

ಒಂದು ವಾರದ ಅಂತರದ ನಂತರ ಜಗದಗಲಕ್ಕೆ ಯೆವ್ಗೆನಿ ಪ್ರಿಗೋಝಿನ್ ಹಿಂತಿರುಗಿದ್ದಾನೆ. ಯಾಕೆಂದರೆ ಅವನೀಗ ಇಲ್ಲ ಎಂದು ರಶಿಯಾ ಹೇಳುತ್ತಿದೆ. ವಿಮಾನಾಫಘಾತದಲ್ಲಿ ಪ್ರಿಗೋಝಿನ್ ಮೃತಪಟ್ಟಿದ್ದಾನೆ ಎಂದು ರಶಿಯಾ ಹೇಳುವುದಕ್ಕೂ ಮೊದಲೇ ಆತ ಹತ್ಯೆಗೀಡಾಗಿದ್ದಾನೆ ಎಂದು ಪಶ್ಚಿಮ ಜಗತ್ತು ಸಾರಿಯೂ ಆಗಿಹೋಗಿದೆ. ಯಾರು ನಿಜ ಹೇಳುತ್ತಿದ್ದಾರೆ ಎಂದೇ ತಿಳಿಯಲಾಗದ ಈ ಗೊಂದಲಮಯ ಸನ್ನಿವೇಶದಲ್ಲಿ ಹೀಗೇ ಆಗಿದೆ ಎಂದು ಹೇಳಲು ನನಗೂ ಸಾಧ್ಯವಾಗದು. ಆದರೂ ಲಭ್ಯ ಮಾಹಿತಿಗಳನ್ನು ಜರಡಿಯಾಡಿ ಹೀಗಾಗಿರಬಹುದು ಎಂದು ರ್ತಸಲು ಒಂದು ಪ್ರಯತ್ನವನ್ನಿಲ್ಲಿ ಮಾಡೋಣ.
ಇದೇ ಆಗಸ್ಟ್ 23ರಂದು ಸ್ಥಳೀಯ ಕಾಲಮಾನ ಸಂಜೆ 6-15ಕ್ಕೆ ಮಾಸ್ಕೋ ಮತ್ತು ಸೈಂಟ್ ಪೀಟರ್ಸ್ಬರ್ಗ್ ನಗರಗಳಿಗೆ ಸುರಿಸುಮಾರು ನಡುಮಧ್ಯದಲ್ಲಿರುವ ಕುಝಾಂಕಿನೋ ಹಳ್ಲಿಯ ಹೊರವಲಯದಲ್ಲಿ ವಿಮಾನವೊಂದು ನೆಲಕ್ಕೆ ಬಿತ್ತು. ಈ ವಿಮಾನಾಫಘಾತದ ಕುರಿತಾಗಿ ರಶಿಯನ್ ಮಾಧ್ಯಮಗಳು ಅಥವಾ ಸರ್ಕಾರ ಬಾಯಿ ತೆರೆಯುವ ಮೊದಲೇ ಪಶ್ಚಿಮದ ಸುದ್ದಿಮಾಧ್ಯಮಗಳು ಗಟ್ಟಿ ಗಂಟಲಿನಲ್ಲಿ ಕೂಗತೊಡಗಿದ್ದು ಆ ಎಂಬ್ರೆಸರ್ ಲೆಗಸಿ 600 ಡಬಲ್ ಎಂಜಿನ್ ಬ್ಯುಸಿನೆಸ್ ಜೆಟ್ ರಶಿಯಾದ ಕೂಲಿಸೇನೆ ವ್ಯಾಗ್ನರ್ ಗ್ರೂಪ್ನ ಮಾಲಿಕ ಹಾಗೂ ಮುಖ್ಯಸ್ಥ ಯೆವ್ಗೆನಿ ಪ್ರಿಗೋಝಿನ್ರ ಸ್ವಂತ ವಿಮಾನ. ಅದರಲ್ಲಿ ಅವರು ಇಬ್ಬರು ಅಂಗರಕ್ಷಕರು, ಮೂವರು ಸಹಯೋಗಿಗಳು ಮತ್ತು ಮೂವರ ಚಾಲಕ ತಂಡದೊಂದಿಗೆ ಪ್ರಯಾಣಿಸುತ್ತಿದ್ದರು, ಅಫಘಾತದಲ್ಲಿ ಎಲ್ಲ ಹತ್ತೂ ಜನ ಮೃತಪಟ್ಟಿದ್ದಾರೆ ಎಂದು. ನಂತರ ಅದನ್ನು ರಶಿಯನ್ ಫೆಡರಲ್ ಏರ್ ಟ್ರಾನ್ಸ್ಪೋರ್ಟ್ ಏಜೆನ್ಸಿ ಸಹಾ ಹೇಳಿ ಪ್ರಿಗೋಝಿನ್ ಅಂತ್ಯವನ್ನು ಅಧಿಕೃತವಾಗಿ ಸಾರಿತು. ರಶಿಯನ್ ಅಧ್ಯಕ್ಷ ವ್ಲಾದಿಮೀರ್ ಪೂತಿನ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು, ಜಗತ್ತಿನ ವಿವಿಧೆಡೆ ರಶಿಯಾದ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ವೃದ್ಧಿಸಲು ಯೆವ್ಗೆನಿ ಪ್ರಿಗೋಝಿನ್ ಮತ್ತು ವ್ಯಾಗ್ನರ್ ಗ್ರೂಪ್ ಮಾಡಿರುವ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅಗಲಿದ ಆತ್ಮಗಲಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಆದರೆ, ಆ ಪ್ರಕರಣ ಒಂದು ಅಫಘಾತ ಎಂದು ರಶಿಯಾದ ಒಳಗಿನಿಂದ ಬಂದ ಸುದ್ದಿಗಳು ಹೇಳಿದರೆ, ಅದು ಸಹಜ ಅಫಘಾತವಲ್ಲ, ಪ್ರಿಗೋಝಿನ್ರನ್ನು ಹತ್ಯೆಗೈಯಲು ಅಧ್ಯಕ್ಷ ಪೂತಿನ್ ಹೂಡಿದ ಹೂಟ ಎಂದು ವಿದೇಶಿ ಮುಖ್ಯವಾಗಿ ಅಮೆರಿಕಾ, ಬ್ರಿಟನ್ ಮತ್ತು ಯೂಕ್ರೇನ್ನ ಮಾಧ್ಯಮಗಳು ಹೇಳಿದವು. ಅವುಗಳನನ್ನನುಸರಿಸಿ ಆಯಾ ದೇಶಗಳ ನಾಯಕರೂ ಪೂತಿನ್ ಹತ್ಯಾಕಾರಿ, ಪೂತಿನ್ರ ರಶಿಯಾದಲ್ಲಿ ಇಂಥದ್ದು ನಡೆಯುವಂಥದ್ದೇ ಎಂದು ಹೇಳಿಕೆಗಳನ್ನು ಕೊಟ್ಟರು. ತನ್ನ ನಾಯಕ ಹತ್ಯೆಗೀಡಾಗಿದ್ದಾರೆ ಎಂದು ವ್ಯಾಗ್ನರ್ ಗ್ರೂಪ್ ಸಹಾ ತನ್ನ ಟೆಲಿಗ್ರಾಂ ಚಾನೆಲ್ನಲ್ಲಿ ಸಾರಿತು.
ವಿಮಾನಗಳು ಅಫಘಾತಕ್ಕೀಡಾಗುವುದು ಅಸಹಜವೇನಲ್ಲ. ಆದರೆ, ಬ್ರೆಝಿಲಿಯನ್ ತಯಾರಿಕೆಯಾದ ಎಂಬ್ರೆಸರ್ ಲೆಗಸಿ 600 ವಿಮಾನಗಳು ಇದುವರೆಗೆ ಅಫಘಾತಕ್ಕೀಡಾದುದು ಇಲ್ಲ. ಹಾಗೆಂದ ಮಾತ್ರಕ್ಕೆ ಈಗ ಆಗಬಾರದು ಎಂದೇನೂ ಇಲ್ಲ. ಈ ವಿಮಾನ ನೆಲಕ್ಕೆ ಅಪ್ಪಳಿಸುವುದಕ್ಕೆ ಹನ್ನೊಂದು ನಿಮಿಷ ಮೊದಲು ಏರ್ ಟ್ರಾ್ಯಫಿಕ್ ಕಂಟ್ರೋಲ್ ಜತೆ ಸಂಪರ್ಕ ಕಡಿದುಕೊಂಡದ್ದು, 28,000 ಅಡಿಗಳ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ನಿಮಿಷಕ್ಕೂ ಕಡಿಮೆ ಆವಧಿಯಲ್ಲಿ ಕೇವಲ 8,000 ಅಡಿಗಳಿಗೆ ಕುಸಿದದ್ದು, ಒಂದು ರೆಕ್ಕೆ ಕೆಳಗಾಗಿ ನೆಲದತ್ತ ಕುಸಿಯತೊಡಗಿದ್ದು ಅದರಲ್ಲೇನೋ ಸಮಸ್ಯೆ ಏಕಾಏಕಿ ಉಂಟಾಗಿದೆ ಎನ್ನುವುದರ ಸೂಚನೆ. ಆ ಸಮಸ್ಯೆಯೇನು ಎನ್ನುವುದು ಸದ್ಯಕ್ಕಿನ್ನೂ ಉತ್ತರ ಸಿಗದ ಪ್ರಶ್ನೆ.
ಆದರೆ, ವಿಮಾನವನ್ನು ರಶಿಯನ್ ಸೇನೆ ಎಸ್ 300 ವಿಮಾನನಾಶಕ ಕ್ಷಿಪಣಿಯನ್ನು ಪ್ರಯೋಗಿಸಿ ಹೊಡೆದುರುಳಿಸಿದೆ ಎಂಬ ಪಶ್ಚಿಮದ ವಾದಕ್ಕೆ ಲಭ್ಯ ವಿವರಗಳು ಪುಷ್ಟಿ ನೀಡುವುದಿಲ್ಲ. ಸ್ಥಳೀಯರು ತೆಗೆದ ವಿಡಿಯೋದಲ್ಲಿ ಹಾಗೇನೂ ಕಾಣುವುದಿಲ್ಲ. ಆದಾಗ್ಯೂ, ನೆಲ ಮುಟ್ಟುವ ಮೊದಲೇ ವಿಮಾನದಲ್ಲಿ ಎರಡು ಸ್ಪೋಟಗಳಾದಂತೆ ಶಬ್ಚ ಕೇಳಿಬಂತು ಎಂದು ಸ್ಥಳೀಯರು ಹೇಳಿದ್ದು ಮತ್ತು ವಿಮಾನ ಮೂರು ಭಾಗಗಳಾಗಿ ಸಿಡಿದು ನೆಲಕ್ಕೆ ಬಿದ್ದದ್ದು ಅದರೊಳಗೆ ಬಾಂಬ್ ಇರಿಸಲಾಗಿತ್ತೇ ಎಂಬ ಬಲವಾದ ಸಂದೇಶಕ್ಕೆ ಎಡೆಮಾಡುತ್ತದೆ. ವೈನ್ ಕ್ರೇಟ್ನಲ್ಲಿ ಬಾಂಬ್ ಅಡಗಿಸಿಟ್ಟು ವಿಮಾನದಲ್ಲಿರಿಸಲಾಗಿತ್ತು ಎನ್ನುವುದು ಸದ್ಯದ ಒಂದು ಊಹೆ. ಇಂತಹ ಸಂಚು ನಮ್ಮ ನೆರೆಯಲ್ಲೇ ಈಗಾಗಲೇ ಘಟಿಸಿಯಾಗಿದೆ. ಆಗಸ್ಟ್ 17, 1988ರಂದು ಅಂದಿನ ಪಾಕ್ ಸೇನಾ ಸರ್ವಾಧಿಕಾರಿ ಜ. ಜಿಯಾ-ಉಲ್-ಹಕ್ ಅವರನ್ನು ಹೊತ್ತು ಬಹವಾಲ್ಪುರ ವಾಯುನೆಲೆಯಿಂದ ಇಸ್ಲಾಮಾಬಾದ್ಗೆ ಹೊರಡಲಿದ್ದ ವಿಮಾನದಲ್ಲಿ ಕೊನೇ ಗಳಿಗೆಯಲ್ಲಿ ಮಾವಿನಹಣ್ಣುಗಳು ಎಂದು ಹೇಳಿ ಬಾಂಬ್ ಇದ್ದ ಕ್ರೇಟ್ ಅನ್ನು ತಂದಿಡಲಾಯಿತು. ಆಮೇಲೇನಾಯಿತು? ಆಗುವುದೇ ಆಯಿತು, ಜಿಯಾ ಸಾಹೇಬರು ಇತಿಹಾಸವಾದರು. ಇಂಥದು ರಶಿಯಾದಲ್ಲಿ ಆಗಬಾರದು ಎಂದೇನೂ ಇಲ್ಲ. ಪ್ರಶ್ನೆಯೆಂದರೆ ಈ ಬಗೆಯಲ್ಲಿ ಪ್ರಿಗೋಝಿನ್ರನ್ನು ಹತ್ಯೆಗೈದವರು ಯಾರು, ಯಾಕಾಗಿ ಎನ್ನುವುದು.
ಪ್ರಸಕ್ತ ಪ್ರಕರಣದ ಹಿಂದೆ ಅಧ್ಯಕ್ಷ ಪೂತಿನ್ ಇದ್ದಾರೆ ಎಂಬ ತಮ್ಮ ಆಪಾದನೆಗೆ ಒಂದಕ್ಕಿಂತ ಹೆಚ್ಚು ಕಾರಣಗಳನ್ನು ಅವರ ಒಳಹೊರಗಿನ ವಿರೋಧಿಗಳು ನೀಡುತ್ತಾರೆ. ತಮ್ಮ ವಿರೋಧಿಯಾಗಿ ನಿಂತ ಯಾವುದೇ ರಶಿಯನ್ ನಾಗರಿಕನನ್ನು ಜೀವದಿಂದ ಇರದಂತೆ ನೋಡಿಕೊಳ್ಳುವುದು ಪೂತಿನರ ಇದುವರೆಗಿನ ಜಾಯಮಾನ. ಇದಕ್ಕಿರುವ ಉದಾಹರಣೆಗಳನ್ನೆಲ್ಲಾ ಹೇಳಹೊರಟರೆ ಅದೇ ಒಂದು ದೀರ್ಘ ಲೇಖನವಾಗುತ್ತದೆ. ಸದ್ಯಕ್ಕೆ ಪೂತಿನರ ವಿರೋಧಿಗಳು ರಶಿಯಾದೊಳಗೆ, ಬ್ರಿಟನ್ನಲ್ಲಿ, ಅಮೆರಿಕಾದ ರಾಜಧಾನಿ ವಾಷಿಂಗ್ಟನ್ನಲ್ಲಿ ಬಗೆಬಗೆಯ ವಿಷಪ್ರಾಶನಕ್ಕೊಳಗಾಗಿದ್ದಾರೆ, ಒಬ್ಬರಂತೂ ಕ್ರೆಮ್ಲಿನ್ನಲ್ಲೇ ನಾಲ್ಕು ಗುಂಡೇಟುಗಳಿಂದ ಹತರಾಗಿದ್ದಾರೆ ಎಂದಷ್ಟೇ ಹೇಳಿ ಮುಂದಕ್ಕೆ ಹೋಗುವುದು ಉತ್ತಮ.
ಎರಡು ತಿಂಗಳ ಹಿಂದೆ ಪ್ರಿಗೋಝಿನ್ ಬಂಡೆದ್ದು ಪೂತಿನರನ್ನೇ ಕೆಳಗುರುಳಿಸಹೊರಟಿದ್ದ ಪ್ರಕರಣವನ್ನು ಉಲ್ಲೇಖಿಸಿ, ವ್ಯಾಗ್ನರ್ ನಾಯಕ ಅಂದೇ ತಮ್ಮ ಮರಣಶಾಸನಕ್ಕೆ ತಾವೇ ಸಹಿಹಾಕಿಕೊಂಡರು. ಇಂದಲ್ಲ ನಾಳೆ ಪ್ರಿಗೋಝಿನ್ ಸಾಯಲೇಬೇಕಾಗಿತ್ತು ಎಂದು ಪೂತಿನರ ವಿರೋಧಿಗಳು ಹೇಳುತ್ತಾರೆ. ಆದರೆ, ಆ ಇಡೀ ಪ್ರಕರಣ ಪೂತಿನ್, ಪ್ರಿಗೊಝಿನ್ ಮತ್ತು ಬೆಲರೂಸ್ ಅಧ್ಯಕ್ಷ ಅಲೆಕ್ಸಾಂದರ್ ಲ್ಯೂಕಶೇಂಕೋ ಸೇರಿ ಆಡಿದ ಆಟ, ಅದರ ಉದ್ದೇಶ ಜಗತ್ತಿನ ಕಣ್ಣಿಗೆ ಮಣ್ಣೆರಚಿ ವ್ಯಾಗ್ನರ್ ಸೇನೆಯನ್ನು ಪೋಲ್ಯಾಂಡ್ ಮತ್ತು ಲಿಥುವೇನಿಯಾದ ಗಡಿಗೆ ಒಯ್ಯುವುದಾಗಿತ್ತು. ಹೀಗಾಗಿ, ಪ್ರಿಗೋಝಿನ್ ಏಕಾಏಕಿ ಪೂತಿನರ ವಿರೋಧಿಯಾಗಿ ಬದಲಾದರು, ಇನ್ನು ಅವರಿಗೆ ಉಳಿಗಾಲವಿಲ್ಲದಂತಾಯಿತು ಎನ್ನುವುದು ತರ್ಕಕ್ಕೆ ನಿಲುಕದ ವಿಷಯ. ಬಂಡೆದ್ದ ಪ್ರಿಗೋಝಿನರಿಗೆ ದಕ್ಷಿಣ ರಶಿಯಾದ ಜನತೆ ಬೆಂಬಲ ನೀಡಿ ಬೆನ್ನು ತಟ್ಟಿ ಕೈ ಕುಲುಕಿದ್ದು ಸಹಾ ಕಣ್ಕಟ್ಟೇ. ಮೂರೇ ದಿನಗಳ ನಂತರ ಅಂದರೆ ಜೂನ್ 27ರಂದು ಅದೇ ಸ್ಥಳಗಳಲ್ಲಿ ಅದೇ ಜನ ಪೂತಿನರಿಗೂ ಪ್ರೀತಿ ಬೆಂಬಲ ತೋರಿ ಕೂಗುಹಾಕಿದರು! ಇದಕ್ಕೆ ಪೂರ್ವಭಾವಿಯಾಗಿ ಮೇ ತಿಂಗಳಿನಿಂದೀಚೆಗೆ ಪ್ರಿಗೋಝಿನ್ ಕಟು ಮಾತುಗಳನ್ನಾಡಿದ್ದು ರಕ್ಷಣಾ ಸಚಿವ ಸೆರ್ಗೆಯಿ ಶೋಯ್ಗು ಮತ್ತು ಸೇನಾ ಮುಖ್ಯಸ್ಥ ಜನರಲ್ ವೆಲರಿ ಗೆರಾಸಿಮೋವ್ ವಿರುದ್ಧವಷ್ಟೇ. ಅದೂ ನಾಟಕದ ಒಂದು ಭಾಗವಾಗಿರಬೇಕು. ಪೂತಿನರ ವಿರುದ್ಧ ಪ್ರಿಗೋಝಿನ್ ಒಂದು ಕೆಟ್ಟ ಮಾತನ್ನೂ ಆಡಲಿಲ್ಲ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು. ಶೋಯ್ಗು ಅವರ ವಿರುದ್ಧ ಪ್ರಿಗೋಝಿನ್ ವಿಷ ಕಾರಿದ್ದನ್ನೇ ನಿಜವೆಂದು ನಂಬಿ ಪಶ್ಚಿಮದ ಮಾಧ್ಯಮಗಳು ದೊಡ್ಡದಾಗಿ ಪ್ರಚಾರ ಮಾಡಿದ್ದು, ರಶಿಯನ್ ಸೇನೆಯ ದಕ್ಷಿಣ ಮುಖ್ಯಾಲಯವಿರುವ ರೋಸ್ತೋವ್ ನಗರಕ್ಕೆ ವ್ಯಾಗ್ನರ್ ಸೇನೆ ನುಗ್ಗಿದ್ದು ಶೋಯ್ಗು ಅವರನ್ನು ಹಿಡಿಯಲು ಎಂದು ಪಶ್ಚಿಮದ ಮಾಧ್ಯಮಗಳು ಹೇಳಿದ್ದು ತಮ್ಮ ಸುದ್ದಿಬಾಕತನದ ಶಮನಕ್ಕಾಗಿ ಅವು ತಾಸುತಾಸಿಗೂ ಹೇಗೆ ಕಥೆಗಳನ್ನು ಕಟ್ಟುತ್ತವೆ ಎನ್ನುವುದಕ್ಕೆ ಉದಾಹರಣೆ. ದೇಶದ ರಕ್ಷಣಾ ಸಚಿವ ರೋಸ್ತೋವ್ನಲ್ಲಿದ್ದಿದ್ದರೆ ಹತ್ತು ಲಕ್ಷ ಸೈನಿಕರ ರಶಿಯನ್ ಸೇನೆ ಆ ನಗರವನ್ನು ಒಂದೂ ಗುಂಡು ಹಾರಿಸದೇ ಎರಡೂವರೆ ಸಾವಿರ ವ್ಯಾಗ್ನರ್ ಕೂಲಿ ಸೈನಿಕರಿಗೆ ಬಿಟ್ಟುಕೊಡುತ್ತಿತ್ತೇ ಎನ್ನುವ ವಿಚಾರದತ್ತ ಅವುಗಳ ಗಮನಕ್ಕೆ ಹೋಗಲಿಲ್ಲ. ಅಥವಾ ಗಮನಿಸಿದರೂ ನಮಗೆ ಹೇಳಲಿಲ್ಲ. ವ್ಯಾಗ್ನರ್ ಸೇನೆ ಬೆಲರುಸ್ಗೆ ಹೋದರೆ ಪ್ರಿಗೋಝಿನ್ ಆರಾಮವಾಗಿ ರಾಜಧಾನಿ ಮಾಸ್ಕೋ ಮತ್ತು ಹುಟ್ಟೂರು ಸೈಂಟ್ ಪೀಟರ್ಸ್ಬರ್ಗ್ಗಳ ನಡುವೆ ಓಡಾಡಿಕೊಂಡಿದ್ದರು. ನಮಗೆ ತಿಳಿದಂತೇ ಜೂನ್ 10ರಂದು ಪೂತಿನರನ್ನು ಅವರ ಕಚೇರಿಯಲ್ಲೇ ಭೇಟಿಯಾದರು. ನಮಗೆ ತಿಳಿಯದೇ ಇನ್ನೆಷ್ಟು ಸಲ ಭೇಟಿಯಾದರೋ.
ಯಾವುದೇ ಕೊಲೆ ನಡೆದರೆ ಅದರಿಂದ ಪ್ರಯೋಜನ ಲಭಿಸುವುದು ಯಾರಿಗೆ ಎಂದು ಪತ್ತೆ ಹಚ್ಚಿದರೆ ಕೊಲೆಗಾರ ಪತ್ತೆಯಾಗಬಹುದು ಎಂಬ ಮಾತಿದೆ. ಪ್ರಿಗೋಝಿನ್ ಹತ್ಯೆಯಿಂದ ಸದ್ಯಕ್ಕೆ ಪ್ರಯೋಜನವಾಗುವುದು ಪೋಲ್ಯಾಂಡ್ ಮತ್ತು ಲಿಥುವೇನಿಯಾಗಳಿಗೆ. ವ್ಯಾಗ್ನರ್ ಸೈನಿಕರು ಬೆಲರೂಸ್ ಸೈನಿಕರಿಗೆ ತರಬೇತಿ ನೀಡಿದ್ದು, ಅವರು ವಾರ್ಸಾಗೆ ವಿಹಾರ ಹೋರಲಿದ್ದಾರೆಂದು ಬೆಲರೂಸ್ ಅಧ್ಯಕ್ಷ ಲ್ಯೂಕಶೆಂಕೋ ಕೀಟಲೆಯ ಮಾತಾಡಿದ್ದು, ಆಗಸ್ಟ್ 1ರಂದು ಎರಡು ಬೆಲರೂಸಿಯನ್ ಅಟ್ಯಾಕ್ ಹೆಲಿಕಾಪ್ಟರ್ಗಳು ಪೋಲಿಷ್ ವಾಯುಪ್ರದೇಶವನ್ನು ಉಲ್ಲಂಘಿಸಿದ್ದು :ಫೋಲ್ಯಾಂಡ್ಗೆ ಕಾದಿರಬಹುದಾದ ಅಪಾಯದ ಸೂಚನೆ ನೀಡಿದ್ದವು. ಗಾಬರಿಗೊಂಡ ಪೋಲ್ಯಾಂಡ್ ಹತ್ತು ಸಾವಿರ ಸೈನಿಕರನ್ನು ಗಡಿಯಲ್ಲಿ ಜಮಾಯಿಸಿತು.
ಪೋಲ್ಯಾಂಡ್ ಜತೆಗೆ ಲಿಥುವೇನಿಯಾ ಸಹಾ ಸಂದೇಹಿಸಿದ ಅಪಾಯ ಸುವಾಲ್ಕಿ ಕಾರಿಡಾರ್ ಮೇಲಿರಬಹುದಾದ ರಶಿಯನ್ ಕಣ್ಣು. ರಶಿಯಾದಿಂದ ಭೌಗೋಳಿಕವಾಗಿ ಪ್ರತ್ಯೇಕವಾಗಿರುವ, ಹಿಂದಿನ ಜರ್ಮನಿಯ ಈಸ್ಟ್ ಪ್ರಶಿಯಾದ ಭಾಗವಾಗಿ ಕಾನಿಗ್ಸ್ಬರ್ಗ್ ಎಂದು ಕರೆಸಿಕೊಳ್ಳುತ್ತಿದ್ದ ಮತ್ತು 1945ರ ತರುವಾಯ ರಶಿಯನ್ ಆಡಳಿತಕ್ಕೆ ಬಂದು ಕಲೀನಿನ್ಗ್ರಾದ್ ಎಂದು ಕರೆಸಿಕೊಳ್ಳುವ ಬಾಲ್ಟಿಕ್ ತೀರದ ಪುಟ್ಟ ಪ್ರದೇಶಕ್ಕೆ ರಶಿಯಾದಿಂದ ಇರುವ ಏಕೈಕ ಭೂಸಂಪರ್ಕ ಬೆಲರೂಸ್ ಮೂಲಕ ಹಾದು ನಂತರ ಅಂದಾಜು ನೂರು ಕಿಲೋಮೀಟರ್ವರೆಗೆ ಪೋಲ್ಯಾಂಡ್ ಮತ್ತು ಲಿಥುವೇನಿಯಾದ ಗಡಿಗಳ ನಸುವಿನ ಸುವಾಲ್ಕಿ ಕಾರಿಡಾರ್ ಮೂಲಕ ಸಾಗುತ್ತದೆ. ಬೆಲರೂಸ್ ಈಗ ರಶಿಯಾದ ಘನಿಷ್ಟ ಮಿತ್ರನಾಗಿರುವ ಕಾರಣ ಮಾಸ್ಕೋಗೆ ಅದರಿಂದೇನೂ ಸಮಸ್ಯೆಯಾಗದು. ಆದರೆ, ಪೋಲ್ಯಾಂಡ್ ಹಾಗೂ ಲಿಥುವೇನಿಯಾಗಳೇನಾದರೂ ತಂಟೆ ತೆಗೆದು ಸುವಾಲ್ಕಿ ಕಾರಿಡಾರ್ ಅನ್ನು ಮುಚ್ಚಿಬಿಟ್ಟರೆ ಕಲೀನಿನ್ಗ್ರಾದ್ ಜತೆ ರಶಿಯಾದ ಭೂಸಂಪರ್ಕ ಕತ್ತರಿಸಿಹೋಗುತ್ತದೆ. ಅವೆರಡೂ ದೇಶಗಳು ಅಮೆರಿಕಾ ನೇತೃತ್ವದ ನ್ಯಾಟೋ ಸೇನಾಕೂಟದ ಸದಸ್ಯರಾಗಿರುವುದರಿಂದ ಅವುಗಳ ವಿರುದ್ಧ ಸೇನಾಕ್ರಮ ಕೈಗೊಳ್ಳುವುದು ರಶಿಯಾಗೆ ಸಾಧ್ಯವಾಗದು. ಆದರೆ, ಆ ಕೆಲಸವನ್ನು ವ್ಯಾಗ್ನರ್ ಕೂಲಿಸೇನೆಯ ಮೂಲಕ ಮಾಡಿಸಿಕೊಂಡು ಫಲವನ್ನು ತಾನು ಅನುಭವಿಸುವುದು ರಶಿಯಾಗೆ ಕಡಿಮೆ ಅಪಾಯದ ಮಾರ್ಗ. ವ್ಯಾಗ್ನರ್ ಸೇನೆ ಬೆಲರೂಸ್ ಗಡಿಗೆ ತಲುಪಿದ್ದು ಅದರ ಗುರಿ ಪೋಲ್ಯಾಂಡ್ ಅನ್ನು ಬೆದರಿಸಿ ಅದು ಯೂಕ್ರೇನ್ಗೆ ಸಹಾಯ ನೀಡುವುದನ್ನು ತಡೆಯುವುದಷ್ಟೇ ಅಲ್ಲ, ಸುವಾಲ್ಕಿ ಕಾರಿಡಾರ್ಗೂ ನುಗ್ಗಿ ಅದನ್ನು ಬೆಲರೂಸ್ನ ಅಥವಾ ಕಲೀನಿನ್ಗ್ರಾದ್ನ ಭಾಗವಾಗಿಸಿ ರಶಿಯಾಗೆ ಅನುಕೂಲಕರ ಸಂಪರ್ಕ ಮಾರ್ಗ ಸೃಷ್ಟಿಸುವುದೂ ಆಗಿತ್ತು. ಇಂದು ಪ್ರಿಗೋಝಿನ್ ಇಲ್ಲವಾಗಿ, ವ್ಯಾಗ್ನರ್ ಕೂಲಿಸೇನೆ ನೇತಾರನಿಲ್ಲದೆ ಹೋಗಿರುವುದು ನೆಮ್ಮದಿ ತಂದಿರುವುದು ಪೋಲ್ಯಾಂಡ್ ಮತ್ತು ಲಿಥುವೇನಿಯಾಗಳಿಗೆ.
ಇದರರ್ಥ ಪ್ರಿಗೋಝಿನ್ ಹತ್ಯೆಯಲ್ಲಿ ಅವೆರಡರ ಪಾತ್ರವಿದೆಯೇ ಎಂದು ಈಗಲೇ ಹೇಳಲಾಗುವುದಿಲ್ಲ. ಆ ಬಗ್ಗೆ ರಶಿಯಾದಿಂದಲು ಯಾವ ಸೂಚನೆಯೂ ಬಂದಿಲ್ಲ. ಆದರೆ, ಪೂತಿನರಿಗೆ ರಶಿಯಾದಲ್ಲಿ ಮತ್ತು ಲ್ಯೂಕಶೆಂಕೋರಿಗೆ ಬೆಲರೂಸ್ನಲ್ಲಿ ಇರುವ ವಿರೋಧಿಗಳ ನೆರವಿನಿಂದ ಪ್ರಿಗೋಝಿನ್ರನ್ನು ಹತ್ಯೆಗೈದು, ತಮಗೆದುರಾಗಿರುವ ಸಂಕಟವನ್ನು ಸದ್ಯದ ಮಟ್ಟಿಗಾದರೂ ದೂರ ಮಾಡಿಕೊಳ್ಳುವುದು ಪೋಲ್ಯಾಂಡ್ ಮತ್ತು ಲಿಥುವೇನಿಯಾಗಳಿಗೆ ಕಷ್ಟವೇನಲ್ಲ.
ಇಷ್ಟಾಗಿಯೂ, ಶಂಕೆಯ ಮುಳ್ಳು ರಶಿಯಾದತ್ತಲೇ ಹೊರಳುವ ಒಂದು ಆಯಾಮವೂ ಇದೆ. ಆಗಸ್ಟ್ 22ರಂದು ಲಿಬಿಯಾಗೆ ಭೇಟಿ ನೀಡಿದ ರಶಿಯನ್ ಸೇನೆಯ ಉನ್ನತಾಧಿಕಾರಿಯೊಬ್ಬರು ಸದ್ಯದಲ್ಲೇ ವ್ಯಾಗ್ನರ್ ಸೈನಿಕರು ಹೊಸ ನಾಯಕತ್ವವನ್ನು ಪಡೆಯಲಿದ್ದಾರೆ ಎಂಬರ್ಥದ ಮಾತುಗಳನ್ನಾಡಿದರು. ಮರುದಿನವೇ ಪ್ರಿಗೋಝಿನ್ ಅಂತ್ಯವಾಯಿತು! ಹಾಗಿದ್ದರೆ ವ್ಯಾಗ್ನರ್ನ ಹೊಸ ನಾಯಕ ಯಾರಾಗುತ್ತಾರೆ? ಈ ಬಗ್ಗೆ ತುಸು ಕೆದಕಿದರೆ ಸಿಗುವ ಹೆಸರು ಜನರಲ್ ಸೆರ್ಗೆಯ್ ಸರೋವಿಕಿನ್. ರಶಿಯನ್ ಸೇನೆಯಲ್ಲಿ ಮಿಲಿಟರಿ ಕಮ್ಯಾಂಡರ್ ಆಗಿರುವ ಈವರು ಪ್ರಿಗೋಝಿನ್ಗೆ ಘನಿಷ್ಟ ಮಿತ್ರರಾಗಿದ್ದವರು, ಆ ಮೂಲಕ ವ್ಯಾಗ್ನರ್ ಸೈನಿಕರಿಗೂ ಗೌರವಾರ್ಹವಾಗಿದ್ದಾರೆ. ಜೂನ್ 24ರ ಪ್ರಕರಣದ ನಂತರ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಪ್ರಿಗೋಝಿನ್ ಮರಣ ಹೊಂದುವ ಕೆಲವೇ ತಾಸುಗಳ ಹಿಂದೆ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ ಮತ್ತು ರಶಿಯನ್ ಸೇನೆಯಿಂದ ಅವರನ್ನು ನಿವೃತ್ತಗೊಳಿಸಲಾಗಿದೆ. ಅಂದರೆ ವ್ಯಾಗ್ನರ್ ಸೈನಿಕರಿಗೆ ಈಗಾಗಲೇ ಪ್ರಿಯರಾಗಿರುವ ಅವರನ್ನು ಹೊಸ ಜವಾಬ್ದಾರಿ ಕಾಯುತ್ತಿದೆಯೇ? ಅಂದರೆ, ಪ್ರಿಗೋಝಿನ್ ಸತ್ತರು ಎಂಬ ಪೋಲ್ಯಾಂಡ್ ಮತ್ತು ಲಿಥುವೇನಿಯಾಗಳ ನೆಮ್ಮದಿ ಕ್ಷಣಿಕವೇ?
ಇಷ್ಟೆಲ್ಲಾ ಪ್ರಶ್ನೆಗಳ ಜತೆಗೆ ಕೊನೆಯಲ್ಲಿ ಎರಡು ಪ್ರಶ್ನೆಗಳು. ಒಂದು: ಜೂನ್ 24ರ ಪ್ರಕರಣದ ಬಳಿಕ ಸರೋವಿಕಿನ್ ಅವರನ್ನು ಗೃಹ ಬಂಧನದಲ್ಲಿಟ್ಟದ್ದು ಜಗತ್ತನ್ನು ಏಮಾರಿಸಲು ಪೂತಿನ್ - ಪ್ರಿಗೋಝಿನ್ - ಲ್ಯೂಕಶೆಂಕೋ ಆಡಿದ ನಾಟಕದ ಒಂದು ದೂರಗಾಮಿ ಯೋಜನೆಯ ಭಾಗವೇ? ಎರಡು: ಅದೇ ದೂರಗಾಮಿ ಯೋಜನೆಯ ಮುಂದುವರಿಕೆಯಾಗಿ ಈಗ ಪ್ರಿಗೋಝೀನ್ ಮೃತರಾಗಿದ್ದಾರೆ ಎಂಬ ಕಥೆ ಕಟ್ಟಲಾಗಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕಂತೂ ಉತ್ತರಗಳು ಸಿಗಲಾರವು. ಈ ಸ್ಥಿತಿಯಲ್ಲಿ ನಾವು ನಮಗೇ ಹೇಳಿಕೊಳ್ಳಬಹುದಾದ ಸಮಾಧಾನವೆಂದರೆ ಮುಕ್ಕಾಲು ಶತಮಾನದ ಹಿಂದೆ ಬ್ರಿಟಿಷ್ ಪ್ರಧಾನಮಂತ್ರಿ ವಿನ್ಸ್ಟನ್ ರ್ಚಚಿಲ್ ಅಂದಿನ ಕಮ್ಯೂನಿಷ್ಟ್ ಸೋವಿಯೆತ್ ಯೂನಿಯನ್ ಬಗ್ಗೆ ಮಾಡಿದ ಅ A riddle wrapped in a mystery inside an enigma(ರಹಸ್ಯದಲ್ಲಿ ಸುತ್ತಿ ಗೂಢದೊಳಗಿರಿಸಿರುವ ಒಂದು ಒಗಟು ) ಎಂಬ ವರ್ಣನೆ ಇಂದಿನ ರಶಿಯಾಗೂ ಸೂಕ್ತವಾಗಿ ಹೊಂದಿಕೊಳ್ಳುತ್ತಿದೆ!
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)