ಅಮೃತ ಸಿಂಚನ ಅಂಕಣ | ಸನಾತನ ಧರ್ಮದ ಕಣ್ಣಲ್ಲಿ ಅಭಿವೃದ್ಧಿ ಹೊಂದಿದ ದೇಶ

India
Published on
ನಮ್ಮ ದೇಶವು ಇನ್ನು ಕೆಲ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದರಲ್ಲಿ ಸಂದೇಹವಿಲ್ಲ. ಇಪ್ಪತ್ತೈದು ವರ್ಷಗಳಲ್ಲಿ 25 ಟ್ರಿಲಿಯನ್ ತಲುಪಿದರೂ ಆಶ್ಚರ್ಯವಿಲ್ಲ. ಆದರೆ, ರಾಮಾಯಣದ ರಾಮರಾಜ್ಯದ ಆದರ್ಶಗಳು ಕಾರ್ಯಗತವಾಗದಿದ್ದಲ್ಲಿ, ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗುವುದಿಲ್ಲ ಎಂಬುದನ್ನು ಮರೆಯಬಾರದು.

ಸ್ವಾತಂತ್ರ್ಯಾನಂತರದ ಎಪ್ಪತ್ತೈದನೆಯ ವರ್ಷದಿಂದ ನೂರು ವರ್ಷಗಳವರೆಗಿನ ಎರಡೂವರೆ ದಶಕಗಳ ಕಾಲವನ್ನು ಅಮೃತ ಕಾಲವೆಂದು ಹೆಸರಿಸಿ, ಈ ಮಹತ್ವಪೂರ್ಣ ಕಾಲದಲ್ಲಿ, ಈಗ ಅಭಿವೃದ್ಧಿಶೀಲ ದೇಶ ಎಂದು ಕರೆಯಲ್ಪಡುತ್ತಿರುವ ನಮ್ಮ ಭಾರತವು ಅಭಿವೃದ್ಧಿಹೊಂದಿದ ದೇಶವಾಗಬೇಕೆಂದು ಆಶಿಸಿ, ಈ ದಿಶೆಯಲ್ಲಿ ನಾವೀಗ ಕಾರ್ಯಪ್ರವೃತ್ತರಾಗಿದ್ದೇವೆ. ಆದರೆ, ಅಭಿವೃದ್ಧಿ ಹೊಂದಿದ ದೇಶದ ನಮ್ಮ ಪರಿಕಲ್ಪನೆಯೇನು? ಕೇವಲ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯ ಮಾನದಂಡದ ಆಧಾರದಲ್ಲಿ ಪಶ್ಚಿಮ ರಾಷ್ಟ್ರಗಳಂತೆ ಮುಂದುವರಿಯುವುದೇ ಅಥವಾ ಇದಕ್ಕಿಂತ ಭಿನ್ನವಾದ ಮಾರ್ಗವೇನಾದರೂ ಇದೆಯೇ?

ಒಂದು ದೇಶವನ್ನು ಅಭಿವೃದ್ಧಿ ಹೊಂದಿದ ದೇಶವೆಂದು ಕರೆಯಲು ಇಂದಿನ ಸಾಮಾನ್ಯ ಮಾನದಂಡಗಳೆಂದರೆ, ಅದರ ಜಿಡಿಪಿ (ಒಟ್ಟು ದೇಶಿಯ ಉತ್ಪನ್ನ), ಮೂಲಸೌಕರ್ಯಗಳು, ಸಾಕ್ಷರತೆ, ಸಾಮಾಜಿಕ ಪ್ರಗತಿ, ಸೇನಾ ಶಕ್ತಿ ಹಾಗೂ ಭೌಗೋಳಿಕ ರಾಜಕೀಯ ಪ್ರಭಾವಗಳು. ಆದರೆ, ಸನಾತನ ಧರ್ಮದ ಪ್ರಕಾರ ಈ ಮಾನದಂಡಗಳಿಂದ ಒಂದು ದೇಶದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ, ಸನಾತನ ಧರ್ಮದ ಮಾನದಂಡಗಳನ್ನು ಅರ್ಥ ಮಾಡಿಕೊಂಡು ಆ ದಿಶೆಯಲ್ಲಿ ನಡೆದರೆ ನಮ್ಮ ದೇಶವನ್ನು ನಿಜಾರ್ಥದಲ್ಲಿ ಒಂದು ಪೂರ್ಣ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬಹುದು. ಈ ಕುರಿತು ಭಾರತೀಯ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಒಂದು ಪ್ರಾಚೀನ ಪ್ರಾರ್ಥನೆಯೆಂದರೆ:

ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಾಃ|
ಸರ್ವೆ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ಭವೇತ್||

‘ಸರ್ವರೂ ಸುಖವಾಗಿರಲಿ. ಸರ್ವರೂ ಆರೋಗ್ಯವಂತರಾಗಿರಲಿ. ಸರ್ವರೂ ಸದಾ ಮಂಗಳಮಯವಾದದ್ದನ್ನೇ ನೋಡಲಿ. ಯಾರಿಗೂ ಯಾವುದೇ ದುಃಖವು ಬಾರದಿರಲಿ.’

ಈ ಉನ್ನತ ಭಾರತೀಯ ಆದರ್ಶವನ್ನು ವಾಸ್ತವಿಕವಾಗಿ ಎಂದಾದರೂ ಹಿಂದೆ ನಮ್ಮ ದೇಶದಲ್ಲಿ ಕಾರ್ಯಗತಗೊಳಿಸಲಾಗಿತ್ತೇ? ಹಾಗೂ ಅದನ್ನು ನಮ್ಮ ಈ ಆಧುನಿಕ ಕಾಲದಲ್ಲಿ ಕಾರ್ಯಗತಗೊಳಿಸಲು ಸಾಧ್ಯವಿದೆಯೇ?

ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನುಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣದಲ್ಲಿ ಕಾಣಬಹುದು. ರಾಜಾ ಶ್ರೀ ರಾಮಚಂದ್ರ ಪ್ರಭುವಿನ ಆಡಳಿತದಲ್ಲಿ ನೆಲೆಗೊಂಡಿದ್ದ ರಾಮರಾಜ್ಯದ ಕುರಿತಾಗಿ ಕೆಲವು ಶ್ಲೋಕಗಳಲ್ಲಿ ವಾಲ್ಮೀಕಿಯು ಹೀಗೆ ವಿವರಿಸಿದ್ದಾರೆ:

ನಿತ್ಯಪುಷ್ಪಾ ನಿತ್ಯಫಲಾಃ ತರವಃ ಸ್ಕನ್ಧ ವಿಸೃ್ತಾಃ|
ಕಾಲವರ್ಷೀ ಚ ಪರ್ಜನ್ಯಃ ಸುಖಸ್ಪರ್ಶಸ್ಚ ಮಾರುತಃ||
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾ ಲೋಭವಿವರ್ಜಿತಾಃ|
ಸ್ವಕರ್ಮಸು ಪ್ರವರ್ತತೇ ತುಷ್ಟಾಃ ಸ್ವಯಿರೇವ ಕರ್ಮಭಿಃ||
ಆಸನ್ ಪ್ರಜಾ ಧರ್ಮಪರಾ ರಾಮೇ ಶಾಸತಿ ನಾನೃತಃ|
ಸರ್ವೆ ಲಕ್ಷಣಸಂಪನ್ನಾಃ ಸರ್ವೆ ಧರ್ಮಪರಾಯಣಾಃ||
(ಶ್ರೀಮದ್ ವಾಲ್ಮೀಕಿ ರಾಮಾಯಣ 6, 128 M 104 106)

‘ವೃಕ್ಷಗಳು ಯಾವುದೇ ಕ್ರಿಮಿ-ಕೀಟಗಳ ಪೀಡೆಯಿಲ್ಲದೆ ಸರಿಯಾದ ಕಾಲದಲ್ಲಿ ಪುಷ್ಪ-ಫಲಗಳನ್ನು ಧರಿಸುತ್ತಿದ್ದವು. ಸರಿಯಾದ ಕಾಲದಲ್ಲಿ ಮಳೆ ಸುರಿಯುತ್ತಿದ್ದು, ಗಾಳಿಯು ಹಿತಕರವಾಗಿ ಬೀಸುತ್ತಿತ್ತು. ಬ್ರಾಹ್ಮಣರು (ಅಧ್ಯಾತ್ಮ-ಬುದ್ಧಿ ಜೀವಿಗಳು), ಕ್ಷತ್ರಿಯರು (ರಾಜ್ಯವನ್ನಾಳುತ್ತಿದ್ದವರು), ವೈಶ್ಯರು (ವ್ಯಾಪಾರಿಗಳು ಹಾಗೂ ಕೃಷಿಕರು) ಮತ್ತು ಶೂದ್ರರು (ಶ್ರಮಜೀವಿಗಳು) ಲೋಭವಿವರ್ಜಿತರಾಗಿ ತಮ್ಮ-ತಮ್ಮ ಕರ್ತವ್ಯಗಳನ್ನು ತೃಪ್ತಿಯಿಂದ ನಿರ್ವಹಿಸುತ್ತಿದ್ದರು. ರಾಮನ ಆಡಳಿತದಲ್ಲಿ ಪ್ರಜೆಗಳು ಉತ್ತಮ ಗುಣವಂತರೂ ಹಾಗೂ ಧರ್ಮಪರರೂ ಆಗಿದ್ದು, ಯಾವುದೇ ಅಸತ್ಯ-ಅನಾಚಾರಗಳಲ್ಲಿ ತೊಡಗುತ್ತಿರಲಿಲ್ಲ.’

ಈ ಮೇಲಿನ ವಾಕ್ಯಗಳಲ್ಲಿ ಅಭಿವೃದ್ಧಿ ಹೊಂದಿದ ದೇಶ ಹೇಗಿರಬೇಕೆಂಬುದರ ಬಗ್ಗೆ ನಮಗೆ ಸೂಚಕಗಳು ಲಭ್ಯವಿವೆ. ಅಲ್ಲಿ ನಿಸರ್ಗ ಮತ್ತು ಪರಿಸರಗಳು ಉತ್ತಮವಾಗಿ ರಕ್ಷಿಸಲ್ಪಟ್ಟಿದ್ದು, ಯಾವುದೇ ಸಸ್ಯ ಅಥವಾ ಜೀವಿವರ್ಗಗಳಿಗೆ ಯಾವ ಅಪಾಯವೂ ಇರಲಿಲ್ಲ. ಪ್ರಜೆಗಳು ಸುಸ್ಥಿರ ಅಭಿವೃದ್ಧಿಯ ಆಧಾರದಲ್ಲಿ ಜೀವನ ನಡೆಸುತ್ತಿದ್ದುದರಿಂದ, ಅಲ್ಲಿ ಹವಾಮಾನ ಬದಲಾವಣೆ ಮತ್ತು ವೈಪರೀತ್ಯ ಸಮಸ್ಯೆಗಳಿರಲಿಲ್ಲ. ಋತುಚಕ್ರವು ಸಕಾರಾತ್ಮಕವಾಗಿ ಉರುಳುತ್ತಿದ್ದು, ಮಳೆಗಳು ಕಾಲಕ್ಕೆ ಸರಿಯಾಗಿ ಸುರಿಯುತ್ತಿದ್ದವು ಹಾಗೂ ಗಾಳಿಯು ಹಿತಕರವಾಗಿ ಬೀಸುತ್ತಿತ್ತು. ಪ್ರಜೆಗಳು ತಮ್ಮ ಸ್ವಭಾವ-ಸಾಮರ್ಥ್ಯಗಳಿಗನುಗುಣವಾಗಿ ಲೋಭವಿಲ್ಲದೆ ಸಮಾಜಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ತವ್ಯಗಳನ್ನು ತೃಪ್ತಿಯಿಂದ ನಿರ್ವಹಿಸುತ್ತಿದ್ದರು. ಇದರಿಂದಾಗಿ ಪ್ರತಿಯೊಬ್ಬರೂ ತಮ್ಮ ಕಾರ್ಯಗಳಲ್ಲಿ ಅತ್ಯುತ್ತಮ ಪರಿಣತಿ-ಕೌಶಲಗಳನ್ನು ಗಳಿಸಿ ಸಮಾಜಕ್ಕೆ ಪರಿಪೂರ್ಣ ಕೊಡುಗೆ ನೀಡುತ್ತಿದ್ದರು. ಜನರು ಉನ್ನತ ಜೀವನಮೌಲ್ಯಗಳೊಂದಿಗೆ ಗುಣವಂತರಾಗಿ ಬಾಳುತ್ತಿದ್ದು, ಯಾವುದೇ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗುತ್ತಿರಲಿಲ್ಲ. ಇದರಿಂದಾಗಿ ಸಮಾಜದಲ್ಲಿ ಸಮರಸ, ಶಾಂತಿ ಮತ್ತು ಭದ್ರತೆಗಳು ಸ್ಥಿರವಾಗಿ ನೆಲೆಸಿದ್ದವು.

ನಮ್ಮ ದೇಶದ ಆಧುನಿಕ ಇತಿಹಾಸದಲ್ಲಿ ಮಹಾತ್ಮ ಗಾಂಧಿಯವರು ಇಂತಹ ರಾಮರಾಜ್ಯದ ಆದರ್ಶವನ್ನು ತಮ್ಮ ಜೀವನ-ಬೋಧನೆಗಳ ಮೂಲಕ ಎತ್ತಿ ಹಿಡಿದು ಸಾರಿದರು. ಪ್ರಭುತ್ವದ ಅಥವಾ ಪ್ರಜೆಗಳ ಸಾರ್ವಭೌಮತ್ವ ಯಾ ಅಧಿಕಾರವು ಅವರ ನೈತಿಕ ಶಕ್ತಿಯ ಆಧಾರದ ಮೇಲೆ ನಿಂತಿರಬೇಕೇ ಹೊರತು ಭೌತಿಕ ಶಕ್ತಿಯ ಮೇಲಲ್ಲ. ಇಂತಹ ರಾಮರಾಜ್ಯದ ಆದರ್ಶವನ್ನು ವಾಸ್ತವಿಕ ಪ್ರಪಂಚದಲ್ಲಿ ನಿಜರೂಪಕ್ಕೆ ತರಲು ಇರುವ ಒಂದೇ ಮಾರ್ಗವೆಂದರೆ, ಪ್ರಭುತ್ವವಾಗಲೀ ಅಥವಾ ಪ್ರಜೆಗಳಾಗಲೀ ಯಾವಾಗಲೂ ವಿವೆಚನೆಯಿಂದ ನ್ಯಾಯಬದ್ಧ ಗುರಿಗಳನ್ನೇ ಆರಿಸಿಕೊಂಡು, ಅವುಗಳನ್ನು ಸಾಧಿಸಲು ನ್ಯಾಯೋಚಿತ ಸಾಧನಗಳನ್ನೇ ಅವಲಂಬಿಸಬೇಕು. ತಪ್ಪಾದ ಮಾರ್ಗವನ್ನವಲಂಬಿಸಿ ಸರಿಯಾದ ಗುರಿಯನ್ನು ತಲಪುವುದು ಎಂದೂ ಸಾಧ್ಯವಿಲ್ಲ. ದೇಶದಲ್ಲಿ ಪರಸ್ಪರ ಪ್ರಜೆಗಳ ನಡುವಿನ ಅಥವಾ ಪ್ರಜೆ ಹಾಗೂ ಪ್ರಭುತ್ವದ ನಡುವಿನ ಸಂಬಂಧ-ವ್ಯವಹಾರಗಳು ಸದ್ಗುಣ, ನೀತಿ ಮತ್ತು ನ್ಯಾಯಗಳ ಆಧಾರದ ಮೇಲೆ ರೂಪಿತವಾದಾಗ ಮಾತ್ರ ರಾಮರಾಜ್ಯದ ಕನಸು ನನಸಾಗುತ್ತದೆ. ಈ ಆದರ್ಶದ ಮೂಲ ಸೂತ್ರವೆಂದರೆ, ಆಳುವವರ ಹಾಗೂ ಪ್ರಜೆಗಳ ಸದ್ಗುಣ ಮತ್ತು ನ್ಯಾಯದೃಷ್ಟಿ. ಸ್ವಾತಂತ್ರಾ್ಯನಂತರದ ಎಪ್ಪತ್ತೈದು ವರ್ಷಗಳಲ್ಲಿ, ನಾವು ಈ ಆದರ್ಶಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಬಹು ದೂರ ನಡೆದಾಗಿದೆಯಲ್ಲವೇ? ಆದರೂ ನಾವು ಇಂತಹ ಆದರ್ಶದ ಕಡೆಗೆ ಆಗಾಗ ನೋಡುವುದನ್ನಾದರೂ ಮಾಡುತ್ತಿರಬೇಕು!

ಹಲವಾರು ಶತಮಾನಗಳಿಂದ ದೇಶಗಳು ಅಭಿವೃದ್ಧಿ ಸಾಧಿಸುವ ಸ್ಪರ್ಧೆಯಲ್ಲಿ ಹೆಣಗುತ್ತಲೇ ಇವೆ. ಆದರೆ, ವಸಾಹತುಶಾಹಿ ಯುಗವು ತಂದ ಔದ್ಯಮಿಕ ಕ್ರಾಂತಿ ಮತ್ತು ಆಧುನಿಕ ಯುದ್ಧ ಶಸ್ತ್ರಾಸ್ತ್ರಗಳಿಂದಾಗಿ ತದನಂತರ ಈ ಸ್ಪರ್ಧೆ ಉಲ್ಬಣಗೊಂಡಿದೆ. ಇಂದು ಅಧಿಕ ಜಿಡಿಪಿಯೊಂದಿಗೆ ಉತ್ತಮ ಜೀವನ ಮಟ್ಟವನ್ನು ಸಾಧಿಸಿರುವ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕ ಅಸಮಾನತೆಯ ವಿಷಮತೆ ಹಲವು ಸಂಕೀರ್ಣ ಸಮಸ್ಯೆಗಳನ್ನು ಸೃಷ್ಟಿಸಿರುವುದನ್ನು ನಾವು ಕಾಣಬಹುದು. ಉಳ್ಳವರೂ ಸುಖವಾಗಿಲ್ಲ, ಉಳ್ಳದಿರುವವರೂ ಸುಖವಾಗಿಲ್ಲ! ನೈತಿಕ ದಿವಾಳಿಖೋರತನದಿಂದಾಗಿ ಹಲವು ಸಂಪದ್ಭರಿತ ದೇಶಗಳು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಈ ದೇಶಗಳಲ್ಲಿ ಅತಿ ಹೆಚ್ಚಿನ ವಿದ್ಯಾವಂತ ವ್ಯಕ್ತಿಗಳನ್ನೂ ಹಾಗೂ ಅಸಂಖ್ಯಾತ ಮುರಿದುಬಿದ್ದ ಕುಟುಂಬಗಳನ್ನೂ ಒಟ್ಟಿಗೇ ಕಾಣಬಹುದು; ಅತ್ಯಂತ ಮುಂದುವರಿದ ತಂತ್ರಜ್ಞಾನದ ಜತೆಗೇ ಅತಿ ಹೀನಾಯವಾದ ಮಾನವೀಯ ಸಂಬಂಧಗಳನ್ನೂ ನೋಡಬಹುದು; ಜಗತ್ತಿನಲ್ಲೇ ಅತ್ಯುನ್ನತ ಮಟ್ಟದ ಮೂಲ-ಸೌಕರ್ಯಗಳೊಂದಿಗೆ, ಮಾರಕ ಪರಿಸರ ಸಮಸ್ಯೆಗಳು ತಾಂಡವವಾಡುತ್ತಿರುವುದನ್ನು ಅವಲೋಕಿಸಬಹುದು; ಅಲ್ಲಿ ಲೌಕಿಕ ಸಂಪತ್ತಿನ ಜತೆಜತೆಗೇ ಆಧ್ಯಾತ್ಮಿಕ ದಾರಿದ್ರ್ಯವು ಮನೆಮಾಡಿಕೊಂಡಿದ್ದು, ಸುಖ-ಶಾಂತಿಗಳು ಬಹು ದೂರದ ಕನಸುಗಳಾಗಿವೆ! ಇಂತಹ ಅಭಿವೃದ್ಧಿಯನ್ನು ಸಾಧಿಸಲು ದೇಶಗಳು ಹೆಣಗಬೇಕಾದ ಅಗತ್ಯವಿದೆಯೇ? ಎಂಬ ಪ್ರಶ್ನೆ ಇಂದು ದೈತ್ಯಾಕಾರದಲ್ಲಿ ಎದ್ದುನಿಂತಿದೆ!

ಅದರ ಬದಲಿಗೆ, ರಾಮಾಯಣದಲ್ಲಿ ಕಂಡುಬರುವ ರಾಮರಾಜ್ಯದಂತಹ ಅಭಿವೃದ್ಧಿ ಹೊಂದಿದ ದೇಶವು ಭಾರತದ ಆದರ್ಶವಾದರೆ ಒಳಿತಲ್ಲವೇ? ಈ ಆದರ್ಶವು ನಮ್ಮ ವಿಚಾರ ಮತ್ತು ಪರಿಶ್ರಮಗಳನ್ನು ಸರಿಯಾದ ದಿಶೆಗೆ ತಿರುಗಿಸಿ, ನಾವು ನಿಜವಾದ ಅಮೃತಮಯ ಭಾರತವನ್ನು ನಿರ್ವಿುಸಬಹುದಲ್ಲವೇ? ಇಂತಹ ಅಮರ ಭಾರತದಲ್ಲಿ ಲೌಕಿಕ ಅಭಿವೃದ್ಧಿಯು, ಪ್ರಜೆಗಳಲ್ಲಿ ನ್ಯಾಯೋಚಿತ ಮನೋಭಾವನೆಯನ್ನು, ಕುಟುಂಬದಲ್ಲಿ ಶಾಂತಿ-ಆನಂದಗಳನ್ನು, ಸಮಾಜದಲ್ಲಿ ಭದ್ರತೆ-ಸಮರಸ ಹಾಗೂ ಕಾನೂನು-ಸುವ್ಯವಸ್ಥೆಗಳನ್ನು ಮತ್ತು ಭುವಿಯಲ್ಲಿ ಹವಾಮಾನ-ಪರಿಸರಗಳನ್ನು ಬಲಿ ತೆಗೆದುಕೊಳ್ಳಬೇಕಾದ ಅಗತ್ಯವಿರುವುದಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ, ಈ ರೀತಿಯಲ್ಲಿ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಪ್ರಜೆಗಳು ಲೋಭಪ್ರೇರಿತ ತಳಮಳದ ಜೀವನವನ್ನು ನಡೆಸುವುದನ್ನು ಬಿಟ್ಟು, ತಮ್ಮ ಅವಶ್ಯಕತೆಗಳಿಗನುಗುಣವಾಗಿ ಶಾಂತಿಮಯ ಜೀವನ ನಡೆಸಬಹುದು.

ನಮ್ಮ ದೇಶವು ಇನ್ನು ಕೆಲ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವುದರಲ್ಲಿ ನನಗೆ ಸಂದೇಹವಿಲ್ಲ. ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ಆರ್ಥಿಕತೆ 25 ಟ್ರಿಲಿಯನ್ ತಲುಪಿದರೂ ಆಶ್ಚರ್ಯವಿಲ್ಲ. ಆದರೆ, ರಾಮಾಯಣದ ರಾಮರಾಜ್ಯದ ಆದರ್ಶಗಳು ಕಾರ್ಯಗತವಾಗದಿದ್ದಲ್ಲಿ, ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗುವುದಿಲ್ಲ. ಇದರ ಬಗ್ಗೆ ನಮ್ಮ ದೇಶದ ನಾಯಕರಿಂದ ಹಿಡಿದು ಕೊನೆಯ ಪ್ರಜೆಯವರೆಗೆ ಎಲ್ಲರೂ ಯೋಚಿಸಬೇಕಾದ ಕಾಲ ಸನ್ನಿಹಿತವಾಗಿದೆ. ಅಂತಹ ಸರ್ವಾಗೀಣ ಅಭಿವೃದ್ಧಿ ಮಾತ್ರ ಸನಾತನ ಧರ್ಮದ ತತ್ತ್ವಗಳ ಭದ್ರ ಬುನಾದಿಯ ಮೇಲೆ ನಮ್ಮ ದೇಶವನ್ನು ಚಿರಕಾಲ ವಿಶ್ವಗುರುವನ್ನಾಗಿ ಸ್ಥಾಪಿಸಬಹುದು.

‘ಕಾಲಕಾಲಕ್ಕೆ ಮಳೆ-ಬೆಳೆಗಳಾಗಲಿ. ಧರೆಯು ಸದಾ ಸಸ್ಯಶ್ಯಾಮಲೆಯಾಗಿರಲಿ. ಸರ್ವರೂ ಸುಖವಾಗಿದ್ದು, ಸಜ್ಜನರು ನಿರ್ಭಯವಾಗಿ ಬದುಕುವಂತಾಗಲಿ. ಆಳುವವರು ಧರ್ಮಪರರಾಗಿದ್ದು, ದೇಶಗಳನ್ನು ನ್ಯಾಯೋಚಿತವಾಗಿ ಆಳಲಿ. ಸರ್ವ ಜೀವರಾಶಿಗಳಿಗೂ ಭದ್ರತೆ-ರಕ್ಷಣೆಗಳಿರಲಿ. ವಿಶ್ವವು ಸುಖ-ಶಾಂತಿಗಳಿಂದ ತುಂಬಿ ತುಳಕುವಂತಾಗಲಿ!’ ಇದು ಭಾರತದ ಒಂದು ಪ್ರಾಚೀನ ಪ್ರಾರ್ಥನೆ!

ಕಾಲೇ ವರ್ಷತು ಪರ್ಜನ್ಯಃ ಪೃಥ್ವೀ ಸಸ್ಯಶಾಲಿನೀ|
ದೇಶೋಯಂ ಕ್ಷೋಭರಹಿತಃ ಬ್ರಾಹ್ಮಣಾಃ ಸಂತು ನಿರ್ಭಯಾಃ|
ಓಂ ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೆಣ ಮಹೀಂ ಮಹೀಶಾಃ|
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾ ಸುಖಿನೋ ಭವಂತು||

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net