ಸನಾತನ ಧರ್ಮದಲ್ಲಿ ಸ್ತ್ರೀಶಕ್ತಿಯ ಆರಾಧನೆ

Edit
Published on

ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು

ಅನಾದಿ ಕಾಲದಿಂದಲೂ ಸನಾತನ ಧರ್ಮವು ಸ್ತ್ರೀಶಕ್ತಿಯ ಹಲವು ದಿವ್ಯ ಗುಣಗಳನ್ನು ಪುರಸ್ಕರಿಸಿ ಅದಕ್ಕೆ ಬಹು ಪ್ರಾಧಾನ್ಯ ನೀಡುತ್ತಾ ಬಂದಿದೆ. ಶರದೃತುವಿನ ಆಶ್ವಯುಜ ಮಾಸದಲ್ಲಿ ಭಾರತದಾದ್ಯಂತ ಆಚರಿಸಲ್ಪಡುವ ದೇವೀನವರಾತ್ರಿಯು ಸ್ತ್ರೀಶಕ್ತಿಯ ಆರಾಧನೆಯ ಉತ್ತುಂಗ ಉತ್ಸವವಾಗಿದೆ.

ಈ ವರ್ಷವೂ ದೇಶದಾದ್ಯಂತ ನವರಾತ್ರಿಯು ಬಹು ಭಕ್ತಿಯಿಂದ ಆಚರಿಸಲ್ಪಟ್ಟು ಈಗ ತಾನೇ ಸಂಪನ್ನಗೊಂಡಿದೆ. ಈ ಉತ್ಸವವು ನಮ್ಮ ಆಧ್ಯಾತ್ಮಿಕ ಸಂಪ್ರದಾಯದ ಒಂದು ಅವಿಚ್ಛಿನ್ನ ಭಾಗವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ವೈಭವೋಪೇತವಾಗಿ ಆಚರಿಸಲ್ಪಡುವ ದುರ್ಗಾಪೂಜೆಗೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (UNESCO), ವಿಶ್ವ ಸಾಂಸ್ಕೃತಿಕ ಪರಂಪರೆಯ (World Cultural Heritage) ಮಾನ್ಯತೆಯನ್ನು ನೀಡಿದೆ. ಈ ಉತ್ಸವವು ಉತ್ತರ ಭಾರತದಲ್ಲಿ ಬಹು ವೈಭವೋಲ್ಲಾಸಗಳಿಂದ ಆಚರಿಸಲ್ಪಟ್ಟರೆ, ದಕ್ಷಿಣ ಭಾರತದಲ್ಲಿ ಶಾಂತ-ಗಂಭೀರವಾಗಿ ಆಚರಿಸಲ್ಪಡುತ್ತದೆ. ಇವೆರಡೂ ಸೃಷ್ಟಿಮೂಲ ಶಕ್ತಿಯನ್ನು ಸ್ತ್ರೀರೂಪದಲ್ಲಿ ಆರಾಧಿಸುವ ಭಕ್ತಿಯ ಎರಡು ಅಭಿವ್ಯಕ್ತಿಗಳಾಗಿವೆಯಷ್ಟೆ.

ಈ ಉತ್ಸವದ ಒಂಬತ್ತು ದಿನ-ರಾತ್ರಿಗಳಲ್ಲಿ, ನಮ್ಮ ಎಲ್ಲಾ ಲೌಕಿಕ ಹಾಗೂ ಆಧ್ಯಾತ್ಮಿಕ ಸಾಧನೆಗಳಿಗೆ ಅಗತ್ಯವಾದ ಇಚ್ಛಾಶಕ್ತಿ, ಮೇಧಾಶಕ್ತಿ ಮತ್ತು ಕ್ರಿಯಾಶಕ್ತಿಗಳನ್ನು ನಾವು ಮಾತೃರೂಪಗಳಲ್ಲಿ ಆರಾಧಿಸುತ್ತೇವೆ. ಇಚ್ಛಾಶಕ್ತಿಯನ್ನು ಮಹಾ ಲಕ್ಷ್ಮಿಯೆಂದೂ, ಮೇಧಾಶಕ್ತಿಯನ್ನು ಮಹಾ ಸರಸ್ವತಿಯೆಂದೂ ಹಾಗೂ ಕ್ರಿಯಾಶಕ್ತಿಯನ್ನು ಮಹಾ ಕಾಳಿಯೆಂದೂ ಪೂಜಿಸುತ್ತೇವೆ. ಈ ಮೂರು ಶಕ್ತಿಗಳನ್ನು ನಾವು ಸ್ತ್ರೀರೂಪಗಳಲ್ಲಿ ಸ್ತ್ರೀಲಕ್ಷಣಗಳನ್ನಾಗಿ ಕಂಡರೂ, ಈ ಮೂರೂ ಸ್ತ್ರೀ-ಪುರುಷರಿಗೆಲ್ಲರಿಗೂ ಬೇಕಾಗಿವೆಯಲ್ಲವೇ? ಇಚ್ಛಾಶಕ್ತಿಯೆಂದರೆ ಏನನ್ನಾದರೂ ಆಶಿಸಿ, ಅದನ್ನು ದೃಢ ಸಂಕಲ್ಪದಿಂದ ಸಾಧಿಸುವ ಛಲ; ಮೇಧಾಶಕ್ತಿಯೆಂದರೆ ವಿವೇಚಿಸಿ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ; ಕ್ರಿಯಾಶಕ್ತಿಯೆಂದರೆ ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸುವ ಶಕ್ತಿ. ಈ ಶಕ್ತಿಗಳಿಲ್ಲದಿದ್ದರೆ ಯಾವುದೇ ವ್ಯಕ್ತಿ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲವಷ್ಟೆ.

ಉದಾಹರಣೆಗೆ ಒಬ್ಬ ಕ್ರೀಡಾಪಟುವನ್ನು ತೆಗೆದುಕೊಳ್ಳೋಣ. ಮೊದಲಿಗೆ ಅವನಲ್ಲಿ ಯಾವುದೋ ಒಂದು ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲಬೇಕೆಂಬ ಆಸೆ ಮೂಡಿ, ಅದನ್ನು ಸಾಧಿಸಬೇಕೆಂಬ ಪ್ರಬಲ ಇಚ್ಛೆಯುಂಟಾಗಬೇಕು. ನಂತರ ವಿವೇಚನೆ ಮಾಡಿ ತನ್ನ ಆಸಕ್ತಿ ಮತ್ತು ಶಕ್ತಿಗೆ ಸರಿಹೊಂದುವ ಕ್ರೀಡೆಯನ್ನು ಆರಿಸಿಕೊಂಡು ಅದರಲ್ಲಿ ಪರಿಣತಿ ಪಡೆಯುವ ವಿಧಿ-ವಿಧಾನಗಳನ್ನು ಅರಿಯಬೇಕು. ಕೊನೆಗೆ ತಾನು ಅರಿತಿರುವುದನ್ನು ಶ್ರಮವಹಿಸಿ ಕಾರ್ಯರೂಪಕ್ಕೆ ತರಲು ಅಗತ್ಯವಾದ ತರಬೇತಿ ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲಬೇಕು. ಇನ್ನೊಂದು ಉದಾಹರಣೆ: ಧೂಮಪಾನ ಅಥವಾ ಮದ್ಯಪಾನದಂತಹ ಕೆಟ್ಟ ಚಟವನ್ನು ತ್ಯಜಿಸಬೇಕಾದರೂ, ಮನಸ್ಸಿನ ಸಂಕಲ್ಪಶಕ್ತಿ ಮತ್ತು ವಿವೇಚನೆಗಳ ಜೊತೆಗೆ ಅವುಗಳನ್ನು ಕಾರ್ಯರೂಪಕ್ಕೆ ತರುವ ಕ್ಷಮತೆಯೂ ಇರಬೇಕಲ್ಲವೇ? ಈ ಮೂರೂ ಇಲ್ಲದಿದ್ದರೆ, ಕೆಟ್ಟ ಚಟವನ್ನು ಬಿಟ್ಟುಬಿಡಬೇಕೆನ್ನುವ ಆಸೆಯು ಕನಸೇ ಸರಿ! ಹೀಗೆ ಈ ಮೂರೂ ಶಕ್ತಿಗಳು ಜೀವನದಲ್ಲಿ ಎಲ್ಲಾ ಸಾಧನೆಗಳಿಗೂ ಅತ್ಯಗತ್ಯವಾಗಿವೆ.

ಆದರೆ, ಈ ಮೂರು ಗುಣಗಳನ್ನು ಸ್ತ್ರೀಲಕ್ಷಣಗಳನ್ನಾಗಿ ಪರಿಗಣಿಸಿ ಅವುಗಳನ್ನು ದೇವೀರೂಪಗಳಲ್ಲಿ ಆರಾಧಿಸಲು ಕಾರಣವೇನು? ಅವುಗಳನ್ನು ಪುರುಷಲಕ್ಷಣಗಳೆಂದು ಪರಿಗಣಿಸಿ ದೇವರೂಪಗಳಲ್ಲಿ ಏಕೆ ಪೂಜಿಸಬಾರದೆಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು! ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಜೀವಲೋಕದ ಒಂದು ಸರಳ ಅವಲೋಕನವೇ ಸಾಕು. ಯಾವುದೇ ಜೀವರಾಶಿಯಲ್ಲಿ ಸ್ತ್ರೀಜಾತಿಗೆ ಮಾತ್ರ ತಾಯ್ತನದ ತ್ಯಾಗದ ಹಿರಿಮೆ-ಗರಿಮೆಗಳಿವೆ! ವಂಶೋತ್ಪತ್ತಿಯನ್ನು ಮಾಡಿ ಮುಂದಿನ ತಲೆಮಾರನ್ನು ಸೃಷ್ಟಿಸುವ ಕಾರ್ಯದಲ್ಲಿ ತಾಯಿಯೇ ಹೆಚ್ಚಿನ ನೋವನ್ನು ಸಹಿಸಿ ಜನ್ಮನೀಡಿ, ಶಿಶುವಿನ ಪಾಲನೆ-ಪೋಷಣೆ-ರಕ್ಷಣೆಗಳಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾಳಲ್ಲವೇ? ತಂದೆಯ ಪಾತ್ರವೂ ಈ ಪ್ರಕ್ರಿಯೆಯಲ್ಲಿ ಇರುವುದು ನಿಜ; ಆದರೆ ಇಬ್ಬರ ಪಾತ್ರಗಳ ತುಲನೆ ಮಾಡಿದಾಗ, ತಾಯ್ತನದ ಮಹತ್ವವು ಸುಲಭವಾಗಿ ಅರ್ಥವಾಗುತ್ತದೆ. ಈ ಸತ್ಯವನ್ನು ನಾವು ನಮ್ಮ ವಿಶ್ವದ ಸೃಷ್ಟಿಯ ಪ್ರಕ್ರಿಯೆಗೂ ಅನ್ವಯಿಸಬಹುದು. ‘ಜಗತಃ ಪಿತರೌ ವಂದೇ ಪರ್ವತೀ-ಪರಮೇಶ್ವರೌ’ ಎಂದು ಮಹಾಕವಿ ಕಾಳಿದಾಸನು ಉದ್ಗರಿಸಿದ್ದಾನೆ.

‘ಜಗತ್ತಿನ ಮಾತಾ-ಪಿತೃಗಳಾದ ಪಾರ್ವತೀ-ಪರಮೆಶ್ವರರಿಗೆ ವಂದಿಸುತ್ತೇನೆ’ ಎಂದಾಗ, ತಾಯ್ತನದ ಹಿರಿಮೆಯಿಂದಾಗಿ ಪಾರ್ವತೀ ಮಾತೆಯ ಹೆಸರನ್ನೇ ಮೊದಲು ಹೇಳಿದ್ದಾನೆ! ಜಗತ್ತಿನ ಹೆಚ್ಚಿನ ಪ್ರಾಚೀನ ಸಂಸೃ್ಕಗಳಲ್ಲಿ ಪುರುಷ-ದೇವರುಗಳಿರುವಂತೆ, ಸ್ತ್ರೀ-ದೇವತೆಗಳೂ ಇದ್ದಾರೆ. ಆದರೆ, ಭಾರತೀಯ ಸಂಸೃ್ಕಯಲ್ಲಿ ಮಾತ್ರ, ಸೃಷ್ಟಿಮೂಲ ಪರಮೋಚ್ಚ ಶಕ್ತಿಯನ್ನು ಸ್ತ್ರೀ-ರೂಪದಲ್ಲಿ ಮಾತೆಯಾಗಿ ಆರಾಧಿಸುವ ಸಂಪ್ರದಾಯವಿದೆ. ದೇವೀ ಮಹಾತ್ಮೆಯಲ್ಲಿ ಘೊಷಿಸಿರುವಂತೆ, ‘ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ, ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ’- ‘ಯಾವ ದೇವಿಯು ಸರ್ವ ಜೀವಿಗಳಲ್ಲಿ ಶಕ್ತಿರೂಪಿಣಿಯಾಗಿ ಸ್ಥಿತಳಾಗಿದ್ದಾಳೆಯೋ, ಆ ದೇವಿಗೆ ಪುನಃ ಪುನಃ ನಮಸ್ಕರಿಸುತ್ತೇನೆ.’ ಇಲ್ಲಿ ನಾವು ಗಮನಿಸಬೇಕಾದ ಒಂದು ಮುಖ್ಯ ವಿಷಯವೆಂದರೆ, ಜಗನ್ಮಾತೆಯು ಶಕ್ತಿರೂಪದಲ್ಲಿ ಸ್ತ್ರೀ-ಪುರುಷ ಭೇದವಿಲ್ಲದೆ ಎಲ್ಲಾ ಜೀವಿಗಳಲ್ಲಿಯೂ ವ್ಯಕ್ತವಾಗಿದ್ದಾಳೆ. ನವರಾತ್ರಿ ಉತ್ಸವವು ನಮ್ಮೆಲ್ಲರಲ್ಲಿಯೂ ಇರುವ ಇಂತಹ ಶಕ್ತಿಸ್ವರೂಪಿಣಿಯ ಆರಾಧನೆಯಾಗಿದೆ.

ಮೇಲಿನ ಸಿದ್ಧಾಂತವನ್ನು ಕೇವಲ ಅಕ್ಷರಶಃ ಅರ್ಥ ಮಾಡಿಕೊಂಡ (ಅಥವಾ ಅಪಾರ್ಥ ಮಾಡಿಕೊಂಡ) ಕೆಲವರು, ಸ್ತ್ರೀಯರು ಪುರುಷರಿಗಿಂತ ಹೆಚ್ಚು ಶಕ್ತಿಶಾಲಿಗಳೆಂದೂ, ಅವರು ತಮ್ಮ ಅಂತರಂಗದಲ್ಲಿರುವ ದಿವ್ಯ ಶಕ್ತಿಗಳನ್ನು ಜೀವನದಲ್ಲಿ ಸಾಕಾರಗೊಳಿಸಿಕೊಂಡು ಹೆಚ್ಚು ಶಕ್ತಿಶಾಲಿಗಳಾಗಬೇಕೆಂದೂ ವಾದಿಸುವುದುಂಟು. ಆದರೆ, ಇದು ಸರಿಯಲ್ಲ. ಸ್ತ್ರೀಯಾಗಿ ಜನಿಸಿದ ಕೂಡಲೇ ಯಾರೂ ಶಕ್ತಿಶಾಲಿಗಳೂ ಆಗುವುದಿಲ್ಲ, ಅಥವಾ ಅಬಲೆಯರೂ ಆಗುವುದಿಲ್ಲ. ಆದ್ದರಿಂದ ಸ್ತ್ರೀಶಕ್ತಿಯ ಆರಾಧನೆಯ ಸಿದ್ಧಾಂತದ ನಿಜಾರ್ಥವನ್ನು ನಾವು ಯಾವುದೇ ಪೂರ್ವಾಗ್ರಹಪೀಡಿತರಾಗದೆ ಗ್ರಹಿಸಬೇಕು. ಜಗತ್ತಿನ ಹೆಚ್ಚಿನ ಮಾನವ ಸಮುದಾಯಗಳಲ್ಲಿ ಸ್ತ್ರೀಯರು ಕಡೆಗಣಿಸಲ್ಪಟ್ಟ ಹಾಗೂ ಶೋಷಿತ ವರ್ಗವಾಗಿರುವ ಇಂದಿನ ಪರಿಸ್ಥಿತಿಯಲ್ಲಿ, ಈ ಸಿದ್ಧಾಂತದಿಂದ ಅವರು ಸ್ಪೂರ್ತಿ-ಶಕ್ತಿಗಳನ್ನು ಪಡೆದುಕೊಂಡು ಜೀವನದಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡಬಹುದಾಗಿದೆ.

ಸ್ತ್ರೀಶಕ್ತಿಯನ್ನು ಮಾತೃಸ್ವರೂಪಿಣಿಯಾಗಿ ಕಂಡು ಗೌರವಿಸುವ ಪದ್ಧತಿಯು ಭಾರತ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಶಾಸ್ತ›ಗಳು, ಮಾತೃ ದೇವೋ ಭವ, ತಾಯಿಯೇ ದೇವರು ಎಂದು ಘೊಷಿಸಿವೆ ಹಾಗೂ ಸಮಾಜದ ಪ್ರಗತಿಗೆ ಸ್ತ್ರೀಯರ ಕೊಡುಗೆಯನ್ನು ಎಲ್ಲರೂ ಗುರುತಿಸಿ ಗೌರವಿಸಬೇಕೆಂದು ಸದಾ ಸಾರುತ್ತಲೇ ಇವೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ. ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ಹರ್ಷಿಸುತ್ತಾರೆ ಎಂಬುದು ನಮ್ಮ ಸಂಸೃ್ಕಯ ಒಂದು ಮುಖ್ಯ ನಾಣ್ಣುಡಿ. ಸ್ತ್ರೀಯರಿಗೆ ಯೋಗ್ಯ ಮನ್ನಣೆ ಮತ್ತು ಗೌರವಗಳು ದೊರೆಯುವ ಸಮಾಜದಲ್ಲಿ ಸರ್ವವೂ ಶುಭಕರವಾಗಿ ನಡೆಯುತ್ತದೆಯೆಂಬುದು ಇದರ ಅರ್ಥ. ಅನೂಚಾನ ಕಾಲದಿಂದಲೂ ಸ್ತ್ರೀಯರಿಗೆ ಇಷ್ಟು ಪ್ರಾಧಾನ್ಯ ನೀಡುತ್ತಿರುವ ಸಂಸೃ್ಕಯಿರುವ ನಮ್ಮ ದೇಶದಲ್ಲಿ, ವಾಸ್ತವ ಸ್ಥಿತಿ ಅವಲೋಕಿಸಿದಾಗ ನಾವು ನಾಚಿಕೊಳ್ಳಬೇಕಾಗಿದೆಯಲ್ಲವೇ? ನಾರಿಯರಿಗೆ ಯೋಗ್ಯವಾದ ಸ್ಥಾನ ಮತ್ತು ಅವಕಾಶಗಳನ್ನು ಕಲ್ಪಿಸುವ ದಿಶೆಯಲ್ಲಿ ನಾವು ಸಾಕಷ್ಟು ಶ್ರಮಿಸಬೇಕಾಗಿದೆ.

ಭಾರತದಲ್ಲಿ ಸ್ತ್ರೀ-ಪುರುಷ ಸಂಖ್ಯೆಯ ಅನುಪಾತವು ಪ್ರಸ್ತುತ 929: 1000 ಆಗಿರುವುದು ನಮಗೆ ಶೋಭೆ ತರುವ ಸಂಗತಿಯಲ್ಲ. ವಿಶ್ವ ಆರ್ಥಿಕ ವೇದಿಕೆಯ ಲಿಂಗ ಸಮಾನತೆ ಶ್ರೇಯಾಂಕದ ಅಂಕಿ-ಅಂಶಗಳ ಪ್ರಕಾರ, ಭಾರತವು 146 ದೇಶಗಳ ಪೈಕಿ 135 ನೇ ಸ್ಥಾನದಲ್ಲಿದೆ! ಗ್ರಾಮೀಣ ಬಾಲಕಿಯರ ಪೈಕಿ ನೂರರಲ್ಲಿ ಒಬ್ಬರು ಮಾತ್ರ ಇಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮುಂದುವರಿಸುತ್ತಿದ್ದಾರೆ. ಒಂದು ಲಕ್ಷ ಗರ್ಭಿಣಿಯರ ಪೈಕಿ 100 ರಿಂದ 130 ಮಂದಿ ವಿವಿಧ ಸಮಸ್ಯೆಗಳಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಎಂದರೆ ಒಂದು ವರ್ಷದಲ್ಲಿ 25,000 ಗರ್ಭಿಣಿಯರು ನಮ್ಮ ದೇಶದಲ್ಲಿ ಮರಣಿಸುತ್ತಿದ್ದಾರೆ!

ನಾವು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಆರೋಗ್ಯ ಸೇವಾ ಮತ್ತು ಇತರ ಸಂಸ್ಥೆಗಳ ಮೂಲಕ ಸ್ತ್ರೀಯರ ಪ್ರಗತಿ ಹಾಗೂ ಜೀವನ ಸುಧಾರಣೆಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದೇವೆ. ಇದು ನಮ್ಮ ಸ್ತ್ರೀಶಕ್ತಿಯ ಆರಾಧನೆಯ ವಿಧಾನವಾಗಿದೆ. ಪ್ರಾಥಮಿಕ 6ನೇ ತರಗತಿಯಿಂದ ಪ್ರಾರಂಭಿಸಿ ವಿಶ್ವವಿದ್ಯಾಲಯದವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಬಾಲಕಿಯರಿಗೆ ದಾಖಲಾತಿಯಲ್ಲಿ ಆದ್ಯತೆ ಕೊಡುತ್ತಿದ್ದೇವೆ. ಅಲ್ಲದೆ, ಶಿಕ್ಷಣದ ನಂತರ ಅವರಿಗೆ ನಮ್ಮ ಶಿಕ್ಷಣ ಮತ್ತು ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಕಲ್ಪಿಸುತ್ತಿದ್ದೇವೆ. ದೇಶದಾದ್ಯಂತ ಹಲವು ಶ್ರೀ ಸತ್ಯಸಾಯಿ ಸಂಜೀಜಿನಿ ತಾಯಿ-ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಿ ತನ್ಮೂಲಕ ತಾಯಂದಿರ ಹಾಗೂ ಮಕ್ಕಳ ಪ್ರಾಣಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲದೆ, ಸಾಯಿ ಶ್ಯೂರ್ ಬಹು ಪೋಷಕಾಂಶ ಕಾರ್ಯಕ್ರಮದ ಮೂಲಕ ವಿವಾಹಿತ ಹಾಗೂ ಗರ್ಭಿಣಿಯರ ತಾಯ್ತನದ ಅನುಭವವನ್ನು ಆರೋಗ್ಯಕರ ಮತ್ತು ಸುಖಪ್ರದವಾಗಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ.

ಸ್ತ್ರೀಶಕ್ತಿಯ ದಿವ್ಯತೆಯ ಅಧಿದೇವತೆಯಾಗಿರುವ ಜಗನ್ಮಾತೆಯು ಸರ್ವರಿಗೂ, ಸ್ತ್ರೀ-ಪುರುಷರನ್ನು ಸಮಾನವಾಗಿ ಗೌರವಿಸುವ ಸಮಾಜವನ್ನು ನಿರ್ವಿುಸಲು ಅಗತ್ಯವಾದ ಇಚ್ಛಾಶಕ್ತಿ, ಮೇಧಾಶಕ್ತಿ ಮತ್ತು ಕ್ರಿಯಾಶಕ್ತಿಗಳನ್ನು ಅನುಗ್ರಹಿಸಲಿ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net