

ಡಿಪ್ಲೊಮಾ ಮತ್ತು ಇಂಜಿನಿಯರಿಂಗ್: ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆಗಳಾಗಿ ಕಾಣುವುದು ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಎಂಬಿಬಿಎಸ್. ಅದರಲ್ಲೂ ಕೆಲ ನಿರ್ದಿಷ್ಟ ಬ್ರಾ್ಯಂಚ್ಗಳತ್ತ ವಾಲುವುದು ಸಾಮಾನ್ಯ. ಅದರ ಹೊರತಾಗಿಯೂ ಅನೇಕ ವಿಶಿಷ್ಟ ಬ್ರಾ್ಯಂಚ್ಗಳ ಆಯ್ಕೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಿದೆ. ಡಿಪ್ಲೊಮಾದಲ್ಲಿ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಬೇಕರಿ ಮತ್ತು ಕನ್ಪೆಕ್ಷನರಿ, ಫುಡ್ ಪೊ›ಡಕ್ಷನ್, ಫ್ಯಾಷನ್ ಡಿಸೈನ್, ಬಿಜಿನೆಸ್, ಹೋಟೆಲ್ ಮ್ಯಾನೇಜ್ಮೆಂಟ್ ಹಾಗೂ ಕಮರ್ಷಿಯಲ್ ಪ್ರಾ್ಯಕ್ಟಿಸ್ ಇವುಗಳಲ್ಲೂ ಅನೇಕ ರೀತಿಯ ಆಯ್ಕೆ ನಿಮಗಿದೆ. ಹಾಗೆಯೇ ಇಂಜಿನಿಯರಿಂಗ್ ಮಾಡುವ ವಿದ್ಯಾರ್ಥಿಗಳಿಗೆ ಸುಮಾರು 55 ಬ್ರಾ್ಯಂಚ್ಗಳ ಆಯ್ಕೆಯಿದೆ. ಸಿವಿಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್, ಏರೋನಾಟಿಕಲ್, ಮರೈನ್, ಆಟೋ ಮೊಬೈಲ್, ಇನ್ಪಾಮೇಶನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್, ಕೆಮಿಕಲ್ ಇಂಜಿನಿಯರಿಂಗ್ ಅದರಲ್ಲಿ ಪ್ರಮುಖವಾದವು.
ನರ್ಸಿಂಗ್ ವೃತ್ತಿಗೆ ಇನ್ನಿಲ್ಲದ ಬೇಡಿಕೆ: ಪಿಯುಸಿ ನಂತರ ನರ್ಸಿಂಗ್ ಪದವಿ ಶಿಕ್ಷಣವನ್ನು ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಜಿಲ್ಲಾಸ್ಪತ್ರೆಗಳಿಗೆ ಹೊಂದಿಕೊಂಡಿರುವ ಸರ್ಕಾರಿ ನರ್ಸಿಂಗ್ ಶಾಲೆಗಳಲ್ಲಿ ನೀಡಲಾಗುತ್ತದೆ. ವೈದ್ಯಕೀಯ ಕಾಲೇಜುಗಳಿರುವ ಕಡೆಗಳಲ್ಲಿ ನರ್ಸಿಂಗ್ ಪದವಿ ಕೋರ್ಸ್ಗಳನ್ನು ಆರಂಭಿಸಲಾಗಿರುತ್ತದೆ. ಜತೆಗೆ ಖಾಸಗಿ ಸಂಸ್ಥೆಗಳು, ಆಸ್ಪತ್ರೆಗಳಲ್ಲೂ ನರ್ಸಿಂಗ್ ಶಿಕ್ಷಣ ನೀಡುವ ಕಾಲೇಜುಗಳನ್ನು ತೆರೆಯಲಾಗಿರುತ್ತದೆ.
ವಾಯುಮಂಡಲ ಶಾಸ್ತ್ರಜ್ಞ (ಮೆಟಿರೊಲಾಜಿಸ್ಟ್): ಪಿಯುಸಿ ನಂತರ ಮೆಟಿರೊಲಾಜಿಯಲ್ಲಿ ಡಿಪ್ಲೊಮಾ ಅಥವಾ ಬಿಎಸ್ಸಿ (ಪಿಸಿಎಂ) ನಂತರ ಮೆಟಿರೊಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಈ ಹುದ್ದೆಗೆ ಅರ್ಹತೆ ಪಡೆಯುತ್ತಾರೆ. ಹವಾಮಾನ ವರದಿ ಸಂಸ್ಥೆಗಳು, ವಿಮಾನ ನಿಲ್ದಾಣ, ಬಂದರು, ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ, ಹವಾಮಾನ ಮುನ್ಸೂಚನಾ ಕೇಂದ್ರಗಳಲ್ಲಿ ಇಂಥ ಪರಿಣತರಿಗೆ ಉದ್ಯೋಗಾವಕಾಶ ಇದೆ.
ಅರಣ್ಯ ಸಂರಕ್ಷಣೆ ಅಧಿಕಾರಿ: ಪಿಯುಸಿ ವಿಜ್ಞಾನ ನಂತರ ಪದವಿಯಲ್ಲಿ ಅರಣ್ಯ ವಿಜ್ಞಾನ ಓದಿದವರು ಹಾಗೂ ಇಂಜಿನಿಯರಿಂಗ್ ಮಾಡಿದವರು ಎಸಿಎಫ್ ಹುದ್ದೆಗೆ ಅರ್ಹರು.ಕೆಪಿಎಸ್ಸಿ ಮೂಲಕ ನೇಮಕಾತಿ. ಆದರೆ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರಣ್ಯ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತದೆ.
ಸಹಾಯಕ ದಂತ ತಂತ್ರಜ್ಞ: ಪಿಸಿಬಿಯವರು ದಂತ ಕಾಲೇಜುಗಳಲ್ಲಿ ವೈದ್ಯರಿಗೆ ಸಹಾಯಕರಾಗಬಹುದು. ಓರಲ್ ಹೈಜಿನ್ನಲ್ಲಿ ಡಿಪ್ಲೊಮಾ /ಸರ್ಟಿಫಿಕೇಟ್ ಕೋರ್ಸ್ ಮಾಡಿದವರು ಈ ಉದ್ಯೋಗಕ್ಕೆ ಅರ್ಹರು. ಈ ತರಬೇತಿ ಪಡೆದವರಿಗೆ ಖಾಸಗಿ ಮತ್ತು ಸರ್ಕಾರಿ ದಂತ ವೈದ್ಯಕೀಯ ಆಸ್ಪತ್ರೆಗಳಲ್ಲಿ, ಚಿಕಿತ್ಸಾಲಯ ಗಳಲ್ಲಿ ಉದ್ಯೋಗಾ ವಕಾಶಗಳುಂಟು.
ಫಿಸಿಯೋಥೆರಪಿಸ್ಟ್ ಕೋರ್ಸ್: ಪಿಯುಸಿ (ಪಿಸಿಎಂಬಿ) ತೇರ್ಗಡೆಯಾದವರು ಬ್ಯಾಚಲರ್ ಡಿಗ್ರಿಯಲ್ಲಿ ಫಿಸಿಯೊಥೆರಪಿಯಲ್ಲಿ 4 ವರ್ಷಗಳ ಅಧ್ಯಯನ ಮತ್ತು 6 ತಿಂಗಳ ಶಸ್ತ್ರಚಿಕಿತ್ಸೆ ತರಬೇತಿ ಪಡೆಯಬೇಕಾಗುತ್ತದೆ. ಈ ಕೋರ್ಸ್ ನಲ್ಲಿ ಕಾರ್ಡಿಯೋ ಥೊರಾಸಿಕ್ ಡಿಸೀಸಸ್, ಜಿರಿಯಾಟ್ರಿಕ್ ಫಿಸಿಯೋಥೆರಪಿ, ಹ್ಯಾಂಡ್ ರಿಹ್ಯಾಬಿಲಿಟೇಷನ್, ಮುಂತಾದ ವಿಶೇಷ ಕೌಶಲಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.
ವೈದ್ಯಕೀಯ ದಾಖಲೆಗಳ ತಂತ್ರಜ್ಞ: ಪಿಯುಸಿ ವಿಜ್ಞಾನ ತೇರ್ಗಡೆಯಾದರೆ ಮೂರು ವರ್ಷದ ಬ್ಯಾಚಲರ್ ಡಿಗ್ರಿ ಇನ್ ಹೆಲ್ತ್ ಇನ್ಫಮೇಷನ್ ಅಡ್ಮಿನಿಸ್ಟ್ರೇಷನ್ (ಬಿ.ಎಸ್ಸಿ ಎಚ್ಐ.ಎ) ಮಾಡಬಹುದು. ಈ ಪದವಿ ಪಡೆದವರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಪ್ರಯೋಗಾಲಯಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಉದ್ಯೋಗಾವಕಾಶ ಲಭ್ಯವಾಗುತ್ತದೆ.
ಮೆಡಿಕಲ್ ಇಮೇಜಿಂಗ್ ಟೆಕ್ನಿಷಿಯನ್: ಪಿಯುಸಿ ವಿಜ್ಞಾನ, ಬಳಿಕ ಬ್ಯಾಚಲರ್ ಡಿಗ್ರಿ ಮಾಡಿ ನಂತರ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಪದವಿ ಅಥವಾ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್ ಇನ್ ಮೆಡಿಕಲ್ ಇಮೇಜಿಂಗ್ ಮಾಡಿರಬೇಕು. ಈ ಪದವಿ ಪಡೆದವರಿಗೆ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಲ್ಯಾಬಗಳಲ್ಲಿ ಉದ್ಯೋಗಾವಕಾಶ ಇರುತ್ತದೆ.
ದೃಷ್ಟಿ ಮಾಪನ ವೈದ್ಯಕೀಯ ತಂತ್ರಜ್ಞರು: ಪಿಯುಸಿ ವಿಜ್ಞಾನ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಮೂಲಕ ಬಿಎಸ್ಸಿ ಆಪ್ಟೊಮೆಟ್ರಿ ಸೇರಿ ಈ ತಂತ್ರಜ್ಞರಾಗಬಹುದು ಅಥವಾ ದೃಷ್ಟಿ ಮಾಪನದ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್ ಮಾಡಿ ತಂತ್ರಜ್ಞರಾಗಬಹುದು.
ಗಗನಸಖಿ: ಪಿಯುಸಿ ನಂತರ ಏರ್ಹೋಸ್ಟೆಸ್ ತರಬೇತಿ ಅಥವಾ ಹೋಟೆಲ್ ಮ್ಯಾನೇಜ್ವೆುಂಟ್/ ಟೂರಿಸಮ್ಲ್ಲಿ ಡಿಪ್ಲೊಮಾ ಪಡೆದವರು ಗಗನಸಖಿಯರಾಗಬಹುದು. ಈ ಶಿಕ್ಷಣದಲ್ಲಿ ಸಂವಹನ ಕೌಶಲ ಮತ್ತು ಆದರಾತಿಥ್ಯ ಸೇವಾ ಮನೋಭಾವ ಹೆಚ್ಚಾಗಿರಬೇಕು. ಈ ಶಿಕ್ಷಣ ಪಡೆದವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏರ್ಲೈನ್ಸ್ ಸಂಸ್ಥೆಗಳು ಹಾಗೂ ಐಷಾರಾಮಿ ಸಾರಿಗೆ ಹಾಗೂ ಸೇವಾ ಸಂಸ್ಥೆಗಳ ಬಸ್ ಮತ್ತು ರೈಲುಗಳಲ್ಲಿ ಉದ್ಯೋಗಾವಕಾಶಗಳಿವೆ.
ಕಮರ್ಷಿಯಲ್ ಪ್ರ್ಯಾಕ್ಟಿಸ್ ಕೋರ್ಸ್: 2 ವರ್ಷಗಳ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾ್ಯಕ್ಟಿಸ್ ಕೋರ್ಸ್ (ಡಿಸಿಪಿ) ಸೇರಿಕೊಳ್ಳಬಹುದು. ಈ ಶಿಕ್ಷಣ ಪಡೆದವರು ಸಚಿವರ ಹಾಗೂ ಅಧಿಕಾರಿಗಳ ಆಪ್ತ ಕಾರ್ಯದರ್ಶಿ/ಸಹಾಯಕರಾಗಬಹುದು. ನಂತರ ಉನ್ನತ ಹುದ್ದೆಗಳಿಗೂ ಪದೋನ್ನತಿ ಪಡೆಯುವುದಲ್ಲದೆ, ಉತ್ತಮ ವೇತನ ಭತ್ಯೆಗಳು ಲಭ್ಯವಾಗುತ್ತವೆ. ಸಾಫ್ಟ್ವೇರ್ ಇಂಜಿನಿಯರ್ಗಳಷ್ಟೇ ಇದಕ್ಕೂ ಉತ್ತಮ ಭವಿಷ್ಯವಿದೆ.
ಕಾಸ್ಟ್ ಅಕೌಂಟೆಂಟ್: ಪಿಯು ವಾಣಿಜ್ಯ ಮಾಡಿದವರು ಬಿಕಾಂ ಸೇರುತ್ತಾರೆ. ಜತೆಗೆ, ಸಿಎ ಪರೀಕ್ಷೆ ಆಕಾಂಕ್ಷಿಗಳಾಗುತ್ತಾರೆ. ಇದೇ ರೀತಿ ಇನ್ನೊಂದು ವೃತ್ತಿಪರ ಸಾಧ್ಯತೆಯ ಅವಕಾಶ ನೀಡುತ್ತದೆ ಕಾಸ್ಟ್ ಆಂಡ್ ಮ್ಯಾನೇಜ್ವೆುಂಟ್ ಅಕೌಂಟೆಂಟ್ ಕೋರ್ಸ್. ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆ ಈ ಪರೀಕ್ಷೆಗಳನ್ನು ನಡೆಸುತ್ತದೆ. ಸಿಎ ಪರೀಕ್ಷೆಯಂತೆಯೇ ಇಲ್ಲಿಯೂ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಲೆಕ್ಕ ಪರಿಶೋಧಕರಿಗೆ ಉಜ್ವಲ ಭವಿಷ್ಯ: ಪಿಯುಸಿ ನಂತರ ಸಿಎ ಫೌಂಡೇಷನ್, ಇಂಟರ್ ಹಾಗೂ ಸಿಎ ಫೈನಲ್ ಪಾಸ್ ಮಾಡಬೇಕು. ನಂತರ 5 ವರ್ಷಗಳ ಕಾಲ ಐಸಿಎಐ ಸಂಸ್ಥೆಯಲ್ಲಿ ತರಬೇತಿ ಪಡೆಯಬೇಕು. ಈ ಚಾರ್ಟೆರ್ಡ್ ಅಕೌಂಟೆಂಟ್ಗಳು ಬ್ಯಾಂಕ್, ಕಂಪನಿ, ಹಣಕಾಸು ಸಂಸ್ಥೆಗಳು, ಉದ್ದಿಮೆಗಳಲ್ಲದೆ ಸ್ವಂತವಾಗಿ ಪ್ರಾಕ್ಟಿಸ್ ಮಾಡಬಹುದು.
ಅರ್ಥಶಾಸ್ತ್ರಜ್ಞ, ಸಂಖ್ಯಾಶಾಸಜ್ಞರು: ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗೂ ಅರ್ಥಶಾಸ್ತ್ರ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿ ಪಿಎಚ್.ಡಿ.ವರೆಗೂ ಅಧ್ಯಯನ ಮಾಡಿದವರು ಅರ್ಥಶಾಸ್ತ್ರಜ್ಞರಾಗುತ್ತಾರೆ. ಭಾರತದ ಆರ್ಥಿಕ ಸೇವಾ ಪರೀಕ್ಷೆ (ಐಇಎಸ್) ಮೂಲಕ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಸಾಂಖ್ಯಿಕ ಇಲಾಖೆಗಳಲ್ಲಿ ಬ್ಯಾಂಕ್, ದೊಡ್ಡ ಕೈಗಾರಿಕೆ, ಏಜೆನ್ಸಿಗಳಲ್ಲಿ ಉದ್ಯೋಗಾವಕಾಶವಿದೆ.
ಕಾನೂನು ಪದವಿ: ವಿದ್ಯಾರ್ಥಿಗಳು ಪಿಯುಸಿ ನಂತರ ಐದು ವರ್ಷದ ಕಾನೂನು ಪದವಿಗೆ ಸೇರಬಹುದು. ಹೀಗೆ ಶಿಕ್ಷಣ ಪಡೆದವರು ಭವಿಷ್ಯದ ಉತ್ತಮ ವಕೀಲರಾಗಿ ಪ್ರಾಕ್ಟಿಸ್ ಮಾಡಬಹುದು. ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ನ್ಯಾಯಾಧೀಶರಾಗ ಬಹುದು. ಸರ್ಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ ವಕೀಲರಾಗಬಹುದು. ಬಹುರಾಷ್ಟ್ರೀಯ ಕಂಪನಿಗಳಿಗೆ, ಬ್ಯಾಂಕ್ಗಳಿಗೆ ಕಾನೂನು ಸಲಹೆಗಾರರಾಗಬಹುದು. ಹೈಕೋರ್ಟ್ನಲ್ಲಿ ಕಾನೂನು ಸಹಾಯಕ ಕಾರ್ಯದರ್ಶಿಯಾಗಿ ಸೇರಬಹುದು.
ಶೀಘ್ರಲಿಪಿಗಾರರಿಗಿದೆ ಬೇಡಿಕೆ: ಪಿಯುಸಿಯೊಂದಿಗೆ ಖಾಸಗಿ ವಾಣಿಜ್ಯ ಶಾಲೆಗಳಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳಲ್ಲಿ ಕೆಎಸ್ಇಇಬಿ ಬೋರ್ಡ್ ಮಟ್ಟದಲ್ಲಿ ಉತ್ತೀರ್ಣರಾಗಿರಬೇಕು. ಇಂತಹ ತರಬೇತಿ ಪಡೆದವರಿಗೆ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಶೀಘ್ರಲಿಪಿಗಾರರಾಗಿ ನ್ಯಾಯಾಲಯಗಳಲ್ಲಿ ತೀರ್ಪು ಬರಹಗಾರರಾಗಿ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸವಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸಿಬ್ಬಂದಿ ಆಯ್ಕೆ ಆಯೋಗ, ರಾಜ್ಯ ಸರ್ಕಾರದ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಜ್ಞಾನ ಭಂಡಾರದ ಸಂರಕ್ಷಕ ಗ್ರಂಥಪಾಲಕ: ಎಸ್ಎಸ್ಎಲ್ಸಿ ನಂತರ ಸರ್ಟಿಫಿಕೇಟ್ ಕೋರ್ಸ್ ಅಥವಾ ಪಿಯುಸಿ ನಂತರ ಡಿಪ್ಲೊಮಾ ಶಿಕ್ಷಣ, ಬಿ.ಲಿಬ್ ಅಥವಾ ಎಂ.ಲಿಬ್ ಮಾಡಿದವರು ಗ್ರಂಥಪಾಲಕರಾಗಬಹುದು. ಈ ಶಿಕ್ಷಣ ಪಡೆದವರಿಗೆ ಗ್ರಂಥಾಲಯಗಳು, ಶಿಕ್ಷಣ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು, ಪತ್ರಿಕಾಲಯದ ಗ್ರಂಥಾಲಯಗಳಲ್ಲಿ ಉದ್ಯೋಗಾವಕಾಶಗಳಿವೆ.
ಭಾಷಾಂತರಕಾರರಿಗಿದೆ ಮನ್ನಣೆ: ಪಿಯುಸಿ ನಂತರ ನಿರ್ದಿಷ್ಟ ಭಾಷೆಯಲ್ಲಿ ಸ್ನಾತಕ/ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು. ಭಾಷಾಂತರದಲ್ಲಿ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಮಾಡಿರಬೇಕು. ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಸಾಹಿತ್ಯ ಕ್ಷೇತ್ರದಲ್ಲಿ ನಿರ್ದಿಷ್ಟವಾದ ಕೌಶಲ ಹೊಂದಿರಬೇಕು. ಅನುವಾದಕರಿಗೆ ಭಾರಿ ಬೇಡಿಕೆ ಇದೆ.
ಉದ್ಘೋಷಕರು, ನಿರೂಪಕರಿಗಿದೆ ಭಾರಿ ಬೇಡಿಕೆ: ಪಿಯುಸಿ ನಂತರದ ಎಲೆಕ್ಟ್ರಾನಿಕ್ ಮೀಡಿಯಾ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾದಲ್ಲಿ ಪತ್ರಿಕೋದ್ಯಮ, ಎಲೆಕ್ಟ್ರಾನಿಕ್ ಮಾಧ್ಯಮದ ಶಿಕ್ಷಣ ಪಡೆದವರು ಈ ಹುದ್ದೆಗೆ ಅರ್ಹರು. ಉದ್ಘೋಷಕರು ಅಥವಾ ನಿರೂಪಕರಿಗೆ ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುವ ಸಂಘ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶ ಲಭ್ಯವಾಗುತ್ತದೆ. ಧ್ವನಿ ಏರಿಳಿತಗಳಲ್ಲಿ ಪ್ರಾವೀಣ್ಯ ಪಡೆದು ಕಂಠದಾನ ಕಲಾವಿದರಾಗಿಯೂ ಇವರು ಸೇವೆ ಸಲ್ಲಿಸಬಹುದು. ಇಂಥವರಿಗೆ ಟಿ.ವಿ, ಸಿನಿಮಾ ಹಾಗೂ ಇತರ ರಂಗಗಳಲ್ಲಿ ಭಾರಿ ಬೇಡಿಕೆಯಿದೆ.
ಸಾರ್ವಜನಿಕ ಸಂಪರ್ಕಾಧಿಕಾರಿ ಪಾತ್ರ: ಪಿಯುಸಿ ನಂತರ ಸಾರ್ವಜನಿಕ ಸಂಪರ್ಕದಲ್ಲಿ ಡಿಪ್ಲೊಮಾ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದವರು ಅಥವಾ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದವರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಲು ಅರ್ಹರಾಗುತ್ತಾರೆ. ಈ ಹುದ್ದೆಯು ಬಹುರಾಷ್ಟ್ರೀಯ ಕಂಪನಿಗಳು, ಸರ್ಕಾರಿ ಇಲಾಖೆ ಮುಂತಾದ ಕಡೆಗಳಲ್ಲಿ ಲಭ್ಯವಿರುತ್ತದೆ.
ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿ: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾಗಲು ಪಿಯುಸಿಯೊಂದಿಗೆ ಡಿ.ಪಿ.ಇಡಿ ತೇರ್ಗಡೆ ಯಾಗಿದ್ದರೆ ಸಾಕು. ಡಿ.ಇಡಿ ಕಾಲೇಜುಗಳಲ್ಲಿ ಡಿ.ಪಿ.ಇಡಿ ಶಿಕ್ಷಣ ಇರುತ್ತದೆ. ಈ ತರಬೇತಿ ಪಡೆದವರಿಗೆ ಶಿಕ್ಷಣ ಸಂಸ್ಥೆ ಗಳು, ಹೆಲ್ತ್ ಕ್ಲಬ್ ಮುಂತಾದೆಡೆ ಉದ್ಯೋಗಾವಕಾಶಗಳು ಲಭ್ಯವಾಗುವುದಲ್ಲದೆ, ಸ್ವಂತವಾಗಿ ಫಿಟ್ನೆಸ್ ಸೆಂಟರ್ಗಳನ್ನು ನಡೆಸಬಹುದು. ಕೇಂದ್ರ, ರಾಜ್ಯ ಸರ್ಕಾರದ ಕ್ರೀಡಾ ತರಬೇತಿ ಕೇಂದ್ರಗಳಲ್ಲೂ ನೇಮಕಾತಿಗೆ ಅವಕಾಶವಿರುತ್ತದೆ.
ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ವೇದಿಕೆ: ಸಿನಿಮಾ ಕ್ಷೇತ್ರದ ಛಾಯಾಚಿತ್ರಣ, ಸ್ಕ್ರಿಪ್ಟ್ ರೈಟಿಂಗ್, ಡೈರೆಕ್ಷನ್, ಕೊರಿಯಾಗ್ರಫಿಗೆ ದೊಡ್ಡ ವೇದಿಕೆಯಿದೆ. ಪಿಯುಸಿ ನಂತರ ಸಿನಿಮಾಟೋಗ್ರಫಿಯಲ್ಲಿ ಡಿಪ್ಲೊಮಾ ಮಾಡಬಹುದು. ಚಲನಚಿತ್ರ ನಿರ್ದೇಶನ ವ್ಯಾಸಂಗಕ್ಕೆ ರಾಜ್ಯದಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ಹಾಗೆಯೇ ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳ ನೃತ್ಯ ಮತ್ತು ನಾಟಕ ಶಿಕ್ಷಣ ವಿಭಾಗದಲ್ಲಿ ಈ ಕೊರಿಯೋಗ್ರಫರ್ ಬಗ್ಗೆ ತರಬೇತಿ ನೀಡಲಾಗುತ್ತದೆ.
ಭಾಷೆ, ಸಾಮಾನ್ಯ ಜ್ಞಾನ ಇರುವ ಪತ್ರಕರ್ತರಿಗೆ ಬೇಡಿಕೆ: ಪಿಯುಸಿ ನಂತರ ಪದವಿಯಲ್ಲಿ ಪತ್ರಿಕೋದ್ಯಮ ಅಥವಾ ಸ್ನಾತಕೋತ್ತರ ಪದವಿ, ಡಿಪ್ಲೊಮಾದಾರರು ಪತ್ರಕರ್ತರಾಗಬಹುದು. ಹೀಗೆ ಶಿಕ್ಷಣ ಪಡೆದವರು ಪತ್ರಿಕಾಲಯಗಳಲ್ಲಿ ಮತ್ತು ಖಾಸಗಿ ಮತ್ತು ಸರ್ಕಾರದ ದೂರದರ್ಶನ ಕೇಂದ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು.
ಪಿಯುಸಿ ನಂತರದ ಪದವಿಯಲ್ಲಿ ಸಮಾಜಶಾಸ್ತ್ರ ಅಥವಾ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರರು ಈ ಹುದ್ದೆ ಅಥವಾ ಉದ್ಯೋಗಕ್ಕೆ ಅರ್ಹರು. ಸಮಾಜ ಕಾರ್ಯ ಪದವಿ ಪಡೆದವರಿಗೆ ಸಮುದಾಯ ಕೇಂದ್ರ, ಆಸ್ಪತ್ರೆ, ಪೊಲೀಸ್ ಇಲಾಖೆ, ಕಾರಾಗೃಹ ಇಲಾಖೆಯಲ್ಲಿ ಮತ್ತು ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶಗಳಿವೆ.
ಚಿನ್ನಾಭರಣ ವಿನ್ಯಾಸ: ವಿನ್ಯಾಸದಲ್ಲಿ ಹೊಸತನ ನೀಡುವವರಿಗೆ ಜುವೆಲರಿ ಡಿಸೈನ್ ಕೋರ್ಸ್ ಇಷ್ಟದ ಆಯ್ಕೆಯಾಗಬಲ್ಲದು. ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸ್ ಕೂಡ ವ್ಯಾಸಂಗ ಮಾಡಬಹುದು. ದೂರಶಿಕ್ಷಣದ ಮೂಲಕವೂ ಇದನ್ನು ಕಲಿಸುವ ಹಲವು ಸಂಸ್ಥೆಗಳಿವೆ. ಎಸ್ಸೆಸ್ಸೆಲ್ಸಿ/ಪಿಯುಸಿ ನಂತರ ಆರಂಭಿಕ ಕೋರ್ಸ್ನ್ನು ಮಾಡಬಹುದು. 1 ವರ್ಷದ ಡಿಪ್ಲೊಮಾ ಕೋರ್ಸ್ಗೆ ಸೇರಲು ಪಿಯುಸಿ ಪಾಸಾಗಿರಬೇಕು. ಬಿಎಸ್ಸಿ (ಜುವೆಲರಿ ಡಿಸೈನ್), ಬಿಎ (ಜುವೆಲರಿ ಡಿಸೈನ್ ಆಂಡ್ ಟೆಕ್ನಾಲಜಿ) ಎಂಬ ಪದವಿ ಕೋರ್ಸ್ಗಳಿವೆ.
ಮರ ವಿಜ್ಞಾನ, ತಂತ್ರಜ್ಞಾನ ಕೋರ್ಸ್: ಮರದ ಉತ್ಪನ್ನಗಳ ಉದ್ಯಮದಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತ ಕೋರ್ಸ್ ಇದು. ಮರದ ಉದ್ಯಮ, ವಿವಿಧ ಉದ್ದೇಶಗಳಿಗೆ ಕಟ್ಟಿಗೆ ಬಳಕೆ ಕುರಿತು ತರಬೇತಿ ಇರುತ್ತದೆ. ನಂತರ ಅಭ್ಯರ್ಥಿಗಳು ಮರದ ತಿರುಳು, ಪೇಪರ್, ಫರ್ನಿಚರ್, ಕಂಪೋಸಿಟ್ ಬೋರ್ಡ್, ಪ್ಲೈವುಡ್ ಸೇರಿ ಹಲವು ಅರಣ್ಯಾಧಾರಿತ ಉದ್ಯಮಗಳ ನಿರ್ವಹಣಾ ಕೌಶಲ ಪಡೆದುಕೊಳ್ಳುತ್ತಾರೆ.
ಪ್ರವಾಸಿ ಮಾರ್ಗದರ್ಶಿ ಕೋರ್ಸ್: ಪಿಯುಸಿ ನಂತರ ಪದವಿಯಲ್ಲಿ ಇತಿಹಾಸ, ಪ್ರವಾಸೋದ್ಯಮ ಅಧ್ಯಯನ ಮಾಡಿದ್ದರೆ ಒಳ್ಳೆಯದು. ಯಾವುದೇ ಪದವಿ ಜತೆಗೆ ಟೂರ್ ಗೈಡ್ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್ ಮಾಡಿರಬೇಕು. ಈ ಶಿಕ್ಷಣ ಪಡೆದವರಿಗೆ ಪ್ರವಾಸೋದ್ಯಮ ಇಲಾಖೆ, ಪ್ರವಾಸಿ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು ಅಥವಾ ಸ್ವಂತವಾಗಿ ಪ್ರವಾಸ ಮಾರ್ಗದರ್ಶಿಯಾಗಬಹುದು.