ಕಣ್ಣಿಗೆ ಕಾಣಿಸುತ್ತಿರುವ ಸರ್ವಾಂಗೀಣ ಪ್ರಗತಿ

ವಿಜಯವಾಣಿ (7)
Published on
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಆಡಳಿತ ನಡೆಸಿದ್ದು ಒಟ್ಟು 17 ವರ್ಷ. ಇದುವರೆಗಿನ ಪ್ರಧಾನಿಗಳಲ್ಲಿ ನೆಹರು ಅತಿ ದೀರ್ಘ ಕಾಲ ಪ್ರಧಾನಿ ಸ್ಥಾನದಲ್ಲಿ ಇದ್ದವರು. ಆ ನಂತರದ್ದು ಇಂದಿರಾ ಆಳ್ವಿಕೆ. ಅವರು ದೇಶ ಆಳಿದ್ದು ಒಟ್ಟು 14 ವರ್ಷ. ಆದರೆ ಇಂದಿರಾ ಸತತವಾಗಿ ಅಧಿಕಾರದಲ್ಲಿ ಇದ್ದದ್ದು ಕೇವಲ 10 ವರ್ಷ ಮಾತ್ರ. 1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನಾಕ್ರೋಶದ ಪ್ರವಾಹದಲ್ಲಿ ಇಂದಿರಾ ಕೊಚ್ಚಿ ಹೋದರು. 1980ರಲ್ಲಿ ಮರಳಿ ಅವರು ಅಧಿಕಾರ ಹಿಡಿದರಾದರೂ ಹಂತಕನ ಗುಂಡಿನ ದಾಳಿಗೆ ಬಲಿಯಾಗುವುದರೊಂದಿಗೆ 1984ರಲ್ಲಿ ಅವರ ಆಳ್ವಿಕೆ ಕೊನೆಗೊಂಡಿತು.

ಮುಂದೆ ಇಂದಿರಾ ಪುತ್ರ ರಾಜೀವ್ ಅಧಿಕಾರಕ್ಕೆ ಬಂದರು ನಿಜ, ಆದರೆ ಅವರು ದೇಶವನ್ನಾಳಿದ್ದು ಐದು ವರ್ಷ ಮಾತ್ರ. ರಾಜೀವ್ ಗಾಂಧಿ ಆಳ್ವಿಕೆಯೊಂದಿಗೆ ಭಾರತದಲ್ಲಿ ನೆಹರು ಮನೆತನದ ಆಳ್ವಿಕೆಯೂ ಕೊನೆಗೊಂಡಿತು. ಮುಂದೆ ಪಿ.ವಿ. ನರಸಿಂಹರಾವ್ ಐದು ವರ್ಷ ಆಡಳಿತ ನಡೆಸಿದರು. ಪಿವಿಎನ್ ಸರ್ಕಾರದ ಅವಧಿ ಮುಗಿಯುವುದರೊಂದಿಗೆ ಕೇಂದ್ರದಲ್ಲಿ ಕಾಂಗ್ರೆಸ್​ನ ಸ್ವತಂತ್ರ ಅಧಿಕಾರ ಪರ್ವ ಕೊನೆಯಾಯಿತು. ಇಷ್ಟು ವಿವರವಾದ ಪೀಠಿಕೆ ಹಾಕುವುದಕ್ಕೆ ಒಂದು ಸ್ಪಷ್ಟ ಕಾರಣವಿದೆ. ಅದೇನೆಂದರೆ, ನೆಹರು ಆಳ್ವಿಕೆ ನಂತರ ಆ ಮನೆತನಕ್ಕೆ ಹೊರತಾದ ವ್ಯಕ್ತಿ ನರೇಂದ್ರ ಮೋದಿ ಪ್ರಧಾನಿಯಾಗಿ 11 ವರ್ಷಗಳ ಯಶಸ್ವಿ ಆಡಳಿತ ಪೂರ್ಣಗೊಳಿಸಿದ್ದಾರೆ. ಭಾರತದಲ್ಲಿ ಮೋದಿ ಆಡಳಿತದ 11 ವರ್ಷಗಳ ಸಿಂಹಾವಲೋಕನವನ್ನು ಕೆಲ ಮಹತ್ವದ ಆಯಾಮಗಳ ಹಿನ್ನೆಲೆಯಲ್ಲಿ ನೋಡೋಣ.

ಭರವಸೆಯ ನಾಯಕತ್ವ: ಭಾರತ ಸ್ವತಂತ್ರಗೊಂಡು 75 ವರ್ಷಗಳ ತರುವಾಯ ವಿವಿಧ ಸರ್ಕಾರಗಳು, ಅವುಗಳ ನಾಯಕತ್ವವನ್ನು ನೋಡಿದ ನಂತರ ದೇಶದ ನೂರು ಕೋಟಿಗೂ ಅಧಿಕ ಜನ ಹೊಸದೊಂದು ಭರವಸೆಯ ನಾಯಕತ್ವದ ಹುಡುಕಾಟದಲ್ಲಿದ್ದರು. ಆಗ ಅವರಿಗೆ ಸಿಕ್ಕಿದ್ದೇ ಮೋದಿ ನಾಯಕತ್ವ.  ಈ ಮಾತಿಗೆ ಪೂರಕವಾಗಿ 2014ರ ಲೋಕಸಭಾ ಚುನಾವಣೆ ಪೂರ್ವದ ಸನ್ನಿವೇಶವನ್ನು ಒಮ್ಮೆ ಕಣ್ಣಮುಂದೆ ತಂದುಕೊಳ್ಳೋಣ. ಸತತ 12 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ನಡೆಸಿದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯವನ್ನು ದೇಶದ ಜನರು ಇಡೀ ದೇಶದಲ್ಲಿ ಕಾಣಬಯಸಿದ್ದರು.

ಆ ಕಾರಣದಿಂದ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಘೊಷಣೆಯಾದ ಕ್ಷಣದಿಂದ ಹೊಸ ರಾಜಕೀಯ ಅಲೆಯೊಂದು ಕಾಣಿಸಿಕೊಂಡಿತು. ಆದರೂ, ಬಿಜೆಪಿ ಏಕಾಂಗಿಯಾಗಿ ಸರಳ ಬಹುಮತದ ಗಡಿ ದಾಟುತ್ತದೆ ಎಂಬುದು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷರಾಗಿದ್ದ ಅಮಿತ್ ಷಾ ಬಿಟ್ಟು ಬೇರೆ ಯಾರಿಗೂ ಖಾತ್ರಿ ಇರಲಿಲ್ಲ. ಎನ್​ಡಿಎ ಮಿತ್ರಪಕ್ಷಗಳ ಜತೆಗೆ ಚುನಾವಣೆ ಎದುರಿಸಿದರೂ ಬಿಜೆಪಿಯೊಂದೇ ಸರಳ ಬಹುಮತ ಸಂಪಾದಿಸಿ ಅನೇಕ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. ಅದು ಸಮರ್ಥ ನಾಯಕತ್ವ ಮತ್ತು ಸದೃಢ ಸರ್ಕಾರ ರಚನೆ ಬಗ್ಗೆ ದೇಶದ ಜನತೆಗೆ ಇದ್ದ ತುಡಿತದ ಫಲವಲ್ಲದೆ ಮತ್ತೇನೂ ಅಲ್ಲ.

ಮಿತ್ರಕೂಟಕ್ಕೆ ಹೊಸ ಭಾಷ್ಯ: ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಎನ್​ಡಿಎ ಕೂಟದಲ್ಲಿದ್ದ ಮಿತ್ರಪಕ್ಷಗಳ ಸಂಖ್ಯೆ 29. ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಇದ್ದಾಗಲೂ ಮಿತ್ರಪಕ್ಷಗಳನ್ನು ಮೋದಿ ಅಲಕ್ಷ್ಯ ಮಾಡಲಿಲ್ಲ, ನಗಣ್ಯ ಎನ್ನಲಿಲ್ಲ. ಬಹುತೇಕ ಮಿತ್ರಪಕ್ಷಗಳು ಮೋದಿ ಸರ್ಕಾರದ ಮಂತ್ರಿಮಂಡಲದಲ್ಲಿ ಮಹತ್ವದ ಖಾತೆಗಳನ್ನು ನಿರ್ವಹಿಸುವಂತೆ ಮಾಡಿದ್ದು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಮೈತ್ರಿ ರಾಜಕೀಯಕ್ಕೆ ಹೊಸ ಭಾಷ್ಯ ಬರೆದಂತಾಯಿತು.

ಬದಲಾದ ರಾಜಕೀಯ ನಕಾಶೆ: 2014ರಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಅಮೋಘ ಜಯ ಗಳಿಸಿದ್ದು ಮಾತ್ರವಲ್ಲ, ಇಡೀ ದೇಶದಲ್ಲಿ ತನ್ನ ರಾಜಕೀಯ ಪ್ರಾಬಲ್ಯ ವಿಸ್ತರಿಸಿಕೊಳ್ಳುವುದಕ್ಕೂ ಬುನಾದಿ ಆಯಿತು. 2014ರ ಲೋಕಸಭಾ ಚುನಾವಣೆ ಪೂರ್ವದಲ್ಲಿ ದೇಶದಲ್ಲಿ ಬಿಜೆಪಿ ಕೇವಲ 7 ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿತ್ತು. ಮುಂದೆ 5ರಿಂದ ಏಳೇ ವರ್ಷಗಳಲ್ಲಿ ದೇಶದ 21 ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಥವಾ ಮಿತ್ರಪಕ್ಷಗಳ ನೆರವಿನಿಂದ ಬಿಜೆಪಿ ಸರ್ಕಾರ ರಚಿಸಿತು. ಮಾತ್ರವಲ್ಲ, ಬಹುತೇಕ ರಾಜ್ಯಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ತನ್ನ ಸಂಘಟನಾ ಜಾಲವನ್ನು ಬಲವಾಗಿ ವಿಸ್ತರಿಸಿಕೊಂಡಿದೆ. ನೋಡನೋಡುತ್ತ 5 ವರ್ಷಗಳ ಆಳ್ವಿಕೆ ನಂತರ 2019ರ ಸಾರ್ವತ್ರಿಕ ಚುನಾವಣೆಯಲ್ಲಿ 303 ಸ್ಥಾನ ಗಳಿಸಿ 2ನೇ ಅವಧಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದ್ದು ದೇಶದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು.

ವಿಚಾರದಿಂದ ಆಚಾರ: ಆಡಳಿತ, ರಾಜಕೀಯ ಅಂತ ಅಂದಮೇಲೆ ಪಾರದರ್ಶಕ ಆಡಳಿತ, ಸಾಮಾಜಿಕ ನ್ಯಾಯ, ಅಂತ್ಯೋದಯ ಚಿಂತನೆ, ಅಂಬೇಡ್ಕರ್ ತತ್ವ ಇವೆಲ್ಲ ಚರ್ಚೆಯ ಮುನ್ನೆಲೆಗೆ ಬರಲೇಬೇಕು. ಆ ದೃಷ್ಟಿಯಿಂದ ನೋಡಿದರೆ ಈವರೆಗಿನ ಆಡಳಿತದಲ್ಲಿ ಸ್ವತಃ ಪ್ರಧಾನಿ ಅಥವಾ ಅವರ ಸಂಪುಟದ ಸಚಿವರಲ್ಲಿ ಒಬ್ಬರೇ ಒಬ್ಬರ ಮೇಲೂ ಒಂದೇ ಒಂದು ಭ್ರಷ್ಟಾಚಾರ ಹಗರಣದ ಕಪ್ಪುಚುಕ್ಕೆ ಇಲ್ಲ. ಸಾಮಾಜಿಕ ನ್ಯಾಯದ ವಿಷಯಕ್ಕೆ ಬರುವುದಾದರೆ ಮೋದಿ ಸಂಪುಟದಲ್ಲಿ ಸತತ ಮೂರೂ ಅವಧಿಗಳಲ್ಲಿ ಶೇಕಡ 60ಕ್ಕಿಂತ ಹೆಚ್ಚು ಸಚಿವರು ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದವರಿದ್ದಾರೆ. ಇಂದು ದೇಶದಲ್ಲಿ ಅತಿ ಹೆಚ್ಚು ಎಸ್ಸಿ, ಎಸ್ಟಿ ಶಾಸಕರು, ಸಂಸದರನ್ನು ಹೊಂದಿರುವ ಪಕ್ಷ ಬಿಜೆಪಿ. ಪಂಚಾಯತ್​ನಿಂದ ಹಿಡಿದು ವಿಧಾನಪರಿಷತ್, ರಾಜ್ಯಸಭೆ, ರಾಜ್ಯಪಾಲ, ರಾಷ್ಟ್ರಪತಿ ನೇಮಕದವರೆಗೆ ಎಲ್ಲ ಹಂತಗಳಲ್ಲಿ ಸಂವಿಧಾನದ ಮತ್ತು ಸಂವಿಧಾನಕರ್ತರ ಆಶಯವಾದ ಸಾಮಾಜಿಕ ನ್ಯಾಯವನ್ನು ಜತನದಿಂದ ಪರಿಪಾಲನೆ ಮಾಡಿದ ಪಕ್ಷವೂ ಬಿಜೆಪಿ.

ಇನ್ನು ಸಂವಿಧಾನಕ್ಕೆ, ಅಂಬೇಡ್ಕರ್ ತತ್ವಕ್ಕೆ ಆದ್ಯತೆ ನೀಡುವ ವಿಚಾರಕ್ಕೆ ಬರುವುದಾದರೆ, ಅಂಬೇಡ್ಕರ್ ಅವರನ್ನು ಅವರ ಜೀವಿತಾವಧಿಯಲ್ಲಿ ರಾಜಕೀಯ ಅಧಿಕಾರದ ಏಕಸ್ವಾಮ್ಯ ಹೊಂದಿದ್ದ ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಚುನಾಯಿತ ಶಾಸಕ, ಸಂಸದ, ಮಂತ್ರಿ, ಪ್ರಧಾನಿ, ರಾಷ್ಟ್ರಪತಿ ಹೀಗೆ ಏನು ಬೇಕಾದರೂ ಆಗಬಹುದಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಏನೂ ಆಗಲು ಬಿಡಲಿಲ್ಲ. ಇತಿಹಾಸದ ಮಾತು ಹೇಗೂ ಇರಲಿ, ಇತ್ತೀಚೆಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಕರ್ನಾಟಕ ಸರ್ಕಾರದ ಹಾಲಿ ಮಂತ್ರಿ ಆಗಿನ ಕಾಂಗ್ರೆಸ್ ನಡೆಯನ್ನು ನಿರ್ಲಜ್ಜವಾಗಿ ಸಮರ್ಥನೆ ಮಾಡಿಕೊಳ್ಳುತ್ತ, ‘ಹೌದು, ಏನೀಗ? ಆಗಿನ ರಾಜಕೀಯ ಪರಿಸ್ಥಿತಿ ಹಾಗಿತ್ತು’ ಎಂದು ಹೇಳಿರುವುದು ಇತಿಹಾಸಕ್ಕೆ ಹಿಡಿದ ವರ್ತಮಾನದ ಕನ್ನಡಿ. ಅಂಬೇಡ್ಕರ್ ಅವರ ಮರಣಾನಂತರವೂ ಈ ಹಗೆತನ, ಉದಾಸೀನ ಕೊನೆಯಾಗಲಿಲ್ಲ ಎಂಬುದು ಮತ್ತೂ ಬೇಸರದ ಸಂಗತಿ. ಎಷ್ಟೆಂದರೆ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ ಕೊಡುವುದಕ್ಕೂ ಬಿಜೆಪಿ ಬೆಂಬಲಿತ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಯಿತು.

ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚತೀರ್ಥಕ್ಷೇತ್ರಗಳ ಅಭಿವೃದ್ಧಿಗೆ ಮೋದಿ ಸರ್ಕಾರ ಕೈಗೊಂಡ ಕ್ರಮ ಐತಿಹಾಸಿಕ. ಅಂಬೇಡ್ಕರ್ ಅವರ ಜನ್ಮಭೂಮಿ ಮಧ್ಯಪ್ರದೇಶದ ಮೊಹುವಾ, ಶಿಕ್ಷಣಭೂಮಿ ಲಂಡನ್, ದೀಕ್ಷಾಭೂಮಿ ಮಹಾರಾಷ್ಟ್ರದ ನಾಗಪುರ, ಮಹಾಪರಿನಿರ್ವಾಣ ಭೂಮಿ ದೆಹಲಿ ಮತ್ತು ಚೈತನ್ಯ ಭೂಮಿ ಮುಂಬೈ- ಈ ಎಲ್ಲವನ್ನೂ ಪಂಚತೀರ್ಥಕ್ಷೇತ್ರಗಳೆಂದು ಹೆಸರಿಸಿ, ಅಭಿವೃದ್ಧಿಪಡಿಸಿ ಇಡೀ ಜಗತ್ತಿನ ಜನ ನೋಡುವಂತೆ ಮಾಡಿದ್ದು ಮೋದಿ ಸರ್ಕಾರದ ಬದ್ಧತೆಗೆ ಮಗದೊಂದು ಸಾಕ್ಷಿ. ಭಾರತದಲ್ಲಿ ವಿಕಾಸಪರ್ವದ ವಿಚಾರಕ್ಕೆ ಬರೋಣ. ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದೆ. ಆಗಿನ ಸರ್ಕಾರಗಳು ಮತ್ತು ಈಗಿನ ಸರ್ಕಾರದ ತುಲನೆಗೆ ಹೋಗುವುದು ಬೇಡ, ಬದಲಾಗಿ ಕೇವಲ 10 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಏನೆಲ್ಲ ಆಗಿದೆ ಎಂಬುದಕ್ಕೆ ಸಂಬಂಧಿಸಿದ ಕೆಲ ಮಹತ್ವದ ಸಂಗತಿಗಳನ್ನು ಮಾತ್ರ ನಾನಿಲ್ಲಿ ಪಟ್ಟಿ ಮಾಡುತ್ತೇನೆ. ಬಡತನ ನಿವಾರಣೆಗಾಗಿ ‘ಗರೀಬಿ ಹಟಾವೋ’ದಂತಹ ಘೊಷಣೆ, ಅಭಿವೃದ್ಧಿಯ ಮಾತುಗಳನ್ನು ನಾವು ಅದೆಷ್ಟು ವರುಷಗಳಿಂದ ಕೇಳಿಕೊಂಡು ಬಂದಿಲ್ಲ ಹೇಳಿ? ಆದರೆ ನಿಜವಾಗಿಯೂ ಅಭಿವೃದ್ಧಿ ಕಣ್ಣಿಗೆ ಕಂಡಿದ್ದು, ಗರೀಬಿ ಹಟಾವೋ ಸಾಕಾರಗೊಂಡಿದ್ದು, ಕಳೆದ ಈ ಹತ್ತು ವರ್ಷಗಳಲ್ಲಿ ಅಲ್ಲವೇ?

ಭ್ರಷ್ಟಾಚಾರರಹಿತ ಆಡಳಿತದ ವಿಚಾರಕ್ಕೆ ಬರೋಣ. ಕಾಂಗ್ರೆಸ್ಸಿನ ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ‘ದೆಹಲಿಯಲ್ಲಿ ಒಂದು ರೂ. ಬಿಡುಗಡೆಯಾದರೆ ಕಟ್ಟಕಡೆಯ ವ್ಯಕ್ತಿಗೆ 15 ಪೈಸೆ ತಲುಪುತ್ತದೆ’ ಎಂದಿದ್ದರು. ಈಗ ಆ ಮಾತು ಸುಳ್ಳಾಗಿ ದೆಹಲಿಯಲ್ಲಿ ಬಿಡುಗಡೆ ಆಗುವ ಒಂದು ರೂಪಾಯಿ ಪೂರ್ತಿಯಾಗಿ ಕಟ್ಟಕಡೆಯ ವ್ಯಕ್ತಿಗೆ ನೇರ ಬಟವಾಡೆ ವ್ಯವಸ್ಥೆ ಬಂದಿದೆ. ಡಿಬಿಟಿ ಮೂಲಕ ಹತ್ತು ವರ್ಷಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 3.7 ಲಕ್ಷ ಕೋಟಿ ರೂ. ಹಾಗೂ ಪಿಎಂ ಫಸಲ್ ವಿಮಾ ಯೋಜನೆಯಡಿ 1.7 ಲಕ್ಷ ಕೋಟಿ ರೂ. ಅರ್ಹ ಫಲಾನುಭವಿಗಳಿಗೆ ತಲುಪಿರುವುದು ಒಂದು ಉದಾಹರಣೆ ಮಾತ್ರ. ಉಳಿದಂತೆ, ಆಡಳಿತದ ಪರಿಭಾಷೆಯಲ್ಲಿ ಅನ್ನ, ಆರೋಗ್ಯ, ವಸತಿ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣ, ಮಹಿಳಾ ಸಬಲೀಕರಣದಂಥ ಸಂಗತಿಗಳನ್ನು ಅಭಿವೃದ್ಧಿಯ ಮೂಲಾಂಶಗಳನ್ನಾಗಿ ನೋಡಲಾಗುತ್ತದೆ.

ಆ ದೃಷ್ಟಿಯಲ್ಲಿ ಕೆಲ ಅಂಕಿಅಂಶಗಳನ್ನು ನಾವು ಗಮನಿಸುವುದಾದರೆ, ಕಳೆದ 75 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ 10 ವರ್ಷಗಳಲ್ಲಿ ಸಾಧಿಸಿ ಮೈಲಿಗಲ್ಲು ಸ್ಥಾಪಿಸಿದ್ದೇವೆ. ಉದಾಹರಣೆಗೆ, ಪಿಎಂ ಆವಾಸ್ ಯೋಜನೆಯಡಿ 4 ಕೋಟಿ ವಸತಿರಹಿತರಿಗೆ ವಸತಿ, ಸ್ವಚ್ಛಭಾರತ್ ಯೋಜನೆಯಡಿ 12 ಕೋಟಿ ಮನೆಗಳಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ, ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ 81 ಕೋಟಿ ನಾಗರಿಕರಿಗೆ ನಿರಂತರ ಉಚಿತ ಅಹಾರಧಾನ್ಯ, 15 ಕೋಟಿ ಮನೆಗಳಿಗೆ ನಳದ ಮೂಲಕ ಶುದ್ಧ ಕುಡಿಯುವ ನೀರು, 9 ಕೋಟಿಗೂ ಅಧಿಕ ನಾಗರಿಕರು ಆಯುಷ್ಮಾನ್ ಯೋಜನೆಯಡಿ ಸುಮಾರು 1.3 ಲಕ್ಷ ಕೋಟಿ ರೂ. ವಿಮಾ ಸೌಲಭ್ಯ ಪಡೆದಿದ್ದಾರೆ.

ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ದೃಷ್ಟಿಯಿಂದ ನೋಡುವುದಾದರೆ ಮುದ್ರಾ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ಉದ್ಯಮದಾರರಿಗೆ 15.5 ಕೋಟಿ ರೂ. ಸಾಲ (ಅರ್ಧದಷ್ಟು ಮಹಿಳೆಯರು ಫಲಾನುಭವಿಗಳು), 68 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಖಾತರಿರಹಿತ ಸಾಲ, ಸ್ಟ್ಯಾಂಡಪ್ ಇಂಡಿಯಾ ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯದವರಿಗೆ 14,700 ಕೋಟಿ ರೂ. ಸಾಲ, ಹಿಂದುಳಿದವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಇಬ್ಬರಿಗೂ ವೃತ್ತಿಪರ ಉನ್ನತ ಶಿಕ್ಷಣಕ್ಕೆ ಮೀಸಲಾತಿ ವಿಸ್ತರಣೆ, 10 ವರ್ಷಗಳಲ್ಲಿ 17.60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಸ್ಟಾರ್ಟಪ್​ಗಳಿಗೆ ನೀಡುತ್ತಿರುವ ಉತ್ತೇಜನದಿಂದ ಭಾರತ ಜಾಗತಿಕ ಸ್ಟಾರ್ಟಪ್ ಹಬ್ ಆಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.

ಕೃಷಿ ಬಜೆಟ್ 5 ಪಟ್ಟು ಅಧಿಕಗೊಂಡಿದ್ದು, ಆಹಾರ ಉತ್ಪಾದನೆಯ ನೂರು ಪಟ್ಟು ಹೆಚ್ಚಳ, ಆಹಾರ ಸಂಸ್ಕರಣಾ ಸಾಮರ್ಥ್ಯ 20 ಪಟ್ಟು ವೃದ್ಧಿಸಿದ್ದು, ಉಜ್ವಲಾ ಯೋಜನೆಯಡಿ 10.33 ಕೋಟಿ ಮನೆಗಳಿಗೆ ಉಚಿತ ಎಲ್​ಪಿಜಿ ಸಂಪರ್ಕ ನೀಡಿ ಹೊಗೆರಹಿತ ಅಡುಗೆಮನೆ ನಿರ್ಮಾಣ ಮಾಡಲಾಗಿದೆ. ಇದೆಲ್ಲವೂ ಒಂದೆಡೆಯಾದರೆ, ದಿನಕ್ಕೆ ಸರಾಸರಿ 37 ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಿದ್ದು ವಿಶ್ವದಾಖಲೆ. 1980-90ರ ದಶಕದಲ್ಲಿ ಭೂಮಿಪೂಜೆ ನೆರವೇರಿಸಿದ್ದ ರಸ್ತೆ, ಸೇತುವೆ, ಸುರಂಗಮಾರ್ಗ, ರೈಲ್ವೆ ಲೈನ್ ಕಾಮಗಾರಿಗಳು 2014ರಿಂದ 2025ರ ನಡುವೆ ಉದ್ಘಾಟನಾ ಭಾಗ್ಯ ಕಂಡಿವೆ. ವಿಜ್ಞಾನ, ತಂತ್ರಜ್ಞಾನ, ಯುದ್ಧೋಪಕರಣ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರಗೊಳ್ಳುತ್ತಿದೆ. ಇದೆಲ್ಲದರ ಒಟ್ಟು ಪರಿಣಾಮ ಭಾರತ ಜಾಗತಿಕವಾಗಿ ಹತ್ತನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದು ಅಗಾಧ ಸಾಧನೆ ಮಾಡಿದೆ. ಈ ಘಳಿಗೆಯಲ್ಲಿ ಭಾರತ ಎಲ್ಲದರಲ್ಲೂ ಮೊದಲ ಸ್ಥಾನಕ್ಕೇ ಏರುವಂತಾಗಲೆಂದು ಪ್ರತಿಕ್ಷಣ ಪ್ರತಿಯೊಬ್ಬರೂ ಹಾರೈಸೋಣ ಅಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net