ಸರ್ವಜನಹಿತ ಚಿಂತಕ ಉತ್ತಮ ನಾಯಕ

Human Help (1)
Published on
ಒಂದು ಕುಟುಂಬದ ಹಿತಕ್ಕಾಗಿ ಒಬ್ಬ ವ್ಯಕ್ತಿಯನ್ನು ತ್ಯಾಗ ಮಾಡಬಹುದು. ಗ್ರಾಮದ ಕ್ಷೇಮಕ್ಕಾಗಿ ಒಂದು ಕುಟುಂಬವನ್ನು ತ್ಯಜಿಸಬಹುದು. ಅಂತೆಯೇ, ದೇಶದ ಹಿತಕ್ಕಾಗಿ ಒಂದು ಗ್ರಾಮವನ್ನು ತ್ಯಾಗ ಮಾಡಬಹುದು. ಹಾಗೆಯೇ, ಒಬ್ಬ ವ್ಯಕ್ತಿಯು ಭಗವಂತನಿಗಾಗಿ (ಆತ್ಮಜ್ಞಾನಕ್ಕಾಗಿ) ಇಡೀ ಭೂಮಿಯನ್ನೇ ತ್ಯಜಿಸಬಹುದು.

ಸನ್ನಿವೇಶಗಳಿಗನುಗುಣವಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವೇ ನಾಯಕತ್ವದ ಜೀವಾಳವೆಂದು ಹೇಳಬಹುದು. ಒಬ್ಬ ನಾಯಕನು ಕೈಗೊಳ್ಳುವ ನಿರ್ಧಾರಗಳು ಕೇವಲ ಅವನ ಅನುಯಾಯಿಗಳ ಜೀವನದ ಮೇಲಷ್ಟೇ ಅಲ್ಲದೆ, ಸಮಾಜದ ಮೇಲೂ ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ, ಅವನು ಕೈಗೊಳ್ಳುವ ನಿರ್ಧಾರಗಳು ಸದಾ ಸರ್ವಜನಹಿತಪ್ರದವಾಗಿರಬೇಕು. ಇಂತಹ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾಯಕನು ಅನುಸರಿಸಬೇಕಾದ ನಿಯಮಾವಳಿಗಳೇನು?

ಪ್ರಾಚೀನ ಭಾರತದಲ್ಲಿ ರಾಜ-ಮಹಾರಾಜರು ಸನಾತನ ಧರ್ಮವು ತೋರಿದ ನಿಯಮಗಳನ್ನು ಅನುಸರಿಸಿ ರಾಜ್ಯಭಾರ ಮಾಡುತ್ತಿದ್ದರು. ಅವರು ಕೈಗೊಂಡ ನಿರ್ಧಾರಗಳು ಬಹುಮಟ್ಟಿಗೆ ಸರ್ವಜನಕ್ಷೇಮ ಸಾಧಿಸಲು ಸಹಾಯಕವಾಗಿರುತ್ತಿದ್ದವು. ಪ್ರಾಚೀನ ಭಾರತದ ಇತಿಹಾಸವು, ಮನು ಚಕ್ರವರ್ತಿಯ ಕಾಲದಿಂದ ಹಿಡಿದು ಯುಧಿಷ್ಠಿರ ಮಹಾರಾಜನ ಕಾಲದವರೆಗೆ, ಅವತಾರೀಪುರುಷರಾದ ಶ್ರೀರಾಮ - ಶ್ರೀಕೃಷ್ಣರಿಂದ ಹಿಡಿದು ಭರತ ವಿಕ್ರಮಾದಿತ್ಯರವರೆಗೆ, ದೇಶವನ್ನು ಆಳಿದ ಮಹಾನುಭಾವರ ಉನ್ನತ ಚಾರಿತ್ರ್ಯ ಮತ್ತು ಅವರ ನೀತಿಬದ್ಧ ರಾಜ್ಯಭಾರದ ಕಥೆಗಳಿಂದ ತುಂಬಿದೆ. ನಾಯಕನು ತನ್ನ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದಲ್ಲಿ ಪ್ರಜೆಗಳಿಗೆ ಆದರ್ಶಪ್ರದವಾಗಿ ನಡೆದುಕೊಳ್ಳುತ್ತಾ, ಯಾವುದೇ ಪಕ್ಷಪಾತವಿಲ್ಲದೆ ನಿಸ್ವಾರ್ಥವಾಗಿ ಪ್ರಜಾಕ್ಷೇಮಕ್ಕಾಗಿ ದುಡಿಯಬೇಕೆಂಬ ಮಹೋನ್ನತ ಮೇಲ್ಪಂಕ್ತಿಯನ್ನು ಅವರು ಹಾಕಿಕೊಟ್ಟಿದ್ದಾರೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸಿರುವಂತೆ:

ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ

ಸ ಯತ್ ಪ್ರಮಾಣಂ ಕುರುತೇ ಲೋಕಃ ತದನುವರ್ತತೇ

ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳು ಹಾಕಿಕೊಟ್ಟ ಆಚರಣೆಯ ಮೇಲ್ಪಂಕ್ತಿಯನ್ನನುಸರಿಸಿ ಅದೇ ರೀತಿಯಲ್ಲಿ ಇತರರೂ ನಡೆದುಕೊಳ್ಳುತ್ತಾರೆ. ಶ್ರೇಷ್ಠ ವ್ಯಕ್ತಿಗಳ ನಡತೆಯ ಮಾನದಂಡವನ್ನು ಲೋಕವು ಪಾಲಿಸುತ್ತದೆ. ಸಮಾಜದಲ್ಲಿ ಉತ್ತಮ ನಾಯಕರ ಆದರ್ಶಪ್ರಾಯ ನಡತೆಯು ಉತ್ತಮ ಸಮಾಜದ ನಿರ್ವಣಕ್ಕೆ ಭದ್ರ ಬುನಾದಿಯೆಂದು ಹೇಳಬಹುದು.

ಮಹಾಭಾರತದ ದ್ರೋಣಪರ್ವದಲ್ಲಿ ಉಲ್ಲೇಖಿಸಲ್ಪಟ್ಟಿರುವ ರಾಜಾ ರಂತಿದೇವನು ಭಗವಂತನಲ್ಲಿ ಸಲ್ಲಿಸುವ ಪ್ರಾರ್ಥನೆಯು ಇಂತಿದೆ:

ನ ತ್ವಹಂ ಕಾಮಯೇ ರಾಜ್ಯಂ ನ ಸ್ವರ್ಗ ನ ಪುನರ್ಭವಮ್

ಕಾಮಯೇ ದುಃಖತಪ್ತಾನಾಂ ಪ್ರಾಣಿನಾಂ ಆರ್ತಿನಾಶನಮ್

ನಾನು ರಾಜ್ಯವನ್ನಾಗಲೀ, ಸ್ವರ್ಗವನ್ನಾಗಲೀ ಅಥವಾ ಮೋಕ್ಷವನ್ನಾಗಲೀ ಆಶಿಸುವುದಿಲ್ಲ. ದುಃಖದಿಂದ ನರಳುತ್ತಿರುವ ಸರ್ವಜೀವಿಗಳ ಸಂಕಟನಾಶವನ್ನು ಮಾತ್ರ ನಾನು ಬಯಸುತ್ತೇನೆ.

ಹೀಗೆ, ಪ್ರಾಚೀನ ಭಾರತದ ರಾಜರು ಮಾಡಿದ ಪ್ರತಿಯೊಂದು ನಿರ್ಧಾರವೂ ಸರ್ವರ ಹಿತ ಮತ್ತು ಉನ್ನತಿಗಳ ದೃಷ್ಟಿಯಿಂದಲೇ ಮಾಡಲ್ಪಡುತ್ತಿತ್ತು. ಅವರಲ್ಲಿ ಯಾವುದೇ ಸ್ವಾರ್ಥವಾಗಲೀ, ಸಂಕುಚಿತತೆಯಾಗಲೀ ಅಥವಾ ಪಕ್ಷಪಾತವಾಗಲೀ ಇರಲಿಲ್ಲ.

ಮಹಾಭಾರತದ ಉದ್ಯೋಗ ಪರ್ವದಲ್ಲಿ, ವಿಧುರನು ಧೃತರಾಷ್ಟ್ರ›ನಿಗೆ ರಾಜತ್ವ ಮತ್ತು ರಾಜ್ಯಾಡಳಿತದ ಕುರಿತಾದ ತನ್ನ ಪ್ರವಚನದಲ್ಲಿ, ಒಬ್ಬ ನಾಯಕನು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕವಾಗುವ ಸರಳ ಸೂತ್ರವೊಂದನ್ನು ನೀಡಿದ್ದಾನೆ.

ತ್ಯಜೇತ್ ಕುಲಸ್ಯಾರ್ಥೇ ಪುರುಷಂ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ ಟ

ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ಟಟ

ಒಂದು ಕುಟುಂಬದ ಹಿತಕ್ಕಾಗಿ ಒಬ್ಬ ವ್ಯಕ್ತಿಯನ್ನು ತ್ಯಾಗ ಮಾಡಬಹುದು. ಗ್ರಾಮದ ಕ್ಷೇಮಕ್ಕಾಗಿ ಒಂದು ಕುಟುಂಬವನ್ನು ತ್ಯಜಿಸಬಹುದು. ಅಂತೆಯೇ, ದೇಶದ ಹಿತಕ್ಕಾಗಿ ಒಂದು ಗ್ರಾಮವನ್ನು ತ್ಯಾಗ ಮಾಡಬಹುದು. ಹಾಗೆಯೇ, ಒಬ್ಬ ವ್ಯಕ್ತಿಯು ಭಗವಂತನಿಗಾಗಿ (ಆತ್ಮಜ್ಞಾನಕ್ಕಾಗಿ) ಇಡೀ ಭೂಮಿಯನ್ನೇ ತ್ಯಜಿಸಬಹುದು.

ಯಾವುದೇ ರಂಗದ ನಾಯಕರು ಎದುರಿಸುವ ಕೆಲವು ದ್ವಂದ್ವಮಯ ಸನ್ನಿವೇಶಗಳಲ್ಲಿ ಮೇಲಿನ ಸೂತ್ರವು ಬಹು ಸಹಾಯಕವಾಗುತ್ತದೆ.

ಮಹಾಭಾರತದಲ್ಲಿ ಭೀಷ್ಮ ಪಿತಾಮಹನು ತನ್ನ ಯೌವ್ವನ ಕಾಲದಲ್ಲಿಯೇ, ರಾಜ್ಯಾಧಿಕಾರದ ಕಾರಣಕ್ಕಾಗಿ ಭವಿಷ್ಯದಲ್ಲಿ ತನ್ನ ಮಲತಾಯಿಯ ಮಕ್ಕಳೊಂದಿಗೆ ಎದುರಾಗುವ ಸಂಘರ್ಷವನ್ನು ತಪ್ಪಿಸಲು, ಜೀವನಪರ್ಯುತ ಬ್ರಹ್ಮಚರ್ಯವನ್ನು ಸ್ವೀಕರಿಸಿದ್ದಲ್ಲದೆ, ತಾನು ಸದಾ ಹಸ್ತಿನಾವತಿಯ ಸಿಂಹಾಸನಕ್ಕೆ ಸಂಪೂರ್ಣ ನಿಷ್ಠೆಯಿಂದ ನಡೆದುಕೊಳ್ಳುತ್ತೇನೆಂಬ ಪ್ರತಿಜ್ಞೆಯನ್ನೂ ಮಾಡುತ್ತಾನೆ. ಆದರೆ, ಇಂತಹ ಮಹಾನ್ ತ್ಯಾಗಿಯು ತನ್ನ ವೃದ್ಧಾಪ್ಯದಲ್ಲಿ, ಅಧಿಕಾರದಾಹ ಹಾಗೂ ಪುತ್ರವ್ಯಾಮೋಹದಿಂದ ಅಂಧನಾದ ಧೃತರಾಷ್ಟ್ರನು, ತನ್ನ ಸೋದರನ ಪುತ್ರರಾದ ಪಾಂಡವರಿಗೆ ಅವರ ನ್ಯಾಯಬದ್ಧ ಸಿಂಹಾಸನದ ಹಕ್ಕನ್ನು ನಿರಾಕರಿಸಿದಾಗ, ತನ್ನ ಧರ್ಮವನ್ನು ಮರೆತು ಅಧರ್ಮವನ್ನು ಬೆಂಬಲಿಸಿದನು. ಇದಕ್ಕೆ ವ್ಯತಿರಿಕ್ತವಾಗಿ ರಾಮಾಯಣದಲ್ಲಿ, ವಿಭೀಷಣನು, ಧರ್ಮಪರನಾಗಿದ್ದ ಶ್ರೀರಾಮನಿಗೋಸ್ಕರ ಅಧರ್ವಿುಷ್ಟನಾದ ತನ್ನ ಸ್ವಂತ ಅಣ್ಣ, ರಾವಣ ಹಾಗೂ ಅವನ ರಾಜ್ಯವನ್ನು ತ್ಯಜಿಸಿ, ತನ್ನ ಧರ್ಮನಿಷ್ಠೆಯನ್ನು ತೋರಿದುದನ್ನೂ ನಾವು ಕಾಣಬಹುದು. ಇವರಿಬ್ಬರ ಮಧ್ಯೆ, ವಿಭೀಷಣನು ಸರಿಯಾದ ನಿರ್ಧಾರವನ್ನು ಕೈಗೊಂಡನು; ಭೀಷ್ಮನು ತಪ್ಪು ನಿರ್ಧಾರವನ್ನು ಮಾಡಿದನು. ಎರಡು ಸಂದರ್ಭಗಳಲ್ಲಿಯೂ ಯುದ್ಧವು ನಡೆಯಿತು; ಆದರೆ ಯುದ್ಧಾನಂತರ, ವಿಭೀಷಣನು ತನ್ನ ಸರಿಯಾದ ನಿರ್ಧಾರದಿಂದಾಗಿ ಲಂಕಾಧೀಶನಾಗಿ ಗೌರವಿಸಲ್ಪಟ್ಟನು. ಭೀಷ್ಮನಾದರೋ ಪಶ್ಚಾತ್ತಾಪ ಮನಸ್ಕನಾಗಿ ಹತನಾಗಬೇಕಾಯಿತು; ಅಲ್ಲದೆ, ಅವನು ಬೆಂಬಲಿಸಿದ ಕೌರವರೂ ನಾಶವಾದರು. ಆದ್ದರಿಂದ, ನಾಯಕನು ಯಾವುದೇ ನಿರ್ಧಾರವನ್ನು, ಉಳಿದ ಎಲ್ಲಾ ಪರಿಗಣನೆಗಳಿಗಿಂತಲೂ ಮುಖ್ಯವಾಗಿ, ನ್ಯಾಯದ ಆಧಾರದಲ್ಲಿ ತೆಗೆದುಕೊಳ್ಳಬೇಕು.

ಇದೇ ಆಗಸ್ಟ್ 15ರಂದು ನಾವು 77ನೆಯ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದೇವೆ. ಅಲ್ಲದೆ, ಸ್ವಾತಂತ್ರ್ಯ್ಕಾಗಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಬಲಿದಾನಗೈದು, ವೈಯಕ್ತಿಕ ಹಿತಕ್ಕಿಂತ ದೇಶದ ಹಿತವೇ ಮೇಲು ಎಂಬ ಆದರ್ಶವನ್ನು ಎತ್ತಿಹಿಡಿದ ವೀರರಿಗೆ ಕೃತಜ್ಞತಾಪೂರ್ವಕ ಗೌರವವನ್ನೂ ಸಲ್ಲಿಸಿದ್ದೇವೆ.

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net