

ಮೃಗತ್ವ: ನಾವೆಲ್ಲರೂ ಪ್ರಾಣಿ ಜಗತ್ತಿಗೆ ಸೇರಿದವರು. ಅಂದಮೇಲೆ, ಪ್ರಾಣಿ ಸಹಜ ಹಸಿವೆ, ನಿದ್ದೆ, ಭಯ, ಕಾಮತೃಷೆ ನಮ್ಮಲ್ಲೂ ಇದೆ. ಇವನ್ನು ಬಿಟ್ಟಿರಲು ಸಾಮಾನ್ಯರಿಂದ ಸಾಧ್ಯವೂ ಇಲ್ಲ. ಕಾರಣ ಇವುಗಳೆಲ್ಲವೂ ಜೈವಿಕ ಅವಶ್ಯಕತೆಗಳು. ಭಗವಂತ ನಮಗೆಲ್ಲರಿಗೂ ಹೊಟ್ಟೆ ಕೊಟ್ಟ; ಅದರೊಳಗೆ ಹಸಿವೆಯನ್ನು ಇಟ್ಟ. ಹಸಿವೆಯೇ ಇಲ್ಲವಾದರೆ, ಮನುಷ್ಯ ಏನನ್ನೂ ತಿನ್ನಲಾರ. ತಿನ್ನದೇ ಹೋದರೆ ಬದುಕಿ ಉಳಿಯಲಾರ. ಬದುಕಿ ಉಳಿಯಬೇಕಾದ ಈ ಮೂಲಭೂತ ಅವಶ್ಯಕತೆಗೆ ಕುತ್ತು ಬಂದಾಗ ಮನುಷ್ಯತ್ವ ಮರೆತು, ಪ್ರಾಣಿಗಳಂತೆ ವರ್ತಿಸಬಲ್ಲ; ಏನನ್ನೂ ಮಾಡಬಲ್ಲ. ಅಂದರೆ ಇನ್ನೊಬ್ಬರದನ್ನು ಕಿತ್ತು ತಿನ್ನಬಲ್ಲ, ಕದಿಯಬಲ್ಲ, ಕೊಲೆ ಮಾಡಬಲ್ಲ. ಒಂದು ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಆಹಾರದ ತೀವ್ರ ಕೊರತೆ ಉಂಟಾಗಿ, ಹಸಿವೆಯಿಂದ ಸಾಯುವ ಪರಿಸ್ಥಿತಿ ಬಂದಾಗ, ಒಬ್ಬರನ್ನೊಬ್ಬರನ್ನು ಕೊಂದು ತಿನ್ನಲಿಲ್ಲವೇ? ಪರಪುರುಷರು ಪರಸ್ತ್ರೀಯರನ್ನು ಬಯಸಲಿಲ್ಲವೇ! ಅಂತೆಯೇ ಜೀವ ಭಯ ಬಂದಾಗಲೂ ತಮ್ಮ ರಕ್ಷಣೆಗಾಗಿ, ಪ್ರಾಣಿಗಳಂತೆ ಮನುಷ್ಯರೂ ಏನನ್ನೂ ಮಾಡಲು ಸಿದ್ದರಾಗುತ್ತರಲ್ಲವೇ! ಇವೆಲ್ಲಾ ಮೃಗೀ ಸ್ವಭಾವಗಳು. ಒಂದೇ ಮಾತಿನಲ್ಲಿ ಹೇಳೋದಾದರೆ ನನ್ನದು ನನ್ನದೇ. ನಿನ್ನದೂ ನನ್ನದೇ ಇದು ಮೃಗತ್ವ.
ಮನುಷ್ಯತ್ವ: ಶಿಕ್ಷಣ, ಜ್ಞಾನ, ಸಂಸ್ಕಾರ ಹಾಗೂ ಬುದ್ದಿಮತ್ತೆಯಿಂದ, ಮನುಷ್ಯ, ಮೃಗತ್ವದಿಂದ ಮನುಷ್ಯತ್ವವನ್ನು ಏರಿ ಮಾನವನಾಗಿ ಬಾಳಬಲ್ಲ. ಆದುದರಿಂದಲೇ ಹಸಿವೆಯಾಗಿದೆ ಎಂದ ಮಾತ್ರಕ್ಕೆ ಉಪವಾಸವಿದ್ದರೂ ಸರಿ, ಇನ್ನೊಬ್ಬರ ತಟ್ಟೆಗೆ ಕೈ ಹಾಕಲಾರ, ಬಾಯಾರಿಕೆಯಾದರೂ ಚರಂಡಿ ನೀರನ್ನು ಕುಡಿಯಲಾರ, ಪರಸ್ತ್ರೀ ಬಯಸಲಾರ. ದುಡಿದು ತಿನ್ನೋದು, ಹಂಚಿ ತಿನ್ನೋದು, ಜಾತಿ ಮತ ಭೇಧ ಬಾವವಿಲ್ಲದೆ, ಎಲ್ಲರನ್ನೂ ಪ್ರೀತಿಸೋದು, ಗೌರವಿಸೋದು, ಮನುಷ್ಯತ್ವ. ಅಂತೆಯೇ, ದಯೆ, ಕೃತಜ್ಞತಾಭಾವ, ಇನ್ನೊಬ್ಬರ ಕುರಿತಾದ ಕರುಣೆ, ಕಾಳಜಿ, ಕನಿಕರ, ಸಂಕಷ್ಟದಲ್ಲಿರುವವರಿಗೆ ಸೇವೆ-ಸಹಾಯ, ಸಾಮಾಜಿಕ ಕಳಕಳಿ ಸಾಮರಸ್ಯ, ಸೌಹಾರ್ದತೆ, ಪ್ರೀತಿ, ಪ್ರೇಮ, ಸ್ನೇಹ, ವಿಶ್ವಾಸ, ನಂಬಿಕೆ-ಎಲ್ಲವೂ, ಮುನುಷ್ಯತ್ವದ ನಾನಾ ರೂಪಗಳು.ನನ್ನದು ನನ್ನದೇ - ನಿನ್ನದು ನಿನ್ನದೇ ಈ ಭಾವ ಕೂಡ ಮನುಷ್ಯತ್ವ.
ದೈವತ್ವ: ಮನುಷ್ಯ ಮನಸ್ಸು ಮಾಡಿದರೆ, ಮನುಷ್ಯತ್ವ ಮೀರಿ ದೈವತ್ವ ಏರಬಲ್ಲ. ಸೇವೆ ಮಾನವೀಯ ಗುಣ ಸ್ವಭಾವವಾದರೆ, ನಿಸ್ವಾರ್ಥ ಸೇವೆ ದೈವೀ ಗುಣ. ಭಗವಂತ ನಮಗೆ ಏನೆಲ್ಲ ಕೊಟ್ಟ; ಎಷ್ಟೆಲ್ಲ ಕೊಟ್ಟ. ಆದರೆ, ಎಲ್ಲೂ, ಯಾರಲ್ಲೂ ತಾನು ಕೊಟ್ಟಿದ್ದು ಎಂದು ಹೇಳಿಕೊಂಡು ಬಂದಿಲ್ಲ. ಇದು ದೈವೀ ಗುಣ. ಕಷ್ಟದಲ್ಲಿರುವವರರ ಕಣ್ಣೀರನ್ನು ಒರೆಸೋದು ಮನುಷ್ಯತ್ವವಾದರೆ, ಕಣ್ಣೀರೇ ಬಾರದಂತೆ ನೋಡಿ ಕೊಳ್ಳೋದು ದೈವೀ ಗುಣ. ನಮಗೆ ಕೇಡು ಬಯಸಿದವರಿಗೂ ಒಳಿತನ್ನೇ ಬಯಸುವುದು ದೈವತ್ವ. ಶಿಲುಬೆಗೆ ಏರಿಸಿದ ಕಟುಕರಿಗೆ ಕೂಡಾ ಹೇ ದೇವ ಇವರನ್ನು ಕ್ಷಮಿಸಿ ಬಿಡು ಎಂಬ ಏಸು ಕ್ರಿಸ್ತನ ಮಾತುಗಳು ದೈವತ್ವದ ಸಂಕೇತ. ಒಟ್ಟಿನಲ್ಲಿ ನಿನ್ನದು ನಿನ್ನದೇ, ನನ್ನದೂ ನಿನ್ನದೇ. ನಿನಗಿದ್ದರೆ ಎನಗಿದ್ದಂತೆ ಎಂಬ ಭಾವನೆ ದೈವತ್ವ.
ಮೃಗ ಸ್ವಭಾವಕ್ಕಿಂಗಲೂ ಕೀಳಾಗಿ, ಕಠೋರವಾಗಿ ವರ್ತಿಸುವ ವರ್ತನೆಯೇ ರಾಕ್ಷಸೀ ಪ್ರವೃತ್ತಿ; ಪೈಶಾಚಿಕ ಗುಣ. ಇಂತಹ ಸ್ವಭಾವವನ್ನು ಪ್ರಕಟಿಸುವ, ಮನುಷ್ಯ ರೂಪದ, ಮೃಗ ಸ್ವಭಾವದ, ಮನುಜರೂ ಇದ್ದಾರೆ. ಅಂತೆಯೇ ಮಂತ್ರಾಲಯ ಪ್ರಭು ಶ್ರೀಗುರು ರಾಘವೇಂದ್ರ ಸ್ವಾಮೀಜಿಗಳಂತಹ, ದೈವತ್ವವನ್ನು ಮೀರಿದ ದೇವ ಸಮಾನರೂ ಇದ್ದಾರೆ. ನಾವು ದೈವತ್ವ ಏರಲು ಸಾಧ್ಯವಾಗದಿದ್ದರೂ, ಮೃಗತ್ವದ ಮಟ್ಟಕ್ಕಿಳಿಯದೆ ಒಳ್ಳೆಯ ಮನುಷ್ಯರಾಗಿ ಬಾಳಿದರೆ ಸಾಕು!
(ಲೇಖಕರು ಹವ್ಯಾಸಿ ಬರಹಗಾರರು)