

ನಾಯಕತ್ವದ ಸ್ಥೂಲಸೂಕ್ಷ್ಮಗಳೆಲ್ಲದರ ಅರಿವುಳ್ಳ ಅಪೂರ್ವ ರಾಜಕಾರಣಿಯಾಗಿದ್ದ ಅನಂತಕುಮಾರ್ ದಿನಬೆಳಗಾಗುವುದರಲ್ಲಿ ದಿಢೀರನೆ ಜನನಾಯಕನ ಪಟ್ಟಕ್ಕೇರಿದವರಲ್ಲ. ಚಿಕ್ಕಂದಿನಿಂದಲೂ ನಾಯಕತ್ವದ ಗುಣಲಕ್ಷಣಗಳನ್ನು ಹಂತಹಂತವಾಗಿ, ಕ್ರಮಬದ್ಧವಾಗಿ ಮೈಗೂಡಿಸಿಕೊಂಡು ಬೆಳೆದವರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದಾಗಿನಿಂದ ಮೊದಲುಗೊಂಡು ಕೇಂದ್ರ ಸರ್ಕಾರದ ಮಹತ್ವದ ಹುದ್ದೆಗಳನ್ನು ನಿಭಾಯಿಸುವವರೆಗಿನ ಪ್ರತಿಕ್ಷಣದಲ್ಲೂ ಅನಂತಕುಮಾರ್ ದೇಶ ಮೊದಲು ಎಂಬ ತತ್ವವನ್ನು ವ್ರತದಂತೆ ಪಾಲಿಸಿಕೊಂಡು ಬಂದವರು.
ಅಶೋಕ್ ಅಭಿಪ್ರಾಯವನ್ನು ಅನಂತಕುಮಾರ್ ಒಪ್ಪಲಿಲ್ಲ. ‘ಸಾಮಾನ್ಯ ಜನರಿಗೆ ತಮ್ಮ ಪ್ರತಿನಿಧಿಗಳ, ನಾಯಕರ ಕಣ್ಣಿಗೆ ಕಾಣಿಸಿಕೊಳ್ಳುವ ಅಪೇಕ್ಷೆಯೇನೋ ಇರುತ್ತದೆ. ನಾಯಕರು ಎದುರಿಗೆ ಬಂದಾಗ ಅವರಿಗೆ ನಮಸ್ಕರಿಸಿದರೂ ಮುಖಂಡನೆನಿಸಿಕೊಂಡವನು ಅವರ ಗೌರವವನ್ನು ಸ್ವೀಕರಿಸುವಷ್ಟು ವ್ಯವಧಾನ ತೋರದಿರುವುದೇ ಹೆಚ್ಚು. ಇದಕ್ಕೆ ಅವನ ಪ್ರತಿಷ್ಠೆ ಬಿಗುಮಾನಗಳು ಕಾರಣ; ಜೊತೆಗೆ, ತಾನೇನೂ ಪ್ರತಿಯಾಗಿ ನಮಸ್ಕರಿಸಬೇಕಾದ್ದಿಲ್ಲವೆಂಬ ಆತ್ಮಪ್ರತ್ಯಯ. ಇಂಥ ಸೆಡವು, ಬಿಗುಮಾನಗಳು ನಾಯಕನನ್ನು ಜನರಿಂದ ದೂರವೇ ಉಳಿಸುತ್ತವೆ. ಜನರಿಗೂ ನಾಯಕನು ತಮ್ಮನ್ನು ಗಮನಿಸುತ್ತಾನೋ ಇಲ್ಲವೋ ಎಂಬ ಅಳುಕು ಇರುತ್ತದೆ. ಅದಕ್ಕೆ ಬದಲಾಗಿ, ನಾಯಕನಾದವನು ತಾನೇ ಮೊದಲಿಗೆ ನಮಸ್ಕರಿಸುವುದರಿಂದ ಜನರಿಗೆ ಆ ನಾಯಕನು ತಮ್ಮವನೆಂಬ ಭಾವನೆ ಮೂಡಿ ಆತ್ಮೀಯತೆ ಬೆಳೆಯಲು ಸಹಕಾರಿಯಾಗುತ್ತದೆ. ಜನಸಾಮಾನ್ಯರೊಡನೆ ಸಂಪರ್ಕವು ನಿಕಟವೂ ನಿರಂತರವೂ ಆಗಿರಬೇಕಾದರೆ ನಾಯಕ ಒಣಪ್ರತಿಷ್ಠೆಯನ್ನು ತೊರೆದು ಎಲ್ಲರೊಳಗೆ ಒಂದಾಗಿರಲು ಯತ್ನಿಸುವುದೇ ಸರಿಯಾದ ಮಾರ್ಗ’ ಎಂದು ಅನಂತಕುಮಾರ್ ತಿಳಿಹೇಳಿದರು. ಪ್ರಜೆಗಳು ಕಿರಿಯರಿರಲಿ ಹಿರಿಯರಿರಲಿ, ಅವರೇ ತಮಗೆ ನಮಸ್ಕರಿಸಲಿ ಎಂಬ ನಿರೀಕ್ಷೆಯ ಬದಲಿಗೆ ಅವರ ಕಣ್ಣಲ್ಲಿ ಕಣ್ಣಿರಿಸಿ ತಾನೇ ನಮಸ್ಕರಿಸಬೇಕಾದುದು ನಾಯಕನಾದವನ ಜವಾಬ್ದಾರಿ ಎಂದು ಅನಂತಕುಮಾರ್ ನಂಬಿದ್ದರು. ಚುನಾವಣೆಯ ಸನ್ನಿವೇಶದಲ್ಲಿ ಮಾತ್ರವೇ ಅಲ್ಲ, ಯಾವುದೇ ಕಾಲದಲ್ಲೂ ತಮ್ಮೆದುರು ಬಂದ ಸರ್ವರಿಗೂ ತಾನಾಗಿಯೇ ನಮಸ್ಕರಿಸುವುದು, ಅನಂತಕುಮಾರ್ರಿಗೆ ರೂಢಿಯಾಗಿತ್ತು.
ಹೀಗೆ ನಾಯಕತ್ವದ ಸ್ಥೂಲಸೂಕ್ಷ್ಮಗಳೆಲ್ಲದರ ಅರಿವುಳ್ಳ ಅಪೂರ್ವ ರಾಜಕಾರಣಿಯಾಗಿದ್ದ ಅನಂತಕುಮಾರ್ ದಿನಬೆಳಗಾಗುವುದರಲ್ಲಿ ದಿಢೀರನೆ ಜನನಾಯಕನ ಪಟ್ಟಕ್ಕೇರಿದವರಲ್ಲ. ಚಿಕ್ಕಂದಿನಿಂದಲೂ ನಾಯಕತ್ವದ ಗುಣಲಕ್ಷಣಗಳನ್ನು ಹಂತಹಂತವಾಗಿ, ಕ್ರಮಬದ್ಧವಾಗಿ ಮೈಗೂಡಿಸಿಕೊಂಡು ಬೆಳೆದವರು. ತಂದೆತಾಯಿಯವರ ಬೋಧನೆ, ಸಂಸ್ಕಾರ, ಮಾರ್ಗದರ್ಶನಗಳು ಬಾಲಕ ಅನಂತಕುಮಾರನ ಗುಣಶೀಲಗಳ ಬೆಳವಣಿಗೆಗೆ ದಾರಿ ತೋರಿದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅನುಭವಗಳು ಆತನಲ್ಲಿ ನಾಯಕತ್ವದ ಹೊಳಹು ಹುಮ್ಮಸ್ಸುಗಳನ್ನು ತುಂಬಿದವು. ಎಳೆಯ ವಯಸ್ಸಿಗೆ ಮೀರಿದ ಸಾಹಸಪ್ರವೃತ್ತಿ, ಅಸಾಧಾರಣ ನೆನಪಿನ ಶಕ್ತಿ, ವಿಷಯಗಳನ್ನು ಗ್ರಹಿಸಿ ಧಾರಣೆ ಮಾಡಬಲ್ಲ ಸಾಮರ್ಥ್ಯ- ಇವೆಲ್ಲವೂ ಹುಟ್ಟುಗುಣಗಳಾಗಿ ಮೈಗೂಡಿದ್ದ ಕಾರಣದಿಂದಲೇ ತಾನು ಮುಂದೊಮ್ಮೆ ದೇಶವನ್ನೇ ಆಳುತ್ತೇನೆ ಎಂದು ಪ್ರೌಢಶಾಲಾ ಬಾಲಕನಾಗಿದ್ದಾಗಲೇ ಅನಂತಕುಮಾರ್ ಘೊಷಿಸಲು ಸಾಧ್ಯವಾಯಿತು! ಹೀಗಿರುವಾಗ ವಿದ್ಯಾರ್ಥಿ ಪರಿಷತ್ತಿನ ಹಿರಿಯರಾದ ಪಿ.ವಿ. ಕೃಷ್ಣಭಟ್ಟ, ದತ್ತಾತ್ರೇಯ ಹೊಸಬಾಳೆ ಮುಂತಾದವರ ಮಾರ್ಗದರ್ಶನವು ಅನಂತಕುಮಾರ್ರಿಗೆ ಲಭಿಸಿದ್ದು ಸುದೈವ. ಅಂದಿನ ದಿನಗಳಲ್ಲೇ ಬಾಬು ಕೃಷ್ಣಮೂರ್ತಿಯವರಂಥ ಮಹನೀಯರ ಕಣ್ಣಿಗೆ ಯುವನಾಯಕ ಅನಂತಕುಮಾರ್ ಭವಿಷ್ಯದ ಪ್ರಧಾನಿಯಾಗಿ ಕಂಡಿದ್ದುದರಲ್ಲಿ ಅತಿಶಯವೇನು?
ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ- ಎಂಬ ಸೂತ್ರವನ್ನು ಅನಂತಕುಮಾರ್ ದೃಢವಾಗಿ ಪಾಲಿಸಿಕೊಂಡು ಬಂದವರು. ಹೀಗಾಗಿ ವ್ಯಕ್ತಿಗೆ ಹಿರಿಮೆ ಪ್ರತಿಷ್ಠೆಗಳನ್ನು ತಂದುಕೊಡುವ ನಾಯಕತ್ವದ ಸ್ಥಾನಮಾನಗಳು ಅವರಿಗೆ ಮಹತ್ವದ್ದೆಂದು ತೋರಲೇ ಇಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದಾಗಿನಿಂದ ಮೊದಲುಗೊಂಡು ಕೇಂದ್ರ ಸರ್ಕಾರದ ಮಹತ್ವದ ಹುದ್ದೆಗಳನ್ನು ನಿಭಾಯಿಸುವವರೆಗಿನ ಪ್ರತಿಕ್ಷಣದಲ್ಲೂ ಅನಂತಕುಮಾರ್ ದೇಶ ಮೊದಲು ಎಂಬ ತತ್ವವನ್ನು ವ್ರತದಂತೆ ಪಾಲಿಸಿಕೊಂಡು ಬಂದರು. ಇಂತಹ ಧೋರಣೆಯನ್ನು ತಾಳಿದ್ದುದರಿಂದಲೇ ವ್ಯಕ್ತಿಪ್ರತಿಷ್ಠೆಯಿಂದ ದೂರವಿರುವುದು ಅವರಿಗೆ ಸಾಧ್ಯವಾಯಿತು. ನಾಯಕ- ಕಾರ್ಯಕರ್ತ ಎಂಬ ಭೇದವನ್ನು ಅವರು ಲೆಕ್ಕಿಸಲೇ ಇಲ್ಲ. ಆಗಬೇಕಾದ ಕರ್ತವ್ಯವೇನಿದೆಯೋ ಅದನ್ನು ಮಾಡಿ ಮುಗಿಸಬೇಕು, ಆ ಕೆಲಸ ಕೈಕೆಳಗಿನವರು ಮಾಡಬೇಕಾದ್ದು, ನಾಯಕನ ಯೋಗ್ಯತೆಗೆ ತಕ್ಕುದಲ್ಲ ಎಂಬ ವಿಚಾರ ಅವರ ಮನದಲ್ಲಿ ಎಂದೂ ಸುಳಿಯಲಿಲ್ಲ. ನಾನು ಮೊದಲ ಬಾರಿಗೆ ಅನಂತಕುಮಾರರನ್ನು ಕಂಡದ್ದು ಕಾಲೇಜು ವಿದ್ಯಾರ್ಥಿದೆಸೆಯಲ್ಲಿದ್ದಾಗ. ಅನಂತಕುಮಾರ್ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಕಾರ್ಯದರ್ಶಿಯೆಂದು ತಿಳಿದಾಗ, ನನಗೆ ಅಚ್ಚರಿಯೇ ಆಯಿತು. ಅಷ್ಟು ದೊಡ್ಡ ಹುದ್ದೆಯಲ್ಲಿರುವವರು ಸಾಧಾರಣ ಸೈಕಲ್ ಸವಾರರಾಗಿ ತಿರುಗುತ್ತಾರೆಯೇ ಎನಿಸಿತು. ಅಂದಿನ ಮುಖ್ಯ ಭಾಷಣಕಾರರಾಗಿದ್ದ ಅನಂತಕುಮಾರ್, ಕಾರ್ಯಕ್ರಮ ಮುಗಿದ ಮೇಲೆ ಪೊರಕೆ ಹಿಡಿದು ಕಸ ಗುಡಿಸುತ್ತಿರುವುದನ್ನು ಕಂಡಾಗಲಂತೂ ಬಹು ವಿಚಿತ್ರವೆಂಬಂತೆ ಭಾಸವಾಯಿತು.
ನಾಯಕನಾದವನು ಸ್ವತಃ ಕಾರ್ಯತತ್ಪರನಾಗುವುದರಿಂದ ಇತರ ಕಾರ್ಯಕರ್ತರನ್ನೂ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಬಹುದು, ಅವರಲ್ಲಿ ಉತ್ಸಾಹ ತುಂಬಬಹುದು ಎಂದು ಅನಂತಕುಮಾರ್ ನಂಬಿದ್ದರು. ‘ರಾಜ್ಯ ಕಾರ್ಯದರ್ಶಿಯ ಸ್ಥಾನದಲ್ಲಿರುವವನು ಎಲ್ಲೋ ಕಸ ಗುಡಿಸಿ ಸ್ವಚ್ಛ ಮಾಡುವ ಕೆಲಸಕ್ಕೆ ಮುಂದಾಗಬೇಕೇ’ ಎನ್ನುವುದು ಅವರಿಗೆ ಪ್ರಶ್ನೆಯಾಗಿಯೇ ತೋರುತ್ತಿರಲಿಲ್ಲ. ಸಹಜವಾಗಿಯೇ ಉಳಿದ ಕಾರ್ಯಕರ್ತರೂ ಅವರೊಡನೆ ಕೈಜೋಡಿಸುತ್ತಿದ್ದುದರಿಂದ ಸಂಘಟನೆಯ ಎಲ್ಲ ಕಾರ್ಯಗಳೂ ಯಶ ಕಾಣುವುದು ಸಾಧ್ಯವಾಗುತ್ತಿತ್ತು. ನಾಯಕನೆಂದರೆ ಯಶಸ್ಸಿನ ಮೆಟ್ಟಿಲೇರಿ ಮೇಲೆ ನಿಂತು ಉಳಿದವರತ್ತ ಕೈಬೀಸುವುದಲ್ಲ, ಉಳಿದವರನ್ನೂ ಜೊತೆಗೆ ಕರೆದೊಯ್ದು ಸರಿಯಾದ ಪಥದಲ್ಲಿ ಮುನ್ನಡೆಸುವುದೇ ನಾಯಕನ ಆದ್ಯಕರ್ತವ್ಯ ಎಂದು ಅನಂತಕುಮಾರ್ ಹೇಳುತ್ತಿದ್ದರು. ಇದರಿಂದಾಗಿಯೇ ಅಸಂಖ್ಯ ಕಾರ್ಯಕರ್ತರ ಪ್ರೀತ್ಯಾದರಗಳನ್ನೂ ಅವರು ಗಳಿಸಿಕೊಳ್ಳುವುದು ಸಾಧ್ಯವಾಯಿತು.
ದೇಶದ ಮೂಲೆಮೂಲೆಗಳಲ್ಲಿ ಸಂಚರಿಸುತ್ತಾ ಅಸಂಖ್ಯಾತ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದ ಅನಂತಕುಮಾರ್ ಪ್ರತಿಯೊಬ್ಬರನ್ನೂ ನೆನಪಿಟ್ಟುಕೊಳ್ಳುತ್ತಿದ್ದ ಪರಿ ಅಸದೃಶ. ಪೂರ್ವದಲ್ಲಿ ಭೇಟಿಯಾಗಿದ್ದ ಯಾವುದೋ ಭಾಗದ ಕಾರ್ಯಕರ್ತನು ಮುಂದೆಂದೋ ಕಾಣಸಿಕ್ಕಾಗ ಆತ ತನ್ನ ಪರಿಚಯ ಹೇಳಿಕೊಳ್ಳುವ ಮೊದಲು ತಾವೇ ಆತನ ಹೆಸರು ಹೇಳಿ ವಿಚಾರಿಸುತ್ತಿದ್ದ ಪರಿಗೆ ಎಲ್ಲರೂ ಬೆರಗಾಗುತ್ತಿದ್ದರು. ಬರಿಯ ಹೆಸರು ಮಾತ್ರವಲ್ಲ, ಮೊದಲಿಗೆ ಭೇಟಿಯಾಗಿದ್ದ ಆತನ ಕುಟುಂಬದವರನ್ನೋ ಜೊತೆಯಲ್ಲಿ ಚಹಾ ಕುಡಿದುದನ್ನೋ ಇನ್ಯಾವುದೋ ಪ್ರಸಂಗವನ್ನೋ ಪ್ರಸ್ತಾಪಿಸುತ್ತಿದ್ದರು. ಒಡಿಶಾ ಚುನಾವಣೆಯಲ್ಲಿ ಗೆದ್ದ ಪ್ರತಿನಿಧಿಯೊಬ್ಬ ತಮ್ಮನ್ನು ಕಾಣಲು ಬಂದಾಗ, ಅವನಿಗೇ ಮರೆತುಹೋಗಿದ್ದ ಆತನ ಪ್ರತಿಸ್ಪರ್ಧಿಯ ಹೆಸರು ಹೇಳಿ ‘ಸೋತಮೇಲೆ ಅವನೇನು ಮಾಡುತ್ತಿದ್ದಾನೆ’ ಎಂದು ವಿಚಾರಿಸಿದ್ದರು. ಪಕ್ಷದ ಸಂಘಟನಾ ಕಾರ್ಯದ ಯಶಸ್ಸಿಗೆ ಅನಂತಕುಮಾರ್ರ ಅಸಾಧಾರಣ ನೆನಪಿನ ಶಕ್ತಿಯ ಕೊಡುಗೆ ವಿಶೇಷವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.
ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತನಾಗಿದ್ದ ದಿನಗಳಿಂದಲೇ ಅನಂತಕುಮಾರ್ರಿಗೆ ವಿವಿಧ ಸನ್ನಿವೇಶಗಳಲ್ಲಿ ವರ್ತಿಸಬೇಕಾದ ಬಗೆ, ಪರಿಹಾರ ಕಂಡುಕೊಳ್ಳುವ ತಂತ್ರ, ಯಶಸ್ಸು ಸಾಧಿಸುವ ರೀತಿನೀತಿಗಳ ಬಗೆಗಿನ ಅರಿವು ಸಮಗ್ರವಾಗಿತ್ತು. ಯಾವುದೇ ಸಮಸ್ಯೆಗೆ ಅವರು ತತ್ಕ್ಷಣದ ಪರಿಹಾರ ಸೂಚಿಸಬಲ್ಲವರಾಗಿದ್ದರು. ಅದು ಯಶ ಕಾಣಲಿಲ್ಲವೆಂದಾದರೆ ಬೇರೊಂದು ಮಾಗೋಪಾಯ ಅವರಲ್ಲಿ ಸಿದ್ಧ. ಮೈಸೂರಿನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ದಾರಿ ಸೂಚಿಸಬೇಕೆಂದು ಯುವನಾಯಕ ಅನಂತಕುಮಾರ್ರನ್ನು ಕೇಳಿದಾಗ ಅವರು ಧರಣಿ ಸತ್ಯಾಗ್ರಹ ಮಾಡುವಂತೆ ಹೇಳಿಕೊಟ್ಟರು. ಸತ್ಯಾಗ್ರಹ ಹೂಡಿ 2-3 ದಿನಗಳಾದರೂ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದಿದ್ದಾಗ, ಅನಂತಕುಮಾರ್ ವಿದ್ಯಾರ್ಥಿಗಳಿಂದ ಪ್ರಯೋಗಿಸಿದ ಅಸ್ತ್ರ- ಆಮರಣಾಂತ ಉಪವಾಸ! ಪತ್ರಿಕಾ ಪ್ರಚಾರವೂ ಬೆಂಬಲಕ್ಕೆ ಸಿಗುತ್ತಿದ್ದಂತೆಯೇ ಆಡಳಿತ ವರ್ಗ ಎಚ್ಚೆತ್ತು ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಕೂಡಲೇ ಮುಂದಾಯಿತು!
ಕಾರ್ಯಕರ್ತರ ಸಮಸ್ಯೆಗೆ ಪರಿಹಾರ ಸೂಚಿಸುವುದು ಮಾತ್ರವಲ್ಲ, ಹಲವು ಸಂದರ್ಭಗಳಲ್ಲಿ ಅದಕ್ಕೆ ಬೇಕಾದ ಕಾರ್ಯತಂತ್ರದ ಅನುಷ್ಠಾನಕ್ಕೂ ಅನಂತಕುಮಾರ್ ಮುಂದಾಗುತ್ತಿದ್ದರು. ಉದಾಹರಣೆಗೆ, ಬಾಗಲಕೋಟೆಯ ವಿದ್ಯಾರ್ಥಿ ಪರಿಷತ್ತಿನ ಕಚೇರಿಯು ಹಣಕಾಸಿನ ಕೊರತೆಯಿಂದಾಗಿ ಯಾವುದೇ ಕಾರ್ಯಕ್ರಮ ನಡೆಸಲಾಗದ ಸ್ಥಿತಿಯಲ್ಲಿತ್ತು. ಅಲ್ಲಿಗೆ ಭೇಟಿ ಕೊಟ್ಟ ಅನಂತಕುಮಾರ್ರಿಗೆ ಮರುದಿನ ಊರ ಸಮೀಪದಲ್ಲಿ ದೊಡ್ಡ ಜಾತ್ರೆ ನಡೆಯುವ ಸುದ್ದಿ ತಿಳಿಯಿತು. ಕೂಡಲೇ ಅನಂತಕುಮಾರ್ ಅಲ್ಲಿನ ಕಾರ್ಯಕರ್ತರಿಗೆ ಹಣ ಸಂಪಾದನೆಯ ಮಾರ್ಗವೊಂದನ್ನು ತೋರಿಸಿಕೊಟ್ಟರು. ಅದೇನೆಂದರೆ, ಜಾತ್ರೆ ನಡೆಯುವಲ್ಲಿ ದೇವಾಲಯದ ಸಮೀಪ ಚಪ್ಪಲಿ ಸ್ಟಾ್ಯಂಡ್ ಇರಿಸಿ ಹಣ ವಸೂಲಿ ಮಾಡುವುದು! ಬರೀ ಸಲಹೆ ಕೊಟ್ಟಿದ್ದು ಮಾತ್ರವಲ್ಲ, ತಾವೂ ಉಳಿದ ಕಾರ್ಯಕರ್ತರ ಜೊತೆಗೆ ಹೋಗಿ ಕಂಡವರ ಪಾದರಕ್ಷೆ ಕಾಯುವ ಕೆಲಸಕ್ಕೂ ಅನಂತಕುಮಾರ್ ಸಿದ್ಧರಾಗಿಯೇಬಿಟ್ಟರು!
ಅನಂತ ನಮನ- 65 ಕಾರ್ಯಕ್ರಮ: ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್ ಅವರ 65ನೇ ಜನ್ಮದಿನದ ಅಂಗವಾಗಿ ‘ಅನಂತ ನಮನ- 65’ ಕಾರ್ಯಕ್ರಮವನ್ನು ಅದಮ್ಯ ಚೇತನ ಸಂಸ್ಥೆ ಮತ್ತು ಅನಂತಕುಮಾರ ಪ್ರತಿಷ್ಠಾನ ಜಂಟಿಯಾಗಿ ರಾಜಸ್ಥಾನದ ಜೋಧಪುರದಲ್ಲಿರುವ ಅದಮ್ಯಚೇತನ ಕಾರ್ಯಾಲಯದ ಆವರಣದಲ್ಲಿ ಭಾನುವಾರ (ಸೆ. 22) ಸಂಜೆ 4ಕ್ಕೆ ಆಯೋಜಿಸಿವೆ. ಪ್ಲೇಟ್ ಬ್ಯಾಂಕ್, ಸ್ವಯಂಚಾಲಿತ ರೋಟಿ ತಯಾರಿಕೆ ಯಂತ್ರ, ನಿತ್ಯ ಅನ್ನದಾನ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು.
(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)