ಕೃಷ್ಣಾ ತೀರದ ಕಣ್ಣೀರ ಕಥೆ; ಅನಾದರ, ಅನ್ಯಾಯದ ವ್ಯಥೆ

Krishna 1 (1)
Published on

| ರಾಘವ ಶರ್ಮ ನಿಡ್ಲೆ ನವದೆಹಲಿ

ಕರ್ನಾಟಕದಲ್ಲಿ ಕಾವೇರಿ ನದಿ ನೀರಿಗಿಂತ ಕೃಷ್ಣಾ ನೀರಿನ ಬಳಕೆ ಹಾಗೂ ಹರಿವು ಅಂದಾಜು ಮೂರು ಪಟ್ಟು ಹೆಚ್ಚಿದ್ದರೂ, ಕಾವೇರಿ ನದಿಗೆ ನೀಡಿದಷ್ಟು ಮಹತ್ವ ಕೃಷ್ಣಾಕ್ಕೆ ಸಿಗಲೇ ಇಲ್ಲ ಎನ್ನುವುದು ಕಟು ವಾಸ್ತವ. ಇದಕ್ಕೆ ಉತ್ತರ ಕರ್ನಾಟಕದ ಮೇಲಿನ ನಿರ್ಲಕ್ಷ್ಯ ಒಂದು ಕಾರಣವಾದರೆ, ಕಾವೇರಿ ನೀರಿನ ಜತೆಗೆ ರಾಜಧಾನಿಗೆ ಬೆಂಗಳೂರಿಗೆ ನೇರ ಸಂಪರ್ಕವಿರುವುದರಿಂದ ಕೃಷ್ಣಾ ಕೊಳ್ಳದ ಜನರ ಅಗತ್ಯದ ಬಗ್ಗೆ ರಾಜ್ಯದಲ್ಲಿನ ಬಹುತೇಕ ಸರ್ಕಾರಗಳು ಉದಾಸೀನ ಧೋರಣೆ ಅನುಸರಿಸುತ್ತಲೇ ಬಂದಿವೆ. 2010ರಲ್ಲಿ ಕೃಷ್ಣಾ ನ್ಯಾಯಾಧಿಕರಣವು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ನೀರು ಹಂಚಿಕೆ ಮಾಡಿ ತನ್ನ ಐತೀರ್ಪನ್ನು ಪ್ರಕಟಿಸಿತ್ತು. ದುರಂತ, ಎಂದರೆ ಐತೀರ್ಪ ಪ್ರಕಟವಾಗಿ 13 ವರ್ಷ ಕಳೆದರೂ ಕೇಂದ್ರ ಸರ್ಕಾರದ ಮೂಲಕ ಐತೀರ್ಪಿನ ಅಧಿಸೂಚನೆ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿರುವುದು ಉದಾಸೀನ ಧೋರಣೆ ಮುಂದುವರಿದಿರುವುದಕ್ಕೆ ಒಂದು ತಾಜಾ ನಿದರ್ಶನ. 13 ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದ ರಾಜ್ಯ ಸರ್ಕಾರಗಳಲ್ಲಿ ಆಕ್ರಮಣಶೀಲತೆ, ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಮೂಲ ಕಾರಣ. ಅಂದರೆ, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜನರ ಮೂಗಿಗೆ ತುಪ್ಪಾ ಸವರುತ್ತಾ ಬಂದವೇ ವಿನಃ ವಾಸ್ತವದಲ್ಲಿ ಏನು ಆಗಬೇಕಿತ್ತೋ ಅದನ್ನು ಸಾಧಿಸುವಲ್ಲಿ ಸಂಪೂರ್ಣವಾಗಿ ಸೋತು ಹೋದವು ಎನ್ನದೆ ವಿಧಿಯಿಲ್ಲ.

2ನೇ ಕೃಷ್ಣಾ ನ್ಯಾಯಾಧಿಕರಣ 2004 ಏಪ್ರಿಲ್ ತಿಂಗಳಲ್ಲಿ ಸ್ಥಾಪನೆಯಾದರೂ, ವಿಚಾರಣೆ ಆರಂಭಗೊಂಡಿದ್ದು 2006ರ ಜುಲೈ 17ರಂದು. ನ್ಯಾ. ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧಿಕರಣ 4 ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ 2010ರ ಡಿಸೆಂಬರ್ ತಿಂಗಳಲ್ಲಿ ಪ್ರಕಟಿಸಿದ ಐತೀರ್ಪಿನಲ್ಲಿ ಆಂಧ್ರಪ್ರದೇಶಕ್ಕೆ 1001 ಟಿಎಂಸಿ, ಕರ್ನಾಟಕಕ್ಕೆ 911 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 666 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಇದಾಗಿ, 2013ರಲ್ಲಿ ರಾಜ್ಯಗಳು ಸಲ್ಲಿಸಿದ ಸ್ಪಷ್ಟೀಕರಣ ಅರ್ಜಿಗಳ ಮೇಲೆ ತೀರ್ಪು ನೀಡಿ, ರಾಜ್ಯದ ಪಾಲನ್ನು 907 ಟಿಎಂಸಿ ಎಂದು ನಿಗದಿಪಡಿಸಿ, ಆಂಧ್ರಕ್ಕೆ 1005 ಟಿಎಂಸಿ ಹಂಚಿಕೆ ಮಾಡಿತ್ತು. ನ್ಯಾಯಾಧಿಕರಣ ವಿಚಾರಣೆ ನಡೆಸಿ, ಐತೀರ್ಪ ಪ್ರಕಟಿಸಲು ಕನಿಷ್ಠ 4 ವರ್ಷ ತೆಗೆದುಕೊಂಡರೂ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ 13 ವರ್ಷಗಳ ಬಳಿಕವೂ ಐತೀರ್ಪಿನ ಅಧಿಸೂಚನೆಯಾಗಲಿಲ್ಲ. ಹಾಗಿದ್ದರೆ, ನ್ಯಾಯಾಧಿಕರಣ ಐತೀರ್ಪ ನೀಡಿ ಏನು ಪ್ರಯೋಜನವಾಯ್ತು? ಅಧಿಸೂಚನೆ ಪ್ರಕಟಿಸಲು ಸಾಧ್ಯವಿಲ್ಲ ಎನ್ನುವುದಾದರೆ, ನ್ಯಾಯಾಧಿಕರಣ ಬೇಗ ತೀರ್ಪು ನೀಡಿ ನಮಗೆ ನ್ಯಾಯ ಒದಗಿಸಬೇಕು ಎಂದು ವಾದಿಸುವುದರಲ್ಲಿ ಏನರ್ಥವಿದೆ? 2024ಕ್ಕೆ ನ್ಯಾಯಾಧಿಕರಣ ರಚನೆಯಾಗಿ 19 ವರ್ಷ ಪೂರ್ಣಗೊಳ್ಳುತ್ತದೆ. 20ನೇ ವರ್ಷಕ್ಕಾದರೂ ರಾಜ್ಯಕ್ಕೆ ಅಧಿಸೂಚನೆಯ ಸಿಹಿ ಸುದ್ದಿ ಸಿಗಬಹುದೇ ಎಂಬ ಪ್ರಶ್ನೆಗೆ ಖಚಿತ ಉತ್ತರವಿಲ್ಲ.

ತೆಲಂಗಾಣ ಒತ್ತಡಕ್ಕೆ ಶರಣು

ಆಂಧ್ರ ವಿಭಜನೆಯಾದ ಬಳಿಕ ತೆಲಂಗಾಣ ಹೊಸ ರಾಜ್ಯವಾದ್ದರಿಂದ ಕೃಷ್ಣಾ ನ್ಯಾಯಾಧಿಕರಣ ಐತೀರ್ಪಿನ ಅಧಿಸೂಚನೆ ಪ್ರಕಟಿಸದಿರಲು ತೆಲಂಗಾಣವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿದೆ. ಇದರಿಂದಲೇ ಮಹಾರಾಷ್ಟ್ರ- ಕರ್ನಾಟಕ ಅನ್ಯಾಯ ಅನುಭವಿಸುತ್ತಿವೆ. ತೆಲಂಗಾಣ-ಆಂಧ್ರ ನೀರು ಹಂಚಿಕೆ ವ್ಯಾಜ್ಯ ಕರ್ನಾಟಕ, ಮಹಾರಾಷ್ಟ್ರಕ್ಕೆ ಸಂಬಂಧಿಸಿಲ್ಲ. ಆಂಧ್ರಕ್ಕೆ ನ್ಯಾಯಾಧಿಕರಣ ಹಂಚಿಕೆ ಮಾಡಿದ್ದ 1005 ಟಿಎಂಸಿ ನೀರಿನಲ್ಲಿ ಎರಡೂ ರಾಜ್ಯಗಳು ಪರಿಹಾರ ಕಂಡುಕೊಳ್ಳಬೇಕು. ಈ ವಾಸ್ತವದ ಅರಿವಿದ್ದರೂ, ಕೇಂದ್ರ ಸರ್ಕಾರ ಆಂಧ್ರ ಮತ್ತು ತೆಲಂಗಾಣದ ವಿರೋಧ ಕಟ್ಟಿಕೊಳ್ಳಲು ಸಿದ್ಧವಿಲ್ಲ. ಕರ್ನಾಟಕದ ಸಂಸದರು ಮತ್ತು ರಾಜ್ಯ ಸರ್ಕಾರ ಆಂಧ್ರ ಅಥವಾ ತೆಲಂಗಾಣದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಇಚ್ಛಾಶಕ್ತಿ ಪ್ರದರ್ಶಿಸದಿರುವುದರಿಂದ ಕೃಷ್ಣಾ ಕೊಳ್ಳದ ಜನರಿಗೆ 13 ವರ್ಷದಿಂದ ಅನ್ಯಾಯವಾಗುತ್ತಿದೆ.

ವಿಳಂಬ ಧೋರಣೆ ಏಕೆ?

ಅಧಿಸೂಚನೆ ಅಗತ್ಯತೆ ಬಗ್ಗೆ ಕೇಂದ್ರಕ್ಕೆ ಎಷ್ಟೇ ಮನವಿ ನೀಡಿದರೂ ಪರಿಹಾರ ಸಿಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಬಂದಾಗಲೆಲ್ಲಾ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮನವಿ ನೀಡಿ ಕೈ ಮುಗಿದು ಬಂದರು. ಆದರೆ, ನ್ಯಾಯ ಸಿಗಲೇ ಇಲ್ಲ. ಹಾಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕೂಡ ಜಲಶಕ್ತಿ ಸಚಿವರನ್ನು ಭೇಟಿಯಾಗಿ, ಅಧಿಸೂಚನೆ ಪ್ರಕಟಿಸಿ ಎಂದಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನ್ಯಾಯಪೀಠದ ಮುಂದೆ ಹೊಸ ನ್ಯಾಯಪೀಠ ರಚನೆಗೆ ಒತ್ತಾಯ ಮಾಡಿದಲ್ಲಿ ಈ ಬಗ್ಗೆ ತೀರ್ಮಾನ ಮಾಡುವ ಸಾಧ್ಯತೆಗಳಿವೆ. ಆದರೆ, ರಾಜ್ಯ ಸರ್ಕಾರ ಏಕೆ ವಿಳಂಬ ಮಾಡುತ್ತಿದೆ ಅರ್ಥವಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಆಲಮಟ್ಟಿ ಏರಿಕೆಯಿಂದಲೂ ಸಿಕ್ಕಿಲ್ಲ ಲಾಭ

ಎರಡನೇ ಕೃಷ್ಣಾ ನ್ಯಾಯಾಧಿಕರಣವು ಆಲಮಟ್ಟಿ ಜಲಾಶಯದ ಎತ್ತರವನ್ನು 519 ಅಡಿಯಿಂದ 524ಕ್ಕೆ ಏರಿಸಲು ಅನುಮತಿ ನೀಡಿದ್ದೇ ರಾಜ್ಯದ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಗೆಲುವಾಗಿತ್ತು. ಆದರೆ, ಐತೀರ್ಪಿನ ಅಧಿಸೂಚನೆ ಇಲ್ಲದಿರುವುದರಿಂದ ಈಗಲೂ ಕರ್ನಾಟಕ 519 ಅಡಿಯವರೆಗೆ ಮಾತ್ರ ಜಲಾಶಯದಲ್ಲಿ ನೀರು ಸಂಗ್ರಹಿಸಬಹುದಷ್ಟೇ. ಬಹುದೊಡ್ಡ ಹೋರಾಟದ ಬಳಿಕ ಸಿಕ್ಕ ಲಾಭವೊಂದನ್ನು ಬಳಸಿಕೊಳ್ಳಲೂ ಸಾಧ್ಯವಾಗದ ಸ್ಥಿತಿ ಕರ್ನಾಟಕದ್ದು ಎಂದು ರಾಜ್ಯದ ವಕೀಲರೊಬ್ಬರು ಅಸಮಾಧಾನ ಹೊರಹಾಕುತ್ತಾರೆ. ಐತೀರ್ಪಿನ ಪ್ರಕಾರ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದಾಗಿ ರಾಜ್ಯ ಒಟ್ಟು 303 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು. ಆದರೆ, ಪ್ರಸಕ್ತ ಕರ್ನಾಟಕಕ್ಕೆ ಬಳಸಿಕೊಳ್ಳಲು ಸಾಧ್ಯವಾಗುತ್ತಿರುವುದು 173 ಟಿಎಂಸಿ ನೀರು ಮಾತ್ರ. ಅಧಿಸೂಚನೆ ಹೊರಬಿದ್ದ ಕೂಡಲೇ ರಾಜ್ಯ 303 ಟಿಎಂಸಿ ನೀರನ್ನು ಕೃಷ್ಣಾ ಕೊಳ್ಳದ ಪ್ರದೇಶಗಳಿಗೆ ಬಳಕೆಗೆ ಮೀಸಲಿಡಬಹುದು. 2ನೇ ಕೃಷ್ಣಾ ನ್ಯಾಯಾಧಿಕರಣವು ಕರ್ನಾಟಕಕ್ಕೆ ಹೆಚ್ಚುವರಿಯಾಗಿ 177 ಟಿಎಂಸಿ ನೀರು ಹಂಚಿಕೆ ಮಾಡಿದೆ. ಇದರಲ್ಲಿ 65 ಟಿಎಂಸಿ ನೀರನ್ನು ತಕ್ಷಣವೇ ಬಳಸಿದರೆ ಉತ್ತರ ಕರ್ನಾಟಕದ ಬರಪೀಡಿತ 3.5 ಲಕ್ಷ ಹೆಕ್ಟೇರ್ ಭೂಪ್ರದೇಶಗಳಿಗೆ ನೀರಾವರಿ ಒದಗಿಸಿದಂತಾಗುತ್ತದೆ.

ಸುಪ್ರೀಂ ಕೋರ್ಟ್​ನಿಂದ ಪರಿಹಾರ ಸಂಭವ

ಸುಪ್ರೀಂ ಕೋರ್ಟ್​ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿ ಆಗುವ ಮುನ್ನ ನ್ಯಾ.ಎ.ಎಸ್. ಬೋಪಣ್ಣ ಜತೆಗಿದ್ದ ನ್ಯಾಯಪೀಠದಲ್ಲಿ ಅಧಿಸೂಚನೆ ಪ್ರಕಟಿಸಬೇಕೆಂಬ ಕರ್ನಾಟಕ, ಮಹಾರಾಷ್ಟ್ರದ ಬೇಡಿಕೆ ಕುರಿತು ವಿಚಾರಣೆ ಮಾಡಿದ್ದರು. ನ್ಯಾ. ಚಂದ್ರಚೂಡ್ ಮಹಾರಾಷ್ಟ್ರದವರು ಮತ್ತು ನ್ಯಾ. ಬೋಪಣ್ಣ ಕರ್ನಾಟಕದವರಾಗಿದ್ದರಿಂದ ಮೂರ್ನಾಲ್ಕು ವಿಚಾರಣೆಗಳ ಬಳಿಕ ಇಬ್ಬರೂ ನ್ಯಾಯಮೂರ್ತಿಗಳಿಗೆ ಅನಾಮಧೇಯ ಪತ್ರಗಳು, ಇ-ಮೇಲ್ ಗಳ ಮೂಲಕ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವುದಕ್ಕೆ ಆಕ್ಷೇಪಾರ್ಹ ರೀತಿಯಲ್ಲಿ ಟೀಕೆಗಳನ್ನು ಮಾಡಲಾಯ್ತು. ಇದರಿಂದ ಬೇಸರಗೊಂಡಿದ್ದ ನ್ಯಾಯಮೂರ್ತಿಗಳು ತಾವು ವಿಚಾರಣೆ ನಡೆಸುವುದಿಲ್ಲ ಎಂದು ಹಿಂದೆ ಸರಿದರು. ನಂತರದಲ್ಲಿ, ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಬಾಲಸುಬ್ರಹ್ಮಣ್ಯಂ ವಿಚಾರಣೆ ನಡೆಸಿದರೂ, ನ್ಯಾ. ಬಾಲಸುಬ್ರಹ್ಮಣ್ಯಂ ಸೇವೆಯಿಂದ ನಿವೃತ್ತರಾದರು. ನಂತರದಲ್ಲಿ ಕೃಷ್ಣಾ ವಿಚಾರಣೆ ನಡೆದೇ ಇಲ್ಲ. ಹಾಲಿ ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಪ್ರಕರಣದ ಕುರಿತು ಮಾಹಿತಿ ಇರುವುದರಿಂದ ತಕ್ಷಣವೇ ಹೊಸ ಪೀಠ ರಚಿಸಲು ವಕೀಲರ ಮೂಲಕ ಸರ್ಕಾರ ಒತ್ತಾಯಿಸಬೇಕು. ಏಕೆಂದರೆ ಸುಪ್ರೀಂ ಕೋರ್ಟ್​ನಿಂದಷ್ಟೇ ನಮಗೆ ಪರಿಹಾರ ಸಿಗಬಲ್ಲದು ಎಂದು ಹಿರಿಯ ವಕೀಲರೊಬ್ಬರು ಅಭಿಪ್ರಾಯಪಡುತ್ತಾರೆ. ನ್ಯಾಯಾಧಿಕರಣ ಐತೀರ್ಪ ಪ್ರಶ್ನಿಸಿ ಎಲ್ಲಾ ರಾಜ್ಯಗಳು ಸಲ್ಲಿಸಿರುವ ಮೂಲ ಮೇಲ್ಮನವಿಗಳ ವಿಚಾರಣೆ ನಡೆಸಬೇಕೆ ವಿನಃ ಕರ್ನಾಟಕ ಮತ್ತು ಮಹಾರಾಷ್ಟ್ರದ ಮನವಿಯಂತೆ ಅಧಿಸೂಚನೆ ಪ್ರಕಟಣೆಗೆ ನ್ಯಾಯಾಲಯ ಈಗ ಆದೇಶ ನೀಡಬಾರದು ಎನ್ನುವುದು ತೆಲಂಗಾಣದ ತಕರಾರು. ಆದರೆ, ಅಂತಿಮ ತೀರ್ಪಿಗೆ ಅನ್ವಯವಾಗುವಂತೆ ಅಧಿಸೂಚನೆಯನ್ನು ಬದಲಿಸಿಕೊಳ್ಳಲು ಅವಕಾಶವಿರುವುದರಿಂದ ಸುಪ್ರೀಂ ಕೋರ್ಟ್ ಗಮನಸೆಳೆಯಲು ಕಾಂಗ್ರೆಸ್ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net