

ರಾಮಾಯಣದ ಪ್ರತಿ ಸನ್ನಿವೇಶಗಳನ್ನು ನೋಡುತ್ತಾ ಬಂದಲ್ಲಿ ಬಂದ ಸಂಕಷ್ಟಗಳನ್ನು ಶ್ರೀರಾಮ ಎದುರಿಸಿದ ದಾರಿ ಎಂದರೆ ತಾಳ್ಮೆ ಎಂಬ ಅಸ್ತ್ರ›ದಿಂದ ಹೊರತು ಶಸ್ತ್ರಗಳಿಂದಲ್ಲ ಎನ್ನುವುದು ಸ್ಪಷ್ಟ. ಶಸ್ತ್ರ›ಗಳನ್ನು ಬಳಸಲೇ ಇಲ್ಲ ಎಂದಲ್ಲ. ಯಾವ ಯಾವ ಕಾಲ ಮತ್ತು ಸಂದರ್ಭಕ್ಜೆ ಏನು ಬಳಸಬೇಕೋ ಅದನ್ನು ರಾಮ ಬಳಸಿದ. ಅದು ಫಲಪ್ರದವೂ ಆಯಿತು. ಆದರೆ ಆತನ ಬತ್ತಳಿಕೆಯಲ್ಲಿದ್ದ ಪ್ರಮುಖ ಅಸ್ತ›ಗಳು ಎಂದರೆ ಶಾಂತಿ, ಸಹನೆ, ಸಮಾಧಾನ ಮತ್ತು ಸತ್ ಚಿಂತನೆ. ದುಷ್ಟ ಶಕ್ತಿಗಳ ಸಂಹಾರಕ್ಕೆ ಪಾಶುಪತಾಸ್ತ್ರ›, ಬ್ರಹ್ಮಾಸ್ತ್ರ. ಆದರೆ ದುಷ್ಟ ಅಥವಾ ವಿಕೃತ ಮನಶ್ಶಕ್ತಿಗಳ ದಮನಕ್ಕೆ ಬಳಸಿದ ಅಸ್ತ್ರವೆಂದರೆ ಈ ನಾಲ್ಕು ಸರಳ ಸದ್ಗುಣಗಳು. ಈ ಸದ್ಗುಣಗಳು ಸರಳ ಎನಿಸಿದರೂ ಅವುಗಳನ್ನು ಅಳವಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.
ಇನ್ನು ಇಲ್ಲಿ ಗಮನಿಸಬೇಕಾದ ಮತ್ತೊಂದು ಸೂಕ್ಷ್ಮ ಸಂಗತಿ ಎಂದರೆ ಶ್ರೀರಾಮಚಂದ್ರ ಮತ್ತು ಸಹೋದರರ ಮಧ್ಯೆ ಇದ್ದ ಸಂಬಂಧ. ಹಿರಿಯಣ್ಣ ರಾಮನೆಂದರೆ ಲಕ್ಷ್ಮಣ, ಭರತ ಆದಿಯಾಗಿ ಅದೆಷ್ಟು ಭಯ, ಭಕ್ತಿ. ಅದುವೇ ಇಂದಿನ ದಿನಗಳಲ್ಲಿನ ಸಹೋದರರನ್ನು ನೋಡಿದರೆ ಅಜಗಜಾಂತರ. ನಶ್ವರ ಆಸ್ತಿಯ ವ್ಯಾಮೋಹದ ಸುಳಿಗೆ ಸಿಲುಕಿ ಎಲ್ಲೆಲ್ಲೂ ದಾಯಾದಿ ಕಲಹಗಳನ್ನು ನಾವು ನೋಡುತ್ತೇವೆ. ದಿನ ಬೆಳಗಾದರೆ ಹೊಡೆದಾಟ, ಕೊಲೆಮಟ್ಟಕ್ಕೆ ಈ ಸಂಬಂಧದ ಮಧ್ಯೆ ಕಲಹ ಬಂದು ನಿಂತಿದೆ. ಹೀಗಾಗಲು ಕಾರಣ ಎಲ್ಲರಲ್ಲೂ ರಾಮನಲ್ಲಿರುವ ಗುಣಗಳ ಕೊರತೆ. ಪೂರ್ಣವಲ್ಲದಿದ್ದರೂ ಸಾಸಿವೆಯಷ್ಟಾದರೂ ಆತನ ಗುಣ ಅಳವಡಿಸಿಕೊಂಡಲ್ಲಿ ಅದೆಷ್ಟೋ ಕಲಹಗಳು ಇನ್ನಿಲ್ಲದಂತಾಗುತ್ತವೆ. ಇಡೀ ರಾಜ್ಯವನ್ನಾಳುವ ಅವಕಾಶವನ್ನೇ ತಿರಸ್ಕರಿಸಿ ಪಿತೃವಾಕ್ಯ ಪರಿಪಾಲನೆಗೆ ವನವಾಸ ಹೊರಟ ರಾಮನೆಲ್ಲಿ, ಕ್ಷುಲ್ಲಕ ವಿಚಾರಕ್ಕೆ ಬಡಿದಾಡುವ ಸಿಟ್ಟಿಗೇಳುವ, ಮನೆ ತೊರೆಯುವ ಇಂದಿನ ಸಮಾಜದ ಸಹೋದರರೆಲ್ಲಿ?
ನಾವು ಮುಖ್ಯವಾಗಿ ಅಪೇಕ್ಷಿಸುವ ದುಃಖ, ಅಜ್ಞಾನ, ದೋಷ ಹಾಗೂ ಇವುಗಳನ್ನೊಳಗೊಂಡ ಸಂಸಾರಬಂಧನವನ್ನು ಅಷ್ಟು ಸಲೀಸಾಗಿ ತೊರೆಯುವುದು ಅಸಾಧ್ಯದ ಮಾತು. ಅದು ಸಾಧುವೂ ಅಲ್ಲ. ಅದರ ಬದಲಾಗಿ ಸನ್ಮಾರ್ಗದಲ್ಲಿ ಸತ್ಚಿಂತನೆಗಳೊಂದಿಗೆ ಸ್ವಸ್ಥ ಮನಸ್ಸಿನ ಮೂಲಕ ಕರ್ಮಗಳನ್ನು ಮಾಡಿದರೆ ಬದುಕು ಹೂವಿನಂತೆ ಅರಳುತ್ತದೆ. ಹೀಗಾಗಲು ಮಾಡಬೇಕಿರುವುದು ದೃಢಸಂಕಲ್ಪ ಅಷ್ಟೇ. ಆರಂಭದಲ್ಲಿ ಮನೋನಿಗ್ರಹ ಕಷ್ಟ ಎನಿಸಿದರೂ ಕಾಲಕ್ರಮೇಣ ಅದು ಜೀವನಶೈಲಿಯ ಒಂದು ಅವಿಭಾಜ್ಯ ಅಂಗವಾದಾಗ ಹತ್ತು ಹಲವು ಸಂಕಷ್ಟಗಳಿಗೆ ಮುಕ್ತಿ ಖಚಿತ.
ಹೀಗೆ ಶ್ರೀರಾಮನ ಗುಣಗಳ ಅವಲೋಕನದ ಜತೆಗೆ ನಮ್ಮ ಇಂದಿನ ಜೀವನಕ್ರಮಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬ ಚಿಂತನೆ ಮಾಡಿದಲ್ಲಿ ಹಲವಾರು ಅನುಕರಣೀಯ ಅಂಶಗಳು ಸಿಗುತ್ತವೆ. ಅವುಗಳ ಪಾಲನೆ ಮಾಡಿದಲ್ಲಿ ಸಾಧನೆಯೂ ಆಗುತ್ತದೆ. ಮನಸ್ಸಿನ ವೇದನೆಯೂ ಕಡಿಮೆಯಾಗುತ್ತದೆ.