

ಇಂದಿರಾ ಗಾಂಧಿಯವರ ವಿರುದ್ಧ ದ್ವೇಷರಾಜಕಾರಣ ಸಾಗಿಸುವ ‘ಪುಣ್ಯಕಾರ್ಯ’ಕ್ಕಷ್ಟೇ ಜನತೆ ತಮಗೆ ಅಧಿಕಾರ ನೀಡಿರುವುದು ಎಂದು ತಿಳಿದಂತಿದ್ದ ಗೃಹಮಂತ್ರಿ ಚರಣ್ ಸಿಂಗ್ ಪ್ರಧಾನಿ ದೇಸಾಯಿಯವರ ಬೆಂಬಲದೊಂದಿಗೆ ಮಾಜಿ ಪ್ರಧಾನಿಯನ್ನು ಸಂಸತ್ತಿಗೆ ಹಿಂತಿರುಗಿ ಬರಗೊಡದಂತೆ ಇನ್ನಿಲ್ಲದ ಆಟ ಆಡುತ್ತಿದ್ದರು. ಇಂದಿರಾರನ್ನು ಬಂಧಿಸಿಯೂಬಿಟ್ಟಿದ್ದರು. ಅಂಥ ಸಮಯದಲ್ಲಿ 1978ರ ಡಿಸೆಂಬರ್ 20ರಂದು ಸಂಜೆ ಐದೂಮುಕ್ಕಾಲಿಗೆ ಲಖನೌ ವಿಮಾನನಿಲ್ದಾಣದಿಂದ ದೆಹಲಿಯತ್ತ ಹಾರಿದ ಇಂಡಿಯನ್ ಏರ್ಲೈನ್ಸ್ನ ವಿಮಾನ ಪಾಲಂ ವಿಮಾನನಿಲ್ದಾಣದಲ್ಲಿ ಇಳಿಯುವ ಹದಿನೈದು ನಿಮಿಷಗಳ ಮೊದಲು ಅಪಹರಣಗೊಂಡಿತು. ಕರವಸ್ತ್ರದಲ್ಲಿ ಸುತ್ತಿದ ಕ್ರಿಕೆಟ್ ಚೆಂಡೊಂದನ್ನು ‘ಬಾಂಬ್’ ಎಂದು ಹೇಳಿ ಚಾಲಕವರ್ಗವನ್ನು ಬೆದರಿಸಿ ವಿಮಾನವನ್ನು ಅಪಹರಿಸಿ ವಾರಾಣಾಸಿಗೆ ಕೊಂಡೊಯ್ದವರು ಇಪ್ಪತ್ತೇಳು ವರ್ಷದ ಭೋಲಾನಾಥ್ ಪಾಂಡೆ ಮತ್ತು ಇಪತ್ತೆಂಟು ವರ್ಷದ ದೇವೀಂದರ್ ಪಾಂಡೆ. ತಾವು ಯೂತ್ ಇಂದಿರಾ ಕಾಂಗ್ರೆಸ್ನ ಸದಸ್ಯರು ಎಂದು ಹೇಳಿಕೊಂಡ ಅವರಿಬ್ಬರೂ ಇಂದಿರಾರನ್ನು ಬಂಧಮುಕ್ತಗೊಳಿಸಬೇಕು ಮತ್ತು ಅವರ ವಿರುದ್ಧದ ದ್ವೇಷರಾಜಕಾರಣವನ್ನು ನಿಲ್ಲಿಸುವುದು ತಮ್ಮ ಬೇಡಿಕೆ ಎಂದು ಹೇಳಿದರು. ಪ್ರಯಾಣಿಕರೆದುರು ನಿಂತು ‘ಇಂದಿರಾ ಜಿಂದಾಬಾದ್’ ಘೊಷಣೆಗಳನ್ನೂ ಕೂಗಿದರು, ನಂತರದ ದೊಡ್ಡಕಥೆಯನ್ನು ಚಿಕ್ಕದಾಗಿ ಹೇಳುವುದಾದರೆ ಕೆಲವೇ ತಾಸುಗಳಲ್ಲಿ ಅಪಹರಣಕಾಂಡ ಶಾಂತಿಯುತವಾಗಿ ಅಂತ್ಯಗೊಂಡಿತು. ಕರವಸ್ತ್ರದಲ್ಲಿ ಸುತ್ತಿದ ಕ್ರಿಕೆಟ್ ಚೆಂಡಿನಿಂದ ಏನು ತಾನೆ ಅಶಾಂತ ಕೃತ್ಯವಾಗಲು ಸಾಧ್ಯ? ಕೆಲತಾಸುಗಳ ಆತಂಕದ ವಾತಾವರಣದ ಹೊರತಾಗಿ ಬೇರೇನೂ ತೊಂದರೆಯಾಗಲಿಲ್ಲ. ವಿಮಾನ ಸುರಕ್ಷಿತ, ಪ್ರಯಾಣಿಕರು ಮತ್ತು ಚಾಲಕವರ್ಗ ಕ್ಷೇಮ, ಅಪಹರಣಕಾರರೂ ಕ್ಷೇಮ.
ಅಂತಿಮಸತ್ಯವೆಂದರೆ ಪಾಂಡೆಗಳಿಬ್ಬರೂ ಯಾರಿಗೂ ಏನೂ ಅಪಾಯ ಮಾಡಲಿಲ್ಲ. ‘ವಿಮಾನವನ್ನು ನೇಪಾಳಕ್ಕೆ ತೆಗೆದುಕೊಂಡು ಹೋಗೋಣ’ ಎಂದು ಮೊದಲಿಗೆ ಹೇಳಿ, ‘ಅಷ್ಟು ದೂರ ಹೋಗಲು ಇಂಧನ ಇಲ್ಲ’ ಎಂದು ಪೈಲಟ್ ಗೋಳು ತೋಡಿಕೊಂಡಾಗ, ಹಾಗಿದ್ದರೆ ‘ಬಾಂಗ್ಲಾದೇಶಕ್ಕೆ ಹೋಗೋಣ’ ಎಂದು ಹೇಳುವ ಮೂಲಕ ತಮ್ಮ ಭೂಗೋಲ ಅಜ್ಞಾನವನ್ನು ಅವರು ಪ್ರದರ್ಶಿಸಿದರಷ್ಟೇ. ಅಜ್ಞಾನ ಪ್ರದರ್ಶನ ಶಿಕ್ಷಾರ್ಹ ಅಪರಾಧ ಅಲ್ಲ ಅಲ್ಲವೇ? ಬದಲಾಗಿ ಅದು ಇನ್ನಷ್ಟು ಉನ್ನತ ಸ್ಥಾನಗಳಿಗೆ ರಹದಾರಿ ಎನ್ನುವುದನ್ನು ನಮ್ಮ ಪ್ರಮುಖ ರಾಷ್ಟ್ರೀಯ ಪಕ್ಷವೊಂದೇ ಮತ್ತೆಮತ್ತೆ ತೋರಿಸುತ್ತಿದೆಯಲ್ಲ!
ಆದಾಗ್ಯೂ, ವಿಮಾವೊಂದನ್ನು ಅಪಹರಿಸಿದ್ದೇ ಶಿಕ್ಷಾರ್ಹ ಅಪರಾಧವಾದ ಕಾರಣ ಅವರಿಬ್ಬರಿಗೂ ಜೈಲುಶಿಕ್ಷೆ ವಿಧಿಸಲಾಯಿತು. ಅದು ಸ್ವಲ್ಪಕಾಲ ಮಾತ್ರ. ಜನವರಿ 1980ರ ಚುನಾವಣೆಗಳಲ್ಲಿ ಜನತಾ ಪಕ್ಷ ಸೋತು (ಹಾಗೇ ಆಗಬೇಕು), ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು (ಹಾಗೂ ಆಗಬಾರದಿತ್ತು), ಇಂದಿರಾ ಮತ್ತೆ ಪ್ರಧಾನಿಯಾದರು. ದೇವೀಂದರ್ ಪಾಂಡೆ ಮತ್ತು ಭೋಲಾನಾಥ್ ಪಾಂಡೆ ಕಾರಾಗೃಹದಿಂದ ಬಿಡುಗಡೆಗೊಂಡು ಯೂತ್ ಕಾಂಗ್ರೆಸ್ನಲ್ಲಿ ಜನಪ್ರಿಯರಾದರು. ಭೋಲಾನಾಥ್ ಪಾಂಡೆ ಕಾಂಗ್ರೆಸ್ ಟಿಕೆಟ್ನೊಂದಿಗೆ ಎರಡು ಸಲ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿಯೂ ಆಯ್ಕೆಗೊಂಡರು. ದೇವೀಂದರ್ ಪಾಂಡೆ ಪಕ್ಷದಲ್ಲಿ ಗೌರವದ ಸ್ಥಾನ ಗಳಿಸಿ ಇಂದಿರಾ, ರಾಜೀವ್ ಇಬ್ಬರಿಗೂ ಹತ್ತಿರವಾದರು.
ಈಗ ನಾವು ಬರೋಬ್ಬರಿ ನಲವತೆôದು ವರ್ಷಗಳು ಮುಂದೆ ಚಲಿಸಿ 2023ರ ಡಿಸೆಂಬರ್ 13ಕ್ಕೆ ಬಂದು ನಿಲ್ಲೋಣ. ಅಂದು ಡಿ. ಮನೋರಂಜನ್ ಮತ್ತು ಸಾಗರ್ ಮಿಶ್ರಾ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದರು, ಶೂಗಳಲ್ಲಿ ಕೃತಕವಾಗಿ ಮಾಡಿಸಿದ್ದ ರಹಸ್ಯ ಗುಳಿಗಳಲ್ಲಿ ಅಡಗಿಸಿಕೊಂಡಿದ್ದ ಸ್ಮೋಕ್ ಕ್ಯಾನಿಸ್ಟರ್ಗಳನ್ನು ಹೊರತೆಗೆದು ಸದನದಲ್ಲಿ ಹಳದಿಧೂಮವನ್ನು ಹರಡಿದರು. ಯಾರಿಗೂ ಏನೂ ಅಪಾಯ ಮಾಡಲಿಲ್ಲ. ಆದರೆ ಭೋಲಾನಾಥ್ ಪಾಂಡೆ ಮತ್ತು ದೇವೀಂದರ್ ಪಾಂಡೆಯಂತೆ ಪೆದ್ದುಪೆದ್ದಾಗಿ ವರ್ತಿಸದೆ ಬಲು ಜಾಣರಂತೆ, ತಾವು ತೊಡಗಿದ ಕೇವಲ ‘ಕೆಲನಿಮಿಷಗಳ ಆತಂಕ’ ಸೃಷ್ಟಿಸುವ ಕೃತ್ಯದಲ್ಲಿ ಅವರು ಪರಿಣಿತರಾಗಿದ್ದಂತೆ ಕಂಡುಬಂದರು. ಇಪ್ಪತ್ತು ಅಡಿಗಳೆತ್ತರದಿಂದ ಕೆಳಗೆ ಜಿಗಿದದ್ದು, ಮೇಜುಗಳ ನಡುವೆ ನಿರಾಯಾಸವಾಗಿ ಜಿಗಿದಾಡಿದ್ದು ಅವರ ‘ತರಬೇತಿ’ಯ ಸೂಚನೆಯನ್ನೂ ನೀಡಿತು. ಅದೇ ಸಮಯದಲ್ಲಿ ಸಂಸತ್ನ ಹೊರಗೆ ನೀಲಿಮಾ ಆಜಾದ್ ಮತ್ತು ಅಮೋಲ್ ಶಿಂಧೆ ಘೊಷಣೆ ಕೂಗಿದರಷ್ಟೇ. ಯಾರಿಗೂ ಏನೂ ಅಪಾಯ ಎಸಗಲಿಲ್ಲ.
ಈ ನಾಲ್ವರೂ ತಮ್ಮ ಕೃತ್ಯಗಳನ್ನು ಅದೆಷ್ಟು ನಿರಾತಂಕವಾಗಿ ಸಾಗಿಸಿದರೆಂದರೆ ತಾವು ಯಾವುದೇ ಹಾನಿ ಅಥವಾ ಹಿಂಸಾಕೃತ್ಯ ಎಸಗುತ್ತಿಲ್ಲವಾದ ಕಾರಣ ತಮಗೇನೂ ‘ದೊಡ್ಡ’ ಹಾಗೂ ‘ದೀರ್ಘಕಾಲಿಕ’ ಶಿಕ್ಷೆಯಾಗದು ಎಂಬ ವಿಶ್ವಾಸ ಅವರಲ್ಲಿದ್ದಂತಿತ್ತು. ಆ ವಿಶ್ವಾಸವನ್ನವರು ತಾವಾಗಿಯೇ ಮೂಡಿಸಿಕೋಂಡಿದ್ದರೆ ಅಥವಾ ಬೇರಾರೋ ಮೂಡಿಸಿದ್ದರೇ? ಜತೆಗೆ, ಏನೂ ಹಾನಿಯೆಸಗದೆ ಕೇವಲ ಸ್ವಲ್ಪ ಸಮಯ ಆತಂಕ ಸೃಷ್ಟಿಸಿದ ಭೋಲಾನಾಥ್ ಪಾಂಡೆ ಮತ್ತು ದೇವೀಂದರ್ ಪಾಂಡೆ ಅವರುಗಳಿಗೆ ಕಾಂಗ್ರೆಸ್ ಪಕ್ಷ ‘ಕೃಪಾಕಟಾಕ್ಷ’ ತೋರಿದಂತೆ ತಮಗೂ ಯಾರಾದರೂ ಕೃಪಾಕಟಾಕ್ಷ ತೋರುತ್ತಾರೆ ಎಂದವರು ತಿಳಿದಿದ್ದರೇ? ಅಂಥ ತಿಳಿವನ್ನು ಯಾರಾದರೂ ಅವರಲ್ಲಿ ಮೂಡಿಸಿದ್ದರೇ?
ಈ ಪ್ರಶ್ನೆಗಳನ್ನು ಮೂಡಿಸುವ ಆಧಾರಗಳು ನಮ್ಮ ಇತ್ತೀಚಿನ ಇತಿಹಾಸದಲ್ಲಿ ಧಾರಾಳವಾಗಿ ಸಿಗುತ್ತವೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ರಾಜಕೀಯ ಉತ್ಕರ್ಷವನ್ನು ತಡೆದು, ಆ ಮೂಲಕ ಕೇಂದ್ರದ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರಕ್ಕಿದ್ದ ಜನಬೆಂಬಲವನ್ನೂ ಕುಗ್ಗಿಸಿ, 2004ರ ಚುನಾವಣೆಗಳನ್ನು ಗೆಲ್ಲಲು ಕಾಂಗ್ರೆಸ್ ಯೋಜಿಸಿತ್ತು ಎನ್ನುವುದು ಈಗ ಬಹುಪಾಲು ಸ್ಪಷ್ಟವಾಗಿದೆ. ಸಬರ್ವುತಿ ಎಕ್ಸ್ಪ್ರೆಸ್ ಟ್ರೇನ್ನ ಎಸ್ 6 ಬೋಗಿಗೆ ಬೆಂಕಿ ಹಚ್ಚಿ ಕರಸೇವಕರನ್ನು ಸುಟ್ಟು ಕೊಂದವರು ಗೋಧ್ರಾ ಪ್ರದೇಶದ ಘಾಂಚಿ ಮುಸ್ಲಿಮರು, ಅವರ ಪ್ರಮುಖ ನಾಯಕ ಅಲ್ಲಿನ ಕಾಂಗ್ರೆಸ್ ಶಾಸಕ. ಸಬರ್ವುತಿ ಹತ್ಯಾಕಾಂಡಕ್ಕೆ ಪ್ರತಿಯಾಗಿ ಗುಜರಾತ್ ಹೊತ್ತಿ ಉರಿಯತೊಡಗಿದಾಗ ಅಲ್ಲಿನ ಸರ್ಕಾರದ ಬೇಡಿಕೆಗೆ ಸ್ಪಂದಿಸದೆ, ತಮ್ಮ ಪೊಲೀಸ್ ಪಡೆಗಳನ್ನು ಕಳುಹಿಸದೇಹೋದವರು ಮಧ್ಯಪ್ರದೇಶ ಮತ್ತು ರಾಜಸ್ಥಾನಗಳ ಕಾಂಗ್ರೆಸ್ ಸರ್ಕಾರಗಳು, ಹಿಂಸಾಚಾರದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳೆರಡೂ ಭಾಗಿಯಾಗಿ, 850ರಷ್ಟು ಮುಸ್ಲಿಂರು ಮತ್ತು 140ರಷ್ಟು ಹಿಂದುಗಳು ಹತರಾದರೂ, ಇಡೀ ಪ್ರಕರಣವನ್ನು ಹಿಂದು ಮೂಲಭೂತವಾದಿಗಳಿಂದ ಮುಸ್ಲಿಂರ ಸಂಹಾರ ಎಂದು ಬಿಂಬಿಸಿ ಪ್ರಚಾರ ಮಾಡಿದ್ದು ಕಾಂಗ್ರೆಸ್ ಪಕ್ಷ ಮತ್ತು ಅದರ ಬೆಂಬಲಿಗ ಪತ್ರಕರ್ತರು.
ಇಡೀ ಪ್ರಕರಣಕ್ಕೆ ನರೇಂದ್ರ ಮೋದಿಯವರನ್ನು ಜವಾಬ್ದಾರರಾಗಿಸಲು ಸೋನಿಯಾ ಗಾಂಧಿಯವರ ಆಪ್ತ ಅಹ್ಮದ್ ಪಟೇಲ್ ಹಣ ನೀಡಿದರು ಮತ್ತು ಅದಕ್ಕಾಗಿ ಕೆಲವು ಪತ್ರಕರ್ತರು ಮತ್ತು ತಥಾಕಥಿತ ಸಾಮಾಜಿಕ ಕಾರ್ಯಕರ್ತರನ್ನೂ ಬಳಸಿಕೊಂಡರು. ಈ ‘ಸಹಕಾರ’ಕ್ಕಾಗಿ ಒಬ್ಬಾಕೆಗೆ ಪದ್ಮಶ್ರೀ ಪ್ರಶಸ್ತಿಯ ಆಮಿಷವನ್ನೂ ಒಡ್ಡಲಾಗಿತ್ತು. ಇದೆಲ್ಲವನ್ನೂ ಮುಚ್ಚಿಟ್ಟು ಸೋನಿಯಾ ಗಾಂಧಿಯವರು ಮೋದಿಯವರನ್ನೂ ‘ಸಾವಿನ ವ್ಯಾಪಾರಿ’ ಎಂದು ಕರೆದರು! ಕಾಂಗ್ರೆಸ್ ಷಡ್ಯಂತ್ರದಿಂದಾಗಿ ಅದು ಬಯಸಿದ ಅಧಿಕಾರ ಅದಕ್ಕೆ 2004ರಲ್ಲಿ ದಕ್ಕಿತು. ಮೋದಿಯವರನ್ನೂ, ಬಿಜೆಪಿಯನ್ನೂ ಖಲನಾಯಕರಾಗಿ ಬಿಂಬಿಸುವ ಕಸರತ್ತು ಮುಂದುವರಿದ ಕಾರಣ 2009ರಲ್ಲಿ ಕಾಂಗ್ರೆಸ್ ಮತ್ತದರ ನೇತೃತ್ವದ ಯುಪಿಎಗೆ ಮತ್ತೆ ಅಧಿಕಾರ ದಕ್ಕಿತು.
2014ರ ಹೊತ್ತಿಗೆ ಗುಜರಾತ್ ಪ್ರಕರಣದ ಬಗ್ಗೆ ಜನತೆಗೂ ನಿಜ ತಿಳಿಯತೊಡಗಿದ್ದರಿಂದ ಅವರು ಬಿಜೆಪಿಯ ಕಡೆ ತಿರುಗಿದರು, ತನ್ನ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಮುಂದೆ ನಿಲ್ಲಿಸಿದ್ದ ಮೋದಿಯವರನ್ನು ಮತದಾರ ಬೆಂಬಲಿಸಿದ. ಕಾಂಗ್ರೆಸ್ ಮತ್ತದರ ಬೆಂಬಲಿಗರು ಹೊಸ ಕಾರ್ಯಯೋಜನೆ ರೂಪಿಸಿದರು. ಬಿಜೆಪಿ ಮತ್ತು ಮೋದಿಯವರ ಜನಪ್ರಿಯತೆ ಕುಗ್ಗಿಸಲು ‘ಅಸಹಿಷ್ಣುತಾ ನೌಟಂಕಿ’ 2015ರಲ್ಲೇ ಆರಂಭವಾಯಿತು. ಅದಕ್ಕಾಗಿ ದೇಶವಿದೇಶಗಳ ನೂರೈವತ್ತರಷ್ಟು ಪತ್ರಕರ್ತರು ಮತ್ತು ಲೇಖಕರನ್ನು ಒಗ್ಗೂಡಿಸಲಾಗಿತ್ತು ಎಂದು ಹೇಳಲಾಗುತ್ತದೆ. ಪ್ರಶಸ್ತಿ ಹಿಂತಿರುಗಿಸಿ ಮೋದಿ ಸರ್ಕಾರವನ್ನು ಅವಮಾನಿಸಿ ಅದರ ಜನಪ್ರಿಯತೆಯನ್ನು ಕುಗ್ಗಿಸಿದರೆ ನಂತರ ಅಧಿಕಾರ ಹಿಡಿಯುವ ಪಕ್ಷಗಳು ಇನ್ನೂ ದೊಡ್ಡ ಪ್ರಶಸ್ತಿ ಕೊಡುತ್ತವೆ ಎಂಬ ಆಮಿಷ ಒಡ್ಡಲಾಗಿತ್ತು ಎಂಬ ಮಾತೂ ಇದೆ. ಇದರ ಜತೆಗೆ ರಫೆಲ್ ಯುದ್ಧವಿಮಾನಗಳ ಖರೀದಿಯಲ್ಲಿ ಭ್ರಷ್ಟಾಚಾರದ ಕಥೆ ಕಟ್ಟಿ ಮೋದಿ ಸರ್ಕಾರದ ಹೆಸರು ಕೆಡಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದು, ಹಾಗೆ ಮಾಡುವಲ್ಲಿ ಸುಪ್ರೀಂ ಕೋರ್ಟ್ನ ಹೆಸರನ್ನೂ ಎಳೆದು ನ್ಯಾಯಾಲಯದ ಮುಂದೆ ಕ್ಷಮೆ ಕೇಳಿದ್ದು ಈಗ ಇತಿಹಾಸ. ಆದಾಗ್ಯೂ ಬಿಜೆಪಿ ಮತ್ತು ಎನ್ಡಿಎಗೆ ಹೆಚ್ಚಿನ ಬಹುಮತವನ್ನು ಭಾರತೀಯ ಮತದಾರ ನೀಡಿದ. ಪರಿಣಾಮವಾಗಿ ‘ಮಾಡು ಇಲ್ಲವೇ ಮಡಿ’ ಎನ್ನುವಂಥ ಸ್ಥಿತಿ ಕಾಂಗ್ರೆಸ್ಗೆ, ಮುಖ್ಯವಾಗಿ ಅದರ ನೇತಾರ ರಾಹುಲ್ ಗಾಂಧಿಯವರಿಗೆ ಈಗ ನಿರ್ವಣವಾಗಿದೆ.
ಹಿಂದೆ ತಮ್ಮ ಬರಹಗಳು, ಕಾನೂನುಕ್ರಮಗಳು ಮತ್ತು ಕಾರ್ಯಯೋಜನೆಗಳ ಮೂಲಕ ಕಾಂಗ್ರೆಸ್ನ ಚುನಾವಣಾ ಯಶಸ್ಸುಗಳಿಗೆ ತಥಾಕಥಿತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ನೀಡಿದ್ದ ‘ಕೊಡುಗೆ’ ಈಗ ಜಗಜ್ಜಾಹೀರು. ಆ ಬಗ್ಗೆ 2022ರ ಜೂನ್ನಲ್ಲಿ ಸುಪ್ರೀಂಕೋರ್ಟಿನ ಒಂದು ಪೀಠ ನೀಡಿದ ತೀರ್ಪು ಮತ್ತು ಈಕೆಯ ಹಿನ್ನೆಯನ್ನು ಶೋಧಿಸಬೇಕು ಎಂಬ ಅಭಿಪ್ರಾಯ ಮೋದಿ-ವಿರೋಧಿಗಳ ಕುತಂತ್ರಗಳ ಬಗ್ಗೆ ಜನತೆಯ ಕಣ್ಣನ್ನು ಮತ್ತೊಮ್ಮೆ ತೆರೆಸಿ, ಮೋದಿ ಮತ್ತು ಬಿಜೆಪಿ ಬಗ್ಗೆ ಜನತೆಯಲ್ಲಿ ಅನುಕಂಪ ಮೂಡಿಸಿತು. ಚುನಾವಣೆಗಳಿಗೆ ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿದ್ದ ಭಾರಿ ಹೊಡೆತ ಇದು. ಇದರಿಂದ ಹೊರಬರಲು ರಾಹುಲ್ ಗಾಂಧಿ ಹೂಡಿದ ಹೂಟ ಅದಾನಿ ಮಂತ್ರಪಠಣ. ಅಚ್ಚರಿಯೆಂದರೆ ಅದೇ ಸಮಯದಲ್ಲಿ ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಅವ್ಯವಹಾರಗಳ ಆರೋಪ ಹೊತ್ತ ಅಂತಾರಾಷ್ಟ್ರೀಯ ಅರಾಜಕತಾವಾದಿ ಆದರೆ ಶ್ರೀಮಂತ ಜಾರ್ಜ್ ಸೊರೋಸ್ ಸಹ ಅಧಿಕೃತ ಅಂತಾರಾಷ್ಟ್ರೀಯ ವೇದಿಕೆಯಲ್ಲೇ ಅದಾನಿ ಮಂತ್ರಪಠಣಕ್ಕೆ ತೊಡಗಿದರು ಮತ್ತವರಿಗೆ ಜತೆಯಾದದ್ದು ಅನೈತಿಕ ಷೇರುವ್ಯವಹಾರಗಳಿಗೆ ಹೆಸರಾದ ಹಿಂಡನ್ಬರ್ಗ್ ಸಂಸ್ಥೆ. ಇವರೆಲ್ಲರ ಕೃತ್ಯಗಳಿಂದ ಚೀನಾಗೆ ಲಾಭವಾಗಿದೆಯೆಂಬ ಸುದ್ದಿ ನಂತರ ಬಂತು. ಪತ್ನಿಯ ಮೂಲಕ ಚೀನಾ ಜತೆ ಸಂಬಂಧ ಹೊಂದಿರುವ ಜಾರ್ಜ್ ಸೊರೋಸ್, ಚೀನೀ ಕಮ್ಯೂನಿಸ್ಟ್ ಪಾರ್ಟಿಯ ಬೇಹುಗಾರಿಕಾ ಇಲಾಖೆ ಇಂಟರ್ನ್ಯಾಷನಲ್ ಲಿಯಾಸರ್ ಡಿಪಾರ್ಟ್ವೆುಂಟ್ ಜತೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿರುವ ರಾಹುಲ್ ಗಾಂಧಿ ಇಬ್ಬರೂ ಒಂದೇ ಸಮಯದಲ್ಲಿ ಚೀನಾಗೆ ಅನುಕೂಲವಾಗುವಂತೆ ಅದಾನಿ ಮಂತ್ರ ಜಪಿಸಿದ್ದರ ಮತ್ತದಕ್ಕೆ ಹಿಂಡನ್ಬರ್ಗ್ ತಾಳ ಹಾಕಿದ್ದರ ಚೋದ್ಯವೇನಿರಬಹುದು? ಜತೆಗೆ, ಮನೋರಂಜನ್ ಅಂಡ್ ಕೋ ಕಾರ್ಯತಂತ್ರ ಚೀನಾ-ಪರ ನಗರ ನಕ್ಸಲರ ಕಾರ್ಯತಂತ್ರಗಳಿಗೆ ಹೊಂದಿಕೊಳ್ಳುವಂತಿರುವುದನ್ನೂ ನಾವು ಹೇಗೆ ಅರ್ಥೈಸಬೇಕು? ಎಲ್ಲರ ಕಣ್ಣಿರುವುದು 2024ರ ಲೋಕಸಭಾ ಚುನಾವಣೆಗಳೇ?
(ಮುಂದುವರಿಯುವುದು)
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)