ತೊಂಬತ್ತರಲ್ಲೂ ಬತ್ತದ ನಗು; ಅ.ರಾ. ಮಿತ್ರರಿಗೆ ತೊಂಬತ್ತರ ಸಂಭ್ರಮ

ವಿಜಯವಾಣಿ (2)
Published on

| ಎಚ್.ಡುಂಡಿರಾಜ್, (ಲೇಖಕರು ಖ್ಯಾತ ಕವಿಗಳು)

ಅ.ರಾ. ಎಂಬ ಅಚ್ಚ ಕನ್ನಡದ ಆರಂಭಾಕ್ಷರಗಳನ್ನು ಹೊಂದಿದ, ಪಂಡಿತ ಮತ್ತು ಕ್ಠ್ಞತ ಎರಡೂ ಆಗಿರುವ ಕನ್ನಡದ ಹಿರಿಯ ಮತ್ತು ಶ್ರೇಷ್ಠ ಸಾಹಿತಿ ಮಿತ್ರರ ಹೆಸರನ್ನು ನಾನು ನನ್ನ ಕಾಲೇಜು ದಿನಗಳಲ್ಲೇ ಕೇಳಿದ್ದೆ. ಪತ್ರಿಕೆಗಳಲ್ಲಿ ಅವರ ಲೇಖನಗಳನ್ನು ಓದಿ ಮೆಚ್ಚಿಕೊಂಡಿದ್ದೆ. ಆದರೆ ಅವರನ್ನು ಭೇಟಿಯಾಗುವ ಅವಕಾಶ ದೊರಕಿರಲಿಲ್ಲ. ತೊಂಬತ್ತರ ದಶಕದಲ್ಲಿ ನಾನು ಉದ್ಯೋಗಕ್ಕಾಗಿ ಉಡುಪಿಯಲ್ಲಿ ನೆಲೆಸಿದ್ದಾಗ ಅಲ್ಲಿನ ಎಂ.ಜಿ.ಎಂ. ಕಾಲೇಜಿನಲ್ಲಿ ಶತಾವಧಾನಿ ಆರ್.ಗಣೇಶ್ ಅವರ ಅಷ್ಟಾವಧಾನ ಕಾರ್ಯಕ್ರಮ ಆಯೋಜಿಸಿದ್ದರು. ಅದರಲ್ಲಿ ಅಪ್ರಸ್ತುತ ಪ್ರಸಂಗಿಯಾಗಿ ಭಾಗವಹಿಸಲು ನನಗೆ ಆಹ್ವಾನ ಬಂತು. ಅಷ್ಟಾವಧಾನ ಎಂದರೆ ಏನೆಂಬುದು ನನಗೆ ಗೊತ್ತಿರಲಿಲ್ಲವಾದ್ದರಿಂದ ಒಪ್ಪಿಕೊಳ್ಳಲು ಹಿಂದೇಟು ಹಾಕಿದೆ. ಆಗ ಸಂಘಟಕರು, ‘ಅಷ್ಟಾವಧಾನ ಕಾರ್ಯಕ್ರಮ ಅ.ರಾ.ಮಿತ್ರರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ನಿಮ್ಮನ್ನು ಆಹ್ವಾನಿಸುವಂತೆ ಅವರೇ ಸೂಚಿಸಿದ್ದಾರೆ. ಅವರೂ ಅಂದು ಉಡುಪಿಗೆ ಬರುತ್ತಾರೆ. ನೀವು ಸ್ವಲ್ಪ ಮುಂಚಿತವಾಗಿ ಬಂದರೆ ಅಷ್ಟಾವಧಾನದಲ್ಲಿ ನಿಮ್ಮ ಪಾತ್ರದ ಬಗ್ಗೆ ಅವರ ಹತ್ತಿರ ಮಾತನಾಡಬಹುದು’ ಎಂದರು. ಆಗ ಇನ್ನೂ ಉದಯೋನ್ಮುಖ ಕವಿಯಾಗಿದ್ದ ನನ್ನನ್ನು ಬೆಂಗಳೂರಿನಲ್ಲಿರುವ ಮಿತ್ರರಂತಹ ಖ್ಯಾತ ಸಾಹಿತಿಗಳು ಗುರುತಿಸಿದ್ದಾರೆಂದು ತಿಳಿದು ನನಗೆ ಆಶ್ಚರ್ಯವಾಯಿತು. ಅವರನ್ನು ಭೇಟಿ ಯಾಗುವ ಅವಕಾಶ ತಾನಾಗಿ ಒದಗಿ ಬಂದದ್ದಕ್ಕೆ ಸಂತೋಷವೂ ಆಯಿತು.

ಮೊದಲ ಭೇಟಿಯಲ್ಲೇ ಅ.ರಾ.ಮಿತ್ರರು ತುಂಬ ಆಪ್ತರಾದರು. ಅವರ ಮೊಗದಲ್ಲಿನ ತುಂಟ ನಗು, ಕಣ್ಣುಗಳಲ್ಲಿನ ಕಾಂತಿ ಆಕರ್ಷಕವೆನ್ನಿಸಿತು. ಅಷ್ಟಾವಧಾನದಲ್ಲಿ ಓರ್ವ ಪ್ರಚ್ಛಕನಾಗಿ ನನ್ನ ಕೆಲಸವೇನೆಂಬುದನ್ನು ಮಿತ್ರರು ವಿವರಿಸಿದರು. ಆ ಪಾತ್ರವನ್ನು ನಾನು ಯಶಸ್ವಿಯಾಗಿ ನಿರ್ವಹಿಸಿದೆ. ಮಿತ್ರರ ಮತ್ತು ಅವಧಾನಿಗಳ ಮೆಚ್ಚುಗೆ ಗಳಿಸಿದೆ. ಈ ರೀತಿ ಹೊಸಬರನ್ನು ಗುರುತಿಸಿ ಪೋ›ತ್ಸಾಹಿಸುವ ಕೆಲಸವನ್ನು ಮಿತ್ರರು ತಮ್ಮ ಬದುಕಿನುದ್ದಕ್ಕೂ ಮಾಡುತ್ತಲೇ ಬಂದಿದ್ದಾರೆ. ನಂತರ ನಾನು ಮಿತ್ರರನ್ನು ನೋಡಿದ್ದು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪ್ರತಿ ವರ್ಷ ಡಿಸೆಂಬರ್ 25ರಂದು ನಡೆಯುತ್ತಿದ್ದ ಹಾಸ್ಯೋತ್ಸವದಲ್ಲಿ. ಅದರ ಉಸ್ತುವಾರಿಕೆಯನ್ನು ಮಿತ್ರರು ಮಾಡುತ್ತಿದ್ದ ರೀತಿ ಅನನ್ಯ. ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ಕೂಗಿದರೂ ದನಿ ಕೇಳಲಿಲ್ಲವೆ ನರ-ಹರಿಯೆ!’ ಎಂದು ನರಹರಿ ಎಂಬ ಪದವನ್ನೆ ಅವರು ಹರಿದು ಮಾಡಿದ ಪನ್ ಕೇಳಿ ರೋಮಾಂಚಿತನಾಗಿದ್ದೆ. ಅ.ರಾ.ಮಿತ್ರರು ನಾನು ಕಂಡ ಒಬ್ಬ ಅತ್ಯದ್ಭುತ ಪ್ರತ್ಯುತ್ಪನ್ನಮತಿ.

ಜಿ.ಎಸ್.ಎಸ್. ಅವರ,

ಇಂದ್ರ ಭವನದಲಿ ಚಂದ್ರ ಮೂಡಿತೊದೋಸೆ ಹಂಚಿನಲ್ಲಿಮೂಡಿತೆಂಬೆಯೊ, ಮತ್ತೆ ಮುಳುಗಿತೋಉದರ ಗಗನದಲ್ಲಿಎಂಬ ಮುಕ್ತಕಕ್ಕೆ ಮಿತ್ರರುಮುಳುಗಿತೆಂಬೆಯೊ, ಮತ್ತೆ ಎದ್ದಿತುಉದರ ಶೂಲೆಯಲ್ಲಿ!

ಎಂಬ ಅವರದೆ ಆದ ಷರಾ ಸೇರಿಸಿ ವಾಚಿಸುತ್ತಿದ್ದ ರೀತಿ ನೆನೆದರೆ ಈಗಲೂ ನಗು ಉಕ್ಕುತ್ತದೆ. ಮಿತ್ರರು ‘ನಾರಿ ಮುನಿದರೆ ಮಾರಿ’ ಎಂದು ಹೇಳಿ ನಂತರ ತುಸು ಮೆಲುದನಿಯಲ್ಲಿ ‘ಮಾರೋದಕ್ಕೆ ನಾನು ತಯಾರು. ಕೊಳ್ಳೋರು ಯಾರ್ರೀ?’ ಎಂದಾಗ ಎಚ್.ಎನ್.ಸಭಾಭವನದಲ್ಲಿ ನಗೆ ಸ್ಪೋಟಿಸಿದ ಬಗೆ ಈಗ ಊಹಿಸಲೂ ಅಸಾಧ್ಯ.

ನಾನು ಬೆಳಗಾವಿಯಲ್ಲಿ ಇದ್ದಾಗ ನನ್ನ ಒಂದು ಕವನ ಸಂಕಲನವನ್ನು ಮಿತ್ರರಿಗೆ ಕಳುಹಿಸಿ ಅವರ ಪತ್ರಕ್ಕಾಗಿ ಕಾಯುತ್ತಿದ್ದೆ. ಪತ್ರ ಬರಲಿಲ್ಲ ಎಂದು ಬೇಸರಪಟ್ಟಿದ್ದೆ. ಆದರೆ ಮುಂದೊಮ್ಮೆ ಮಿತ್ರರು ಯಾವುದೊ ಕಾರ್ಯಕ್ರಮದಲ್ಲಿ ಸಿಕ್ಕಾಗ ‘ನಿನ್ನ ಪುಸ್ತಕ ಓದಿದೆ. ಉಪ್ಪಿಟ್ಟಿದೆ-ಕಪ್ಪಿಟ್ಟಿದೆ ಹನಿಗವನ ಬಹಳ ಚೆನ್ನಾಗಿದೆ ಕಣಪ್ಪ. ಅನೇಕ ಕಡೆಗಳಲ್ಲಿ ಅದನ್ನು ಕೋಟ್ ಮಾಡಿದೀನಿ. ಒಂದು ಲೇಖನದಲ್ಲೂ ಉಲ್ಲೇಖಿಸಿದ್ದೀನಿ’ ಅಂದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಿತ್ರರಿಗೆ ಪುಸ್ತಕ ಕಳಿಸಿದ್ದು ಸಾರ್ಥಕ ಅನ್ನಿಸಿತು. ಕೃಷಿ ವಿಜ್ಞಾನ ಓದಿದ ನಾನು ಸಾಹಿತ್ಯವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವನಲ್ಲ. ಹೀಗಾಗಿ ಮಾತ್ರೆ, ಗಣ, ಛಂದಸ್ಸು, ಲಯ ಇವುಗಳ ಬಗ್ಗೆ ನನ್ನ ತಿಳಿವಳಿಕೆ ಬಹಳ ಕಡಿಮೆ. ಈ ವಿಷಯದಲ್ಲಿ ಏನಾದರೂ ಸಂದೇಹ ಬಂದಾಗ ನಾನು ಅ.ರಾ.ಮಿತ್ರರ ‘ಛಂದೋಮಿತ್ರ’ ಎಂಬ ಪುಸ್ತಕದ ಮೊರೆ ಹೋಗುತ್ತೇನೆ. ಕೆಲವು ವರ್ಷಗಳ ಹಿಂದೆ ನಾನು ‘ಹನಿಗವನ ಏನು? ಏಕೆ? ಹೇಗೆ?’ ಎಂಬ ಹನಿಗವನ ಕೈಪಿಡಿಯನ್ನು ರಚಿಸುವಾಗಲೂ ‘ಛಂದೋಮಿತ್ರ’ ನನ್ನ ನೆರವಿಗೆ ಬಂದಿದೆ. ವ್ಯಾಕರಣದಂತಹ ನೀರಸ ವಿಷಯವನ್ನು ಹೇಗೆ ಸ್ವಾರಸ್ಯಕರವಾಗಿ ವಿವರಿಸಬಹುದು ಎಂಬುದಕ್ಕೆ ಸಾಕ್ಷಿ ‘ಛಂದೋಮಿತ್ರ’. ಉದಾಹರಣೆಗೆ ಎರಡು ಸಾಲಿನ ಏಳೆ ಎಂಬ ಛಂದಸ್ಸನ್ನು ಅವರು ಏಳೆಯ ಮೂಲಕವೇ ಹೀಗೆ ವಿವರಿಸಿದ್ದಾರೆ:

ಸುಂದರಿ ಶಿಕ್ಷಿತೆ ಸುಮಧುರೆ ಸಂಪನ್ನೆಎಂದರೆ ಅವಳೆ ಪರಪತ್ನಿ

ಅದೇ ರೀತಿ ಪ್ರಾಸದ ಬಗ್ಗೆ ಮಿತ್ರರು ಬರೆದ ಈ ಚುಟುಕು ಓದಿ ನೋಡಿ:

ಪ್ರಾಸದ ಪೀಠದ ಮೇಲೆಮಾತಿನ ಬಾಲೆಯ ಬ್ಯಾಲೆಅತಿಯಾದರೆ ಮಾತಿನ ಲೀಲೆಉರುಳಿ ಬಿದ್ದಾಳು ಲೋಲೆ

ಹಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ನನ್ನ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಮಿತ್ರರು ಒಪ್ಪಿಕೊಂಡಿದ್ದರು. ಕೊನೆಯ ಕ್ಷಣದಲ್ಲಿ ಅನಾರೋಗ್ಯದಿಂದಾಗಿ ಅವರಿಗೆ ಬರಲಾಗಲಿಲ್ಲ. ನಂತರ ನಾನು ಸಿಕ್ಕಾಗಲೆಲ್ಲ ಆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು. ‘ನಿನ್ನ ಇನ್ನೊಂದು ಪುಸ್ತಕದ ಬಿಡುಗಡೆಗೆ ಕರೆದರೆ ತಪ್ಪದೆ ಬರುತ್ತೇನೆ’ ಎಂದಿದ್ದರು. ನುಡಿದಂತೆ ನಡೆದಿದ್ದರು! ನನಗೆ ಅರವತ್ತು ತುಂಬಿದ ಸಂದರ್ಭದಲ್ಲಿ ‘ಇಡಿ ಕಿಡಿ ಕವನಗಳು’ ಎಂಬ ಆಯ್ದ ಇಡಿಗವನ ಹಾಗೂ ಕಿರುಗವನಗಳ ಸಂಕಲನವನ್ನು ಸಿದ್ಧಪಡಿಸಿದೆ. ಅದಕ್ಕೆ ಮುನ್ನುಡಿ ಬರೆದುಕೊಡುವಂತೆ ಅ.ರಾ.ಮಿತ್ರರನ್ನು ಕೇಳಿಕೊಂಡೆ. ಅವರು ‘ನಿನ್ನ ಪುಸ್ತಕಕ್ಕೆ ಮುನ್ನುಡಿ ಬರೆಯುವುದು ನನಗೆ ಸಂತೋಷದ ಸಂಗತಿ. ಆದರೆ ವಯಸ್ಸಾಗಿರುವುದರಿಂದ ಬರೆಯುವಾಗ ಕೈ ನಡುಗುತ್ತದೆ.

ಪುಸ್ತಕ ಕಳುಹಿಸು. ಓದಿದ ನಂತರ ನಾನು ತಿಳಿಸಿದ ದಿನ ನಮ್ಮ ಮನೆಗೆ ಬಂದು ನಾನು ಹೇಳುವುದನ್ನು ಬರೆದುಕೊಂಡು ಹೋಗು’ ಅಂದರು. ನಾನು ಒಪ್ಪಿಕೊಂಡು ಪುಸ್ತಕ ಕಳುಹಿಸಿದೆ. ನಂತರ ಅವರು ಹೇಳಿದ ದಿನ ಮುನ್ನುಡಿ ಬರೆದುಕೊಳ್ಳಲು ಯಲಹಂಕದಲ್ಲಿರುವ ಅವರ ಮನೆಗೆ ಹೋದೆ. ಅಲ್ಲಿ ನನಗೊಂದು ಅಚ್ಚರಿ ಕಾದಿತ್ತು. ಮಿತ್ರರು ಕೈ ನಡುಗುತ್ತಿದ್ದರೂ ಕಷ್ಟದಿಂದ ಎರಡು ಪುಟಗಳ ಮುನ್ನುಡಿ ಯನ್ನು ಮೊದಲೇ ಬರೆದು ಇಟ್ಟಿದ್ದರು! ಅದನ್ನು ನನ್ನಿಂದ ಓದಿಸಿ, ‘ಸರಿಯಾಗಿದೆಯಲ್ಲವೆ?’ ಎಂದು ಕೇಳಿ ಕೊಟ್ಟರು.

ವಿನೋದ ಸಾಹಿತ್ಯದಲ್ಲಿ ಮಿತ್ರರು ಮಾಡಿದ ಸಾಧನೆ ಗಮನಿಸಿದ್ದರೆ ಅವರಿಗೆ ಎಂದೋ ರಾಜ್ಯೋತ್ಸವ ಪ್ರಶಸ್ತಿ ಬರಬೇಕಿತ್ತು. ಹಾಸ್ಯ ಸಾಹಿತ್ಯವೆಂದರೆ ಕೆಲವು ಗಂಭೀರ ವಿಮರ್ಶಕರಿಗೆ ಅಲರ್ಜಿ. ಅದನ್ನು ಬಿಟ್ಟು ಮಿತ್ರರು ಗಂಭೀರ ಸಾಹಿತ್ಯ ಪ್ರಕಾರಗಳಲ್ಲಿ ಮಾಡಿದ ಕೆಲಸ ನೋಡಿದರೂ ಅವರಿಗೆ ಅದು ಇನ್ನೂ ಮೊದಲೇ ಬರಬೇಕಿತ್ತು. ತುಂಬ ತಡವಾಗಿ ಅವರ ಶಿಷ್ಯರಿಗೆ ಬಂದ ನಂತರ ಬಂತು. ಮಿತ್ರರು ಪ್ರಶಸ್ತಿಗಳ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲ. ಆದ್ದರಿಂದಲೇ ಅವರ ಮೊಗದಲ್ಲಿ ನಾನು ಮೂರು ದಶಕಗಳ ಹಿಂದೆ ಕಂಡ ಮಗುವಿನ ಮುಗ್ಧ ನಗು ತೊಂಬತ್ತರಲ್ಲೂ ಬತ್ತದೆ ಉಳಿದಿದೆ. ಅದು ಮುಂದೆಯೂ ಹೀಗೆಯೇ ಇರಲಿ ಎಂದು ಹಾರೈಸುವೆ.

ಇಂದು ಅಭಿನಂದನಾ ಸಮಾರಂಭ

ಪ್ರೊ.ಅ.ರಾ.ಮಿತ್ರರ ತೊಂಬತ್ತನೇ ಜನ್ಮದಿನದ ಪ್ರಯುಕ್ತ ಅವರ ಮಿತ್ರವೃಂದವು ಇಂದು (ಭಾನುವಾರ) ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ‘ಮಿತ್ರಾವರಣ’ಕಾರ್ಯಕ್ರಮ ಹಮ್ಮಿಕೊಂಡಿದೆ. ಮಿತ್ರರ ಕೃತಿ ಅವಲೋಕನ, ಅನಾವರಣ, ಅಭಿನಂದನಾ ಸಮಾರಂಭ ಈ ವೇಳೆ ನಡೆಯಲಿದೆ. ಸಾಹಿತಿ ಚಂದ್ರಶೇಖರ ಕಂಬಾರ, ಡಾ.ಎಸ್.ಆರ್.ರಾಮಸ್ವಾಮಿ, ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಶತಾವಧಾನಿ ಡಾ. ರಾ.ಗಣೇಶ್, ಡಾ.ಟಿ.ವಿ. ವೆಂಕಟಾ ಚಲಶಾಸ್ತ್ರಿ, ಡಾ.ಎಸ್.ಆರ್.ಲೀಲಾ, ಪ್ರೊ.ಎಂ.ಕೃಷ್ಣೇಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net