

ನನಗೆ ಕೆಳಗಿನ ಹೊಟ್ಟೆಯನ್ನು ಬೇಗನೆ ಕರಗಿಸಲು ಯಾವೆಲ್ಲಾ ಆಸನಗಳನ್ನು ಅಭ್ಯಾಸ ಮಾಡಬೇಕು ? ಈಗಾಗಲೇ ಕೆಲವು ಆಸನಗಳನ್ನು ನಿತ್ಯ ಮಾಡುತ್ತಿದ್ದೇನೆ. ಡಯಟ್ ಕೂಡಾ ಮಾಡುತ್ತಿದ್ದೇನೆ.
| ಮಧು 40 ವರ್ಷ ಬೆಂಗಳೂರು
ಇಂದು ಹಲವಾರು ತಾಲೀಮುಗಳು ಲಭ್ಯವಿದ್ದರೂ ಯೋಗವು ಸಮಗ್ರ ಅರ್ಥದಲ್ಲಿ ದೇಹವನ್ನು ಮತ್ತು ಆರೋಗ್ಯ ಕಾಪಾಡುವ ಅತ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸುವ ಯಾ ಚಪ್ಪಟೆ ಗೊಳಿಸಲು ವಿವಿಧ ಆಸನಗಳನ್ನು ಮಾಡಬೇಕಾಗುತ್ತದೆ. ಯೋಗದ ಆಸನಗಳು ಇಡೀ ದೇಹದ ಮೇಲೆ ಆಳವಾಗಿ ಕೆಲಸ ಮಾಡುವುದರ ಜೊತೆಗೆ ಹೊಟ್ಟೆಯ ಬೊಜ್ಜ ಕರಗಿಸುವಿಕೆ, ಹೊಟ್ಟೆಯನ್ನು ಬಲಪಡಿಸುವುದರ ಜೊತೆಗೆ ಮಲಬದ್ಧತೆ, ಅಜೀರ್ಣ ಮತ್ತು ಉಬ್ಬರಿಸುವಿಕೆಯಂತಹ ಹಲವಾರು ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ತೊಡೆದು ಹಾಕಲು ಇದು ಸಹಾಯ ಮಾಡುತ್ತದೆ.
ಯೋಗಾಸನಗಳ ಸಂಕ್ಷಿಪ್ತ ಪಟ್ಟಿ :- ಉತ್ತಾನಾಸನ, ಪ್ರಸಾರಿತ ಪಾದಾಂಗುಷ್ಠಾಸನ, ಜಾನುಶೀರ್ಷಾಸನ, ಪಶ್ಚಿಮೋತ್ತಾಸಾನ, ಶಶಾಂಕಾಸನ, ಉಷ್ಟ್ರಾಸನ, ಮಾರ್ಜಾಲಾಸನದಲ್ಲಿ ವಿನ್ಯಾಸ, ಮರೀಚ್ಯಾಸನ, ಭಾರದ್ವಾಜಾಸನ, ಪರಿಪೂರ್ಣ ನವಾಸನ, ಊರ್ಧ್ವ ಪ್ರಸಾರಿತ ಪಾದಾ ಸನ, ಜಠರ ಪರಿವರ್ತನಾಸನ, ಹಲಾಸನ, ಭುಜಂಗಾಸನ, ಶಲಭಾ ಸನ, ಧುನುರಾಸನ, ಚಕ್ರಾಸನ, ಬಕಾಸನ, ಭುಜಪೀಡಾಸನ, ಉಪವಿಷ್ಟ ಕೋಣಾಸನ, ಉತ್ಕಟಾಸನ, ಶಲಭಾಸನ ವಿನ್ಯಾಸ, ಪ್ರಸಾರಿತ ಪಾದೋತ್ತಾನಾಸನ, ವೀರ ಭದ್ರಾಸನ, ಯೋಗ ಮುದ್ರಾಸನ, ಅರ್ಧಕಟಿ ಚಕ್ರಾಸನ ಇತ್ಯಾದಿಗಳು.
ಗಮನಿಸಿ: ಬರೀ ಯೋಗವೊಂದರಿಂದಲೇ ಕೊಬ್ಬು ಕರಗಿಸಲು ಸಾಧ್ಯವಿಲ್ಲ. ಜೊತೆಗೆ ಸೇವಿಸುವ ಆಹಾರದ ಮೇಲೆ ನಿಯಂತ್ರಣ ಅಗತ್ಯ. ಸೇವಿಸುವ ಆಹಾರದ ಮೂಲಕ ಶೇಖರಣೆಗೊಳ್ಳುವ ಕೊಬ್ಬಿನ ಅಂಶ ಯೋಗದ ಮೂಲಕ ಕರಗುವ ಕೊಬ್ಬಿಗಿಂತ ಕಡಿಮೆ ಇರಬೇಕು. ಕೊಬ್ಬು ಶೇಖರಣೆಗೊಳ್ಳಲು ಸಮಯ ತೆಗೆದುಕೊಂಡಂತೆ, ಕರಗಲೂ ಸ್ವಲ್ಪ ಸಮಯ ಅಗತ್ಯ. ಆಹಾರವನ್ನು ಸೇವಿಸಿದ ನಂತರ ಬಾಯಿ ಮುಚ್ಚಿ ಆಹಾರವನ್ನು ಜಗಿದು ನುಂಗಬೇಕು. ಬಾಯಿ ತೆರೆದು ಆಹಾರವನ್ನು ಜಗಿಯಬಾರದು. ಯಾಕೆಂದರೆ ಬಾಯಿಯಲ್ಲಿರುವ ಲಾಲಾರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ. (ಬಾಯಿ ತೆರೆದಾಗ ಗಾಳಿಯ ಸ್ಪರ್ಶದಿಂದ ಜೊಲ್ಲು ರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ) ನಾವು ತುಟಿ ಮುಚ್ಚಿ ಆಹಾರವನ್ನು ಜಗಿದು ನುಂಗಿದಾಗ ಆಹಾರದಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಸುಲಭವಾಗಿ ಸೇರುತ್ತವೆ. ಆಹಾರ ಸೇವನೆಯ ಸಂದರ್ಭದಲ್ಲಿ ನೀರನ್ನು ಕುಡಿಯಬಾರದು. (ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಕುಡಿಯಬಹುದು.) ಹಸಿವೆಯಾಗದೆ ಆಹಾರ ಸೇವಿಸಿದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಬೊಜ್ಜು ಇತ್ಯಾದಿ ಕಾಯಿಲೆಗಳು ಬರುತ್ತವೆ. ಹಾಗೇ ಹೊಟ್ಟೆ ಹಸಿದಾಗ ಮಾತ್ರ ಆಹಾರ ಸೇವಿಸಿ.
ಧನುರಾಸನದಿಂದಾಗುವ ಪ್ರಯೋಜನ ತಿಳಿಸಿ.
| ಜಲಜಾ 34 ವರ್ಷ ಮಂಗಳೂರು
ಧನುಸ್ ಎಂದರೆ ಬಿಲ್ಲು. ಬೆನ್ನನ್ನು ಬಿಲ್ಲಿನಂತೆ ಬಾಗಿಸುವ ಭಂಗಿಯಾಗಿದೆ.
ಪ್ರಯೋಜನ: ಬೆನ್ನಿನ ಜೊತೆಗೆ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬು ಕರಗುತ್ತದೆ. ಈ ಆಸನವು ಸಂತಾನೋತ್ಪತ್ತಿ ಅಂಗಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಆಸನ ಅಭ್ಯಾಸದಿಂದ ಕುತ್ತಿಗೆ, ಎದೆ ಮತ್ತು ಭುಜಗಳನ್ನು ವಿಸ್ತರಿಸಲು ಮತ್ತು ತೆರೆಯಲು ಸಹಾಯ ಮಾಡುತ್ತದೆ. ನಿಯಮಿತ ಅಭ್ಯಾಸದಿಂದ ಮುಟ್ಟಿನ ಅಸ್ವಸ್ಥತೆ ನಿವಾರಣೆಯಾಗುತ್ತದೆ. ಕಾಲಿನ ಮತ್ತು ತೋಳಿನ ಸ್ನಾಯುಗಳು ಬಲಗೊಳ್ಳುತ್ತದೆ. ಶ್ವಾಸಕೋಶದ ಉಸಿರಾಟ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಎದೆ, ಹೃದಯ, ಹೊಟ್ಟೆ, ಶ್ವಾಸಕೋಶಗಳು ಬಲಿಷ್ಠವಾಗುತ್ತವೆ.