

ಅದಕ್ಕೆ ಅವರು ನೀಡಿದ ಕಾರಣಗಳು ಎರಡು. ಒಂದು- ಹೆಡಗೆವಾರ್ ಈ ದೇಶಕ್ಕಾಗಿ ಏನು ಮಾಡಿದ್ದಾರೆ? ಅನ್ನೋದು. ಇನ್ನೊಂದು- ಅವರು ದ್ವೇಷ ಹುಟ್ಟುಹಾಕುವ ಭಾಷಣಗಳನ್ನು ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ, ಅದರಿಂದ ಏನೂ ಪ್ರಯೋಜನ ಇಲ್ಲ ಎನ್ನುವುದು.
ಇಲ್ಲಿ ಒಂದು ವಿಚಾರ ಸ್ಪಷ್ಟ. ಕಾಂಗ್ರೆಸ್ಗೂ ಆರೆಸ್ಸೆಸ್ಗೂ ಯಾವ ಕಾರಣಕ್ಕೂ ಆಗಿ ಬರುವುದಿಲ್ಲ! ತನ್ನ ದ್ವೇಷಿಗಳ ಬಗ್ಗೆ ಒಂದು ಪ್ರಸ್ತಾಪವನ್ನೂ ಅದು ಸಹಿಸಲ್ಲ. ಇಷ್ಟಕ್ಕೂ, ಈ ದೇಶಕ್ಕಾಗಿ ಡಾ.ಹೆಡಗೆವಾರ್ ಅವರು ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯನವರಿಗೆ ಹೇಳಿದವರು ಯಾರು? ಈ ಮೂಲಕ ಹೆಡಗೆವಾರ್ ಕುರಿತು, ಈ ದೇಶದ ಇತಿಹಾಸದ ಕುರಿತು ತನಗೆ ವಿಪರೀತ ಅಜ್ಞಾನ ಇದೆ ಎನ್ನುವುದನ್ನು ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ಹೆಡಗೆವಾರರು ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ಆರೆಸ್ಸೆಸ್. ರಾಷ್ಟ್ರೀಯ ಸ್ವಯಂಸೇವಕ ಸಂಘ. ವಿಶ್ವದಲ್ಲೇ ಬಹುದೊಡ್ಡ ದೇಶಭಕ್ತರ ಅನನ್ಯ ಸಂಘಟನೆ. ಅಷ್ಟೊಂದು ಸಂಘಟನಾತ್ಮಕವಾಗಿ, ಶಿಸ್ತುಬದ್ಧವಾಗಿ ಕೆಲಸ ಮಾಡುವ ಬೇರಾವುದೇ ಸಂಘಟನೆ ವಿಶ್ವದಲ್ಲೇ ಇಲ್ಲ. ಈ ದೇಶ ಇಂದು ಪರಕೀಯ ದಾಳಿಗಳಿಂದ ಇಷ್ಟು ವರ್ಷ ಉಳಿದಿದೆ ಅಂದರೆ ಅದೇ ಹೆಡಗೆವಾರರ ಸಂಘಟನೆ ಕಾರಣ.
ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರಲ್ಲಿ ಹೆಡಗೆವಾರರೂ ಒಬ್ಬರು. ಅವರು 1925ರಲ್ಲಿ ಆರೆಸ್ಸೆಸ್ ಅನ್ನು ಸ್ಥಾಪಿಸಿದ್ದರೂ ಅವರ ದೇಶಸೇವೆ ಶುರುವಾಗಿದ್ದು ಅದಕ್ಕೂ 15 ವರ್ಷ ಮೊದಲೇ, ಅಂದರೆ 1910ರಲ್ಲಿ. ನಾಗ್ಪುರದಿಂದ ಕೋಲ್ಕತಾಕ್ಕೆ ಬಂದಾಗ ಅವರಿಗೆ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿಗಳ ಪರಿಚಯವಾಗಿ ಇದರಿಂದ ಅವರು ಅನುಶೀಲನ ಸಮಿತಿಯ ಸದಸ್ಯರಾಗಿದ್ದರು. ‘ಕೊಕೇನ್’ ಎಂಬ ರಹಸ್ಯ ಹೆಸರನ್ನು ಅವರು ಹೊಂದಿದ್ದರು. ಇದನ್ನು ಅಪ್ರತಿಮ ಕ್ರಾಂತಿಕಾರಿ ತ್ರೖೆಲೋಕ್ಯನಾಥ ಚಕ್ರವರ್ತಿ ಅವರ ‘ರ್ಥಟಿ ಇಯರ್ಸ್ ಇನ್ ಜೈಲ್’ ಕೃತಿ ಹೇಳುತ್ತದೆ. ಪುಲಿನ್ ಬಿಹಾರಿ ನೇತೃತ್ವದ ಅನುಶೀಲನ ಸಮಿತಿ ಬಂಗಾಳದಲ್ಲಿ ಪ್ರಮುಖ ಕ್ರಾಂತಿಕಾರಿ ಗುಂಪಾಗಿತ್ತು. ಭೂಗತ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಇದು ಮಾಡುತ್ತಿತ್ತು. ಹೆಡಗೆವಾರರು ಈ ಕ್ರಾಂತಿಕಾರಿ ಸಾಹಿತ್ಯ ನಾಗ್ಪುರ ತಲುಪುವಂತೆ ವ್ಯವಸ್ಥೆ ಮಾಡಿದ್ದರು. ಇದಕ್ಕಾಗಿ ಅವರ ಸ್ನೇಹಿತರು ರವಾನೆದಾರರಾಗಿ ಕೆಲಸ ಮಾಡುತ್ತಿದ್ದರು. ಹೆಡಗೆವಾರರು ತಾವು ನಾಗ್ಪುರಕ್ಕೆ ಹೋಗುವಾಗ, ಅಲ್ಲಿನ ಕ್ರಾಂತಿಕಾರಿಗಳಿಗೆ ರಿವಾಲ್ವರ್ಗಳನ್ನೂ ಕೊಂಡೊಯ್ದು ನೀಡುತ್ತಿದ್ದರು.
ಐದು ವರ್ಷಗಳ ವೈದ್ಯಕೀಯ ವ್ಯಾಸಂಗದ ಬಳಿಕ ಹೆಡಗೆವಾರರು 1916ಕ್ಕೂ ಮೊದಲೇ ನಾಗ್ಪುರಕ್ಕೆ ವಾಪಸ್ಸಾಗಿದ್ದರು. ಅಂತಿಮ ಪರೀಕ್ಷೆ ಬಳಿಕ ಅವರಿಗೆ ಬ್ಯಾಂಕಾಕ್ನಲ್ಲಿ ಉದ್ಯೋಗದ ಆಫರ್ ಸಿಕ್ಕಿದ್ದರೂ ನಿರಾಕರಿಸಿದ್ದರು. ಅಂದಿನ ವಿದ್ಯಾರ್ಥಿಗಳಲ್ಲಿ ಅನೇಕರು ಸರ್ಕಾರಿ ಕೆಲಸಗಳನ್ನು ಪಡೆದಿದ್ದರೂ, ಬ್ರಿಟಿಷರ ಸರ್ಕಾರಕ್ಕೆ ಸೇವೆ ಸಲ್ಲಿಸುವುದಿಲ್ಲ ಎಂಬ ಸ್ಪಷ್ಟ ನಿರ್ಧಾರ ಅವರದ್ದಾಗಿತ್ತು. ನಾಗ್ಪುರದಲ್ಲಿ ಸ್ನೇಹಿತ ಭೌಜಿ ಕರ್ವೆ ಅವರೊಂದಿಗೆ ಕ್ರಾಂತಿಕಾರಿ ಗುಂಪನ್ನು ಸ್ಥಾಪಿಸಿದ ಹೆಡಗೆವಾರರು ತಮ್ಮೂರಿನಲ್ಲೇ ಸಶಸ್ತ್ರ ಕ್ರಾಂತಿಯ ಯತ್ನಗಳನ್ನು ಮಾಡಿದರು.
1919ರ ನಂತರ ಅವರು ಕಾಂಗ್ರೆಸ್ನಲ್ಲಿ ಸಕ್ರಿಯರಾಗಿದ್ದು, ಅದೇ ವರ್ಷ ಅಮೃತಸರದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ಲೋಕಮಾನ್ಯ ತಿಲಕರ ಅನುಯಾಯಿಗಳು ಪ್ರಾರಂಭಿಸಿದ ರಾಷ್ಟ್ರೀಯ ಮಂಡಲ್ನಲ್ಲಿಯೂ ಸಕ್ರಿಯ ಸದಸ್ಯರಾಗಿದ್ದರು. ಇದರೊಂದಿಗೆ ಭಾರತದ ವೀರರ ಜೀವನಗಾಥೆಯನ್ನು ಯುವಕರಿಗೆ ತಿಳಿಸಿ, ಅವರನ್ನು ಪ್ರೇರೇಪಿಸಲು ಹೆಡಗೆವಾರರು ರಾಷ್ಟ್ರೀಯ ಉತ್ಸವ ಮಂಡಲವನ್ನೂ ಸ್ಥಾಪಿಸಿದ್ದರು.
1920 ಜನವರಿಯಲ್ಲಿ ಡಾ.ಎಲ್.ವಿ. ಪರಾಂಜಪೆಯವರು ಭಾರತ್ ಸ್ವಯಂಸೇವಕ್ ಮಂಡಲ್ ಸ್ಥಾಪಿಸಿದ್ದರು. ಹೆಡಗೆವಾರರು ಇದರ ಸಕ್ರಿಯ ಸದಸ್ಯರಾಗಿದ್ದು ಪರಾಂಜಪೆ ಜೊತೆಗೆ ನಿಕಟವಾಗಿ ಕೆಲಸ ಮಾಡಿದ್ದರು. ಅದೇ ವರ್ಷ ಜುಲೈನಲ್ಲಿ ಕಾಂಗ್ರೆಸ್ ಅಧಿವೇಶನಕ್ಕಾಗಿ 1000-1500 ಸ್ವಯಂಸೇವಕರ ದಳವನ್ನು ಸ್ಥಾಪಿಸುವ ಯತ್ನಗಳು ಆರಂಭವಾಗಿದ್ದವು. ಈ ದಳವನ್ನು ಸಂಘಟಿಸುವಲ್ಲಿ ಹೆಡಗೆವಾರ್ ಮುಂಚೂಣಿಯಲ್ಲಿದ್ದವರು. ತಿಲಕರ ಉತ್ಸಾಹಿ ಬೆಂಬಲಿಗರಿಂದ ಈ ಕೆಲಸಗಳು ನಡೆಯುತ್ತಿದ್ದವು. 1920 ಜುಲೈ 31ರ ರಾತ್ರಿ ತಿಲಕರು ಇನ್ನಿಲ್ಲವಾದರು. ಆ ನಂತರ ಕಾಂಗ್ರೆಸ್ ಸಭೆಯ ಅಧ್ಯಕ್ಷತೆ ವಹಿಸುವಂತೆ ಅರವಿಂದ ಘೊಷ್ ಅವರನ್ನು ಕೇಳಲು ಹೆಡಗೆವಾರ್ ಮತ್ತು ಡಾ.ಮೂಂಜೆ ಪುದುಚೇರಿಗೆ ಹೋಗಿದ್ದರೂ, ಘೋಷ್ ಅದನ್ನು ನಿರಾಕರಿಸಿದರು. 1920ರ ಡಿಸೆಂಬರ್ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ 15 ಸಾವಿರ ಪದಾಧಿಕಾರಿಗಳು ಭಾಗಿಯಾಗಿದ್ದರು. 3 ಸಾವಿರ ಮಂದಿ ಸ್ವಯಂಸೇವಕರು ಇದಕ್ಕೆ ದುಡಿದಿದ್ದರು. ಹೆಡಗೆವಾರ್ ಮತ್ತು ಪರಾಂಜಪೆಯವರು ವಸತಿ ಮತ್ತು ಆಹಾರ ವ್ಯವಸ್ಥೆಯ ಉಸ್ತುವಾರಿಗಳಾಗಿದ್ದರು.
ಮಹಾರಾಷ್ಟ್ರದ ಕಟೋಲ್ ಮತ್ತು ಭರತ್ವಾಡಾದಲ್ಲಿ ಆಕ್ಷೇಪಾರ್ಹ ಭಾಷಣ ಮಾಡಿದ್ದಾರೆ ಎಂದು 1921ರಲ್ಲಿ ಬ್ರಿಟಿಷರು ಹೆಡಗೆವಾರರನ್ನು ದೇಶದ್ರೋಹದ ಆಪಾದನೆ ಮೇಲೆ ಬಂಧಿಸಿದ್ದರು. ವಿಚಾರಣೆ ವೇಳೆ ಕೋರ್ಟ್ನಲ್ಲೂ ಹೆಡಗೆವಾರರು ಬ್ರಿಟಿಷ್ ಆಡಳಿತದ ನಿಲುವುಗಳನ್ನು ಖಾರವಾಗಿ ಪ್ರಶ್ನಿಸಿದ್ದರು. ‘ಒಂದು ದೇಶದ ಮೇಲೆ ಇನ್ನೊಂದು ದೇಶವು ಆಡಳಿತ ನಡೆಸುವ ಹಕ್ಕನ್ನು ನೀಡುವ ಕಾನೂನಾದರೂ ಯಾವುದು? ಹೀಗೆ ಆಳ್ವಿಕೆ ನಡೆಸಲು ಹಕ್ಕಿಲ್ಲ ಎಂದಾದರೆ, ಭಾರತದ ಜನರನ್ನು ಕಾಲಿನಡಿಯಲ್ಲಿ ತುಳಿಯುವ ಬ್ರಿಟಿಷರಿಗೆ ಆ ಅಧಿಕಾರ ಕೊಟ್ಟಿದ್ದು ಯಾರು..?’ ಎಂದು ಪ್ರಶ್ನಿಸಿದ್ದರು.
ಸಿದ್ದರಾಮಯ್ಯನವರು ಇನ್ನೂ ಒಂದು ವಿಷಯ ತಿಳಿದುಕೊಳ್ಳಬೇಕು. 1921 ಆಗಸ್ಟ್ 19ರಂದು ಜೈಲು ಸೇರಿ, 1922 ಜುಲೈ ವೇಳೆಗೆ ಹೆಡಗೆವಾರರು ಅಜಾನಿ ಜೈಲಿನಿಂದ ಬಿಡುಗಡೆಯಾದಾಗ ಅದೇ ದಿನ ಸಂಜೆ ಅವರಿಗಾಗಿ ಸ್ವಾಗತ ಕಾರ್ಯಕ್ರಮ ಆಯೋಜನೆಯಾಗಿತ್ತು. ಅದರಲ್ಲಿ ಆಗಿನ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಂದೆ ಮೋತಿಲಾಲ್ ನೆಹರೂ ಮತ್ತು ಹಕೀಮ್ ಅಜ್ಮಲ್ ಖಾನ್ ಮಾತನಾಡಿದ್ದರು. 1922ರಲ್ಲಿ ಹೆಡಗೆವಾರರನ್ನು ಕಾಂಗ್ರೆಸ್ನ ಪ್ರಾಂತೀಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಅವರು ಕಾಂಗ್ರೆಸ್ನ ಸ್ವಯಂಸೇವಾ ಸಂಘಟನೆಯಾದ ಹಿಂದೂಸ್ಥಾನಿ ಸೇವಾದಳದ ಭಾಗವಾಗಿಯೂ ಕೆಲಸ ಮಾಡುತ್ತಿದ್ದರು.
1923ರಲ್ಲಿ ಖಿಲಾಫತ್ ಆಂದೋಲನ ಶುರುವಾಗಿ ದೇಶದಲ್ಲಿ ಕೋಮುಗಲಭೆಗಳು ನಡೆದು ಅನ್ಯಾಯವಾಗಿ ಹಿಂದೂಗಳು ಸತ್ತಾಗ ಕಾಂಗ್ರೆಸ್ ಇದನ್ನು ತಡೆಯುವುದರಲ್ಲಿ ವಿಫಲವಾಯಿತು; ದೇಶಕ್ಕಾಗಿ ಹಿಂದೂಗಳನ್ನು ಸಂಘಟಿಸುವ ಸಮಯ ಬಂದಿದೆ ಎಂದು ಹೆಡಗೆವಾರ್ ಭಾವಿಸಿದರು.
ಇದರ ಪರಿಣಾಮ ಸಂಘ ಜನಿಸಿತು. 1925ರ ವಿಜಯದಶಮಿಯಂದು ಸಂಘಟನೆ ಹುಟ್ಟಿದ್ದರೂ, 1926 ಏಪ್ರಿಲ್ 17ರಂದು ನಡೆದ ಪುಟ್ಟ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರನ್ನು ಆಯ್ಕೆ ಮಾಡಲಾಯಿತು.
1930ರಲ್ಲಿ ಹೆಡಗೆವಾರ್ ಅವರು ಎಲ್ಲ ಆರೆಸ್ಸೆಸ್ ಶಾಖೆಗಳಿಗೆ ಒಂದು ಸುತ್ತೋಲೆ ಕಳಿಸಿದ್ದರು. ‘1930 ಜನವರಿ 26ನೇ ದಿನಾಂಕವನ್ನು ದೇಶದ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಇದಕ್ಕೆ ನಾವು ಅತೀವ ಸಂತೋಷ ವ್ಯಕ್ತಪಡಿಸುತ್ತೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುವ ಯಾವುದೇ ಸಂಘಟನೆಗೆ ಬೆಂಬಲ ನೀಡಬೇಕಾದ್ದು ನಮ್ಮ ಕರ್ತವ್ಯ. ಆದ್ದರಿಂದ ಅಂದು ಎಲ್ಲ ಶಾಖೆಗಳಲ್ಲಿ ಸಂಜೆ 6 ಗಂಟೆಗೆ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕು’ಎಂದು ತಿಳಿಸಿದ್ದರು. ಅಲ್ಲದೇ ಸಂಪೂರ್ಣ ಸ್ವಾತಂತ್ರ್ಯದ ಆದರ್ಶವನ್ನು ಎಲ್ಲರಲ್ಲೂ ತುಂಬುವ ಕೆಲಸಕ್ಕೆ ಕಾಂಗ್ರೆಸ್ಸನ್ನು ಅಭಿನಂದಿಸುವಂತೆ ಅವರು ಹೇಳಿದ್ದರು.
1930ರ ಏಪ್ರಿಲ್ನಲ್ಲಿ ಮಹಾತ್ಮ ಗಾಂಧಿಯವರು ಉಪ್ಪಿನ ಸತ್ಯಾಗ್ರಹ ಶುರು ಮಾಡಿದಾಗಲೂ ಹೆಡಗೆವಾರರು ಸಂಪೂರ್ಣ ಬೆಂಬಲ ನೀಡಿದ್ದರು. ಈ ಸತ್ಯಾಗ್ರಹಕ್ಕಾಗಿ 100 ಮಂದಿ ವೈದ್ಯಕೀಯ ಸ್ವಯಂಸೇವಕರ ಗುಂಪನ್ನು ತಯಾರು ಮಾಡಲಾಗಿತ್ತು. ಕೊನೆಗೆ ಹೆಡಗೆವಾರ್ ಅವರೇ ಈ ಸತ್ಯಾಗ್ರಹದಲ್ಲಿ ಭಾಗಿಯಾಗಲು ಉದ್ದೇಶಿಸಿದ್ದು, ಆದರೆ ಬ್ರಿಟಿಷರಿಂದ ಬಂಧನಕ್ಕೊಳಗಾಗುವ ಸಾಧ್ಯತೆ ಇದ್ದ ಕಾರಣ ಪರಾಂಜಪೆಯವರಿಗೆ ಆರೆಸ್ಸೆಸ್ ಚುಕ್ಕಾಣಿಯನ್ನು ಕೊಡಲಾಗಿತ್ತು.
1930 ಜುಲೈ 14ರಂದು ಹೆಡಗೆವಾರ್ ಮತ್ತು 100 ಮಂದಿ ಸತ್ಯಾಗ್ರಹಕ್ಕಾಗಿ ಹೊರಟು ನಿಂತಾಗ ನಾಗ್ಪುರ ರೈಲ್ವೇ ಸ್ಟೇಷನ್ನಲ್ಲಿ ಭವ್ಯ ಬೀಳ್ಕೊಡುಗೆ ನಡೆದಿತ್ತು. ಆ ಸತ್ಯಾಗ್ರಹದ ಹೋರಾಟದ ಪರಿಣಾಮ ಹೆಡಗೆವಾರರಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲೂ ಅವರು ಆರೆಸ್ಸೆಸ್ ಶಾಖೆಯನ್ನು ಆರಂಭಿಸಿದ್ದರು.
ಹೆಡಗೆವಾರರು 1940ರಲ್ಲಿ ನಿಧನರಾಗುವ ಮೊದಲು ಈ ದೇಶಕ್ಕಾಗಿ ನಡೆಸಿದ ಹೋರಾಟಗಳಲ್ಲಿ ಭಾಗಿಯಾದ ಉದಾಹರಣೆಗಳು ಬೇಕಾದಷ್ಟು ಇವೆ. ಆದರೆ ಕಾಂಗ್ರೆಸ್ಸಿಗರಿಗೆ ಇದನ್ನೆಲ್ಲ ಹೇಳಲು, ಕೇಳಲು ಸಾಧ್ಯವೇ..? ಬಹುಶಃ ಇದಕ್ಕೂ ಒಂದು ಕಾರಣವಿದೆ. ಈಗಿನ ಕಾಂಗ್ರೆಸ್ ದೇಶಪ್ರೇಮಿಗಳ, ದೇಶಭಕ್ತರ ಸಂಘಟನೆಯಾಗಿ ಉಳಿದಿಲ್ಲ. ಅದು ಕೇವಲ ರಾಜಕೀಯ ಸಂಘಟನೆಯಾಗಿದೆ.
ಇಷ್ಟಕ್ಕೂ ಹೆಡಗೆವಾರರನ್ನು ಪ್ರಶ್ನೆ ಮಾಡುವ ಸಿದ್ದರಾಮಯ್ಯನವರು ಈ ದೇಶಕ್ಕಾಗಿ ಏನು ಮಾಡಿದ್ದಾರೆ ಅನ್ನೋದನ್ನೂ ಕೇಳಬೇಕಾಗುತ್ತದೆ. ಅವರು ಅಧಿಕಾರದಲ್ಲಿದ್ದಾಗ ಮಾಡಿದ್ದು ಸ್ವಜನ ಪಕ್ಷಪಾತ, ಅಲ್ಪಸಂಖ್ಯಾತರ ತುಷ್ಟೀಕರಣ, ಹಿಂದೂವಿರೋಧಿ ನೀತಿಯನ್ನೇ ಉಸಿರಾಡಿದ್ದು ಮಾತ್ರ.
ಸಿದ್ದರಾಮಯ್ಯನವರೂ ಸೇರಿದಂತೆ, ಅವರ ಓರಗೆಯವರಾಗಲಿ, ರಾಜಕಾರಣಿ ಬಂಧುಗಳಾಗಲಿ ಯಾರಾದರೂ ಸ್ವಾತಂತ್ರ್ಯಕ್ಕಾಗಲಿ, ದೇಶದ ಅಸ್ಮಿತೆಯನ್ನ ಉಳಿಸಿಕೊಳ್ಳೋದಕ್ಕಾಗಲಿ ಹೋರಾಡಿದ್ದಾರೆಯೇ? ಅಥವಾ ಎಲ್ಲಾದರೂ ಜೈಲು ಸೇರಿದ್ದಾರೆಯೇ? ಈಗಿನ ಕಾಂಗ್ರೆಸ್ಸಿಗರು ಜೈಲು ಸೇರಿದ್ದಾರೆ, ಕೇಸುಗಳನ್ನು ಹಾಕಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರೂ ಅದು ಭ್ರಷ್ಟಾಚಾರದಿಂದ ಮಾತ್ರ ಅನ್ನೋದು ಜಗತ್ತಿಗೇ ಗೊತ್ತಿರೋ ವಿಷಯ.
ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿದ ಸಿದ್ದರಾಮಯ್ಯನವರು, ಈಗ ಮತ್ತೆ ಅಧಿಕಾರ ಹಿಡಿಯುವ ಕನಸನ್ನು ಕಾಣುತ್ತಿದ್ದಾರೆ. ಇದಕ್ಕಾಗಿ ಹಿಂದೂವಿರೋಧಿ ನೀತಿಗಳು, ತುಷ್ಟೀಕರಣದ ಅಜೆಂಡಾಗಳನ್ನು ಮತ್ತೆ ಚಾಲೂ ಮಾಡಿದ್ದಾರೆ.
ಇದೇ ಸಿದ್ದರಾಮಯ್ಯ ಸರ್ಕಾರ ಹಿಂದೂವಿರೋಧಿ ನೀತಿಗಳನ್ನು, ಸುಳ್ಳುಗಳನ್ನು ಪಠ್ಯಪುಸ್ತಕದಲ್ಲಿ ತುಂಬಿದಾಗ ಅದರ ಬಗ್ಗೆ ಬಿಜೆಪಿಯಾಗಲಿ, ಇತರ ಯಾವ ಸಂಘಟನೆಗಳಾಗಲಿ ಅದನ್ನು ಹಾದಿರಂಪ ಬೀದಿರಂಪ ಮಾಡಿಲ್ಲ. ಸಮಿತಿಯ ಪರಿಷ್ಕರಣೆಗಳ ವಿರುದ್ಧ ಗೌರವಯುತವಾಗಿಯೇ ಪ್ರತಿಭಟಿಸಲಾಗಿದೆ ಮತ್ತು ಮಕ್ಕಳ ಮನಸ್ಸಿಗೆ ಅಜೆಂಡಾಗಳನ್ನು ತುರುಕುವುದು ಬೇಡ ಎಂದು ಹಿಂದಿನ ಸಮಿತಿ ಮಾಡಿದ ತಪ್ಪುಗಳನ್ನು ತಿದ್ದಲು ಅದರ ಪರಿಷ್ಕರಣೆಗೆ ಈಗಿನ ಬೊಮ್ಮಾಯಿ ಸರ್ಕಾರ ನಿರ್ಧರಿಸಿದ್ದು ಎಲ್ಲರಿಗೂ ಗೊತ್ತಿದೆ.
ಸಂಸ್ಕಾರ, ನೀತಿಗಳ ಬಗ್ಗೆ ಮಾತನಾಡೋ ಇದೇ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏಕವಚನ ಬಳಸುತ್ತಾರೆ. ಅದೇ, ಕಾಂಗ್ರೆಸ್ನ ಅಧಿನಾಯಕಿ ಮತ್ತು ಯುವರಾಜರ ಬಗ್ಗೆ ಜೀ.. ಎಂದು ಬಳಸುತ್ತಾರೆ. ‘ನನ್ನದು ಗ್ರಾಮ್ಯಭಾಷೆ’ ಎಂದು ಏಕವಚನಕ್ಕೆ ಸ್ಪಷ್ಟೀಕರಣ ಕೊಡುವ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರ ವಿಷಯದಲ್ಲಿ ಮಾತ್ರ ಆ ಗ್ರಾಮ್ಯಭಾಷೆ ಮರೆಯುವುದು ಆಶ್ಚರ್ಯ.
ಡಾ.ಹೆಡಗೆವಾರ್ ಅಂಥವರನ್ನೂ ಟೀಕಿಸುವ ಮೊದಲು ಸಿದ್ದರಾಮಯ್ಯ ಆರೆಸ್ಸೆಸ್ ಬಗ್ಗೆ, ಅದರ ಕೆಲಸಗಳು, ಆದರ್ಶಗಳ ಬಗ್ಗೆ ಮುಕ್ತ ಮನಸ್ಸಿನಿಂದ ಓದುವುದು ಒಳ್ಳೆಯದು!
(ಲೇಖಕರು ಧಾರವಾಡ ಲೋಕಸಭಾ ಕ್ಷೇತ್ರ ಸಂಸದರು, ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವರು)