ಪ್ರಗತಿಗೆ ಉದ್ಯಮಗಳು ಜೀವಾಳ

sadguru pho
Published on
ಕರೊನಾ ಸಾಂಕ್ರಾಮಿಕ ರೋಗ ಹೀಗೆ ಹಬ್ಬುತ್ತಿರುವುದರಿಂದ, ಭಾರತಕ್ಕೆ ಬಹಳ ದೊಡ್ಡ ಪೆಟ್ಟು ಬೀಳಬಹುದು. ಯಾಕೆಂದರೆ 1.4 ಶತಕೋಟಿಯಷ್ಟು ಜನರಿಗೆ ಆರ್ಥಿಕ ಭದ್ರತೆ ಕೊಡುವಂಥ ಸ್ಥಿತಿಯಲ್ಲಿ ಭಾರತ ಇಲ್ಲ. ಸ್ಥಿತಿವಂತರಿಗೆ ಅಂತಹ ತೊಂದರೆ ಆಗದಿರಬಹುದು. ಆದರೆ ದಿನಗೂಲಿ ಕೆಲಸದವರಿಗೆ ಇದು ಬಹಳ ಸಂಕಟದ ಪರಿಸ್ಥಿತಿ. ಕಳೆದ 20 ವರ್ಷಗಳಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಗಣನೀಯವಾಗಿ ಏಳಿಗೆಯನ್ನು ಕಂಡಿದೆ. 240 ದಶಲಕ್ಷ ಜನರು ಕಡು ಬಡತನದಿಂದ ಹೊರಬಂದಿದ್ದಾರೆ. ಆದರೆ ದುರದೃಷ್ಟವಶಾತ್, ಇನ್ನೆರಡು ವರ್ಷಗಳಲ್ಲಿ, ಬೃಹತ್ ಬಂಡವಾಳ ಬರದಿದ್ದರೆ, ಮತ್ತೆ ಜನರನ್ನು ಬಡತನಕ್ಕೆ ದೂಡುವ ಸಂಭವ ಇದೆ.

ವಿದೇಶಗಳ ಹೂಡಿಕೆಗಳಿಲ್ಲದೆ, ಮಾರುಕಟ್ಟೆ ಮತ್ತು ಕೈಗಾರಿಕೆಗಳು ಉತ್ತಮ ಸ್ಥಿತಿಯನ್ನು ತಲುಪುವುದಿಲ್ಲ. ಇದು ಒಂದು ಲೆಕ್ಕದಲ್ಲಿ ಭಾರತಕ್ಕೆ ಆಶಾಕಿರಣ ಎಂದು ಹೇಳಬಹುದು. ಏಕೆಂದರೆ ಜನರಿಗೆ ಈಗ ಚೀನಾದ ಆರ್ಥಿಕ ವ್ಯವಸ್ಥೆಯಲ್ಲಿದ್ದ ವಿಶ್ವಾಸ ಕಡಿಮೆಯಾಗಿದೆ. ಚೀನಾದಲ್ಲಿ ಅಮೆರಿಕ ಮತ್ತು ಜಪಾನ್ ದೇಶಗಳು ಪ್ರಮುಖ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿವೆ. ಈಗಾಗಲೇ ಜಪಾನ್ ತನ್ನ ಕೇಂದ್ರಗಳನ್ನು ಚೀನಾದಿಂದ ಹೊರಗೆ ವರ್ಗಾಯಿಸಲು ಯೋಚಿಸುತ್ತಿದೆ. ಅಮೆರಿಕ ಅದಕ್ಕಿಂತ ಇನ್ನೂ ದೊಡ್ಡ ಹೆಜ್ಜೆ ಇಡಬಹುದು. ಈ ದೇಶಗಳ ಪಾಲಿಗೆ ಭಾಗಶಃ ಉತ್ಪಾದನೆಗೆ ಭಾರತ ಈಗ ಒಳ್ಳೆಯ ಸ್ಥಾನದಲ್ಲಿದೆ. ನಮ್ಮ ದೇಶಕ್ಕೆ ಅದರದ್ದೇ ಆದ ಭೌಗೋಳಿಕ ಮತ್ತು ರಾಜಕೀಯ ಅನುಕೂಲತೆಗಳಿವೆ. ರಾಷ್ಟ್ರೀಯ ಮುಖಂಡತ್ವ ಮಟ್ಟದಲ್ಲಿ ಈ ಮೂರು ದೇಶಗಳಲ್ಲಿ ಸೌಹಾರ್ದಯುತ ಸಂಬಂಧವಿದೆ. ದೇಶಗಳ ನಡುವಿನ ಬಾಂಧವ್ಯವನ್ನು ಬಳಸಿಕೊಂಡು ಆ ದೇಶಗಳಿಗೆ ಒಳ್ಳೆಯ ಸುಭದ್ರತೆಯನ್ನು ಒದಗಿಸಿಕೊಟ್ಟರೆ, ಭಾರತದ ಯೋಗಕ್ಷೇಮ ವೃದ್ಧಿಸುವುದು. ಈ ಅವಕಾಶವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದುದರ ಮೇಲೆ ಎಲ್ಲವೂ ಅವಲಂಬಿಸಿದೆ.

ಬಂಡವಾಳ ಹೂಡಿಕೆಯನ್ನು ಸ್ವಾಗತಿಸುವುದು: 300 ಉತ್ಕೃ್ಟ ಕಂಪನಿಗಳು ಚೀನಾದಿಂದ ತಮ್ಮ ಉತ್ಪಾದನೆಯ ಕೇಂದ್ರಗಳನ್ನು ಭಾಗಶಃ ವರ್ಗಾಯಿಸಿದರೂ, ಸುಮಾರು 1.5 ಟ್ರಿಲಿಯನ್ ಡಾಲರ್​ಗಳಷ್ಟು ಬಂಡವಾಳದ ಮೇಲೆ ಪರಿಣಾಮ ಆಗಬಹುದು. ಅಂತಹ ಮೊತ್ತದ ಬಂಡವಾಳವನ್ನು ಮುಂದಿನ ಎರಡು ವರ್ಷಗಳಲ್ಲಿ ನಮ್ಮ ದೇಶಕ್ಕೆ ತಂದರೆ, ನಿರುದ್ಯೋಗದ ಸಮಸ್ಯೆ ಇರುವುದಿಲ್ಲ. ಇದನ್ನು ಮಾಡಲು ಸರ್ಕಾರ ಮತ್ತು ಉದ್ಯಮಿಗಳಿಂದ ನಿಶ್ಚಿತ ಪ್ರಯತ್ನ ಬೇಕು. ಭೂಮಿ, ವಿದ್ಯುತ್ ಮತ್ತು ಉಳಿದ ಸೌಲಭ್ಯಗಳನ್ನು ಒದಗಿಸಲು ಯಾವುದೇ ಅಧಿಕಾರಶಾಹಿಯಿಲ್ಲದ ಏಕಮುಖಿ ನಿಯಂತ್ರಣ ಕೇಂದ್ರ ಇರಬೇಕು. ಅವಶ್ಯವಿದ್ದಲ್ಲಿ, ರಾಜ್ಯಗಳಿಗೆ ದೊಡ್ಡ ಹೂಡಿಕೆಗಳಿಗೆ ಸೌಲಭ್ಯಗಳನ್ನು ಒದಗಿಸಲು ಅಧಿಕಾರ ಇರುವಂತೆ ತುರ್ತು ಆರ್ಥಿಕ ಬಿಲ್ ಪಾಸಾಗಬೇಕು.

ಪ್ರತಿಯೊಂದು ರಾಜ್ಯದಲ್ಲೂ ಕನಿಷ್ಠ 10 ಬೃಹತ್ ಉದ್ಯಮಗಳು ಬಂಡವಾಳ ಹೂಡಿದರೆ, ನಮ್ಮ ಆರ್ಥಿಕ ವ್ಯವಸ್ಥೆ ಸುಭದ್ರಗೊಳ್ಳುತ್ತದೆ. ದೇಶದ 700 ಜಿಲ್ಲೆಗಳಲ್ಲಿ ಈ ಉದ್ಯಮಗಳು ಹರಡಬೇಕು. ಎಲ್ಲರೂ ಒಂದೇ ಸ್ಥಳಕ್ಕೆ ಬಂದು ಕೆಲಸ ಮಾಡುವ ರಾಶಿ ಉತ್ಪಾದನೆಯ(ಮಾಸ್ ಪ್ರೊಡಕ್ಷನ್) ಮ್ಯಾಂಚೆಸ್ಟರ್ ಮಾದರಿಯ ಕೈಗಾರಿಕೆಯನ್ನು ನಿಲ್ಲಿಸಬೇಕು. ಭಾರತದಲ್ಲಿ 200 ದಶಲಕ್ಷದಷ್ಟು ಜನ ಹಳ್ಳಿಗಳಿಂದ ಪಟ್ಟಣಗಳಿಗೆ ವಲಸೆ ಹೋಗಬಹುದು ಎಂದು ಅಂದಾಜು ಮಾಡಲಾಗಿದೆ. ಹಾಗಾದರೆ, ಅಷ್ಟು ಜನರಿಗೆ ಪಟ್ಟಣಗಳಲ್ಲಿ ವ್ಯವಸ್ಥೆಯನ್ನು ಮಾಡಿಕೊಡಲು ಸಾಧ್ಯವೇ? ಹಾಗಾಗಿ ಉದ್ಯಮಗಳು ಯಾವಾಗಲೂ ಒಂದೇ ಸ್ಥಳಕ್ಕೆ ಸೀಮಿತವಾಗಿ ಇರಬಾರದು. ಒಂದು ವೇಳೆ ಹಾಗಾದರೆ, ವಲಸೆಯ ಪ್ರಯುಕ್ತ ಜೀವನದ ಮಟ್ಟ ಕುಸಿಯಬಹುದು.

ಇನ್ನೊಂದು ಅಂಶವೇನೆಂದರೆ, ಬಂಡವಾಳ ಹೂಡುವವರಿಗೆ ನಮ್ಮ ದೇಶದ ವಿವಿಧ ರಾಜ್ಯಗಳ ಕಾನೂನುಗಳ ಅಸ್ಪಷ್ಟತೆ ಕಾಡುತ್ತವೆ. ಸಿವಿಲ್ ಪ್ರಕರಣಗಳಲ್ಲಿ, ಕಾನೂನಿನ ಪ್ರಕ್ರಿಯೆ ಎಷ್ಟು ಮಂದಗತಿಯಲ್ಲಿ ಸಾಗುತ್ತದೆ ಎಂದರೆ ಒಂದು ಪ್ರಕರಣದ ತೀರ್ಪಿಗೆ ಸುಮಾರು 20 ವರ್ಷಗಳು ಕಾಯಬೇಕಾಗಬಹುದು. ದೊಡ್ಡ ವಹಿವಾಟುಗಳನ್ನು ನಡೆಸುವಾಗ, ಸಣ್ಣಪುಟ್ಟ ಸಮಸ್ಯೆಗಳಿಂದ ದಾವೆಗಳು ಎದುರಾಗಬಹುದು. ಆದರೆ ಅವುಗಳಿಂದ ಉದ್ಯಮಗಳಿಗೆ ತೊಂದರೆ ಆಗಬಾರದು. ಅಂತಹ ಸಮಸ್ಯೆಗಳು ಬೇಗ ಪರಿಹಾರವಾಗುವುದು ಬಹಳ ಮುಖ್ಯ. ಹಾಗಾದರೆ ಮಾತ್ರ ಉದ್ಯಮಗಳ ಏಳಿಗೆ ಆಗುತ್ತದೆ, ಹಾಗೆಯೇ ದೇಶದ ಏಳಿಗೆ ಕೂಡ. ಆದ್ದರಿಂದ ಕೋಟ್ಯಂತರ ಹೂಡಿಕೆಯುಳ್ಳ ಉದ್ಯಮಕ್ಕೆ ಪಿಐಎಲ್ ಮತ್ತು ದಾವೆಗಳಿಂದ 5 ವರ್ಷಗಳ ಕಾಲ ವಿನಾಯಿತಿ ಕೊಡಬೇಕು. ಇಂತಹ ಕಾರ್ಯನೀತಿಗಳ ಬದಲಾವಣೆ ಮಾಡಿದರೆ, ಆರ್ಥಿಕ ವ್ಯವಸ್ಥೆಯನ್ನು ಸುಭದ್ರಗೊಳಿಸಬಹುದು.

ವ್ಯಾಪಾರ ವಿರೋಧಿ ಚಳವಳಿಗಳನ್ನು ನಿಲ್ಲಿಸಬೇಕು: ಯಾವುದೇ ದೇಶ ರಾಜಕೀಯ ಶಕ್ತಿಯಿಂದ ಅಥವಾ ಸೈನ್ಯದ ಭುಜಬಲದಿಂದ ಪ್ರಗತಿಯನ್ನು ಸಾಧಿಸುವುದಿಲ್ಲ. ಉದ್ಯಮಗಳ ಯಶಸ್ಸು ದೇಶದ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ವ್ಯಾಪಾರ ಪರ ನಿಲುವನ್ನು ತೆಗೆದುಕೊಂಡಾಗ, ಅದರ ವಿರುದ್ಧ ಚಳವಳಿ ಶುರುವಾಗುತ್ತದೆ. ಆರ್ಥಿಕ ಮಾರುಕಟ್ಟೆಯ ಪಾಠವನ್ನು ನಾವು ಆರಿಸಿಕೊಂಡಿದ್ದೇವೆ. ಆದರೆ ಪ್ರತಿ ಸಲ ನಾವು ಒಂದು ಹೆಜ್ಜೆ ಮುಂದಿಟ್ಟರೆ, ಹಲವರು ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಯಾವುದಾದರೂ ಉದ್ಯಮದಲ್ಲಿ ಸರ್ಕಾರ ಬಂಡವಾಳ ಹಾಕಿದರೆ, ‘ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಾರೆ’ ಎಂದು ಜನ ಹೇಳುತ್ತಾರೆ ಮತ್ತು ಸರ್ಕಾರವನ್ನು ವಿರೋಧಿಸುತ್ತಾರೆ. ಇಂತಹ ಆರ್ಥಿಕ ವ್ಯವಸ್ಥೆಗೆ ತೊಡಕು ಮಾಡುವವರ ವಿರುದ್ಧ ಉದ್ಯಮಗಳ ಮುಖಂಡರು ಎದ್ದು ನಿಲ್ಲಬೇಕು ಮತ್ತು ಖಂಡಿಸಬೇಕು. ಬಡವರಿಗೆ ದುಡ್ಡು ವಿತರಣೆ ಮಾಡುವುದರಿಂದ ಬಡತನ ನಿವಾರಣೆ ಆಗುವುದಿಲ್ಲ. ವ್ಯಾಪಾರ ಮತ್ತು ಉದ್ಯಮಗಳ ಸಮೃದ್ಧಿಯಿಂದ ಬಡತನವನ್ನು ನಿವಾರಿಸಬಹುದು. ನಾವು ವ್ಯಾಪಾರ ಪರ ನಿಲ್ಲಬೇಕು. ಎಲ್ಲರೂ ಘನತೆಯುಳ್ಳ ಜೀವನವನ್ನು ನಡೆಸಲು ವ್ಯಾಪಾರ ಮತ್ತು ಉದ್ಯಮ ಗೆಲ್ಲಬೇಕು.

ಜಗತ್ತಿನಲ್ಲಿ ಬದಲಾಗದಂತಹ ಯಥಾಸ್ಥಿತಿಯುಳ್ಳ ಆರ್ಥಿಕ ವೇದಿಕೆಗಳು ನಿರ್ವಣವಾಗಿವೆ. ಆದರೆ ಇಂದು ಅವುಗಳಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ, ಇದು ಭಾರತಕ್ಕೆ ಉದ್ಯಮಶೀಲ ದೇಶವಾಗಲು ಒಳ್ಳೆಯ ಅವಕಾಶ. ಮುಂದಿನ 5 ವರ್ಷಗಳಲ್ಲಿ ಏನು ಮಾಡಬೇಕು ಎಂಬ ಸ್ಪಷ್ಟ ಚಿತ್ರಣವಿರಬೇಕು. ಜಗತ್ತಿನ ಆರ್ಥಿಕ ಬೆಳವಣಿಗೆಯಿಂದ ನಮ್ಮನ್ನು ಬಿಡಲಾಗಿದೆ. ಎಷ್ಟೋ ಏಷ್ಯನ್ ದೇಶಗಳು ನಮಗಿಂತ 30 ವರ್ಷಗಳಷ್ಟು ಮುಂದಿವೆ. ಮುಂದಿನ 3ರಿಂದ 5 ವರ್ಷಗಳಲ್ಲಿ, ಆ ದೇಶಗಳಷ್ಟೇ ಮುಂದುವರಿಯಲು ಮತ್ತು ಸುಭದ್ರಗೊಳ್ಳಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net