ಕಾಲದೊಂದಿಗೆ ಬದಲಾಗುತ್ತ ಬಂದ ಬಣ್ಣದ ಲೋಕ

Colors
Published on

ಪ್ರತ್ಯೇಕಿಸಿದಾಗ ವ್ಯಕ್ತಿತ್ವವನ್ನು, ಮಿಳಿತವಾದಾಗ ಐಕ್ಯತೆಯನ್ನು ಸಾರುವ ಈ ಬಣ್ಣಗಳ ರಂಗು ನಮ್ಮ ಯೋಚನೆಗಳಷ್ಟೇ ವೈವಿಧ್ಯಮಯ. ಕಾಲ, ವಿಚಾರ, ಸಮಯ ಬದಲಾದಂತೆ ಇವೂ ಬದಲಾಗಿವೆ. ಮಾನವನು ಬಣ್ಣಗಳನ್ನು ತಯಾರಿಸಲು ಆರಂಭಿಸಿ ಸಾವಿರಾರು ವರ್ಷಗಳೇ ಸಂದಿವೆ. ಹೀಗೆ ತಯಾರಿಸಲ್ಪಡುತ್ತಿದ್ದ ಒಂದೊಂದು ಬಣ್ಣದ ಉಗಮಕ್ಕೂ ಒಂದೊಂದು ಕತೆ ಇದೆ.

Chowka
ಬಣ್ಣದ ಹಬ್ಬ ಮತ್ತೆ ಬಂದಿದೆ. ರಂಗದೋಕುಳಿಯಲ್ಲಿ ಮಿಂದೇಳುವ ಆ ಅನುಭವ ಮತ್ತೆ ನಮ್ಮನ್ನೆಲ್ಲ ಬಾಲ್ಯಕ್ಕೆ ಕರೆದೊಯ್ಯುತ್ತದೆ. ನಮ್ಮೂರು ಶಿರಸಿಯಲ್ಲಂತೂ ಇದು ಐದು ದಿನಗಳ ಆಚರಣೆ. ಒಂದೆಡೆ ಪರೀಕ್ಷೆಯ ಸಮಯ. ಇನ್ನೊಂದೆಡೆ ಹಲಗೆಗಳ ಢಕ್ಕಣಕದ ಆರ್ಭಟ. ಜೊತೆಗಿಷ್ಟು ಮನೆಯವರ ರೇಗಾಟ. ಇವುಗಳ ನಡುವೆ ಸಂಭ್ರಮದಿಂದ ಆಚರಿಸುತ್ತಿದ್ದ ಹೋಳಿಹಬ್ಬ ಸ್ಮೃತಿಪಟಲದಲ್ಲಿನ್ನೂ ಭದ್ರ. ಚಿಕ್ಕವರಿರುವಾಗ ಅರಿಷಿಣ ಕುಂಕುಮವನ್ನಷ್ಟೇ ಬಳಸುತ್ತಿದ್ದ ನಮ್ಮ ರಂಗಿನಾಟಕ್ಕೆ ನಂತರದ ದಿನಗಳಲ್ಲಿ ಕೃತಕ ಬಣ್ಣಗಳು ಸೇರ್ಪಡೆಯಾದವು. ವಾರಗಳತನಕ ಮೈಮುಖದಲ್ಲಿ ತಮ್ಮ ಇರುವಿಕೆಯಿಂದ ಹೋಳಿಯಲ್ಲಿ ನಮ್ಮ ಹಾಜರಾತಿಯನ್ನು ತೋರಿಸುತ್ತಿದ್ದ ಈ ಬಣ್ಣಗಳು ನಮಗೆ ಒಂಥರಾ ಜಂಬದ ವಿಷಯವಾಗಿದ್ದುದೂ ಅಷ್ಟೇ ಸತ್ಯ.

ಫಿನಿಸಿಯಾ ಅನ್ನೋದು ಈಗಿನ ಲೆಬನಾನ್ ಇರುವ ಪ್ರದೇಶದ ಮೊದಲಿನ ಹೆಸರು. ಒಂದು ದಿನ ಅಲ್ಲಿಯ ದೊರೆ ಮೆಲ್ಕಾರ್ಟ್ ತನ್ನ ನಾಯಿಯೊಂದಿಗೆ ಸಮುದ್ರದ ದಂಡೆಯಲ್ಲಿ ವಾಯುವಿಹಾರಕ್ಕೆಂದು ಬಂದಿದ್ದ. ದಂಡೆಯಲ್ಲಿ ಬಿದ್ದಿದ್ದ ಚಿಪ್ಪಿನ ಚೂರುಗಳನ್ನು ಮೂಸುತ್ತ ಸಾಗುತ್ತಿದ್ದ ನಾಯಿ ಮತ್ತೆ ತಿರುಗಿ ರಾಜನೆಡೆ ಬಂದು ನಿಂತಾಗ ಅದರ ಮೂತಿಗೆ ತಗುಲಿದ್ದ ನೇರಳೆ ಬಣ್ಣವು ವಿಭಿನ್ನವಾಗಿಯೂ ಅತ್ಯಾಕರ್ಷವಾಗಿಯೂ ಇರುವುದನ್ನು ರಾಜ ಗಮನಿಸಿದ. ತನ್ನ ರಾಣಿಗೆ ಈ ಬಣ್ಣವನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಿದ ರಾಜ, ಸಮುದ್ರದ ತೀರದಲ್ಲಿ ಬಿದ್ದಿದ್ದ ಸಮುದ್ರ ಬಸವನ ಹುಳುಗಳಿಂದ ಆ ಬಣ್ಣ ನಾಯಿಗೆ ತಗಲಿರುವುದನ್ನು ಅರಿತುಕೊಂಡು ಅವುಗಳನ್ನು ಹೆಕ್ಕಿ ತೆಗೆದು ಹೊಳೆಯುವ ನೇರಳೆ ಬಣ್ಣವನ್ನು ತಯಾರಿಸಿದ. ಇದು ಸಮುದ್ರ ಬಸವನ ನೇರಳೆ (ಮ್ಯೂರೆಕ್ಸ್ ಪರ್ಪಲ್) ಎಂದೇ ಜಗದ್ವಿಖ್ಯಾತಿ ಹೊಂದಿರುವ ಜಗತ್ತಿನ ಅತ್ಯಾಕರ್ಷಕ ಹೊಳೆಯುವ ನೇರಳೆ ಬಣ್ಣದ ಹುಟ್ಟಿನ ಕುರಿತ ಅಡಗೂಲಜ್ಜಿ ಕಥೆ. ಈ ಕಥೆ ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ, ಆದರೆ ಫಿನಿಸಿಯನ್ನರು ಆ ಬಣ್ಣವನ್ನು ತಯಾರಿಸುವ ಕಲೆಯನ್ನು ಮೈಗೂಡಿಸಿಕೊಳ್ಳುವ ಜೊತೆಯಲ್ಲಿ ಶತಮಾನಗಳ ಕಾಲ ಅದರ ತಯಾರಿಕೆಯ ವಿಧಾನವನ್ನು ಅತ್ಯಂತ ಗೌಪ್ಯವಾಗಿ ಇಟ್ಟುಕೊಂಡಿದ್ದರು. ಕ್ರಿ.ಪೂ. 1200ರಷ್ಟರಲ್ಲಿ ಸಮುದ್ರ ಬಸವನ ನೇರಳೆ ಬಣ್ಣವನ್ನು ಮೊದಲ ಬಾರಿಗೆ ಅವರು ಬಟ್ಟೆಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿ ಮಾರುಕಟ್ಟೆಗೆ ಪರಿಚಯಿಸಿದಾಗ ಅದೊಂದು ದೊಡ್ಡ ಕ್ರೇಜ್ ಹುಟ್ಟುಹಾಕಿತು. ಮಾರುಕಟ್ಟೆಗೆ ಪರಿಚಯಿಸುತ್ತಲೇ ಈ ನೇರಳೆಯು ಶ್ರೀಮಂತಿಕೆಯ ಲಕ್ಷಣದ ಬಣ್ಣಗಳ (ರಾಯಲ್ ಕಲರ್ಸ್) ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರವಾಗಿಸಿಕೊಂಡಿರುವುದಕ್ಕೆ ಕಾರಣವೂ ಇತ್ತು. ಅಸಲಿಗೆ ಈ ಬಣ್ಣವು ಸಮುದ್ರ ಬಸವನಹುಳುಗಳು ತಮ್ಮ ಗ್ರಂಥಿಗಳಿಂದ ಸ್ರವಿಸುವ ರಸದಿಂದ ತಯಾರಿಸಲ್ಪಡುವ ಕಾರಣಕ್ಕೆ ಅವುಗಳಿಗಾಗಿ ತೀರದಲ್ಲಿ ಕಾದು ಕೂತು ಜೋಪಾನವಾಗಿ ಹಿಡಿದು ಬಾಯಿಯೊಳಗಿನ ರಸವನ್ನು ಸಂಗ್ರಹಿಸಿ ಫಿನಿಸಿಯನ್ನರು ಬಣ್ಣವನ್ನು ತಯಾರಿಸಬೇಕಾಗಿತ್ತು. ಹೀಗಾಗಿ ಸಹಜವಾಗಿ ಈ ಬಣ್ಣದ ಬೆಲೆಯೂ ಹೆಚ್ಚೇ ಇದ್ದು ಜನಸಾಮಾನ್ಯರ ಕೈಗೆಟುಕುತ್ತಿರಲಿಲ್ಲ.

ಆದೆಷ್ಟರಮಟ್ಟಿಗೆ ಇದರ ಬೆಲೆ ತುಟ್ಟಿಯಾಗಿತ್ತೆಂದರೆ ಆ ದಿನಗಳಲ್ಲಿ ಸಮುದ್ರ ಬಸವನ ನೇರಳೆ ಬಣ್ಣವನ್ನು ಅದರ ಒಂದು ತೂಕಕ್ಕೆ ಮೂರು ಪಟ್ಟು ತೂಕದ ಬಂಗಾರದ ಜೊತೆಗೆ ವಿನಿಮಯಿಸಲಾಗುತ್ತಿತ್ತು! ಈ ಸಮುದ್ರ ಬಸವನು ಫೀನಿಸಿಯನ್ನರ ನಸೀಬು ಖುಲಾಯಿಸಿ ಅಲ್ಲಿಯವರು ಕೋಟ್ಯಧೀಶರಾದರು. ಅಸಲಿಗೆ ಸ್ಥಳೀಯ ಭಾಷೆಯಲ್ಲಿ ಫಿನಿಸಿಯಾ ಎಂದರೇನೆ ನೇರಳೆ ಬಣ್ಣ. ಹೀಗಾಗಿ ಒಂದು ಬಣ್ಣವು ದೇಶದ ಹೆಸರಾಗಿರುವ ವೈಶಿಷ್ಟ್ಯಕ್ಕೆ ಆ ದೇಶ ಮೊದಲು ಪಾತ್ರವಾಯಿತು. ಸಮುದ್ರ ಬಸವನ ನೇರಳೆಯ ಹುಚ್ಚು ಇಷ್ಟಕ್ಕೇ ನಿಲ್ಲಲಿಲ್ಲ. ನಾಲ್ಕನೇ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದಲ್ಲಿ ಸಮುದ್ರ ಬಸವನ ನೇರಳೆ ಬಣ್ಣದ ಬಟ್ಟೆಗಳನ್ನು ಅಲ್ಲಿನ ರಾಜರ ಸಿವಾಯಿ ಬೇರೆ ಯಾರೂ ತೊಡುವಂತಿಲ್ಲವೆಂದು ಫರ್ಮಾನು ಹೊಡೆಸಲಾಯಿತು. ರಾಜಕುಟುಂಬಕ್ಕಷ್ಟೇ ಮೀಸಲಾದ ಕಾರಣಕ್ಕೆ ಅಲ್ಲಿನ ರಾಜಮನೆತನದವರನ್ನು ನೇರಳೆ ಹೊದ್ದವರು ಎಂದೇ ಸಂಬೋಧಿಸಲಾಗುತ್ತಿತ್ತು.

ಇದು ನೇರಳೆಯ ಕತೆಯಾದರೆ ವರ್ಣಪಟ್ಟಿಯಲ್ಲಿ (ಕಲರ್ ಚಾರ್ಟ್) ಕಾಣಸಿಗುವ ಭಾರತೀಯ ಹಳದಿ (ಇಂಡಿಯನ್ ಯೆಲ್ಲೋ) ಎನ್ನುವ ಬಣ್ಣದ ಕಥೆ ಮತ್ತೊಂದು ತರಹದ್ದು. ಶತಮಾನಗಳಿಂದ ಭಾರತೀಯ ಉಡುಪುಗಳಲ್ಲಿ ಮತ್ತು ಭಿತ್ತಿಚಿತ್ರಗಳಲ್ಲಿ ಹೇರಳವಾಗಿ ಕಾಣಸಿಗುವ ಈ ಬಣ್ಣದ ತಯಾರಿಕೆಯಲ್ಲಿ ಭಾರತೀಯರು ಅಧಿಪತ್ಯವನ್ನು ಸಾಧಿಸಿ ಹಲವಾರು ದೇಶಗಳಿಗೆ ರಫ್ತು ಮಾಡುತ್ತಿದ್ದರು. ಆದರೆ ಅದರ ತಯಾರಿಕೆಯನ್ನು ಅಷ್ಟೇ ಗುಟ್ಟಾಗಿಟ್ಟಿದ್ದ ನಮ್ಮವರು ಈ ಬಣ್ಣವನ್ನೇ ಮುಖ್ಯವಾಗಿ ಬಳಸಿದ ವರ್ಣಚಿತ್ರಗಳನ್ನು ತಯಾರಿಸಿ ದೇಶದ ಒಳಗೂ ಹೊರಗೂ ಮಾರುಕಟ್ಟೆಯನ್ನು ಸೃಷ್ಟಿಸಿ ಆ ಮೂಲಕ ಈ ಹಳದಿಗೆ ಪ್ಯಾನ್ ವರ್ಲ್ಡ್ ಇಮೇಜ್ ದೊರಕಿಸಿಕೊಟ್ಟಿದ್ದರು. 15ರಿಂದ 19ನೇ ಶತಮಾನದವರೆಗೆ ವರ್ಣಲೋಕವನ್ನಾಳಿದ ಈ ಬಣ್ಣದ ತಯಾರಿಕಾ ವಿಧಾನ ಮಾತ್ರ ವಿಶೇಷವಾಗಿದೆ. ಹಸುಗಳಿಗೆ ಕೇವಲ ಮಾವಿನ ಮರದ ಎಲೆಗಳನ್ನು ತಿನ್ನಲು ನೀಡಿ ನಂತರ ಆ ಹಸುಗಳ ಮೂತ್ರವನ್ನು ಸಂಗ್ರಹಿಸಿ ಮಡಿಕೆಗಳಲ್ಲಿ ಕುದಿಸಿ ಬಿಸಿಲಿನಲ್ಲಿ ಒಣಗಿಸಿ ಹಿಟ್ಟಿನ ರೂಪಕ್ಕೆ ತಂದು ಉಂಡೆಯಾಕಾರದಲ್ಲಿ ಕಟ್ಟಿ ಮಾರುಕಟ್ಟೆಗೆ ಕಳಿಸಲಾಗುತ್ತಿತ್ತು. ನಂತರ ಈ ಉಂಡೆಯು ಅದೇ ರೂಪದಲ್ಲಿ ಮಾರುಕಟ್ಟೆಗೆ ತಲುಪುತ್ತಿತ್ತು. ಮಜವೆಂದರೆ ಭಾರತೀಯರ ಈ ತಯಾರಿಕಾ ವಿಧಾನ ಹೊರಜಗತ್ತಿಗೆ ಗೊತ್ತಾಗಿದ್ದು ತೀರ ಇತ್ತೀಚೆಗೆ.

ಕೆಂಪು ಬಣ್ಣವು ಮೊದಲಿನಿಂದಲೂ ಆಡಳಿತಶಾಹಿಯ ಹೆಗ್ಗುರುತು. ಈ ಬಣ್ಣವು ವರ್ಣಲೋಕದ ಅತ್ಯಂತ ಹಿರಿಯ ಬಣ್ಣಗಳಲ್ಲೊಂದು. ಕ್ರಿ.ಪೂ. 700ರ ಸಮಯದಿಂದಲೂ ಇದರ ತಯಾರಿಕೆಯ ಕುರಿತು ಉಲ್ಲೇಖಗಳಿವೆ. ಈ ಬಣ್ಣದ ತಯಾರಿಕೆಯಲ್ಲಿ ಏಕಸಾಮ್ಯವನ್ನು ಸಾಧಿಸಿದ ಶ್ರೇಯ ದಕ್ಷಿಣ ಅಮೆರಿಕಾಗೆ ಹೋಗುತ್ತದೆ. ಇದಕ್ಕಾಗಿ ಅವರು ಬಳಸಿದ್ದು ಕೋಚಿನಿಯಲ್ ಎಂಬ ಕೀಟವನ್ನು. ಈ ಪರಾವಲಂಬಿ ಕೀಟಗಳನ್ನು ಹಿಡಿದು ಅವು ಉತ್ಪಾದಿಸುವ ಕಾರ್ಮಿಲಿಕ್ ಆಮ್ಲದಿಂದ ರಕ್ತಗೆಂಪು ಬಣ್ಣವನ್ನು ತಯಾರಿಸುತ್ತಿದ್ದರು. ರಾಜರ ಪೋಷಾಕುಗಳಿಂದ ಹಿಡಿದು ರಾಣಿಯ ಲಿಪ್‌ಸ್ಟಿಕ್‌ವರೆಗೆ ಈ ಬಣ್ಣ ಬಳಕೆಯಾಗಿ ಜಗತ್ತಿನಾದ್ಯಂತ ಭಾರಿ ಜನಪ್ರಿಯತೆಯನ್ನು ಗಳಿಸಿದ್ದಲ್ಲದೆ ದಕ್ಷಿಣ ಅಮೆರಿಕಾಗೆ ಹಲವು ಶತಮಾನಗಳವರೆಗೆ ವ್ಯಾವಹಾರಿಕವಾಗಿಯೂ ಲಾಭದಾಯಿಕವಾಗಿ ಪರಿಣಮಿಸಿತು. ದುರಂತವೆಂದರೆ ನೂರು ಗ್ರಾಂ ರಕ್ತಗೆಂಪು ಬಣ್ಣವನ್ನು ತಯಾರಿಸಲು ಪಾಪಾಸು ಕಳ್ಳಿಯ ಮೇಲೆ ಜೀವಿಸುವ ಸುಮಾರು 14 ಸಾವಿರ ಕೋಚಿನಿಯಲ್ ಕೀಟಗಳನ್ನು ಕೊಲ್ಲಲಾಗುತ್ತಿತ್ತು. ರಾಸಾಯನಿಕಗಳನ್ನು ಬಳಸಿ ಬಣ್ಣಗಳನ್ನು ತಯಾರಿಸುವ ಪ್ರಕ್ರಿಯೆ ಆರಂಭವಾಗಿದ್ದು 19ನೇ ಶತಮಾನದ ಮಧ್ಯದಲ್ಲಿ. ಅದೂ ಆಕಸ್ಮಿಕವಾಗಿ. 1856ರಲ್ಲಿ ವಿಲಿಯಂ ಪರ್ಕಿನ್ ಎಂಬ ಬ್ರಿಟಿಷ್ ವಿಜ್ಞಾನಿ, ಟಾರ್ ಬಳಸಿ ಮಲೇರಿಯಾಗೆ ಮದ್ದನ್ನು ತಯಾರಿಸುವ ಸಂಶೋಧನೆಯಲ್ಲಿ ತೊಡಗಿದ್ದ. ಅದು ಸಾಧ್ಯವಾಗದಿದ್ದರೂ ಕೊನೆಗೆ ಉಳಿದಿದ್ದು ಅತ್ಯಾಕರ್ಷಕವಾದ ನೇರಳೆ ಬಣ್ಣ. ಅದನ್ನು ಬಟ್ಟೆಗಳಿಗೆ ಬಣ್ಣವನ್ನಾಗಿ ಬಳಸಿಕೊಳ್ಳಬಹುದೆಂದು ಅರಿತುಕೊಂಡ ಆತ ಅದಕ್ಕಾಗಿ ಪೇಟೆಂಟ್ ಪಡೆದುಕೊಂಡ. ಈ ರಾಸಾಯನಿಕ ಬಣ್ಣದ ಬಟ್ಟೆ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದೇ ತಡ ಈ ಆಟದಲ್ಲಿ ಮತ್ತಷ್ಟು ಆಟಗಾರರು ಸೇರಿಕೊಂಡು ಮಗದಷ್ಟು ಬಣ್ಣಗಳನ್ನು ಪರಿಚಯಿಸಿದರು. ಕೆಲವೇ ವರ್ಷಗಳಲ್ಲಿ ಇದೊಂದು ದೊಡ್ಡ ಉದ್ಯಮವಾಗಿ ವಿಸ್ತರಿಸಲ್ಪಟ್ಟು ಹಲವಾರು ದೇಶಗಳಿಗೆ ಹಬ್ಬಿತು. ವೆಚ್ಚ, ತಯಾರಿಕಾ ವೇಗ, ಬಾಳಿಕೆ ಹೀಗೆ ಹಲವು ಅನುಕೂಲತೆಗಳನ್ನು ಹೊಂದಿದ್ದ ಈ ಬಣ್ಣಗಳು ದಿನ ಕಳೆದಂತೆ ಮತ್ತಷ್ಟು ವೈವಿಧ್ಯತೆಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡವು. ಬಟ್ಟೆಯಿಂದ ಆರಂಭವಾಗಿ ಕಟ್ಟಡ, ವಾಹನ, ಆಭರಣ, ಪ್ರಸಾಧನ ಹೀಗೆ ಎಲ್ಲೆಡೆ ಈ ಬಣ್ಣಗಳು ರಾರಾಜಿಸತೊಡಗಿದವು. ಈ ಎಲ್ಲ ಅನುಕೂಲತೆಗಳ ನಡುವೆ ಎಲ್ಲ ಕೃತಕ ವಸ್ತುಗಳಂತೆ ಇವೂ ಸಹ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವುದನ್ನು ಇಲ್ಲಿ ಹೇಳಲೇಬೇಕು. ಪ್ರತಿ ವರ್ಷ ವಸ್ತೋದ್ಯಮವು 6,25,000 ಟನ್‌ಗಳಷ್ಟು ರಾಸಾಯನಿಕ ತಾಜ್ಯವನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಸಿಂಹಪಾಲು ಕೃತಕ ಬಣ್ಣಕ್ಕೆ ಬಳಕೆಯಾಗುವಂತಹ ರಾಸಾಯನಿಕಗಳದ್ದು.

ತಾಂತ್ರಿಕತೆ ಬದಲಾವಣೆಯ ಬಿಸಿ ಈ ಬಣ್ಣಗಳಿಗೂ ತಟ್ಟಿದೆ. 2014ರಲ್ಲಿ ಸಿರೆ ನ್ಯಾನೋ ಸಿಸ್ಟಂ ಎನ್ನುವ ಕಂಪನಿ, ವಾಂಟಾಬ್ಲಾಕ್ ಎನ್ನುವ ಬಣ್ಣವನ್ನು ಮಾರುಕಟ್ಟೆಗೆ ಪರಿಚಯಿಸಿತು. ಜಗತ್ತಿನ ಅತ್ಯಂತ ಕಪ್ಪಗಿನ ಕಪ್ಪೆಂಬ ಖ್ಯಾತಿಯ ಈ ಬಣ್ಣವು ಮಾಮೂಲಿ ಎನಾಮೆಲ್ ಬಣ್ಣವಾಗಿರಲಿಲ್ಲ. ಕೃತಕ ಬಣ್ಣದ ತಯಾರಿಕೆಯಲ್ಲಿ ಮೊಟ್ಟಮೊದಲಿಗೆ ಇಂಗಾಲದ ನ್ಯಾನೋ ಟ್ಯೂಬ್‌ಗಳನ್ನು ಬಳಸಿ ಈ ಕಡುಗಪ್ಪು ಬಣ್ಣವನ್ನು ತಯಾರಿಸಲಾಗಿತ್ತು. ಇಲ್ಲಿ ಅತಿ ಕನಿಷ್ಠ ಅಂದರೆ ನ್ಯಾನೋ ಗಾತ್ರದಲ್ಲಿರುವ ಇಂಗಾಲದ ಪೊಳ್ಳಾದ ಟ್ಯೂಬ್‌ಗಳನ್ನು ಒಂದರ ತೀರಾ ಪಕ್ಕ ಇನ್ನೊಂದರಂತೆ ನಿಲ್ಲಿಸಲಾಗುತ್ತದೆ. ಹೀಗೆ ನಿಂತಿರುವ ನ್ಯಾನೋ ಟ್ಯೂಬ್‌ಗಳ ಮೇಲೆ ಬೆಳಕು ಬಿದ್ದಾಗ ಅವು ಬೆಳಕನ್ನು ಹೀರಿಕೊಂಡು ಶಾಖವಾಗಿ ಪರಿವರ್ತನೆಗೊಳ್ಳುತ್ತದೆ. ಹೀಗಾಗಿ ವಾಂಟಾಬ್ಲಾಕ್ ಮೇಲೆ ಬೀಳುವ ಪ್ರತಿ ಶತ 99.96 ಬೆಳಕನ್ನು ಆ ಬಣ್ಣವೇ ಹೀರಿಕೊಳ್ಳುತ್ತದೆ. ಹಾಗಾಗಿ ಇದು ಅತ್ಯಂತ ಕಡುಗಪ್ಪು ಬಣ್ಣವೆಂಬ ಖ್ಯಾತಿಗೆ ಒಳಗಾಯಿತು. ಇದು ಮಾರುಕಟ್ಟೆಗೆ ಬಂದ ನಂತರ ನೇರವಾಗಿ ಉತ್ಕೃಷ್ಟ ದರ್ಜೆಯ ಕ್ಯಾಮೆರಾಗಳಲ್ಲಿ, ಭೂಮಿ ಮತ್ತು ಬಾಹ್ಯಾಕಾಶದಲ್ಲಿ ಬಳಸುವ ದೂರದರ್ಶಕಗಳಲ್ಲಿ ಬಳಸಲಾಗುತ್ತಿದೆ. ಭಾರತೀಯ ಮೂಲದ ಅನೀಶ್ ಕಪೂರ್ ಎಂಬ ಅಂತಾರಾಷ್ಟ್ರೀಯ ಕಲಾವಿದ ತನ್ನ ಮೂರು ಆಯಾಮದ ಕಲಾಕೃತಿಗಳಿಗೆ ಈ ಬಣ್ಣವನ್ನು ಬಳಸಿ ಯಶಸ್ಸು ಕಂಡು ನಂತರ ಇದರ ಪೇಟೆಂಟ್ ಪಡೆದದ್ದು ಆಗ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.

ಕಳೆದ ವರ್ಷ ಅಮೆರಿಕಾದ ಪರ್ಡ್ಯೂ ವಿಶ್ವವಿದ್ಯಾಲಯವು ತಾನು ಜಗತ್ತಿನ ಅತ್ಯಂತ ಶುಭ್ರ ಬಿಳಿ ಬಣ್ಣವನ್ನು ತಯಾರಿಸಿರುವುದಾಗಿ ಘೋಷಿಸಿದೆ. ಕ್ಯಾಲ್ಕಿಯಮ್ ಕಾರ್ಬೋನೇಟ್ ಬಳಸಿ ತಯಾರಾಗಿರುವ ಈ ಬಣ್ಣವು ತನ್ನ ಮೇಲ್ಮ ಮೇಲೆ ಬೀಳುವ ಶೇಕಡಾ 94ರಷ್ಟು ಬೆಳಕನ್ನು ಪ್ರತಿಫಲಿಸುತ್ತದೆ. ಈ ಬಣ್ಣವನ್ನು ಕಟ್ಟಡಗಳ ಮಾಡಿಗೆ ಲೇಪಿಸಿದರೆ ಒಳಮೇಲ್ಮ ಸುಮಾರು ಹತ್ತು ಡಿಗ್ರಿಯಷ್ಟು ಕಡಿಮೆ ತಾಪಮಾನವನ್ನು ದಾಖಲಿಸುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಶುಭ್ರ ಶ್ವೇತವು ಏರ್‌ಕಂಡಿಶನ‌ರ್ ಗಳಿಗೆ ಪರ್ಯಾಯವಾಗಬಲ್ಲದು. ಈ ನಡುವೆ ರಾಸಾಯನಿಕ ಬಣ್ಣಗಳ ಅವಲಂಬನೆ ಕಡಿಮೆ ಮಾಡಲು ರಚನಾತ್ಮಕ ಬಣ್ಣಗಳ (ಸ್ಟ್ರಕ್ಚರಲ್ ಕಲರ್ಸ್) ತಯಾರಿಕೆಯತ್ತ ಸಹ ವಿಜ್ಞಾನಿಗಳ ಚಿತ್ತ ನೆಟ್ಟಿದೆ. ಇದರ ಕುರಿತು ಇನ್ನೊಮ್ಮೆ ತಿಳಿಯೋಣ.

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net