

ಅಮೆರಿಕ ಜಾಗತಿಕವಾಗಿ ಶಸ್ತ್ರಾಸ್ತ್ರಗಳ ಅತಿ ದೊಡ್ಡ ಉತ್ಪಾದಕ ಹಾಗೂ ನಿರಯಾತಕ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅಮೆರಿಕನ್ ಯುದ್ಧೋಪಕರಣಗಳ ಗುಣಮಟ್ಟ ಸಹ ಜಾಗತಿಕವಾಗಿ ಉತ್ತಮವೇ. ಹೀಗಿರುವಾಗ ಇಂದು ಭಾರತದಿಂದ ಬೇಕೆಂದ ಕೂಡಲೇ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಅಗತ್ಯ ಅಮೆರಿಕಕ್ಕೆ ಹೇಗೆ, ಏಕೆ ಬಂದಿದೆ? ಉತ್ತರ ಸರಳ. ಇಂದಿನ ಜಾಗತಿಕ ಸ್ಥಿತಿಯ ಹಲವು ಕಾರಣಗಳು ಹಾಗೂ ಹಲವು ಪಾತ್ರಧಾರಿಗಳಿಂದ ಉದ್ರಿಕ್ತವಾಗಿರುವ ಕಾರಣ ಅಮೆರಿಕದ ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ದಿನೇದಿನೇ ಒತ್ತಡ ಅಧಿಕವಾಗುತ್ತಿದೆ. ಯುದ್ಧನಿರತ ಇಸ್ರೇಲ್ ಮತ್ತು ಯೂಕ್ರೇನ್, ಯುದ್ಧದ ಆತಂಕದಲ್ಲಿರುವ ತೈವಾನ್, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್ಗಳಗೆ ಅಧಿಕ ಪ್ರಮಾಣದ ಯುದ್ಧೋಪಕರಣಗಳನ್ನು ಅಮೆರಿಕ ಒದಗಿಸುತ್ತಿದೆ. ಜತೆಗೆ ಕಳೆದೆರಡು ವರ್ಷಗಳಿಂದ ರಷ್ಯಾದೊಂದಿಗೆ ವಿರಸ ಕಟ್ಟಿಕೊಂಡಿರುವ ಯೂರೋಪಿಯನ್ ನ್ಯಾಟೋ ಸದಸ್ಯದೇಶಗಳ ರಕ್ಷಣೆಯತ್ತಲೂ ಅದು ಗಮನ ತೆಗೆಯಲಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಅಮೆರಿಕಕ್ಕೆ ಹಲವು ಬಗೆಯ ಶಸ್ತ್ರಾಸ್ತ್ರಗಳ ಅಗತ್ಯ ದೊಡ್ಡದಾಗಿಯೇ ತಲೆದೋರಿದೆ. ಅವುಗಳನ್ನು ತನ್ನಲ್ಲಿ ಉತ್ಪಾದಿಸುವುದಕ್ಕಿಂತಲೂ ಉತ್ಪಾದನೆಯಾಗಿರುವ ಇತರೆಡೆಗಳಿಂದ ತಕ್ಷಣ ಖರೀದಿಸುವುದು ಅನುಕೂಲಕರ ಎನ್ನುವುದನ್ನು ಪೆಂಟಗನ್ ಮನಗಂಡಿದೆ. ಈ ನಿಟ್ಟಿನಲ್ಲಿ ಅದು ಭಾರತದಿಂದ ಬಯಸುವ ಯುದ್ಧೋಪಕರಣಗಳಲ್ಲಿ, ರಕ್ಷಣಾ ವಿಶ್ಲೇಷಕರ ಪ್ರಕಾರ, ಪ್ರಮುಖ ಸ್ಥಾನದಲ್ಲಿರುವುದು ‘155ಎಂಎಂ’ ಶೆಲ್ಗಳು. ಅವುಗಳನ್ನು ಅಮೆರಿಕಕ್ಕೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಪೂರೈಸುವ ಸ್ಥಿತಿಯಲ್ಲಿ ಭಾರತ ಇದೆ. ಈ ಒಪ್ಪಂದದ ಪ್ರಕಾರ ಇನ್ನು ಮುಂದೆ ಅಮೆರಿಕದ ರಕ್ಷಣಾ ಇಲಾಖೆ ಶೆಲ್ಗಳ ಜತೆ ಭಾರತ ಒದಗಿಸಬಹುದಾದ ಇತರ ಶಸ್ತ್ರಾಸ್ತ್ರಗಳನ್ನು ಹೆಚ್ಚು ವ್ಯವಸ್ಥೀಯ ತಡೆಗಳಿಲ್ಲದೆ ಪಡೆದುಕೊಳ್ಳಬಹುದು. ಮೋದಿಯವರ ‘ಮೇಕ್ ಇನ್ ಇಂಡಿಯಾ’ ಮತ್ತು ಯುದ್ಧ ಉಪಕರಣಗಳ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತದ ಸ್ಥಾನವನ್ನು ಜಾಗತಿಕವಾಗಿ ಮೇಲಕ್ಕೇರಿಸುವ ಯೋಜನೆಗಳಿಗೆ ಈ ಒಪ್ಪಂದ ದೊಡ್ಡದಾಗಿ ಸಹಕಾರಿಯಾಗಬಲ್ಲುದು. ಜತೆಗೆ ನಮಗೆ ಬೇಕಾದ ಅತ್ಯಾಧುನಿಕ ಯುದ್ಧೋಪಕರಣಗಳನ್ನು ಅಮೆರಿಕದಿಂದ ಪಡೆದುಕೊಳ್ಳುವುದು ನಮಗೆ ಸಾಧ್ಯವಾಗುತ್ತದೆ.
ಸದ್ಯದ ನಮ್ಮ ಪರಿಸ್ಥಿತಿ ಹೇಗಿದೆಯೆಂದರೆ ನಮ್ಮ ರಕ್ಷಣಾಪಡೆಗಳ 68% ಅಗತ್ಯಗಳು ಪೂರೈಕೆಯಾಗುತ್ತಿರುವುದು ರಷ್ಯಾದಿಂದ. ರಷ್ಯನ್ ಯುದ್ಧೋಪಕರಣಗಳ ಗುಣಮಟ್ಟದ ಮಿತಿಯನ್ನು ನಾವಿಂದು ಯೂಕ್ರೇನ್ನಲ್ಲಿ ನೋಡುತ್ತಲೇ ಇದ್ದೇವೆ. ರಷ್ಯನ್ ಟ್ಯಾಂಕ್ಗಳನ್ನು ಯೂಕ್ರೇನಿಯನ್ನರು ಅಮೆರಿಕದ ಜಾವೆಲಿನ್ ಕ್ಷಿಪಣಿಗಳಿಂದ ನಾಶಗೊಳಿಸಬಹುದಾದರೆ ನಮ್ಮಲ್ಲಿರುವ ರಷ್ಯನ್ ನಿರ್ವಿುತ ಟಿ-72 ಮತ್ತು ಟಿ-90 ಯುದ್ಧ ಟ್ಯಾಂಕ್ಗಳು ನಮಗೆಷ್ಟು ಉಪಯುಕ್ತ? ಅವುಗಳ ಜತೆಗೆ ಇತರ ರಷ್ಯನ್ ಯುದ್ಧೋಪಕರಣಗಳನ್ನು ಬಳಸಿ ನಾವು ಚೀನಾದೊಂದಿಗಿನ ಯುದ್ಧವನ್ನು ಜಯಿಸಬಹುದೇ? ರಷ್ಯನ್ ನಿರ್ವಿುತ ಎಸ್-400 ಕ್ಷಿಪಣಿ ನಿರೋಧಕಗಳ ಗುಣಮಟ್ಟ ಜಾಗತಿಕವಾಗಿ ಉತ್ತಮ, ನಿಜ. ಆದರೆ ಐದು ಎಸ್-400 ಸಿಸ್ಟಂಗಳಿಗಾಗಿ ನಾವು 2019ರಲ್ಲೇ ಮಾಡಿಕೊಂಡ ಒಪ್ಪಂದಕ್ಕೆ ಬದ್ಧವಾಗಿ ರಷ್ಯಾ ನಡೆದುಕೊಂಡಿಲ್ಲ. ಇದುವರೆಗೆ ಅದು ಪೂರೈಸಿರುವುದು ಮೂರನ್ನು ಮಾತ್ರ. ಎರಡು ವರ್ಷಗಳ ಹಿಂದೆಯೇ ಬರಬೇಕಾಗಿದ್ದ ಉಳಿದೆರಡು ಬರುವುದು ಇನ್ನೆರಡು ವರ್ಷಗಳಿಗಂತೆ. ಅದೂ ಅನುಮಾನವೇ. ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನಮ್ಮ ಮೋದಿಯವರ ಘನಿಷ್ಟ ಮಿತ್ರ ಹಾಗೂ ಭಾರತದ ನಿಜವಾದ ಹಿತೈಷಿ, ನಿಜ. ಆದರೆ ಯೂಕ್ರೇನ್ ಯುದ್ಧ ಹಾಗೂ ಪಶ್ಚಿಮದ ದೇಶಗಳು ವಿಧಿಸಿರುವ ಆರ್ಥಿಕ ದಿಗ್ಬಂಧನಗಳು ಅವರ ಕೈಗಳನ್ನು ಕಟ್ಟಿಹಾಕಿಬಿಟ್ಟಿವೆ. ಹೀಗಾಗಿ ಸದ್ಯದ ಸನ್ನಿವೇಶದಲ್ಲಿ ಅವರ ಒಳ್ಳೆಯ ಮಾತುಗಳಷ್ಟೇ ನಮಗೆ ಪ್ರಯೋಜನಕ್ಕೆ ಬರಲಾರವು. ಗಾಣಗ ಸುಮ್ಮನೆ ಅಯ್ಯೋ ಪಾಪ ಅಂದರೆ ನಮ್ಮ ನೆತ್ತಿ ತಂಪಾಗುತ್ತದೆಯೇ? ಅವನು ನಮ್ಮ ನೆತ್ತಿ ತಂಪಾಗಿಸಲು ಬೇಕಾದ ಎಣ್ಣೆ ಕೊಡಬೇಕಲ್ಲವೇ?
ಹೀಗಾಗಿ ಇಂದು ನಾವಿರುವ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಮೆರಿಕ ಜತೆ ಉತ್ತಮ ರಕ್ಷಣಾ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವುದು ನಮಗೆ ಹಿತಕಾರಿ. ಇಲ್ಲಿ ಅಮೆರಿಕ ಹಿಂದೆ ಹಾಗೆ ಮಾಡಿತು, ಹೀಗೆ ಮಾಡಿತು, ನಮಗೆ ಕೊಡದೇ ಪಾಕಿಸ್ತಾನಕ್ಕೆ ಕೊಟ್ಟಿತು, ಅದನ್ನು ಕೊಬ್ಬಿಸಿತು ಎಂದೆಲ್ಲ ಹಲುಬುವುದು ಮೂರ್ಖತನ. ನಿಜ ಹೇಳಬೇಕೆಂದರೆ ಹಿಂದೆಲ್ಲ ಅಮೆರಿಕ ನಮ್ಮನ್ನು ನಿರ್ಲಕ್ಷಿಸಿದ್ದಕ್ಕೆ ಹೆಚ್ಚಿನ ಜಬಾಬ್ದಾರಿ ನಮ್ಮದೇ. ಚೀನಾ ಬಗ್ಗೆ ಅಮೆರಿಕ ಅದೆಷ್ಟು ಎಚ್ಚರಿಕೆ ಹೇಳಿದರೂ ನೆಹರು ಸರ್ಕಾರ ಚೀನೀ ಕಮ್ಯೂನಿಸ್ಟ್ ಸರ್ಕಾರವನ್ನೇ ಎಲ್ಲೆಡೆ ಬೆಂಬಲಿಸಿತು, ತಾನು ಅಲಿಪ್ತ ಎಂದು ಹೇಳಿಕೊಳುತ್ತಲೇ ಸೋವಿಯತ್ ಯೂನಿಯನ್ ಪರವಾಗಿ ನಿಂತಿತು. ಅತ್ತ ಅಮೆರಿಕ ತನ್ನ ಪರವಾಗಿ ನಿಂತ ಪಾಕಿಸ್ತಾನದ ಜತೆ ರಕ್ಷಣಾ ಒಪ್ಪಂದ ಮಾಡಿಕೊಂಡಿತು, ಅದರ ಪ್ರಕಾರ ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿತು. ಇಷ್ಟಾಗಿಯೂ ಪಾಕಿಸ್ತಾನಕ್ಕೆ ಪೂರೈಸಿದಂತಹ ಶಸ್ತ್ರಾಸ್ತ್ರಗಳನ್ನೇ ನಮಗೂ ನೀಡುವುದಾಗಿ 1957ರಲ್ಲಿ ಐಸೆನ್ ಹೋವರ್ ಸರ್ಕಾರ ಹೇಳಿತು. ನೆಹರುಗೆ ಅದು ಬೇಡವಾದದ್ದು ನಮ್ಮ ದುರದೃಷ್ಟ ಅಷ್ಟೇ. ಸಾಮಾನ್ಯ ಭಾರತೀಯರ ದುರದೃಷ್ಟವೆಂದರೆ ಆಗಿನ ನೆಹರುರ ವಂದಿಮಾಗಧ ‘ವಿದ್ವಾಂಸರು’ ಹಾಗೂ ಪತ್ರಕರ್ತರು ಇದಾವುದನ್ನೂ ನಮಗೆ ಹೇಳಲಿಲ್ಲ. ಪ್ರಾಧ್ಯಾಪಕಿ ಸುರ್ಜೀತ್ ಮಾನ್ಸಿಂಗ್ ಇದನ್ನು ದಾಖಲಿಸದೇ ಇದ್ದರೆ ನನಗೂ ಗೊತ್ತಾಗುತ್ತಿರಲಿಲ್ಲ. ಅದಾದ ಮೇಲೂ, ತಾನು ಪೂರೈಸಿದ ಶಸ್ತ್ರಾಸ್ತ್ರಗಳನ್ನು ಭಾರತದ ವಿರುದ್ಧವೇನಾದರೂ ಪಾಕಿಸ್ತಾನ ಬಳಸಿದರೆ ಆ ದೇಶಕ್ಕೆ ಶಸ್ತ್ರಾಸ್ತ್ರಗಳನ್ನಷ್ಟೇ ಅಲ್ಲ, ಅವುಗಳ ಬಿಡಿಭಾಗಗಳ ಪೂರೈಕೆಯನ್ನೂ ತಡೆಹಿಡಿಯುವುದಾಗಿ ಅಮೆರಿಕ ನಮಗೆ ವಾಗ್ದಾನ ನೀಡಿತ್ತು. ಆ ಪ್ರಕಾರವೇ, 1965ರಲ್ಲಿ ಪಾಕಿಸ್ತಾನ ಯುದ್ಧ ಆರಂಬಿಸಿದಾಗ ಅಮೆರಿಕ ತನ್ನ ಮಾತಿನಂತೇ ನಡೆದುಕೊಂಡಿತು. ‘ಇನ್ನು ಹದಿನೈದು ದಿನಗಳಲ್ಲಿ ದೆಹಲಿಯಲ್ಲಿ ಇರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನಿ ಧ್ವಜ ಹಾರಾಡಿಸುತ್ತೇವೆ’ ಎಂಬ ಉದ್ಧಟತನದ ಹೇಳಿಕೆ ನೀಡಿ ಯುದ್ಧ ಆರಂಭಿಸಿದ ಅಯೂಬ್ ಖಾನ್ ಹದಿನೈದೇ ದಿನಗಳಲ್ಲಿ ಕದನವಿರಾಮಕ್ಕಾಗಿ ದಮ್ಮಯ್ಯಗುಡ್ಡೆ ಹಾಕತೊಡಗಿದ್ದರಲ್ಲಿ ಶಸ್ತ್ರಾಸ್ತ್ರ ಪೂರೈಕೆ ಕುರಿತಾದ ಅಮೆರಿಕದ ಕ್ರಮ ಮಹತ್ವದ ಪಾತ್ರ ವಹಿಸಿತ್ತು. ಆಮೇಲೆ ಭಾರತ ಹೆಚ್ಚುಹೆಚ್ಚಾಗಿ ಸೋವಿಯತ್ ಯೂನಿಯನ್ನತ್ತ, ಅಮೆರಿಕ ಅದೇ ಪ್ರಮಾಣದಲ್ಲಿ ಪಾಕಿಸ್ತಾನದತ್ತ ಸರಿಯುತ್ತ ಹೋದದ್ದು ಬೇರೆಯೇ ಕಥೆ. ಇಂದು ಚೀನಾದಿಂದ ನಾವು ಯುದ್ಧದ ಅಪಾಯವನ್ನು ಎದುರಿಸುತ್ತಿರುವಾಗ ಅಮೆರಿಕ ನಮಗೆ ಸಾಮರಿಕವಾಗಿ ಹಾಗೂ ರಕ್ಷಣಾತ್ಮಕವಾಗಿ ಸಹಭಾಗಿಯಾಗುತ್ತಿರುವುದು ಸ್ವಾಗತಾರ್ಹ.
ಆರ್ಡಿಪಿಎ ಒಪಂದದ ಹಿನ್ನೆಲೆಯಲ್ಲೇ ಸಹಿಬಿದ್ದ ಮತ್ತೆರಡು ಒಪ್ಪಂದಗಳೂ ಗಮನಾರ್ಹವೇ. ಖಛ್ಚಿuಜಿಠಿಢ ಟ್ಛ ಖ್ಠಟಟ್ಝಢ ಅ್ಟ್ಞಛಿಞಛ್ಞಿಠಿ (ಎಸ್ಓಎಸ್ಎ, ಸೋಸಾ) ಎಂಬ ಒಪ್ಪಂದಕ್ಕೆ ಅಮೆರಿಕದ ರಕ್ಷಣಾ ಕಾರ್ಯದರ್ಶಿಯವರ ಮುಖ್ಯ ಉಪ ಕಾರ್ಯದರ್ಶಿ ಡಾ.ವಿಕ್ ರಾಮದಾಸ್ ಮತ್ತು ನಮ್ಮ ರಕ್ಷಣಾ ಮಂತ್ರಾಯಲಯದ ಹೆಚ್ಚುವರಿ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಸಹಿ ಹಾಕಿದ್ದಾರೆ. ಇದರ ಪ್ರಕಾರ ಭಾರತ ಮತ್ತು ಅಮೆರಿಕಗಳು ಪರಸ್ಪರರಿಗೆ ಅಗತ್ಯ ಯುದ್ಧೋಪಕರಣಗಳನ್ನು ತ್ವರಿತವಾಗಿ, ಯಾವುದೇ ವ್ಯವಸ್ಥೀಯ ತಡೆಯಿಲ್ಲದೆ ಪೂರೈಸಬಹುದಾಗಿದೆ. ಇಂತಹ ಒಪ್ಪಂದವನ್ನು ಅಮೆರಿಕ ಮಾಡಿಕೊಂಡಿರುವುದು ಹದಿನೆಂಟು ದೇಶಗಳೊಂದಿಗೆ ಮಾತ್ರ. ಅವು ಅದರ ಲಾಗಾಯ್ತಿನ ಘನಿಷ್ಟ ಸೇನಾ ಸಹಯೋಗಿಗಳೇ. ‘ಆರ್ಡಿಪಿಎ’ನಂತೆ ಈ ‘ಸೋಸಾ’ ಒಪ್ಪಂದಕ್ಕೆ ಸಂಬಂಧಿತ ದೇಶಗಳು ಕಟ್ಟುಬೀಳಬೇಕಾಗಿಲ್ಲ, ಯಾವುದೇ ಕಾರಣವೊಡ್ಡಿ ಒಪ್ಪಂದಕ್ಕೆ ಬದ್ಧರಾಗದೇ ಉಳಿಯಬಹುದು. ಆದಾಗ್ಯೂ, ಚೀನಾವನ್ನು ಪ್ರಮುಖ ಶತ್ರು ಎಂದು ಭಾರತದೊಂದಿಗೆ ‘ಇಂದು’ ಅಮೆರಿಕ ಸಹ ನಂಬತೊಡಗಿರುವ ದಿನಗಳಲ್ಲಿ ಎರಡೂ ದೇಶಗಳ ನಡುವೆ ಈ ಬಗೆಯ ಒಪ್ಪಂದವಾಗಿರುವುದು ಒಳ್ಳೆಯದೇ. ಚೀನಾವೇನಾದರೂ ಗಡಿತಂಟೆ ತೆಗೆದರೆ ಈ ಒಪ್ಪಂದಕ್ಕೆ ಅಮೆರಿಕ ಬದ್ಧವಾಗಿ ನಡೆದುಕೊಳ್ಳುವುದು ನಿಶ್ಚಿತ. ಬರುವ ನವೆಂಬರ್ನಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದರೆ ಈ ಸಹಕಾರ ಖಚಿತವೇ ಆಗುತ್ತದೆ.
ನಮ್ಮ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ ವಿಶ್ವೇಶ್ ನೇಗಿ ಮತ್ತು ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ಇಂಡೋ ಪೆಸಿಫಿಕ್ ಭದ್ರತಾ ವ್ಯವಹಾರಗಳನ್ನು ನೋಡಿಕೊಳ್ಳುವ ಉಪ ವಿದೇಶಾಂಗ ಕಾರ್ಯದರ್ಶಿ ಎಲಿ ರ್ಯಾಟ್ನರ್ ಉಭಯ ದೇಶಗಳ ಸೇನಾ ನೆಲೆಗಳಲ್ಲಿ ಪರಸ್ಪರ ಸಂಪರ್ಕಾಧಿಕಾರಿಗಳನ್ನು ನೇಮಕ ಮಾಡುವ ಕುರಿತಾದ ಒಂದು ಮೆಮೊರ್ಯಾಂಡಂ ಆಫ್ ಅಂಡರ್ಸ್ಟಾ್ಯಂಡಿಂಗ್ಗೂ ಸಹಿ ಹಾಕಿದ್ದಾರೆ. ಇದರ ಪ್ರಕಾರ ಫ್ಲಾರಿಡಾದಲ್ಲಿರುವ ಸ್ಪೆಷಲ್ ಆಪರೇಷನ್ಸ್ ಕಮ್ಯಾಂಡ್ ಮತ್ತು ಬಹರೈನ್ನಲ್ಲಿರುವ ಅಮೆರಿಕ ನೇತೃತ್ವದ ‘ಕಂಬೈನ್ಡ್ ಮ್ಯಾರಟೈಂ ಫೋರ್ಸ್’ನಲ್ಲಿ ಕರ್ನಲ್ ಸ್ತರದ ನಮ್ಮ ಸೇನಾಧಿಕಾರಿಗಳು ಇರುತ್ತಾರೆ! ಹಾಗೆಯೇ ಭಾರತದ ಸೇನಾ ನೆಲೆಗಳಲ್ಲಿ ಅಮೆರಿಕದ ಸೇನೆಯ ಅಧಿಕಾರಿಗಳಿರುತ್ತಾರೆ. ಈ ವ್ಯವಸ್ಥೆ ಎರಡೂ ದೇಶಗಳ ರಕ್ಷಣಾ ಸಂಬಂಧಗಳಲ್ಲಿ ಅತಿ ಗಮನಾರ್ಹ ನಡೆ.
ಇಷ್ಟೆಲ್ಲ ಬೆಳವಣಿಗೆಗಳನ್ನು ಜಗತ್ತು, ಮುಖ್ಯವಾಗಿ ಚೀನಾ ಮತ್ತು ಪಾಕಿಸ್ತಾನದಂತಹ ಭಾರತದ ಶತ್ರುಗಳು, ಬೆರಗಾಗಿ ನೋಡುತ್ತಿರುವಂತೆ, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಸ್ವದೇಶದತ್ತ ಹೊರಳುತ್ತಿದ್ದಂತೆ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿದ್ದಾರೆ. ಇಬ್ಬರೂ ನಾಯಕರೂ ಬಾಂಗ್ಲಾದೇಶದ ಬಗ್ಗೆ, ಅಲ್ಲಿನ ಹಿಂದೂಗಳ ಬಗ್ಗೆ, ರಷ್ಯಾ, ಯೂಕ್ರೇನ್ ಯುದ್ಧದ ಬಗ್ಗೆ ಮಾತಾಡಿದರೆಂದು ಸುದ್ದಿ! ಬೈಡೆನ್ ಅವರು ಆಡಿರಬಹುದಾದ ಮಾತುಗಳೂ ಅವರದಲ್ಲ, ಅವೆಲ್ಲವೂ ಅಧ್ಯಕ್ಷ ಮಹಾಶಯರ ಹಿಂದಿರುವ ಅಂದರೆ ಅಮೆರಿಕದ ರಾಜಕಾರಣವನ್ನು ನಿಯಂತ್ರಿಸುವ, ಆ ಮೂಲಕ ಜಗತ್ತಿನ ಹಣೆಬರಹವನ್ನು ಬರೆಯಬಯಸುವ ಧನದಾಹಿ ಶಕ್ತಿಗಳ ಮಾತುಗಳು. ‘ಈಛಿಛಿಟ ಖಠಿಚಠಿಛಿ’ ಅಂದರೆ ಹೊರಗೆ ಕಾಣುವ ಸರ್ಕಾರದ ಹಿಂದಿರುವ ಬಲಿಷ್ಠ ಹಾಗೂ ಕರಾಳ ಕೈಗಳು ಎಂದು ಸ್ಥೂಲವಾಗಿ ಗುರುತಿಸಲ್ಪಡುವ ಈ ಶಕ್ತಿಗಳು ಭಾರತ-ವಿರೋಧಿ ಎನ್ನುವುದು ಇಂದಿನವರೆಗಿನ ಜಾಗತಿಕ ವಾಸ್ತವಗಳಲ್ಲೊಂದು. ಆದರೆ ಕಳೆದೊಂದು ವಾರದ ಬೆಳವಣಿಗೆಗಳು ಈ ಈಛಿಛಿಟ ಖಠಿಚಠಿಛಿ ಭಾರತದ ಪರವಾಗಿ ಸಕಾರಾತ್ಮಕವಾಗಿ ಹೊರಳುತ್ತಿದೆ, ನಾವು ಅಚ್ಚರಿ ಪಡಬಹುದಾದಷ್ಟು ವೇಗದಲ್ಲೇ ಎನ್ನುವ ಸೂಚನೆ ನೀಡುತ್ತಿವೆ.
ಭಾರತ ಮತ್ತು ಅಮೆರಿಕ ತಮ್ಮ ಸೇನಾ, ಸಾಮರಿಕ ಹಾಗೂ ರಾಜತಾಂತ್ರಿಕ ಸಹಕಾರವನ್ನು ಈ ಬಗೆಯಾಗಿ ವಿಸ್ತರಿಸುತ್ತಿರುವುದು ಅಥವಾ ‘ಡೀಪ್ ಸ್ಟೇಟ್’ ಎಲ್ಲರಿಗೂ ಕಾಣುವಂತೆಯೇ ವಾಷಿಂಗ್ಟನ್ ಅನ್ನು ಭಾರತದತ್ತ ಸರಿಸುತ್ತಿರುವುದು ಎಂತಹ ಸಂದರ್ಭದಲ್ಲಿ ಎನ್ನುವುದೂ ಸ್ವಾರಸ್ಯಕರವೇ. ಇದನ್ನು ಮುಂದಿನವಾರ ಲೇಖನದ ಎರಡನೆಯ ಭಾಗದಲ್ಲಿ ನೋಡೋಣ.