'ಆ ಕ್ಷಣ' ಅಂಕಣ| ಮೋಸಗಾರ್ತಿಗೆ ಮರುಳಾದ ವೃದ್ಧ…

Facebook
Published on
ರಾಮರಾವ್ ಹಿರಿಯ ಹುದ್ದೆಯಲ್ಲಿದ್ದು ಸ್ವಯಂ ನಿವೃತ್ತರಾದಾಗ ಅವರಿಗೆ 80 ಲಕ್ಷ ರೂಪಾಯಿಯಷ್ಟು ಹಣ ಬಂದಿತ್ತು. ಅದನ್ನವರು ಬ್ಯಾಂಕಿನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದರು. ಅವರ ಮಕ್ಕಳಿಬ್ಬರೂ ಯೂರೋಪ್​ನಲ್ಲಿದ್ದರು. ತಮಗೆ ಬರುತ್ತಿದ್ದ ಬಡ್ಡಿ ಹಣ ಮತ್ತು ಮಕ್ಕಳು ಕಾಲಕಾಲಕ್ಕೆ ಕಳುಹಿಸುತ್ತಿದ್ದ ಹಣದಿಂದ ರಾಮರಾವ್ ಚಿಂತೆಯಿಲ್ಲದ ಜೀವನವನ್ನು ನಡೆಸುತ್ತಿದ್ದರು.

ನಿವೃತ್ತಿ ತಂದಿದ್ದ ಬೇಸರವನ್ನು ನೀಗಿಸಲು ರಾಮರಾವ್ ಸಾಮಾಜಿಕ ಜಾಲತಾಣಗಳ ಮೊರೆಹೋದರು. ಅವರಿಗೆ ಅದೇ ಒಂದು ಚಟವಾಗಿ ಹೋಯಿತು. ದಿನವೂ ಸುಮಾರು 10 ರಿಂದ 12 ಗಂಟೆಗಳ ಕಾಲ ಫೇಸ್​ಬುಕ್, ವಾಟ್ಸಪ್, ಮುಂತಾದವುಗಳಲ್ಲಿ ಬರುವ ಸುದ್ದಿಗಳು, ರೀಲ್​ಗಳನ್ನು ನೋಡುತ್ತ ಕಾಲಕಳೆಯುತ್ತಿದ್ದರು. ಹೀಗೊಂದು ದಿನ ಅವರಿಗೆ ಫೇಸ್​ಬುಕ್​ನಲ್ಲಿ ನೀರಜಾ ಎನ್ನುವ ಯುವತಿಯ ಫ್ರ್ರೆಂಡ್ ರಿಕ್ವೆಸ್ಟ್ ಬಂತು. ಪೊ›ಫೈಲ್​ನಲ್ಲಿ ಆಕೆ ತಾನು ದೆಹಲಿ ನಿವಾಸಿಯೆಂದೂ, ಲಂಡನ್ನಿನಲ್ಲಿ ಎಂಬಿಎ ಮಾಡಿರುವುದಾಗಿಯೂ ಅವಿವಾಹಿತಳಾಗಿರುವುದಾಗಿಯೂ ತಿಳಿಸಿದ್ದಳು. ತಾನೊಬ್ಬ ಇನ್ವೆಸ್ಟ್​ಮೆಂಟ್ ಬ್ಯಾಂಕರ್ ಎಂದೂ ಹೇಳಿಕೊಂಡಿದ್ದಳು. ನೋಡಲು ಆಕೆ ಸುಂದರವಾಗಿದ್ದು ತನ್ನ ವಯಸ್ಸನ್ನು 40 ಎಂದು ಬರೆದುಕೊಂಡಿದ್ದಳು.

ನೀರಜಾಳ ಕೋರಿಕೆಯನ್ನು ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ರಾಮರಾಯರಿಗೆ ಫೇಸ್​ಬುಕ್ ಮೆಸೆಂಜರ್​ನಲ್ಲಿ ಅವಳಿಂದ ಸಂದೇಶ ಬಂತು. ‘ಹಾಯ್, ಹೌ ಆರ್ ಯೂ?’ ಎಂದು ಬರೆದಿದ್ದ ಆ ಸಂದೇಶವನ್ನೋದಿ ಉತ್ತರವಿತ್ತಕೂಡಲೇ ಅವಳು ರಾಮರಾವ್ ಜತೆಗೆ ಚಾಟ್ ಮಾಡತೊಡಗಿದಳು. ಇಬ್ಬರೂ ಪರಸ್ಪರರ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು. ಈ ತರಹದ ಚಾಟ್ ಸೆಷನ್​ಗಳು ಪ್ರತಿದಿನವೂ ಮುಂದುವರಿಯತೊಡಗಿದವು. ಕಾಲಕ್ರಮೇಣ ರಾಮರಾವ್ ತಮ್ಮ ಖಾಸಗಿ ವಿಷಯಗಳನ್ನೂ ಆಕೆಯೊಡನೆ ಹಂಚಿಕೊಳ್ಳಲು ಪ್ರಾರಂಭಿಸಿದರು. ಒಂದು ದಿನ ಚಾಟ್ ಮಾಡುವಾಗ ಆಕೆ, ‘ನಾನು ಹೂಡಿಕೆ ಬ್ಯಾಂಕರ್ ಎಂದು ನಿಮಗೆ ತಿಳಿದಿದೆ. ಅಮೆರಿಕದ ಒಂದು ಹಣಕಾಸಿನ ಸಂಸ್ಥೆಯು ಹೊಸ ಬಗೆಯ ಹೂಡಿಕೆಯ ಸ್ಕೀಮ್ ಆರಂಭಿಸಿದೆ. ಅದರಲ್ಲಿ ಹಣವನ್ನು ಡಾಲರ್ ರೂಪದಲ್ಲಿ ತೊಡಗಿಸಬೇಕು. ನೀವು ಹೂಡುವ ಹಣವು ಮೂರು ವರ್ಷಗಳಲ್ಲಿ ಏಳು ಪಟ್ಟು ಹೆಚ್ಚಾಗುತ್ತದೆ. ಆದರೆ, ತೊಡಗಿಸಬೇಕಾದ ಕನಿಷ್ಠ ಹಣ 20,000 ಡಾಲರ್​ಗಳು’ ಎಂದಳು. ರಾಮರಾವ್, ‘ಮೇಲ್ನೋಟಕ್ಕೇ ಇದೊಂದು ಟೋಪಿ ಹಾಕುವ ಸ್ಕೀಮ್ಂತೆ ಕಾಣುತ್ತಿದೆ, ಇಂತಹ ಸ್ಕೀಂಗಳಲ್ಲಿ ನನಗೆ ನಂಬಿಕೆಯಿಲ್ಲ’ ಎಂದರು. ಆಗವಳು, ‘ನಿಮ್ಮ ವಾಟ್ಸಪ್ ನಂಬರ್ ಕೊಡಿ, ನಾನು ಅದರಲ್ಲಿ ನಿಮಗೆ ಈ ಸ್ಕೀಂನ ಎಲ್ಲ ವಿವರಗಳನ್ನೂ ತಿಳಿಸುತ್ತೇನೆ’ ಎಂದಳು. ರಾಮರಾವ್ ಅವಳಿಗೆ ನಂಬರ್ ಕೊಟ್ಟರು. ಕೆಲವೇ ನಿಮಿಷಗಳಲ್ಲಿ ಅವರಿಗೆ ಅವಳಿಂದ ಕರೆ ಬಂದಿತು.

ಆಕೆ ಅವರಿಗೆ ಸದರಿ ಹೂಡಿಕೆಯ ಬಗ್ಗೆ ಎಷ್ಟು ಚೆನ್ನಾಗಿ ಮನನ ಮಾಡಿದಳೆಂದರೆ ರಾಮರಾವ್ ಆ ಸ್ಕೀಮಿನಲ್ಲಿ ಹಣ ಹೂಡುವುದೇ ಸೂಕ್ತವೆಂದು ಭಾವಿಸಿದರು. ಆಗ ಆಕೆ, ‘ನೀವು ಸುಮ್ಮಸುಮ್ಮನೆ ನನ್ನ ಮಾತುಗಳನ್ನು ನಂಬಬೇಡಿ. ನಿಮಗೆ ವಾಟ್ಸಪ್ ಮೂಲಕವೇ ಕೆಲವು ದಾಖಲೆಗಳನ್ನು ಕಳಿಸುವೆ. ಅವನ್ನು ಕೂಲಂಕಷವಾಗಿ ಓದಿ. ನಿಮಗೆ ಈ ಹೂಡಿಕೆ ಸಂಪೂರ್ಣ ಸೇಫ್ ಎಂದೆನಿಸಿದರೆ ಮಾತ್ರ ಹಣ ಹೂಡಿ’ ಎಂದಳು. ರಾಮರಾವ್ ಒಪ್ಪಿದಾಗ ಅವರ ವಾಟ್ಸಪ್​ಗೆ ಆಕೆ ಕೆಲವು ಕಾಗದ ಪತ್ರಗಳನ್ನು ಕಳುಹಿಸಿದಳು. ಅವುಗಳು ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ಸ್ಥಾಪಿತವಾಗಿದ್ದ ಒಂದು ಹಣಕಾಸು ಸಂಸ್ಥೆಯ ಲೆಟರ್​ಹೆಡ್​ನಲ್ಲಿ ಮುದ್ರಿತವಾದಂತೆ ಕಂಡುಬರುವ ದಾಖಲೆಯಾಗಿತ್ತು. ಆ ದಾಖಲೆ ಸಂಪೂರ್ಣವಾಗಿ ಕಾನೂನು ಹಾಗೂ ಆರ್ಥಿಕ ತಜ್ಞರು ಬಳಸುವ ಭಾಷೆಯಲ್ಲಿದ್ದು ಅವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿತ್ತು.

ಮಾರನೆಯ ದಿನ ನೀರಜಾ ರಾಮರಾಯರನ್ನು ಮತ್ತೊಮ್ಮೆ ಸಂರ್ಪಸಿದಾಗ ಅವರು ಈ ಆರ್ಥಿಕ ಯೋಜನೆಯ ತಲೆಬುಡ ಅರ್ಥವಾಗಲಿಲ್ಲ ಎಂದರು. ಆಗವಳು, ‘ನೀವೇನೂ ಚಿಂತೆಮಾಡಬೇಡಿ. ನೀವು ಹೂಡುವ ಹಣವನ್ನು ಆ ಸಂಸ್ಥೆಯು ದುಬಾರಿ ಬಡ್ಡಿ ದರದಲ್ಲಿ ಆಫ್ರಿಕಾದ ದೇಶಗಳಿಗೆ ಸಾಲ ಕೊಡುತ್ತದೆ. ಇದಲ್ಲದೆ ಪೆಟ್ರೋಲಿಯಂ ವಲಯದಲ್ಲಿ ಮತ್ತು ಬೇಸಾಯ ವಲಯದಲ್ಲಿ ತೊಡಗಿಸಿ ಲಾಭ ಮಾಡುತ್ತದೆ. ಹೀಗಾಗಿ ಸಂಸ್ಥೆ ಗಳಿಸುವ ಲಾಭ ಹೆಚ್ಚು. ನೀವು ಕನಿಷ್ಠ 20,000 ಸಾವಿರ ಡಾಲರ್ ತೊಡಗಿಸಬೇಕಾದ್ದರಿಂದ 14 ಲಕ್ಷ ರೂಗಳನ್ನು ನಾನು ಸೂಚಿಸುವ ಬ್ಯಾಂಕ್ ಅಕೌಂಟಿಗೆ ತುಂಬಿ’ ಎಂದು ಬ್ಯಾಂಕ್ ವಿವರಗಳನ್ನು ಕಳುಹಿಸಿದಳು. ಮಾರನೆಯ ದಿನವೇ ಆ ಅಕೌಂಟಿಗೆ ರಾಮರಾವ್ ಹಣವನ್ನು ವರ್ಗಾಯಿಸಿದರು. ಇದಾದ ಮೂರು ದಿನಗಳ ನಂತರ ಮತ್ತೆ ಫೋನ್ ಮಾಡಿದ ನೀರಜಾ, ‘ಸರ್, ನಿನ್ನೆಯಿಂದ ಅದೇ ಅಮೆರಿಕನ್ ಸಂಸ್ಥೆ ಇನ್ನೊಂದು ಹೊಸ ಸ್ಕೀಂ ಪರಿಚಯಿಸಿದೆ. ಈ ಸ್ಕೀಂನಲ್ಲಿ ನಾವು ಕನಿಷ್ಠ 30,000 ಅಮೆರಿಕದ ಡಾಲರ್, ಅಂದರೆ 21 ಲಕ್ಷ ರೂ.ಗಳನ್ನು ಡಿಪಾಸಿಟ್ ಮಾಡಬೇಕು. ಇದರಲ್ಲಿ ತಿಂಗಳಿಗೆ ಶೇಕಡಾ 10 ಬಡ್ಡಿ ಕೊಡಲಾಗುತ್ತದೆ. ನಾನೂ ಇದರಲ್ಲಿ ಹಣ ಹೂಡುತ್ತಿರುವೆ. ನಿಮಗೆ ಆಸಕ್ತಿಯಿದ್ದರೆ ನೀವೂ ಹೂಡಬಹುದು, ಬಲವಂತವಿಲ್ಲ’ ಎಂದಳು. ಆಕೆಯೂ ಹಣ ಹೂಡಿರುವಳೆಂದು ತಿಳಿದ ರಾಮರಾವ್ ಅದರಲ್ಲೂ ಹಣ ಹೂಡಲು ನಿರ್ಧರಿಸಿ ಕೂಡಲೇ ಬ್ಯಾಂಕಿಗೆ ಹೋಗಿ ತಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ವಿಚಾರಿಸಿದರು. ಅಲ್ಲಿ ಸುಮಾರು 80 ಲಕ್ಷ ರೂ. ಠೇವಣಿಯಿತ್ತು. ಅದರಲ್ಲಿ 21 ಲಕ್ಷ ರೂಪಾಯಿಗಳನ್ನು ತೆಗೆದು ತಮ್ಮ ಸೇವಿಂಗ್ ಬ್ಯಾಂಕ್ ಅಕೌಂಟ್​ಗೆ ಹಾಕಲು ಸೂಚಿಸಿದರು. ಆಗ ಬ್ಯಾಂಕ್ ಮ್ಯಾನೇಜರ್, ‘ಸರ್ ನಿಮ್ಮ ಹಣ ಎಫ್​ಡಿಯಲ್ಲೇ ಇರಲಿ, ತೆಗೆಯಬೇಡಿ’ ಎಂದಾಗ ರಾಮರಾವ್, ‘ನಾನು ಅಮೆರಿಕದ ಒಂದು ಹೊಸ ಸ್ಕೀಮ್ಲ್ಲಿ ಹಣ ತೊಡಗಿಸುತ್ತಿರುವೆ’ ಎಂದರು. ಆ ಬ್ಯಾಂಕ್ ಅಧಿಕಾರಿ, ‘ಭಾರತಕ್ಕಿಂತ ತೀರಾ ಕಡಿಮೆ ರೇಟಿನಲ್ಲಿ ಅಮೆರಿಕ ದೇಶದಲ್ಲಿ ಇಂಟರೆಸ್ಟ್ ರೇಟ್ ಇದೆ. ಇಲ್ಲಿಗಿಂತ ಹೆಚ್ಚಿಗೆ ಬಡ್ಡಿ ಅಲ್ಲಿ ಸಿಗಲಾರದು. ಇದು ಮೋಸದ ಸ್ಕೀಮ್ ಇರಬಹುದು, ಎಚ್ಚರದಿಂದಿರಿ’ ಎಂದರು.

ಅವರ ಮಾತುಗಳನ್ನು ಕೇಳದ ರಾಮರಾವ್ ನೀರಜಾಳ ಸೂಚನೆಯಂತೆ ಆಕೆ ಹೇಳಿದ್ದ ಬ್ಯಾಂಕ್ ಅಕೌಂಟಿಗೆ 21 ಲಕ್ಷ ರೂ.ಗಳನ್ನು ವರ್ಗಾಯಿಸಿದರು. ಒಂದು ತಿಂಗಳ ನಂತರ ತಮ್ಮ ಹಣವನ್ನು ವಾಪಸ್ ಮಾಡಲು ರಾಮರಾಯರು ನೀರಜಾಳನ್ನು ಕೋರಿದರು. ಆಗ ಆಕೆ ತಾನು ಈ ಹಿಂದೆ ಕಳುಹಿಸಿದ್ದ ಅಮೆರಿಕದ ಆರ್ಥಿಕ ಸಂಸ್ಥೆಯ ಪಾಸ್​ಬುಕ್ ವಿವರಗಳನ್ನು ಅವರಿಗೆ ವಾಟ್ಸಪ್ ಮೂಲಕ ಕಳುಹಿಸಿದಳು. ಅವರ ಹೆಸರಿನಲ್ಲಿದ್ದ ಅಕೌಂಟಿನಲ್ಲಿ 50,000 ಡಾಲರ್ ಡಿಪಾಸಿಟ್ ಆದ ವಿವರಗಳು ಅದರಲ್ಲಿ ನಮೂದಾಗಿದ್ದಲ್ಲದೆ, ಕಳೆದ ಒಂದು ತಿಂಗಳಲ್ಲಿ ಬಡ್ಡಿಸಮೇತ ಅವರ ಹಣದ ಬ್ಯಾಲೆನ್ಸ್ 1,75,000 ಡಾಲರ್​ಗಳೆಂದು ತೋರಿಸಲಾಗಿತ್ತು. ಆನಂತರ ಫೋನ್ ಮಾಡಿದ ಆಕೆ, ‘ನೀವು ಹೂಡಿದ ಹಣ ಒಂದೇ ತಿಂಗಳಲ್ಲಿ ಮೂರು ಪಟ್ಟಿಗಿಂತ ಜಾಸ್ತಿ ಏರಿದೆ. ಹೀಗಾಗಿ ನಿಮ್ಮ ಹಣವನ್ನು ಅದೇ ಖಾತೆಯಲ್ಲಿ ಮುಂದುವರಿಸಿ. ಅವಧಿಯ ಮುನ್ನ ಮರಳಿ ಪಡೆಯಬೇಡಿ. ಹೀಗೆ ಮಾಡಿದರೆ ನೀವು 10,000 ಡಾಲರ್ ದಂಡ ತೆರಬೇಕಾಗುತ್ತದೆ’ ಎಂದಳು.

‘ಈಗಾಗಲೇ ನಾನು ಹೂಡಿರುವ ಹಣಕ್ಕಿಂತ ಹೆಚ್ಚು ಹಣ ನನ್ನ ಅಕೌಂಟಿನಲ್ಲಿರುವುದರಿಂದ 10,000 ಡಾಲರ್ ದಂಡ ಕೊಟ್ಟರೂ ಪರವಾಗಿಲ್ಲ, ನನ್ನ ಹಣವನ್ನು ಮರಳಿಸಿ’ ಎಂದರು ರಾಮರಾವ್. ‘ಏನೂ ತೊಂದರೆಯಿಲ್ಲ. ಈಗಾಗಲೇ ನಾನು ಸೂಚಿಸಿರುವ ಬ್ಯಾಂಕಿನ ಅಕೌಂಟಿಗೆ ನೀವು 10,000 ಡಾಲರ್, ಅಂದರೆ 7 ಲಕ್ಷ ರೂಗಳನ್ನು ವರ್ಗ ಮಾಡಿ. ಒಂದು ವಾರದ ನಂತರ ನಿಮಗೆ ದಂಡ ಕಳೆದು 1,65,000 ಡಾಲರ್ ಹಣವನ್ನು ಭಾರತದ ಕರೆನ್ಸಿಯ ಮೂಲಕ ಮರಳಿಸಲಾಗುವುದು’ ಎಂದಳು.

ತಾವು ಹೂಡಿರುವ 40 ಲಕ್ಷ ರೂಗಳಿಗೆ ಬಡ್ಡಿ ಸೇರಿ, ದಂಡ ಕಳೆದು 1 ಕೋಟಿ 15 ಲಕ್ಷ ರೂ. ಬರುತ್ತದೆ ಎಂದು ಲೆಕ್ಕ ಹಾಕಿದ ರಾಮರಾವ್, 7 ಲಕ್ಷ ರೂಪಾಯಿಗಳನ್ನು ನೀರಜಾ ಹೇಳಿದ್ದ ಅಕೌಂಟ್​ಗೆ ಹಾಕಿದರು.

ಕೆಲವು ದಿನಗಳಾದರೂ ಹಣ ವಾಪಸ್ ಬರದಿದ್ದಾಗ ರಾಮರಾವ್ ನೀರಜಾಳನ್ನು ಸಂರ್ಪಸಿದರು. ‘ನಿಮ್ಮ ಅರ್ಜಿ ಪೊ›ಸೆಸಿಂಗ್​ನಲ್ಲಿ ಇದೆ. ನೀವು ಒಂದು ತಿಂಗಳು ಕಾಯಬೇಕು, ತಾಳ್ಮೆಯಿಂದಿರಿ, ನಿಮ್ಮ ಹಣ ಎಲ್ಲಿಗೂ ಹೋಗುವುದಿಲ್ಲ’ ಎಂದಳು. ಒಂದು ತಿಂಗಳ ನಂತರ ಅವರು ಮತ್ತೆ ಅವಳಿಗೆ ಫೋನ್ ಮಾಡಿದರು. ಈ ಫೋನ್ ಅಸ್ತಿತ್ವದಲ್ಲಿಲ್ಲ ಎಂಬ ಸಂದೇಶ ಬರತೊಡಗಿತು. ಫೇಸ್​ಬುಕ್ ಮೆಸೆಂಜರಿನ ಮೂಲಕ ನೀರಜಾಳನ್ನು ಸಂರ್ಪಸಲು ಯತ್ನಿಸಿದರೆ ಆಕೆ ಫೇಸ್​ಬುಕ್​ನಿಂದಲೇ ಮಾಯವಾಗಿದ್ದಳು. ರಾಮರಾವ್​ರ ಜಂಘಾಬಲವೇ ಉಡುಗಿಹೋಯಿತು.

ಅವರು ಸೈಬರ್ ಪೊಲೀಸ್ ಠಾಣೆಗೆ ಧಾವಿಸಿ ನಡೆದ ವಿಷಯವನ್ನು ತಿಳಿಸಿದರು. ‘ನಮ್ಮ ರಾಜ್ಯವೊಂದರಲ್ಲೇ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಹಣವನ್ನು ಸೈಬರ್ ಕಳ್ಳರು ಲಪಟಾಯಿಸುತ್ತಾರೆನ್ನುವುದು ನಿಮಗೆ ಗೊತ್ತಿಲ್ಲವೇ? ಅಮೆರಿಕದ ಆ ಫೈನಾನ್ಷಿಯಲ್ ಸಂಸ್ಥೆ ಯಾವುದೆಂಬ ವಿವರಗಳಿವೆಯೇ?’ ಎಂದು ಪೊಲೀಸರು ಪ್ರಶ್ನಿಸಿದರು. ‘ನನ್ನ ವಾಟ್ಸಪ್​ಗೆ ನೀರಜಾ ಆ ದಾಖಲೆಗಳನ್ನು ಕಳಿಸಿದ್ದಳು’ ಎಂದ ರಾಮರಾವ್ ತಮ್ಮ ವಾಟ್ಸಪ್ ವಿವರಗಳನ್ನು ಓಪನ್ ಮಾಡಲು ಹೋದರೆ ನೀರಜಾ ಕಳಿಸಿದ್ದ ದಾಖಲೆಗಳೆಲ್ಲವೂ ಡಿಲೀಟ್ ಆಗಿದ್ದವು. ತಾವು ಹಣವನ್ನು ವರ್ಗಾಯಿಸಿದ್ದ ದೆಹಲಿ ಬ್ಯಾಂಕಿನ ವಿವರಗಳನ್ನು ಪೊಲೀಸರಿಗೆ ತೋರಿಸಿದರು. ‘ನೀವು ವಿದ್ಯಾವಂತರಾಗಿದ್ದು ಇಷ್ಟು ಸುಲಭವಾಗಿ 47 ಲಕ್ಷ ರೂಗಳನ್ನು ಹೇಗೆ ವರ್ಗಾಯಿಸಿದಿರಿ?’ ಎಂದು ಪೊಲೀಸರು ಕೇಳಿ, ಹೆಸರಿಲ್ಲದ ಆರೋಪಿಯ ವಿರುದ್ಧ ವಂಚನೆಯ ಪ್ರಕರಣ ದಾಖಲು ಮಾಡಿದರು. ನೀರಜಾ ಎನ್ನುವುದು ಸುಳ್ಳು ಹೆಸರು ಎನ್ನುವುದು ಅವರಿಗೆ ಖಾತ್ರಿಯಾಗಿತ್ತು.

ದೆಹಲಿಯ ಬ್ಯಾಂಕಿಗೆ ಪೊಲೀಸರು ಹೋದಾಗ ರಾಮರಾಯರು ಹಣ ಕಳುಹಿಸಿದ್ದ ಅಕೌಂಟ್ ಮುಚ್ಚಲ್ಪಟ್ಟಿದ್ದು ಅದನ್ನು ಕೆಲ ತಿಂಗಳ ಹಿಂದೆಯಷ್ಟೇ ತೆರೆಯಲಾಗಿತ್ತೆಂದು ತಿಳಿಯಿತು. ಪ್ರಕರಣ ಇನ್ನೂ ತನಿಖೆಯಲ್ಲಿದೆ. ಇಂತಹ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಗಳು ತೀರಾ ಕಡಿಮೆ. ಪತ್ತೆಯಾದರೂ ರಾಮರಾಯರು ಕಳೆದುಕೊಂಡ ಹಣ ಮರಳಿ ಬರುವುದು ಸುಲಭಸಾಧ್ಯವಲ್ಲ. ಈ ರೀತಿಯ ಪ್ರಕರಣಗಳು ಪ್ರತಿದಿನವೂ ನಡೆಯುತ್ತಿದ್ದರೂ ಎಚ್ಚರಗೊಳ್ಳದೆ ಬ್ಯಾಂಕ್ ಮ್ಯಾನೇಜರರ ಎಚ್ಚರಿಕೆಯನ್ನೂ ಲೆಕ್ಕಿಸದೆ ಮೋಸಗಾರರಿಗೆ ಬಲೆಬಿದ್ದ ರಾಮರಾಯರನ್ನು ಮೂರ್ಖರೆನ್ನದೇ ವಿಧಿಯಿಲ್ಲವಲ್ಲವೇ? ಹೀಗಾಗಿಯೇ ಕವಿ ಭರ್ತೃಹರಿ ‘ಮೂರ್ಖಸ್ಯ ನಾಸ್ತ್ಯೌಷಧಂ’ (ಮೂರ್ಖನಿಗೆ ಔಷಧಿಯೇ ಇಲ್ಲ) ಎಂದಿದ್ದಾನೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net