ಕೃತ್ರಿಮ ಮಾತಾಪಿತರು: ಆ ಕ್ಷಣ ಅಂಕಣ..

Crime (2)
Published on
ರಾಜ್ಯದ ಗಡಿಭಾಗದಲ್ಲಿರುವ ಗ್ರಾಮವೊಂದರಲ್ಲಿ 52 ವರ್ಷದ ರಂಗಪ್ಪ ತನ್ನ 45 ವರ್ಷ ವಯಸ್ಸಿನ ಪತ್ನಿ ಮರಿಯಮ್ಮ ಮತ್ತು ಒಬ್ಬಳೇ ಮಗಳು ಶೋಭಾಳೊಡನೆ ವಾಸಿಸುತ್ತಿದ್ದ. 5 ಎಕರೆ ಖುಷ್ಕಿ ಜಮೀನನ್ನು ಹೊಂದಿದ್ದ ಆತ ಮಳೆಗಾಲದಲ್ಲಿ ಬೇಸಾಯ ಮಾಡಿ ಉಳಿದ ಸಮಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಮರಿಯಮ್ಮಳೂ ಕೂಲಿ ಕೆಲಸ ಮಾಡುತ್ತಿದ್ದಳು. ಶೋಭಾಗೆ 10 ವರ್ಷ ವಯಸ್ಸಾಗಿದ್ದಾಗ ಮರಿಯಮ್ಮ ಯಾವುದೋ ರೋಗಕ್ಕೆ ತುತ್ತಾಗಿ ಮರಣ ಹೊಂದಿದಳು. ತಬ್ಬಲಿಯಾದ ಮಗಳನ್ನು ಸಾಕಲು ಒಬ್ಬ ತಾಯಿ ಬೇಕೇ ಬೇಕು, ನೀನು ಬೇಗನೇ ಇನ್ನೊಂದು ಮದುವೆಯಾಗು ಎಂದು ರಂಗಪ್ಪನ ಕುಟುಂಬದವರು ಅವನಿಗೆ ಬಲವಂತ ಮಾಡಿದರು. ಬಲವಂತಕ್ಕೆ ಮಣಿದ ಆತ ನೆರೆಯ ಗ್ರಾಮದ ಕಮಲಾ ಎನ್ನುವವಳನ್ನು ಮದುವೆಯಾದ. 30 ವರ್ಷ ವಯಸ್ಸಿನ ಕಮಲಾಳಿಗೆ ಅದು ಮೊದಲ ವಿವಾಹವಾಗಿತ್ತು. ಆಕೆ ಗಂಡನೊಡನೆ ಅನ್ಯೋನ್ಯವಾಗಿದ್ದು ಮಲಮಗಳನ್ನು ಸರಿಯಾಗಿ ಆರೈಕೆ ಮಾಡುತ್ತಿದ್ದಳು.

ಮದುವೆಯಾದ ಎರಡು ವರ್ಷಗಳ ನಂತರ ಕಮಲಾಗೆ ಪಕ್ಕದ ತೋಟದ ಪ್ರಕಾಶ್​ನೊಡನೆ ಗೆಳೆತನ ಬೆಳೆಯಿತು. ಪ್ರಕಾಶನ ಪತ್ನಿ ಅವನ ಜತೆ ಜಗಳವಾಡಿ ತವರುಮನೆಗೆ ಹೋಗಿದ್ದರಿಂದ ಆತ ಒಬ್ಬಂಟಿಯಾಗಿದ್ದ. ಬರಬರುತ್ತಾ ಕಮಲಾ ಹಾಗೂ ಪ್ರಕಾಶರ ನಡುವೆ ಅನೈತಿಕ ಸಂಬಂಧ ಉಂಟಾಯಿತು. ಇಬ್ಬರೂ ಗುಟ್ಟಾಗಿ ಬೇರೆ ಬೇರೆ ಜಾಗಗಳಲ್ಲಿ ಸೇರತೊಡಗಿದರು. ಒಂದು ಮಧ್ಯಾಹ್ನ ರಂಗಪ್ಪ ಊರಿನಲ್ಲಿ ಇರದ ಸಮಯದಲ್ಲಿ ಪ್ರಕಾಶ್ ಕಮಲಾಳ ಮನೆಗೆ ಬಂದ. ಶೋಭಾ ಶಾಲೆಗೆ ಹೋಗಿದ್ದ ಕಾರಣ ಮನೆಯಲ್ಲಿ ಒಬ್ಬಳೇ ಇದ್ದ ಕಮಲಾ ಅವನನ್ನು ತನ್ನ ಜತೆ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದಳು. ಯಾರೂ ಆ ಸಮಯದಲ್ಲಿ ಮನೆಗೆ ಬರುವುದಿಲ್ಲವೆಂದು ಕಮಲಾ ತನ್ನ ಮನೆಯ ಬಾಗಿಲನ್ನು ಭದ್ರಪಡಿಸಿರಲಿಲ್ಲ. ಆದರೆ, ಆ ದಿನ ಶಾಲೆಗೆ ಮಾಸ್ತರರು ಬರದಿದ್ದರಿಂದ ಶೋಭಾಳ ತರಗತಿ ಬೇಗನೇ ಮುಗಿಯಿತು. ಅವಳು ಶಾಲೆಯಿಂದ ಮನೆಗೆ ಬಂದು ಮುಂಬಾಗಿಲನ್ನು ಹಾಕದ ಕಾರಣ ನೇರವಾಗಿ ಒಳಗೆ ಬಂದಳು. ತನ್ನ ಮಲತಾಯಿ ಪರಪುರುಷನೊಡನೆ ಮಲಗಿರುವುದನ್ನು ಕಂಡು ಗಾಬರಿಯಾಗಿ ಅಲ್ಲಿಂದ ಓಡಿ ಅದೇ ಗ್ರಾಮದ ತನ್ನ ಗೆಳತಿಯ ಮನೆಗೆ ಹೋದಳು.

ಬೇಗಬೇಗನೇ ಪ್ರಕಾಶನನ್ನು ಮನೆಗೆ ಕಳಿಸಿದ ಕಮಲಾ ಚಿಂತೆಗೀಡಾದಳು. ಕತ್ತಲಾದ ನಂತರ ಶೋಭಾ ಮನೆಗೆ ವಾಪಾಸಾದಾಗ ಅವಳನ್ನು ನಾನಾ ರೀತಿಯಲ್ಲಿ ರಮಿಸಿದಳು. ‘ನೀನು ನೋಡಿದ್ದನ್ನು ನಿನ್ನ ತಂದೆಗಾಗಲೀ, ಬೇರೆ ಯಾರಿಗೇ ಆಗಲೀ ಹೇಳಕೂಡದು’ ಎಂದು ವಿನಂತಿಸಿದಳು. ಆಗ 13 ವರ್ಷ ವಯಸ್ಸಾಗಿದ್ದ ಶೋಭಾ ತಾನು ಸುಮ್ಮನಿರಬೇಕಾದರೆ ತಾನು ಕೇಳಿದಾಗಲೆಲ್ಲಾ ತನಗೆ ಹಣವನ್ನು ಕೊಡಬೇಕೆಂದು ಹೇಳಿದಳು. ಕಮಲಾ ಇದಕ್ಕೊಪ್ಪಿದಳು. ಮುಂದಿನ ದಿನಗಳಲ್ಲಿ ಶೋಭಾ ವಾರಕ್ಕೊಮ್ಮೆಯಾದರೂ ನೂರಿನ್ನೂರು ರೂ.ಗಳನ್ನು ಮಲತಾಯಿಯಿಂದ ಕೇಳತೊಡಗಿದಳು. ಒಂದು ವೇಳೆ ಹಣ ಕೊಡದಿದ್ದರೆ, ಅಥವಾ ಕಡಿಮೆ ಕೊಟ್ಟರೆ ನಿನ್ನ ಗುಟ್ಟನ್ನು ರಟ್ಟು ಮಾಡುವೆ ಎಂದು ಹೆದರಿಸುತ್ತಿದ್ದಳು. ಒಂದು ದಿನ ಯಾವುದೋ ಕಾರಣಕ್ಕಾಗಿ ಮಲತಾಯಿಯ ಮೇಲೆ ಕೋಪಗೊಂಡ ಶೋಭಾ, ‘ನೀನು ಪ್ರಕಾಶನ ಜತೆ ಇಟ್ಟುಕೊಂಡಿರುವ ಸಂಬಂಧವನ್ನು ಅಪ್ಪನಿಗೆ ತಿಳಿಸುತ್ತೇನೆ’ ಎಂದಳು. ಹೆದರಿದ ಕಮಲಾ ಅವಳಿಗೆ ಮಾಮೂಲಿಗಿಂತ ಜಾಸ್ತಿ ಹಣವನ್ನೇ ಕೊಟ್ಟು ಸಮಾಧಾನ ಮಾಡಿದಳು. ಪದೇಪದೆ ಆಗುತ್ತಿದ್ದ ಶೋಭಾಳ ಬ್ಲಾಕ್​ವೆುೕಲಿನಿಂದ ಬೇಸತ್ತ ಕಮಲಾ ಪ್ರಕಾಶನೊಡನೆ ಈ ಸಮಸ್ಯೆಯ ಬಗ್ಗೆ ರ್ಚಚಿಸಿದಳು. ಆಗವನು, ‘ನಿನಗೆ ಇರುವುದು ಒಂದೇ ದಾರಿ. ನಿನ್ನ ಮಗಳನ್ನು ಮುಗಿಸಿಬಿಡುವುದು, ಇಲ್ಲವೇ ನಿನ್ನ ಗಂಡನನ್ನು ಬಿಟ್ಟು ಓಡಿಹೋಗುವುದು. ಆದರೆ, ನೀನು ಓಡಿಬಂದರೆ ನನ್ನ ಮನೆಯಲ್ಲಿರಲು ನಿನಗೆ ಸಾಧ್ಯವಿಲ್ಲ. ನಿನ್ನನ್ನು ಬೇರೆ ಮನೆಯಲ್ಲಿಟ್ಟು ಸಾಕುವುದೂ ನನಗೆ ಸಾಧ್ಯವಿಲ್ಲ’ ಎಂದ.

ಹಾಗಾದರೆ ಶೋಭಾಳನ್ನು ಕೊಲ್ಲುವುದೇ ತನಗೆ ಇರುವ ದಾರಿ ಎಂದು ರ್ತಸಿದ ಕಮಲಾ ಶೋಭಾಳ ಕೊಲೆಯನ್ನು ಹೇಗೆ ಮಾಡಬೇಕೆನ್ನುವ ಬಗ್ಗೆ ಯೋಚಿಸತೊಡಗಿದಳು. ಕೆಲ ದಿನಗಳ ನಂತರ ಶೋಭಾ ಹಣ ಕೇಳಿದಾಗ ಕಮಲಾ ಅಷ್ಟು ತನ್ನ ಬಳಿ ಇಲ್ಲವೆಂದಳು. ಇದರಿಂದ ಕೋಪಗೊಂಡ ಶೋಭಾ ಅದೇ ರಾತ್ರಿ ರಂಗಪ್ಪನಿಗೆ ಕಮಲಾ ಮತ್ತು ಪ್ರಕಾಶ್ ನಡುವಿನ ಅನೈತಿಕ ಸಂಬಂಧದ ಬಗ್ಗೆ ತಿಳಿಸಿದಳು. ರಂಗಪ್ಪ ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿದ. ‘ನಾನು ನಾಳೆಯಿಂದಲೇ ಪ್ರಕಾಶನನ್ನು ಬಿಟ್ಟುಬಿಡುತ್ತೇನೆ. ಈ ಒಂದು ಬಾರಿ ನನ್ನನ್ನು ಕ್ಷಮಿಸು’ ಎಂದು ಕಮಲಾ ಗಂಡನ ಕಾಲಿಗೆ ಬಿದ್ದಳು. ಆತ ತನ್ನ ಪತ್ನಿಗೆ ಗದರಿ ಕ್ಷಮಿಸಿದ. ಕೆಲಕಾಲ ಕಮಲಾ ಪ್ರಕಾಶನಿಂದ ದೂರವಾಗಿಯೇ ಇದ್ದಳು. ಆದರೆ, ಅವನನ್ನು ಬಿಡಲು ಅವಳಿಗೆ ಸಾಧ್ಯವಾಗಲಿಲ್ಲ.

ಒಂದು ದಿನ ಕಮಲಾ ಪ್ರಕಾಶನ ಜೊತೆ ಗುಟ್ಟಾಗಿ ಸೇರಿದಾಗ ಶೋಭಾಳನ್ನು ಕೂಡಲೇ ಕೊಲ್ಲುವುದೆಂದು ತಾನು ನಿರ್ಧರಿಸಿರುವುದಾಗಿ ತಿಳಿಸಿದಳು. ಶೋಭಾಳನ್ನು ಕೊಂದರೆ ಎಲ್ಲರೂ ನಿನ್ನ ಮೇಲೆಯೇ ಸಂಶಯ ಪಡುವುದರಿಂದ ಸೂಕ್ತ ಯೊಜನೆಯನ್ನು ರೂಪಿಸಬೇಕು ಎಂದ ಪ್ರಕಾಶ್ ಈ ಬಗ್ಗೆ ಯೋಚಿಸಲು ಕೆಲ ಸಮಯವನ್ನು ಕೇಳಿದ. ಕಮಲಾ ಒಪ್ಪಿದಳು.

ಒಂದು ಮುಂಜಾನೆ ಆ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಿಂದ ಒಂದು ಮೆಡಿಕೋ ಲೀಗಲ್ ಪ್ರಕರಣದ ನೋಟಿಸ್ ಬಂದಿತು. ಆಸ್ಪತ್ರೆಗೆ 13 ವರ್ಷದ ಬಾಲಕಿಯೊಬ್ಬಳು ಹಾವು ಕಡಿದಿದೆಯೆಂದು ದಾಖಲಾಗಿದ್ದು, ಆಕೆ ಪ್ರಜ್ಞಾವಸ್ಥೆಯಲ್ಲಿಲ್ಲದೆ ಸೀರಿಯಸ್ ಆಗಿದ್ದಾಳೆ ಎಂಬ ಮಾಹಿತಿ ಅದರಲ್ಲಿತ್ತು. ಆ ಭಾಗದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚಾಗಿದ್ದುದರಿಂದಲೂ ಒಂದು ವೇಳೆ ಬಾಲಕಿ ಸತ್ತರೆ ಮಾತ್ರ ತಾವು ಅಸ್ಪತ್ರೆಗೆ ಹೋಗಿ ಅಸ್ವಾಭಾವಿಕ ಸಾವಿನ ಪ್ರಕರಣವೊಂದನ್ನು ದಾಖಲಿಸಬೇಕೆಂದು ಠಾಣಾಧಿಕಾರಿ ನಿಶ್ಚಯಿಸಿದರು. ಎರಡು ದಿನಗಳ ನಂತರ ಹಾವು ಕಡಿದಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಳು ಎಂಬ ಮಾಹಿತಿ ಬಂದಿತು. ಪೋಲೀಸರು ಆಸ್ಪತ್ರೆಗೆ ಹೋಗಿ ಮೃತ ಬಾಲಕಿಯ ದೇಹದ ಮೇಲೆ ಮಹಜರನ್ನು ಮಾಡಿದರು. ದೇಹದ ಮೇಲೆ ಯಾವುದೇ ಗಾಯವಿರಲಿಲ್ಲ. ಅಲ್ಲದೆ, ಶಂಕಿಸುವಂತಹ ಯಾವುದೇ ಕುರುಹುಗಳಿರಲಿಲ್ಲ. ದೇಹವನ್ನು ಪೋಸ್ಟ್​ಮಾರ್ಟಂ ಪರೀಕ್ಷೆಗೆ ಕಳುಹಿಸಿದರು. ಮೃತಳ ಮಾತಾಪಿತರು ತಮ್ಮ ಮಗಳು ತೋಟದಲ್ಲಿ ಸಂಜೆಯ ವೇಳೆ ಕಳೆ ಕೀಳುತ್ತಿದ್ದಾಗ ಆಕೆಗೆ ನಾಗರಹಾವೊಂದು ಕಡಿಯಿತೆಂದು ತಿಳಿಸಿದರು.

ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಬಾಲಕಿಯ ಹೊಟ್ಟೆಯಲ್ಲಿದ್ದ ದ್ರವವನ್ನು ಮತ್ತು ರಕ್ತವನ್ನು ಸಂರಕ್ಷಿಸಿ ಅದನ್ನು ರಾಸಾಯನಿಕ ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದರು, ಒಂದು ತಿಂಗಳ ನಂತರ ಪ್ರಯೋಗಾಲಯದಿಂದ ವರದಿ ಬಂದು ಬಾಲಕಿಯ ಹೊಟ್ಟೆಯಲ್ಲಿ ರಾಸಾಯನಿಕ ವಿಷವಿತ್ತು ಎಂದು ವರದಿಯಾದ ಮೇರೆಗೆ ವೈದ್ಯರು ಮರಣಕ್ಕೆ ಕಾರಣ ಹಾವು ಕಚ್ಚಿರುವುದಲ್ಲ, ವಿಷಪ್ರಾಶನವೇ ಕಾರಣವೆಂದು ವರದಿಯಿತ್ತರು. ಒಂದು ವೇಳೆ ಬಾಲಕಿಯೇ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಕುಡಿದಿದ್ದರೆ ಆಕೆಯ ಮಾತಾಪಿತರು ಹಾವು ಕಚ್ಚಿದ್ದೆಂದು ಸುಳ್ಳೇಕೆ ಹೇಳಿದರೆಂದು ಪೊಲೀಸರು ರಂಗಪ್ಪ ಮತ್ತು ಕಮಲಾರನ್ನು ಠಾಣೆಗೆ ಕರೆಸಿದರು. ಪೊಲೀಸರ ತೀವ್ರ ವಿಚಾರಣೆಯನ್ನು ಎದುರಿಸಲಾಗದ ಕಮಲಾ ಅವರ ಮುಂದೆ ಹೀಗೆಂದಳು:

‘ನನ್ನ ಅನೈತಿಕ ಸಂಬಂಧದ ಬಗ್ಗೆ ಶೋಭಾ ನನ್ನನ್ನು ಬ್ಲಾಕ್​ವೆುೕಲ್ ಮಾಡತೊಡಗಿದಾಗ ಅವಳನ್ನು ಕೊಲ್ಲಲು ನಿಶ್ಚಯಿಸಿ ಪ್ರಕಾಶನ ಮೊರೆ ಹೋದೆ. ಅವಳನ್ನು ನಾವು ಕೊಂದರೆ ರಂಗಪ್ಪ ನಮ್ಮ ಮೇಲೆ ದೂರುತ್ತಾನೆ, ಹೀಗಾಗಿ ಅವನ ಬಾಯನ್ನು ಮೊದಲು ಮುಚ್ಚಿಸಬೇಕು’ ಎಂದ ಪ್ರಕಾಶ್. ಅವನ ಸೂಚನೆಯಂತೆ ನಾವಿಬ್ಬರೂ ಒಂದು ರಾತ್ರಿ ರಂಗಪ್ಪನಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿದೆವು. ಆತ ನಶೆಯಲ್ಲಿ ಮಲಗಿದ. ಪ್ರತಿದಿನವೂ ಅವನ ಪಕ್ಕ ಮಲಗುತ್ತಿದ್ದ ನಾನು ಆ ರಾತ್ರಿ ಅವನ ಪಕ್ಕದಲ್ಲಿ ಮಲಗಲಿಲ್ಲ. ಬದಲಾಗಿ ನಿದ್ರೆಯಲ್ಲಿದ್ದ ಶೋಭಾಳನ್ನು ಎಬ್ಬಿಸಿ ತಂದೆಯ ಪಕ್ಕದಲ್ಲಿ ಮಲಗಲು ಹೇಳಿದೆ. ಅರೆನಿದ್ರೆಯಲ್ಲಿದ್ದ ಆಕೆ ಮರುಮಾತಾಡದೆ ತನ್ನಪ್ಪನ ಪಕ್ಕ ಮಲಗಿದಳು. ನಾನು ಬೇರೆಡೆ ಮಲಗಿದೆ. ಮಧ್ಯರಾತ್ರಿಯ ವೇಳೆ ಅರ್ಧ ನಶೆಯಲ್ಲಿದ್ದ ರಂಗಪ್ಪ ಶೋಭಾಳನ್ನೇ ನಾನು ಎಂದು ಭಾವಿಸಿ ಆಕೆಯ ಜತೆ ಲೈಂಗಿಕ ಕ್ರಿಯೆ ನಡೆಸಲು ಹೋದ. ಆಗ ಎಚ್ಚರಗೊಂಡ ಶೋಭಾ ಜೋರಾಗಿ ಅರಚತೊಡಗಿದಳು. ಅದೇ ಸಮಯಕ್ಕೆ ಕಾಯುತ್ತಿದ್ದ ನಾನು. ನಿನ್ನ ಮಗಳ ಮೇಲೆ ನೀನು ಅತ್ಯಾಚಾರ ಮಾಡಿರುವೆಯೆಂದು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡುವೆ ಎಂದವನಿಗೆ ಬೆದರಿಸಿದೆ. ಆತ ಹೆದರಿ ಬೆವೆತುಹೋದ. ಮಾರನೆಯ ಬೆಳಗ್ಗೆ ರಂಗಪ್ಪ ತನ್ನ ವಿರುದ್ಧ ದೂರು ಕೊಡದಿರಲು ಶೋಭಾ ಹಾಗೂ ನನಗೆ ದುಂಬಾಲು ಬಿದ್ದ. ಶೋಭಾ ಏನನ್ನೂ ಹೇಳದೆ ಶಾಲೆಗೆ ಹೊರಟು ಹೋದಳು. ಆನಂತರ ನಾನು ರಂಗಪ್ಪನಿಗೆ ನನ್ನ ಮತ್ತು ಪ್ರಕಾಶನ ಅನೈತಿಕ ಸಂಬಂಧದ ಬಗ್ಗೆ ನೀನು ತಕರಾರು ಎತ್ತದೆ ಸಂಬಂಧವನ್ನು ಮುಂದುವರಿಸಲು ಬಿಟ್ಟರೆ ನಾನು ದೂರು ನೀಡುವುದಿಲ್ಲ ಎಂದೆ. ಆದರೆ ಶೋಭಾ ದೂರಿದರೇನು ಮಾಡುವುದು ಎಂದು ರಂಗಪ್ಪ ಕೇಳಿದಾಗ ನಾವು ಅವಳನ್ನು ಮುಗಿಸಿಬಿಡೋಣವೆಂದು ಅವನಿಗೆ ಸೂಚಿಸಿದೆ. ಆತ ಒಪ್ಪಿದ. ಅದೇ ರಾತ್ರಿ ಪ್ರಕಾಶ್ ನನಗೆ ಕ್ರಿಮಿನಾಶಕವೊಂದನ್ನು ತಂದು ಕೊಟ್ಟ. ಅದನ್ನು ನಾನು ಶೋಭಾ ಊಟ ಮಾಡುವ ರಾಗಿ ಮುದ್ದೆಯಲ್ಲಿ ಬೆರೆಸಿದೆ. ಶೋಭಾ ಮುದ್ದೆ ತಿಂದ ನಂತರ ವಾಂತಿ ಮಾಡತೊಡಗಿದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಆಕೆಗೆ ಹಾವು ಕಚ್ಚಿದೆ ಎಂದು ಸುಳ್ಳು ಹೇಳಿದೆವು.

ಈ ಹೇಳಿಕೆಯ ನಂತರ ಪೊಲೀಸರು ಒಳಸಂಚು ಮತ್ತು ಕೊಲೆಯ ಪ್ರಕರಣವನ್ನು ದಾಖಲಿಸಿದರು. ರಂಗಪ್ಪನ ಮನೆಯಿಂದ ಶೋಭಾಳಿಗೆ ಕುಡಿಸಿ ಉಳಿದಿದ್ದ ವಿಷವನ್ನು ಜಪ್ತಿ ಮಾಡಿದರು. ಮುಂದಿನ ತನಿಖೆಯನ್ನು ಮುಗಿಸಿ ಕಮಲಾ, ಪ್ರಕಾಶ್ ಮತ್ತು ರಂಗಪ್ಪನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು. ಕೇವಲ ಸಾಂಧರ್ಭಿಕ ಸಾಕ್ಷ್ಯಗಳ ಮೇಲೆಯೇ ಪ್ರಕರಣವು ಅವಲಂಬಿತವಾಗಿದ್ದ ಕಾರಣ ಪ್ರಕಾಶನನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಲಾಯಿತು. ನ್ಯಾಯಾಧೀಶರು ರಂಗಪ್ಪ ಮತ್ತು ಕಮಲಾಗೆ ಜೀವಾವಧಿ ಶಿಕ್ಷೆಯನ್ನೂ ಪ್ರಕಾಶಗೆ ಐದು ವರ್ಷ ಸಜೆಯನ್ನೂ ನೀಡಿದರು. ಕೃತ್ರಿಮವೊ ಜಗವೆಲ್ಲ, ಸತ್ಯತೆಯದೆಲ್ಲಿಹುದೊ? ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು, ಚತ್ರವೀ ಜಗವಿದರೊಳಾರ ಗುಣವೆಂತಹದೊ! ಯಾತ್ರಿಕನೆ, ಜಾಗರಿರೊ-ಮಂಕುತಿಮ್ಮ ಎಂಬಂತೆ ತಂದೆ ತಾಯಿಯರೂ ಕೃತ್ರಿಮ ಗುಣದವರಾಗಿದ್ದರೆ ಆಶ್ಚರ್ಯವೇನಿಲ್ಲ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net