

ಸುಖದುಃಖೇ ಸಮೇ ಕೃತ್ವಾ: ಜೀವನದಲ್ಲಿ ಕಷ್ಟ, ಸುಖಗಳು ಒಂದು ನಾಣ್ಯದ ಎರಡು ಮುಖಗಳಾಗಿ ನಮ್ಮ ಮುಂದೆ ಇರುತ್ತವೆ ಎಂದು ತಿಳಿದವರು ಹಲವು ಮಂದಿ, ಆದರೆ ಅದನ್ನು ಬಂದ ಹಾಗೆಯೇ ಸ್ವೀಕರಿಸಿ ಎದುರಿಸಿದವರು ವಿರಳ. ಅಂತಹ ವಿರಳ ಹಾಗೂ ಸರಳ ಜೀವಿ ಶ್ರೀವಿಶ್ವೇಶತೀರ್ಥರು. ಐದಾರು ದಶಕಗಳ ಹಿಂದೆ ಹತ್ತಾರು ಮೈಲಿ ನಡೆದು, ದೋಣಿ ಹಿಡಿದು ನದಿ ದಾಟಿ, ಮಠ ಸೇರಿದ ದಿನಗಳನ್ನೂ ಕಂಡವರು. ಒಂದೇ ದಿನದಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಮಂಗಳೂರಿಗೆ ವಿಮಾನದಲ್ಲಿ ತೆರಳಿ ಕಾರ್ಯಕಲಾಪಗಳನ್ನು ಮುಗಿಸಿದ ಅನುಭವವನ್ನೂ ಹೊಂದಿದ್ದು ಇವರ ವೈಶಿಷ್ಟ್ಯ. ಊಹಿಸಿಯೂ ಇರದ ಘಟನೆಗಳು ನಡೆದಾಗ ಕುಗ್ಗಲಿಲ್ಲ. ವಿರೋಧಗಳಿಗೆ ಜಗ್ಗಲಿಲ್ಲ. ಅಪಮಾನಗಳಿಗೆ ಬಗ್ಗಲಿಲ್ಲ. ಸಮ್ಮಾನಗಳಿಗೆ ಹಿಗ್ಗಲಿಲ್ಲ. ಹೊಗಳಿಕೆಗೆ ಉಬ್ಬಲಿಲ್ಲ.
‘ದೀನಜನರ ಸೇವೆಯೇ ಭಗವಂತನಿಗೆ ಕಡ್ಡಾಯವಾಗಿ ಸಂದಾಯವಾಗಬೇಕಾದ ಕಂದಾಯ’ ಎಂಬುದು ಶ್ರೀಗಳ ಧ್ಯೇಯವಾಕ್ಯ. ಸಂಚಾರದ ಸಂದರ್ಭದಲ್ಲಿ ಗದಗಿನಿಂದ ಬಾಗಲಕೋಟೆಗೆ ಹೋಗುವ ದಾರಿಯಲ್ಲಿ ರಣಬಿಸಿಲಿಗೆ ಬರಡಾದ ಕುರುಡಗಿ ಎಂಬ ಊರೊಂದು ಕಾಣಿಸಿತು. ಹಸಿರಿನ ಉಸಿರೇ ಇರಲಿಲ್ಲ. ಶ್ರೀಗಳು ವಾಹನದಿಂದ ಇಳಿದು ರೈತನನ್ನು ಮಾತನಾಡಿಸಿದರು. ಬರದ ದುರ್ಭರತೆಯನ್ನು ಅರಿತು ಮನಸ್ಸು ಮಮ್ಮಲ ಮರುಗಿತು. ತಕ್ಷಣವೇ ಒಂದೂವರೆ ಲಕ್ಷ ರೂಪಾಯಿ ಹಣ ನೀಡಿದರು. ಹತ್ತಿರದ ನಾಲ್ಕಾರು ಹಳ್ಳಿಗಳ ಬೀದಿಬೀದಿ ತಿರುಗಿ ಕೆಲಸದ ಅಗತ್ಯವನ್ನು ತಿಳಿಸಿ ಅದೇ ಊರುಗಳ ಶ್ರಮಿಕರನ್ನು ಕರೆದು ಹೂಳೆತ್ತುವ ಕಾರ್ಯದಲ್ಲಿ ತೊಡಗುವಂತೆ ಮಾಡಿದರು. ಹಸಿವೆ, ನೀರಡಿಕೆ ಮರೆತು, ವಿಹಿಂಪದ ಸಹಕಾರ ಪಡೆದು ಜೋಳಿಗೆ ಹಿಡಿದು ಬೇಡಿದರು. ಅದರಿಂದಲೇ ಶ್ರಮಿಕರಿಗೆ ಕೂಲಿ ನೀಡಲಾಯಿತು. ಅನೇಕ ಅಡೆತಡೆಗಳ ನಡುವೆ ಹೂಳೆತ್ತುವ ಕಾರ್ಯ ನಡೆಯಿತು. ಜನರಿಗೆ ಜೀವನ ಮೌಲ್ಯಗಳ ಪರಿಚಯವಾಯಿತು. ಶ್ರೀಗಳ ಸಂದೇಶಗಳಿಂದ ಮನಸಿನ ಕೊಳೆಯೂ ಕಳೆಯಿತು. ಹಸು, ಕುರಿಗಳನ್ನು ನೀಡಿ ಜೀವನಕ್ಕೆ ದುಡಿಯುವ ದಾರಿ ತೋರಲಾಯಿತು. ಪರಸ್ಪರ ಸಹಕಾರದ ಮನೋಭಾವ ಬೆಳೆಯಿತು. ಪಾನನಿರೋಧದ ಜಾಗೃತಿ ಮೂಡಿಸಿ, ಮನುಷ್ಯರು ಸಂಸ್ಕಾರವಂತರಾಗುವಂತೆ ಮಾಡ
ಲಾಯಿತು. ಕೆರೆಯಲ್ಲಿ ನೀರು ತುಂಬಿದಂತೆ ಜನರ ಮನದಲ್ಲೂ ಉತ್ಸಾಹದ ಚಿಲುಮೆಯೊಡೆಯಿತು. 1986ರ ಮಾರ್ಚ್ 28ರಂದು ಹೂಳೆತ್ತುವ ಈ ಕಾರ್ಯ ಆರಂಭವಾಗಿ 1986ರ ಜೂನ್ 19ರಂದು ಪೂರ್ಣಗೊಂಡಿತು. ಊರು ಹಸಿರಾಯಿತು. ಕೈ ಕೆಸರಾಯಿತು. ಬಾಯಿ ಮೊಸರಾಯಿತು.
ಕರ್ನಾಟಕದಲ್ಲಿ 1980ರ ದಶಕದಲ್ಲಿ ಹಲವಡೆ ಭೀಕರ ಬರ. ಆಗ ಅನೇಕ ಕಡೆ ಹಸಿದ ಜನರಿಗಾಗಿ ಸುಮಾರು 20 ಗಂಜಿ ಕೇಂದ್ರಗಳು, 13 ಗೋರಕ್ಷಾ ಕೇಂದ್ರಗಳನ್ನು ನಿರ್ವಿುಸಿ ಆಶ್ರಯ ನೀಡಿದರು. ವಿಶ್ವ ಹಿಂದೂ ಪರಿಷತ್ತಿಗೆ ಶ್ರೀಗಳ ನಾಮಬಲದಿಂದಲೇ ಹಲವೆಡೆ ಸಾಮಾಜಿಕ ಕಾರ್ಯಗಳನ್ನು ನಡೆಸಲು ಸಾಧ್ಯವಾಯಿತು. ಭೂಕಂಪಕ್ಕೆ ತುತ್ತಾಗಿದ್ದ ಭೀಮಾ ತೀರದ ಇಂಡಿ ತಾಲೂಕಿನ ಗೋವಿಂದಪುರದಲ್ಲಿ ಸುಮಾರು 60 ಮನೆಗಳನ್ನು ಕಟ್ಟಿಸಿ ಸಂತ್ರಸ್ತರಿಗೆ ಹಂಚಲಾಯಿತು. ಹೈದರಾಬಾದಿನ ಅಲ್ಕಬೀರ ಎಂಬ ಕಸಾಯಿಖಾನೆಯ ಪೊಲೀಸ್ ಸರ್ಪಗಾವಲನ್ನು ಭೇದಿಸಿ ಒಳನುಗ್ಗಿದರು. ವಿಹಿಂಪದ ಸಾವಿರಾರು ಕಾರ್ಯಕರ್ತರ ಶ್ರಮದ ಫಲವಾಗಿ ಮಾತುಕತೆ ನಡೆದು ಗೋವಧೆಯನ್ನು ನಿಲ್ಲಿಸಲಾಯಿತು. ಶ್ರೀಗಳನ್ನು ಬಂಧಿಸಲಾಗದೆ, ಮಾತಿಗೆ ಉತ್ತರಿಸಲಾಗದೆ ಗೋವುಗಳ ಮರಣಮೃದಂಗದ ದನಿಗೆ ತೆರೆ ಬಿತ್ತು. ಬಳ್ಳಾರಿಯ ಸಂಗನಕಲ್ಲಿನಲ್ಲಿ ಜಾತಿ ವಿದ್ವೇಷದ ದಳ್ಳುರಿ ಹೊತ್ತಿ ಉರಿದಾಗ, ಕೇರಿ ಒಳಗೆ ಹೊಕ್ಕರು. ಅಪಾಯದ ಕುರಿತಾಗಿ ನೀಡಿದ ಎಚ್ಚರಿಕೆಗಳನ್ನು ಲೆಕ್ಕಿಸದೆ ಸಂಕಷ್ಟಗಳನ್ನು ವಿಚಾರಿಸಿದರು. ಸವರ್ಣೀಯರೊಂದಿಗೆ ರಾಜಿ ನಡೆಸಿದ ಫಲವಾಗಿ ಸಮಸ್ಯೆ ತೀರಿಹೋಯಿತು. ಶ್ರೀಗಳ ನೇತೃತ್ವದಲ್ಲಿ ಅದೆಷ್ಟೋ ಧರ್ಮ ಸಂಸತ್ತುಗಳು, ಹಿಂದೂಸಮಾವೇಶಗಳು ನಡೆದು ಸಮಾಜಕ್ಕೆ ಸನಾತನ ಧರ್ಮದ ಉಳಿವಿಗಾಗಿ ಏನೇನು ಮಾಡಬೇಕೆಂಬುದು ಮನವರಿಕೆಯಾಯ್ತು.
ತಿಳಿದು ಮಾಡುವ ಜಾಣತನ: ಒಮ್ಮೆ ಶಿಷ್ಯನೊಬ್ಬ ಗುರುಗಳನ್ನು ಕೇಳಿದ್ದ, ‘ಎಳವೆಯಲ್ಲಿ ನಿಮ್ಮನ್ನು ಈ ಪ್ರಾಪಂಚಿಕ ಆಕರ್ಷಣೆಗಳು ಸೆಳೆದಿಲ್ಲವೇ?’ ಎಂದು. ‘ಯಾವಾಗಲೂ ಜನರ ಕಣ್ಣೆದುರು ಕಾಲ ಕಳೆಯುತ್ತಿದ್ದೆ. ನಿರಂತರ ಏನಾದರೂ ಒಂದು ಕಾರ್ಯಭಾರವನ್ನು ಹೊತ್ತಿದ್ದೆ. ಖಾಲಿ ಕುಳಿತು ಯೋಚಿಸಿದರಲ್ಲವೇ ಬೇಡದ ಚಿಂತನೆಗಳು ಬರುವುದು. ಮನದೊಳಗೆ ಬೀಡು ಬಿಡುವುದು’ ಎಂದು ಮಾರ್ವಿುಕ ಉತ್ತರ ನೀಡಿದ್ದರು. ಇಷ್ಟು ಜನರ ನಡುವೆ ಇದ್ದರೂ ಏಕಾಂತವನ್ನು ಕಳೆದುಕೊಳ್ಳುತ್ತಿರಲಿಲ್ಲ. ಸಾವಿರಾರು ಜನ ತುಂಬಿದ ಸಭೆಯಲ್ಲೂ ಭಗವಂತನ ನಾಮಸ್ಮರಣೆ ಜಾರಿಯಲ್ಲಿ ಇರುತ್ತಿತ್ತು. ಸಭೆಯಲ್ಲಿ ನಡೆದ ಸೂಕ್ಷ್ಮಎಡವು-ತಡವನ್ನು ಗುರುತಿಸಿ, ಅಧ್ಯಕ್ಷ ಸ್ಥಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಸಂದೇಶ ನೀಡುತ್ತಿದ್ದರು. ಮಾತಿನಂತೆಯೇ, ಶ್ರೀಗಳ ಬರವಣಿಗೆಯೂ ಸ್ಪಷ್ಟ, ಸರಳ ಹಾಗೂ ಆಕರ್ಷಕ. ಅರ್ಥೈಸಿಕೊಳ್ಳಲು ಕಹಿಕಷಾಯವೆನಿಸಿದ ಗೀತೆಯನ್ನು, ‘ಗೀತಾಸಾರೋದ್ಧಾರ’ದ ರೂಪದಲ್ಲಿ ಅಂಗೈ ಬೆಣ್ಣೆಯಂತೆ ಮೆದುವಾಗಿ, ಸಿಹಿಯಾಗಿಸಿದ ಜಾಣ್ಮೆಯಂತೂ ಹೇಳತೀರದು.
ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರ- ಪೂಜನಮ್ ಮನೆ ಮನೆಗೆ ಭೇಟಿ ನೀಡಿ ಕಷ್ಟ-ಸುಖಗಳನ್ನು ವಿಚಾರಿಸಿ ಧೈರ್ಯ ತುಂಬುತ್ತಿದ್ದ ಶ್ರೀಪಾದರ ಕಾಳಜಿ ಅನ್ಯಾದೃಶ. ಕೆಲವೊಮ್ಮೆ ಜನರ ದುಸ್ಥಿತಿಯನ್ನು ಕಂಡು ಅವರ ಪಾದ ಕಾಣಿಕೆಗಳನ್ನು ಸ್ವೀಕರಿಸದೆ ಮನೆಯವರಿಗೆ ಮರಳಿಸಿ ಸಹಾಯ ಮಾಡಿ ಬರುತ್ತಿದ್ದುದೂ ಉಂಟು. ಕೆಲವು ಸಲ ದಿನವೊಂದಕ್ಕೆ 90 ಪಾದಪೂಜೆಗಳನ್ನು ಮುಗಿಸಿ ಮಧ್ಯಾಹ್ನದ ಪೂಜೆಗೆ ಬಂದಿದ್ದಿದೆ. ಹತ್ತೇ ರೂಪಾಯಿ ಕಾಣಿಕೆ ಕೊಟ್ಟ ಮನೆಯಲ್ಲೂ , 10 ಲಕ್ಷ ರೂ. ನೀಡಿದ ಕಡೆಯಲ್ಲೂ ಅವರ ಅನುಗ್ರಹ ದೃಷ್ಟಿ ಒಂದೇ. ಸಾಹಿತಿಗಳು, ಪತ್ರಕರ್ತರು, ರಾಜಕಾರಣಿಗಳು, ಉದ್ಯಮಿಗಳು, ನ್ಯಾಯವಾದಿಗಳು, ಸರ್ಕಾರಿ ಹುದ್ದೆಗಳಲ್ಲಿ ಇದ್ದವರು ಹೀಗೆ ಎಲ್ಲರಲ್ಲೂ ಬೆರೆಯುತ್ತಿದ್ದರು.
ಆದರೆ, ಸಾಮಾನ್ಯ ಜನರಿಗೆ ಸಿಗುವ ತಮ್ಮ ಸರಳತೆಯನ್ನು ಮಾತ್ರ ತಪ್ಪಿಸಿಕೊಳ್ಳಲಿಲ್ಲ. ಎತ್ತರದ ಪೀಠ, ಅಪಾಯಿಂಟ್ಮೆಂಟ್ ಇತ್ಯಾದಿಗಳು ಗುರುಗಳ ಜೀವನದಲ್ಲಿ ಎಂದೂ ಇಣುಕದ ಸಂಗತಿಗಳು. ಮತದಾರನಾಗಿ ಸರ್ಕಾರದ ತಪ್ಪುನಡೆಗಳನ್ನು ಪ್ರಶ್ನಿಸುತ್ತಿದ್ದರು. ಇವರಿಂದಾಗಿ ಸಮಾಜ ಜಾಗೃತಗೊಳ್ಳುತ್ತಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ತಿನ ಜೊತೆ ದೇಶ, ಧರ್ಮ, ಸಂಸ್ಕೃತಿಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ಸತತ ಬೆನ್ನೆಲುಬಾಗಿ ನಿಂತರು. ಎದುರಾದ ತೊಂದರೆಗಳ ನುಂಗಿದ ವಿಷಕಂಠನೋ... ಕುಕ್ಕಿದ ಹಣ್ಣಿನಂತೆ, ಅಚ್ಚುಕಟ್ಟಾಗಿ ತತ್ವ ಸಂದೇಶಗಳನ್ನು ನೀಡುವ ಶುಕನೋ... ರಾಮ ಪ್ರತಿಷ್ಠೆ ಎಂಬ ಕಾರ್ಯ ಸಾಧಿಸುವವರೆಗೂ ಅಚಲನಾಗಿ ನಿಂತ ಹನುಮಂತನೋ...! ಎಲ್ಲ ವ್ಯಕ್ತಿತ್ವಗಳೂ ಮೇಳವಿಸಿದ ವಿಶಿಷ್ಟ ಚೇತನ ಶ್ರೀವಿಶ್ವೇಶ ತೀರ್ಥರು.
(ಲೇಖಕರು ಸಂಸ್ಕೃತ ಉಪನ್ಯಾಸಕರು)