೊರೆಯಲು ಸಾಧ್ಯವೇ? ಪುಟ್ಟ ಮಕ್ಕಳಿಗೆ ಕಲಿಸುವ ಶಿಕ್ಷಕರು ಅವರ ಮನದಂಗಳದಲ್ಲಿ ನಲಿದು, ಅವರಿಗೆ ಒಪು್ಪವಂತೆ ಹಾವಭಾವದಿ ಕಥೆ, ಕವಿತೆಗಳನ್ನು ಹೇಳಿ ಮಗು ಬಿದ್ದಾಗ ಎಬ್ಬಿಸಿ, ಮುದ್ದಿಸುತ್ತಾರೆ. ಮಕ್ಕಳಿಗೆ ಇಂಥ ಮಾತೃಪ್ರೀತಿಯನ್ನು ನೀಡಲು ಮೊಬೈಲ್​ನಿಂದ ಸಾಧ್ಯವೇ? ಅದೇನಿದ್ದರೂ ಯಾಂತೀಕೃತವಾಗುತ್ತಿದೆಯೇ ಹೊರತು ಶಿಕ್ಷಕರು ಮತ್ತು ಮಕ್ಕಳ ನಡುವಿನ ಪ್ರೀತಿಯ ಒಸರು ಇಲ್ಲದೆ, ಬೆಸುಗೆಯಿಲ್ಲದೆ ದೊಡ್ಡ ಅಂತರ ಏರ್ಪಡುತ್ತಿದೆ ಎಂದರೆ ತಪ್ಪಾಗಲಾರದು.

ಕಾಲೇಜಿಗೆ ಹೋಗುವ ಮಕ್ಕಳದ್ದು ಇನ್ನೊಂದು ಕಥೆ. ಅಪ್ಪ-ಅಮ್ಮನ ಒತ್ತಾಯಕ್ಕೆ ಕಂಪ್ಯೂಟರ್, ಲ್ಯಾಪ್​ಟಾಪ್ ತೆರೆದು ಆನ್​ಲೈನ್ ತರಗತಿಗೆ ಲಾಗಿನ್ ಮಾಡಿ ಕೂತರೂ ಪಾಠದಲ್ಲಿ ಏಕಾಗ್ರತೆಯಿಲ್ಲ. ಅವರ ಪಾಡಿಗೆ ಅವರು ಮನಬಂದಂತೆ ಬೇರೇನಾದರೂ ಕೆಲಸ ಮಾಡುತ್ತಿರುತ್ತಾರೆ ಎನ್ನುವುದು ಪಾಲಕರ ದೂರು. ತರಗತಿಯಲ್ಲೇ ಈ ಮಕ್ಕಳ ಮೇಲೆ ನಿಗಾ ಇರಿಸುವುದು ಕಷ್ಟ. ಇನ್ನು ಆನ್​ಲೈನ್​ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಕಡೆಗೆ ಗಮನ ಹರಿಸುವುದು ಅಸಾಧ್ಯ. ಹಾಗಾಗಿ ಕಾಟಾಚಾರಕ್ಕೆ ತರಗತಿಯಲ್ಲಿ ಇರುತ್ತಾರೆಯೇ ಹೊರತು ಗಂಭೀರತೆ ಮಾತ್ರ ಮಾರು ದೂರ. ಕೆಲವು ಮಕ್ಕಳು ಈ ಎಲ್ಲ ದೂರುಗಳಿಗೆ ಅಪವಾದ ಎಂಬಂತೆ ನಿಷ್ಠೆಯಿಂದ, ಶ್ರದ್ಧೆಯಿಂದ ಅಧ್ಯಯನ ಮಾಡುವುದನ್ನೂ ನೋಡಬಹುದು. ಅಂದರೆ ಇಲ್ಲಿ ಒಳ್ಳೆಯದು-ಕೆಟ್ಟದ್ದು ಅನ್ನುವುದಕ್ಕಿಂತ ಮಕ್ಕಳ ಮನಸ್ಸಿನ ಮೇಲೆ ಅದು ಯಾವ ರೀತಿಯ ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ಮುಖ್ಯವಾಗುತ್ತದೆ.

ತರಗತಿಗಳಲ್ಲಿ ಮೌನವಿರುತ್ತದೆ. ಶಿಕ್ಷಕರು ಪಾಠ ಮಾಡುತ್ತಿದ್ದರೆ ವಿದ್ಯಾರ್ಥಿಗಳು ಮೌನವಾಗಿ ಗಮನವಿಟ್ಟು ಆಲಿಸುವುದು, ಮುಖ್ಯಾಂಶಗಳನ್ನು ಗುರುತು ಹಾಕಿಕೊಳ್ಳುವುದು... ಹೀಗೆ ಮಾಡಿದಾಗ ಅವರಿಗೆ ಅದು ಮನನವಾಗುತ್ತದೆ. ಶಿಕ್ಷಕರು ನಮ್ಮನ್ನು ಗಮನಿಸುತ್ತಿರುತ್ತಾರೆ ಎಂಬ ಭಯ, ಗೌರವವೂ ಅಲ್ಲಿರುತ್ತದೆ. ಇದು ಪರೀಕ್ಷಾ ದೃಷ್ಟಿಯಿಂದಲೂ ಒಳ್ಳೆಯದು. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ನೇರಾನೇರ ಸಂವಾದ, ಚರ್ಚೆ ಹಾಗೂ ಪ್ರಯೋಗಾಲಯಗಳ ಉಪಯೋಗ, ಗ್ರಂಥಾಲಯಗಳ ಉಪಯೋಗ ಈ ಎಲ್ಲ ಅವಕಾಶಗಳು ಇರುತ್ತವೆ. ಅದೇ ಆನ್​ಲೈನ್ ಶಿಕ್ಷಣ ಏನಿದ್ದರೂ ಓದು-ಬರಿ ಇಷ್ಟಕ್ಕೇ ಮುಗಿಯುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಈ ಆನ್​ಲೈನ್ ತರಗತಿಗಳು ಹೆಚ್ಚಿನವರಿಗೆ ತಲೆನೋವಾಗಿರುವುದಂತೂ ಸತ್ಯ.

ಹಾಗಂತ ನಾವು ಈಗಿರುವ ಪರಿಸ್ಥಿತಿಯಲ್ಲಿ ಶಾಲೆ, ಕಾಲೇಜುಗಳನ್ನು ತೆರೆಯುವುದೂ ತರವಲ್ಲ. ಮಕ್ಕಳೇ ನಮ್ಮ ಆಸ್ತಿಯಾದರೆ ಆ ಆಸ್ತಿಯನ್ನು ಮೌಲ್ಯಯುತಗೊಳಿಸುವವರು ಶಿಕ್ಷಕರು. ಎಲ್ಲರ ಹಿತದೃಷ್ಟಿಯಿಂದಲೂ ಶಾಲೆ, ಕಾಲೇಜುಗಳ ಪಾಠಗಳು ಆನ್​ಲೈನ್​ನಲ್ಲೇ ನಡೆಯುವುದು ಒಳ್ಳೆಯದು. ನಾವು ನಮ್ಮಲ್ಲಿ ಸಮಸ್ಯೆ ಹೇಳಿಕೊಳ್ಳುವ ಹೆಚ್ಚಿನ ಪಾಲಕರಿಗೆ ಇದನ್ನೇ ಅರ್ಥೈಸಿ ಹೇಳಬೇಕಾಗಿರುವುದು. ಅವರಲ್ಲೂ ಆಶಾಭಾವನೆಯನ್ನು ಮೂಡಿಸಬೇಕು.

ನಿಜ. ಹೊಸತನಕ್ಕೆ ಒಗ್ಗಿಕೊಳ್ಳಬೇಕಾದರೆ ಸ್ವಲ್ಪ ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಧದಲ್ಲಿ ಕಷ್ಟ. ಆದರೆ ಸ್ವಲ್ಪ ನಿಭಾಯಿಸಿಕೊಂಡು ಹೋಗಬೇಕಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೊಂದಾಣಿಕೆ ಅಗತ್ಯವೂ ಹೌದು. ಕಾಲ ಒಂದೇ ರೀತಿ ಇರಲಾರದು. ನಾವು ಆಶಾವಾದಿಗಳಾಗಿರಬೇಕು. ನಿರಾಸೆ ಸಲ್ಲದು. ಮಕ್ಕಳಿಗೂ ನಾವು ತಿಳಿಹೇಳಬೇಕು. ಇದ್ದ ಅವಕಾಶಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ಶಾಲೆ, ಕಾಲೇಜುಗಳು ವ್ಯಾಪಾರೀಮನೋಭಾವವನ್ನು ಬದಿಗಿರಿಸಿ ಪಾಲಕರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಬೇಕು.

ಆದಷ್ಟು ಬೇಗ ಮತ್ತೆ ಶಾಲೆ, ಕಾಲೇಜುಗಳು ತೆರೆದುಕೊಳ್ಳಲಿ. ಮಕ್ಕಳ ಕಲರವ ಕೇಳಿಬರಲಿ. ವಿದ್ಯಾರ್ಥಿಗಳಲ್ಲಿ ಭರವಸೆಯ ಹೊಸಬೆಳಕು ಮೂಡಲಿ. ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸವನ್ನು ಶಿಕ್ಷಕರೆಲ್ಲರೂ ಮೂಡಿಸಲಿ.

(ಲೇಖಕರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net