ಚಿಯಾಗೆ ಚಿಯರ್ಸ್: ಈ ಬೆಳೆಗಿಲ್ಲ ವನ್ಯಪ್ರಾಣಿ ಹಾವಳಿ

Vittavani
Published on

| ತಂಗಂ ಜಿ. ಗೋಪಿನಾಥಂ ಚಾಮರಾಜನಗರ

ಕೃಷಿ ಎಂದೊಡನೆ ನೂರೆಂಟು ತರಲೆ ತಾಪತ್ರಯ ಇದ್ದದ್ದೆ. ರೈತ ಬೆಳೆ ಮನೆಗೆ ಕೊಂಡೊಯ್ಯುವ ವೇಳೆಗೆ ಸಾಕಪ್ಪ ಕೃಷಿ ಸಹವಾಸ ಎನ್ನಿಸಿರುತ್ತದೆ. ಬಿತ್ತನೆ ಬೀಗ, ಗೊಬ್ಬರ, ನೀರು, ಕೂಲಿ ಹಾಳುಗಳು ಹೀಗೆ ಅನೇಕ ಸಮಸ್ಯೆಗಳ ನಡುವೆ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳುವುದು ರೈತರಿಗೆ ಮತ್ತೊಂದು ಸವಾಲು. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಈ ಸಮಸ್ಯೆ ರೈತರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ಆನೆ, ಹಂದಿ, ಜಿಂಕೆ, ನವಿಲು ಹೀಗೆ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಬಗೆಯ ಪ್ರಾಣಿಗಳ ಹಾವಳಿ ರೈತರನ್ನು ಕಂಗೆಡಿಸಿದೆ. ಅದರಲ್ಲೂ ಕಾಡಿನಿಂದಲೇ ಆವೃತ್ತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಆನೆ, ಹಂದಿಗಳ ಹಾವಳಿ ತುಸು ಅಧಿಕವೆನ್ನುವಂತೆಯೇ ಇದ್ದು, ಇದರಿಂದ ರೈತರು ನಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಹಾಗಾಗಿ ಬೇಸತ್ತ ಅನ್ನದಾತರು ಪರ್ಯಾಯ ಬೆಳೆಯತ್ತ ಗಮನ ಹರಿಸಿದ್ದಾರೆ. ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್​ಟಿಆರ್​ಐ) ಅಧಿಕಾರಿಗಳು ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಚಿಯಾ (ದಕ್ಷಿಣ ಮೆಕ್ಸಿಕೋ ಮೂಲದ ಬೆಳೆ) ಬೆಳೆಗೆ ಉತ್ತೇಜನ ನೀಡಿದ್ದರು. ಅಲ್ಲಿ ಯೋಜನೆ ಸಫಲತೆ ಕಂಡ ಹಿನ್ನೆಲೆಯಲ್ಲಿ ಚಾಮರಾಜನಗರ ರೈತರೂ ಮಾಹಿತಿ ಪಡೆದು ಚಿಯಾ ಬೆಳೆಯತ್ತ ಮುಖ ಮಾಡಿದ್ದಾರೆ. ಚಿಯಾ ಎಳ್ಳು ಮಾದರಿಯಲ್ಲಿರುವುದರಿಂದ ಕಾಡುಪ್ರಾಣಿಗಳು ತಿನ್ನಲು ಬರುವುದಿಲ್ಲ. ಚಾಮರಾಜನಗರದ ಕಾಡಂಚಿನ ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿಪಡಗ (ರಂಗಸಂದ್ರ), ದೊಡ್ಡಮೂಡಳ್ಳಿ, ಚಿಕ್ಕಮೂಡಳ್ಳಿ, ಕೋಳಿಪಾಳ್ಯ, ವೀರಯ್ಯನಪುರ, ಮೂಕನಪಾಳ್ಯ, ಅಟ್ಟುಗೂಳಿಪುರ ಗ್ರಾ.ಪಂ. ವ್ಯಾಪ್ತಿಯ ಕುಳ್ಳೂರು, ಹನೂರು ತಾಲೂಕಿನ ದಿನ್ನಳ್ಳಿ ಸೇರಿದಂತೆ ಇತರ ಕಡೆ ರೈತರು ಚಿಯಾ ಬೇಸಾಯದ ಕಡೆ ಒಲವು ತೋರಿದ್ದಾರೆ.

ಕಡಿಮೆ ಖರ್ಚು, ಆದಾಯ ಹೆಚ್ಚು: ಚಿಯಾ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಬೆಳೆಯಾಗಿದೆ. ಔಷಧೀಯ ಗುಣಲಕ್ಷಣ ಹಾಗೂ ಪೌಷ್ಟಿಕಾಂಶ ಹೊಂದಿರುವ ಈ ಬೆಳೆಯನ್ನು ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ಬೆಳೆಯಬಹುದಾಗಿದೆ. ಜಿಲ್ಲೆಯ ಯುವ ರೈತರು ಜಾಲತಾಣಗಳಲ್ಲಿ ಚಿಯಾ ಬೆಳೆ ಕುರಿತು ಮಾಹಿತಿ ಪಡೆದು ಬೆಳೆಯಲು ಮುಂದಾಗಿದ್ದಾರೆ. ಅತಿಯಾದ ನೀರಿನ ಅವಲಂಬನೆ ಇಲ್ಲದೆ ಬೆಳೆಯಬಹುದಾಗಿದೆ. ವೈಜ್ಞಾನಿಕವಾಗಿ ಚಿಯಾ ಎಂದು ಕರೆಸಿಕೊಳ್ಳುವ ಈ ಬೆಳೆಗೆ ಸ್ಥಳೀಯರು ‘ಗೇಲ್’ ಎಂದು ಹೆಸರಿಟ್ಟಿದ್ದಾರೆ.

ಚಿಯಾ ಸೀಡ್ಸ್ ಪೋಷಕಾಂಶ ಹೊಂದಿರುವ ಬೆಳೆಯಾಗಿದೆ. ಈ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇದೆ. ಚಿಯಾ ಬೀಜಗಳನ್ನು ಕೊಂಡುಕೊಳ್ಳುವವರೊಂದಿಗೆ ರೈತರು ಸಂಪರ್ಕ ಇಟ್ಟುಕೊಂಡು ಬೆಳೆದರೆ ಹೆಚ್ಚು ಆದಾಯ ಗಳಿಸಬಹುದು. ಈ ಬೆಳೆಗೆ ಹೆಚ್ಚು ಖರ್ಚು ಆಗಲ್ಲ. ಹೆಚ್ಚು ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಇಲ್ಲ. ಕೀಟಬಾಧೆಯೂ ಕಡಿಮೆ. | ಮಧುಸೂದನ್ ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಚಾಮರಾಜನಗರ ನಾನು 3 ವರ್ಷಗಳಿಂದ ಚಿಯಾ ಬೇಸಾಯ ಮಾಡುತ್ತಿದ್ದೇನೆ. ಈ ವರ್ಷ 2 ಎಕರೆ ಪ್ರದೇಶದಲ್ಲಿ ಚಿಯಾ ಬೆಳೆದಿದ್ದೇನೆ. ಇದುವರೆಗೆ 9 ಸಾವಿರ ರೂ. ಖರ್ಚಾಗಿದೆ. ಕಡಿಮೆ ನೀರಿದ್ದರೂ ಇದನ್ನು ಬೆಳೆಯಲು ಸಾಧ್ಯವಿದೆ. ಕಾಡುಪ್ರಾಣಿಗಳು ಚಿಯಾ ಬೆಳೆಯ ಮೇಲೆ ದಾಳಿ ನಡೆಸುವುದಿಲ್ಲ. | ಶಿವಪ್ಪ ನಾಯ್ಕ್​ ಯುವ ರೈತ, ಮೂಕನಪಾಳ್ಯ, ಚಾಮರಾಜನಗರ

ಕಾಯಿಲೆಗಳಿಗೆ ಮದ್ದು: ದಕ್ಷಿಣ ಮೆಕ್ಸಿಕೋ ಮೂಲದ ಚಿಯಾ, ಸೂಪರ್ ಫುಡ್ ಎಂದು ಪರಿಗಣಿತವಾಗಿದೆ. ಚಿಯಾ ಬೀಜಗಳನ್ನು ಐಸ್ ಕ್ರಿಂ ಹಾಗೂ ಬ್ರೆಡ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆರೋಗ್ಯದ ಕಾಳಜಿಗಾಗಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬೀಜಗಳಿಗೆ ಭಾರಿ ಬೇಡಿಕೆಯಿದೆ. ಇದರ ಸೇವನೆಯಿಂದ ಮೂಳೆ ಗಟ್ಟಿಯಾಗಲಿದೆ. ರಕ್ತದೊತ್ತಡ ನಿಯಂತ್ರಣ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ, ಸಕ್ಕರೆ ಕಾಯಿಲೆ ನಿಯಂತ್ರಣ, ತೂಕ ಇಳಿಕೆ, ಹೃದಯ ಸಂಬಂಧ ಕಾಯಿಲೆ ಸೇರಿದಂತೆ ವಿವಿಧ ರೋಗಗಳಿಗೆ ಮದ್ದಾಗಿದೆ.

ಚಿಯಾ ಗುಣಲಕ್ಷಣ: ಇದು ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹು ಬೇಡಿಕೆ ಇರುವ ಸಿರಿಧಾನ್ಯವಾಗಿದ್ದು, ಈ ಬೆಳೆಗೆ ಒಣ ಹವಾಮಾನದಲ್ಲಿ ವಾರಕ್ಕೊಂದು ಬಾರಿ ತುಂತುರು ನೀರಾವರಿ ಸಾಕು. ಒಂದು ಎಕರೆ ಪ್ರದೇಶಕ್ಕೆ 3 ರಿಂದ 4 ಸಾವಿರ ರೂ. ವೆಚ್ಚ ತಗುಲುತ್ತದೆ. ಪೈರು ಬೆಳೆಸಿ ನಾಟಿ ಮಾಡಬಹುದು ಅಥವಾ ಬಿತ್ತನೆ ಬೀಜವನ್ನು ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು. ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದರೆ ಸಾಕು. ಸಸಿಗಳನ್ನು ನಾಟಿ ಮಾಡಿದ ನಂತರ 90 ರಿಂದ 100 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ಸ್ಥಳೀಯ ವಾತಾವರಣಕ್ಕೆ ಬೆಳೆಯಬಹುದಾದ ವಾಣಿಜ್ಯ ಬೆಳೆ ಚಿಯಾ ಎಕರೆಗೆ 3 ರಿಂದ 4 ಕ್ವಿಂಟಾಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 10 ರಿಂದ 35 ಸಾವಿರ ರೂ.ವರೆಗೆ ಮಾರಾಟವಾಗುತ್ತದೆ. ಜಿಲ್ಲೆಯಲ್ಲಿ ಅಂದಾಜು 200 ಎಕರೆ ವ್ಯಾಪ್ತಿಯಲ್ಲಿ ಚಿಯಾ ಬೆಳೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿ ಹೆಚ್ಚಾಗುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net