ಭಾರತ-ಅಮೆರಿಕ ಸಹಕಾರದ ನವಯುಗ

ವಿಜಯವಾಣಿ (4)
Published on

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಡೊನಾಲ್ಡ್ ಟ್ರಂಪ್ 2017-21ರ ಅವಧಿಯಲ್ಲಿ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದರು. ಈಗ ಮತ್ತೊಮ್ಮೆ ಅಧ್ಯಕ್ಷರಾಗಿದ್ದಾರೆ (2025 ಜನವರಿ 20). ನರೇಂದ್ರ ಮೋದಿ ಆಗಲೂ ಭಾರತದ ಪ್ರಧಾನಮಂತ್ರಿಯಾಗಿದ್ದರು, ಈಗಲೂ ಅದೇ ಸ್ಥಾನದಲ್ಲಿದ್ದಾರೆ. ಇದನ್ನೇನೂ ಮೋದಿಯವರ ಹೆಚ್ಚುಗಾರಿಕೆ ಅಂತ ಹೇಳುತ್ತಿಲ್ಲ. ಹಾಗೆ ನೋಡಿದರೆ ಮೋದಿಯವರ ‘ದಾಖಲೆ’ಯನ್ನು ಮೈಲುಗಳ ಅಂತರದಲ್ಲಿ ಮೀರಿಸುವ ಜಾಗತಿಕ ನಾಯಕರಿದ್ದಾರೆ. ರಷ್ಯಾದಲ್ಲಿ ವ್ಲಾದಿಮೀರ್ ಪುತಿನ್ ನಮ್ಮ ವಾಜಪೇಯಿಯವರ ಕಾಲದಿಂದಲೂ ಅಧ್ಯಕ್ಷರಾಗಿಯೇ ಇದ್ದಾರೆ! ಇತ್ತ ಚೀನಾದತ್ತ ತಿರುಗಿದರೆ ಅಲ್ಲಿಯೂ ಷಿ ಜಿನ್​ಪಿಂಗ್ ನಮ್ಮ ಮನಮೋಹನ್ ಸಿಂಗ್ ಕಾಲದಿಂದಲೂ ಅಧ್ಯಕ್ಷರಾಗಿಯೇ ಕುಳಿತಿದ್ದಾರೆ. ಇನ್ನು ಡೊನಾಲ್ಡ್ ಟ್ರಂಪ್​ರ ಮೊದಲ ಅಧ್ಯಕ್ಷಾವಧಿಯಲ್ಲೂ ಇವರಿಬ್ಬರೂ ತಂತಮ್ಮ ದೇಶಗಳ ಅಧ್ಯಕ್ಷರುಗಳಾಗಿಯೇ ಇದ್ದರು, ಈಗಲೂ ಇದ್ದಾರೆ. ಇವರಿಬ್ಬರಿಗೂ ಟ್ರಂಪ್​ರ ಪರಿಚಯ ಮೋದಿಯವರಿಗಿರುವಷ್ಟೇ ಹಳೆಯದು. ಹಳೆಯದು ನಿಜ, ಆದರೆ ಗಾಢವೇ? ಸ್ನೇಹಮಯವೇ? ಪರಸ್ಪರ ಗೌರವಪೂರ್ಣವೇ?

ಟ್ರಂಪ್​ರ ಮೊದಲ ಅವಧಿಯಲ್ಲಿ 2019ರ ಸೆಪ್ಟೆಂಬರ್​ನಲ್ಲಿ ‘ಹೌಡಿ ಮೋದಿ’ ರ‍್ಯಾಲಿ ಹ್ಯೂಸ್ಟನ್ ನಗರದಲ್ಲಿ ಆಯೋಜನೆಗೊಂಡಾಗ ಅಲ್ಲಿ 50 ಸಾವಿರಕ್ಕಿಂತಲೂ ಹೆಚ್ಚಿನ ಜನಸಂದಣಿ ಸೇರಿತ್ತು. ನಂತರ 2020ರ ಫೆಬ್ರವರಿಯಲ್ಲಿ ಗುಜರಾತ್​ನ ಅಹ್ಮದಾಬಾದ್​ನಲ್ಲಿ ‘ನಮಸ್ತೇ ಟ್ರಂಪ್’ ಕಾರ್ಯಕ್ರಮ ಆಯೋಜನೆಗೊಂಡಾಗ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಜನಸಾಗರ ನೆರೆದಿತ್ತು! ಹಾಗೆನೋಡಿದರೆ ಅಮೆರಿಕ ಅಧ್ಯಕ್ಷರುಗಳ ಬಗೆಗಿನ ಭಾರತೀಯರ ಪ್ರೀತಿ ಇತಿಹಾಸಪ್ರಸಿದ್ಧವಾದುದು. 1959ರಲ್ಲಿ ಅಧ್ಯಕ್ಷ ಡ್ವೈಟ್ ಡಿ. ಐಸೆನ್​ಹೋವರ್ ನವದೆಹಲಿಗೆ ಭೇಟಿಯಿತ್ತಾಗ ಅವರ ಸ್ವಾಗತಕ್ಕಾಗಿ ಸೇರಿದ್ದ ಜನಸಂದಣಿಯನ್ನು ನೋಡಿ ಅವರು ದಂಗಾಗಿಹೋದರು. ‘ಈ ಬಗೆಯ ಪ್ರೀತ್ಯಾದರ ಜಗತ್ತಿನ ಯಾವ ರಾಜಧಾನಿಯಲ್ಲೂ ನನಗೆ ಸಿಕ್ಕಿಲ್ಲ’ ಎಂದು ತುಂಬು ಮನಸ್ಸಿನಿಂದ ಹರ್ಷ ವ್ಯಕ್ತಪಡಿಸಿದರು! ಇರಲಿ ಬಿಡಿ, ಅದು ಇನ್ನೊಂದು ಕಥೆ.

ಈಗ ನಾವು ಟ್ರಂಪ್​ರತ್ತ ತಿರುಗೋಣ. ಅವರ ಮೊದಲ ಅವಧಿಯಲ್ಲಿ ಮೋದಿಯವರೊಂದಿಗೆ ಅವರು ಹೊಂದಿದ್ದ ಸ್ನೇಹಾದರಗಳು ಹಾಗೂ ಭಾರತ ಮತ್ತು ಅಮೆರಿಕಗಳ ನಡುವಿನ ನಿಕಟ ಸಂಬಂಧಗಳಿಗೆ ಆ ಎರಡು ಕಾರ್ಯಕ್ರಮಗಳು ಸಾಕ್ಷಿಯಾದಂತೆ ರಕ್ಷಣಾ ಹಾಗೂ ಸಾಮರಿಕ ಸಹಯೋಗದಲ್ಲೂ ಎರಡು ದೇಶಗಳೂ ಅಭೂತಪೂರ್ವ ಉನ್ನತ ಸ್ತರಗಳನ್ನು ಮುಟ್ಟಿದವು. ಜಾನ್ ಎಫ್. ಕೆನಡಿ ನಂತರ ಆಕ್ರಮಣಕಾರಿ ಚೀನಾ ವಿರುದ್ಧ ಭಾರತದ ಪರವಾಗಿ ನಿಂತ ಮೊತ್ತಮೊದಲ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಷ್ಟೇ ಅಲ್ಲ, ಪಾಕಿಸ್ತಾನದ ಭಯೋತ್ಪಾದನಾ ಇತಿಹಾಸವನ್ನು ಬಯಲಿಗೆಳೆದು ಜಾಗತಿಕವಾಗಿ ಆ ದೇಶದ ಮಾನವನ್ನು ಹರಾಜಿಗಿಟ್ಟ ಮೊದಲ ಅಧ್ಯಕ್ಷ ಸಹ ಟ್ರಂಪ್ ಅವರೇ. ಮೋದಿ ಮಾಡಿದ ನೋಟ್ ಬಂದಿ ಮತ್ತು ಟ್ರಂಪ್ ನಿಲ್ಲಿಸಿದ ಸೇನಾ ಸಹಾಯಧನ ತನ್ನ ಅರ್ಥವ್ಯವಸ್ಥೆಗೆ ನೀಡಿದ ಹೊಡೆತದಿಂದ ಪಾಕಿಸ್ತಾನ ಇನ್ನೂ ಚೇತರಿಸಿಕೊಂಡಿಲ್ಲ, ಮುಂದೆ ಚೇತರಿಸಿಕೊಳ್ಳುವ ಸಾಧ್ಯತೆಯೂ ಇಲ್ಲ. ಭಾರತದ ಕುರಿತಾಗಿ ಪ್ರದರ್ಶಿಸಿದ ಅನುಕೂಲಕರ ನೀತಿಗಳನ್ನು ಟ್ರಂಪ್ ಚೀನಾದತ್ತ ತೋರಲೇ ಇಲ್ಲ. ಬದಲಿಗೆ ಚೀನೀ ಅರ್ಥವ್ಯವಸ್ಥೆಗೆ ಎಷ್ಟು ಸಾಧ್ಯವೋ ಅಷ್ಟು ಹೊಡೆತ ನೀಡಿ ಅದರ ನೀರಿಳಿಸುವುದು ಟ್ರಂಪ್​ರ ವಿದೇಶನೀತಿಯ ಪ್ರಮುಖ ಅಂಶವಾಯಿತು.

ಪುತಿನ್ ಮತ್ತವರ ರಷ್ಯಾ ಕುರಿತಾಗಿ ಟ್ರಂಪ್​ರಿಗೆ ‘ಅಕ್ಕರೆ’ ಇದ್ದಿತಾದರೂ ಅದನ್ನು ಮೋದಿ ಮತ್ತು ಭಾರತದ ವಿಷಯದಲ್ಲಿ ಪ್ರದರ್ಶಿಸಿದಷ್ಟು ಪ್ರಮಾಣದಲ್ಲಿ ಹೊರಸೂಸಲು ಟ್ರಂಪ್ ಹೋಗಲಿಲ್ಲ. ಹಾಗೆಯೇ ಪುತಿನ್ ಮತ್ತು ಜಿನ್​ಪಿಂಗ್ ಸಹ ಭಾರತದ ಬಗ್ಗೆ ಸ್ನೇಹವನ್ನೇನೂ ತೋರದ ದಿನಗಳನ್ನು ಕಂಡೇ ಇದ್ದೇವೆ. 2018ರವರೆಗೂ ವ್ಲಾದಿಮೀರ್ ಪುತಿನ್ ಪಾಕಿಸ್ತಾನವನ್ನು ಓಲೈಸುವುದರಲ್ಲಿ ಮಗ್ನರಾಗಿದ್ದರು. ಅದು ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ ಭಾರತಕ್ಕೆ ನೀಡಿದ್ದ ಯುದ್ಧಸಾಮಗ್ರಿಗಳನ್ನೆಲ್ಲವನ್ನೂ ಪಾಕಿಸ್ತಾನಕ್ಕೂ ನೀಡಲು ಪುತಿನ್ ಮುಂದಾಗಿದ್ದರು. ಜತೆಗೆ, ಚೀನಾದ ಮಾತು ಕೇಳಿ ಪಾಕಿಸ್ತಾನದ ಪರ ನಿಂತ ರಷ್ಯಾ 2016ರಲ್ಲಿ ಗೋವಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದ ಜಂಟಿ ಘೋಷಣೆಯಲ್ಲಿ ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿ ನಿಂದಿಸುವ ವಾಕ್ಯವನ್ನು ತೆಗೆಯುವಂತೆ ಮೋದಿ ಸರ್ಕಾರದ ಮೇಲೆ ಒತ್ತಡವನ್ನೂ ಹಾಕಿ ಬಹುಕಾಲದ ಮಿತ್ರದೇಶವಾದ ಅತಿಥೇಯ ಭಾರತವನ್ನು ಅವಮಾನಿಸಿತ್ತು.

ಮಾಸ್ಕೋ-ಬೀಜಿಂಗ್-ಇಸ್ಲಾಮಾಬಾದ್​ಗಳ ಜಂಟಿ ದುಷ್ಟಕೂಟವೊಂದು ರಚಿತವಾಗುತ್ತಿರುವ ಮಾತುಗಳೂ ಆಗ ಕೇಳಿಬಂದಿದ್ದವು. ಯೂಕ್ರೇನ್ ಯುದ್ಧ ಶುರುವಾಗಿ, ಪಾಕಿಸ್ತಾನದಿಂದ ಯೂಕ್ರೇನ್​ಗೆ ಒಂದಷ್ಟು ಶಸ್ತ್ರಾಸ್ತ್ರ ಪೂರೈಕೆಯಾದ ಮೇಲೆ ಮತ್ತು ತನ್ನ ಪೆಟ್ರೋಲಿಯಂಗೆ ದೊಡ್ಡ ಮಾರುಕಟ್ಟೆಯಾಗಿ ಭಾರತ ಸಿಕ್ಕಿದ ಮೇಲೆ ಯಾರು ಹಿತವರು ತನಗೆ ಎಂದು ಪುತಿನ್ ಅರಿತರು. ಇನ್ನು ಚೀನಾದ ಕಥೆ ಹೇಳುವುದೇ ಬೇಡ. ದೊಕ್ಲಾಂ ಹಾಗೂ ಗಲ್ವಾನ್​ಗಳಲ್ಲಿ ಭಾರತದ ಜತೆ ಹಣಾಹಣಿಗೆ ಮುಂದಾದದ್ದಲ್ಲದೆ ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಮತ್ತು ಮಾಲ್ದೀವ್ಸ್​ಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವುದರಲ್ಲಿ ನಿರಂತರವಾಗಿ ತೊಡಗಿದ್ದದ್ದು ಸಮಕಾಲೀನ ಭೂ-ಸಾಮರಿಕ ಹಾಗೂ ಭೂ-ಆರ್ಥಿಕ ಇತಿಹಾಸದ ಭಾಗವಾಗಿಹೋಗಿದೆ. ಅದೇ ಚೀನಾ ಇಂದು ಭಾರತದ ಜತೆ ಸ್ನೇಹ ಬಯಸುತ್ತಿದೆ, ಲಡಾಖ್​ನ ವಾಸ್ತವ ಹತೋಟಿ ರೇಖೆಯಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಂದ ಮಾಡಿಕೊಂಡಿದೆ.

ಚೀನೀ ಸರ್ಕಾರ ನಮ್ಮ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿಯವರನ್ನು ಕಳೆದವಾರ ಬೀಜಿಂಗ್​ಗೆ ಆಹ್ವಾನಿಸಿದಾಗ ಅವರ ಜತೆ ಪೋ›ಟೋಕಾಲ್ ಬದಿಗೊತ್ತಿ ಭೇಟಿಯಾದವರು ಅಧ್ಯಕ್ಷ ಜಿನ್​ಪಿಂಗ್​ರಿಗೆ ಅತ್ಯಂತ ಹತ್ತಿರದವರಾದ ವಿದೇಶ ಮಂತ್ರಿ ವಾಂಗ್ ಯಿ! ಹೀಗೆ ಭಾರತದೊಂದಿಗೆ ಪುತಿನ್ ಮತ್ತು ಜಿನ್​ಪಿಂಗ್​ರ ನೀತಿಗಳಲ್ಲಿ ಏರಿಳಿತ ಕಂಡರೆ ಟ್ರಂಪ್​ರ ನೀತಿಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ತಮ್ಮ ಮೊದಲ ಅವಧಿಯಲ್ಲಿ ಭಾರತ ಮತ್ತು ಮೋದಿಯವರ ಬಗ್ಗೆ ತೋರಿದ ಗೌರವ, ಸ್ನೇಹ ಹಾಗೂ ಸಹಕಾರಗಳನ್ನು ಈಗಲೂ ತೋರುತ್ತಿದ್ದಾರೆ ಮತ್ತು ಅವೆಲ್ಲವನ್ನೂ ಇನ್ನೂ ಉನ್ನತ ಸ್ತರಕ್ಕೆ ಕೊಂಡೊಯ್ಯುವ ಸೂಚನೆಯನ್ನು ಧಾರಾಳವಾಗಿ ನೀಡಿದ್ದಾರೆ. ಅವೆಲ್ಲವನ್ನೂ ನಾವು ಕಳೆದ ಮೂರು ವಾರಗಳಲ್ಲಿ ನೋಡುತ್ತಲೇ ಇದ್ದೇವೆ.

ಟ್ರಂಪ್ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿರುವ ಮಾಕೋ ರೂಬಿಯೋ ಅಧಿಕೃತವಾಗಿ ಭೇಟಿಯಾಗಿ ಮಾತುಕಥೆ ನಡೆಸಿದ ಮೊದಲ ವಿದೇಶಿ ಗಣ್ಯ ನಮ್ಮ ವಿದೇಶಮಂತ್ರಿ ಎಸ್.ಜೈಶಂಕರ್. ಇನ್ನೂ ವಿಶೇಷವೆಂದರೆ ಅವರಿಬ್ಬರೂ ಮಾತನಾಡಿದ್ದು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತ್ರವಲ್ಲ, ಮಧ್ಯಪ್ರಾಚ್ಯ ಮತ್ತು ಯೂರೋಪ್​ಗಳ ಬಗೆಗೂ ಸಹ! ಅಂದರೆ ಟ್ರಂಪ್​ರ ಅಮೆರಿಕ ತನ್ನ ಸಾಂಪ್ರದಾಯಿಕ ಸಾಮರಿಕ ಸಹಯೋಗಿಗಳಾದ ಯೂರೋಪಿಯನ್ ರಾಷ್ಟ್ರಗಳ ಕುರಿತಾಗಿನ ತನ್ನ ಚಿಂತನೆಗಳನ್ನು ಭಾರತದೊಂದಿಗೆ ಹಂಚಿಕೊಳ್ಳುತ್ತಿದೆ! ಇದು ಅಭೂತಪೂರ್ವ. ರಷ್ಯಾ-ಯೂಕ್ರೇನ್ ಯುದ್ಧವನ್ನು ನಿಲುಗಡೆಗೆ ತರುವ ಕುರಿತಾಗಿ ಅಮೆರಿಕ ಮತ್ತು ರಷ್ಯಾ ನೇರವಾಗಿ ಮಾತುಕಥೆ ನಡೆಸಲಿವೆ ಮತ್ತು ಆ ಮಾತುಕಥೆಯಲ್ಲಿ ಯೂರೋಪಿಯನ್ ರಾಷ್ಟ್ರಗಳು ಭಾಗಿಯಾಗುವ ಅಗತ್ಯವಿಲ್ಲ ಎಂದು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕಳೆದ ವಾರಾಂತ್ಯದಲ್ಲಿ ಮ್ಯೂನಿಕ್ ಸೆಕ್ಯೂರಿಟಿ ಕಾನ್​ಫರೆನ್ಸ್​ನಲ್ಲಿ ಯೂರೋಪಿಯನ್ ನಾಯಕರ ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ.

(ಅದರಂತೆ ಈ ಲೇಖನ ಬರೆಯುವ ಹೊತ್ತಿನಲ್ಲಿ ಅಮೆರಿಕ ಮತ್ತು ರಷ್ಯಾಗಳ ರಾಜತಾಂತ್ರಿಕ ನಿಯೋಗಗಳು ಸೌದಿ ಅರೇಬಿಯಾದಲ್ಲಿ ಮಾತುಕಥೆ ನಡೆಸುತ್ತಿವೆ) ಅದೇ ಯೂರೋಪ್ ಕುರಿತಾಗಿ ಇಂದಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ (ಅಂದರೆ ವಿದೇಶ ಮಂತ್ರಿ) ಭಾರತದ ವಿದೇಶಮಂತ್ರಿಯ ಜತೆ ಮಾತಾಡುತ್ತಾರೆ! ಟ್ರಂಪ್ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಜಾಗತಿಕ ರಾಜಕಾರಣದ ಗಾಳಿ ದಿಕ್ಕು ಬದಲಿಸಿ ಬೀಸತೊಡಗಿದೆ. ಈ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ 14ರಂದು ಶ್ವೇತಭವನದಲ್ಲಿ ಜರುಗಿದ ಮೋದಿ-ಟ್ರಂಪ್ ಭೇಟಿ ಮಹತ್ವದ್ದೆನಿಸಿಕೊಳ್ಳುತ್ತದೆ. ಆ ಭೇಟಿಗೂ ಮೊದಲೇ ಅಧ್ಯಕ್ಷರು ತಮ್ಮ ಗಣ್ಯ ಅತಿಥಿಗಳನ್ನಿರಿಸುವ ಬ್ಲೇರ್ ಹೌಸ್​ನಲ್ಲಿ ಪ್ರಧಾನಿ ಮೋದಿಯವರು ಟ್ರಂಪ್ ಆಡಳಿತದಲ್ಲಿ ರಾಷ್ಟ್ರೀಯ ಬೇಹುಗಾರಿಕಾ ನಿರ್ದೇಶಕರಾಗಿರುವ ತುಳಸಿ ಗ್ಯಾಬಾರ್ಡ್, ಅಧ್ಯಕ್ಷರ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಮೈಕ್ ವಾಲ್ಝ್ ಹಾಗೂ ತಾಂತ್ರಿಕ ದೈತ್ಯ ಎಲಾನ್ ಮಸ್ಕ್ ಅವರನ್ನು ಭೇಟಿಯಾದರು.

ಈ ಮೂವರೂ ಅವರವರದೇ ಬಗೆಯಲ್ಲಿ ಅತಿ ಪ್ರಮುಖರು. ತುಳಸಿ ಗ್ಯಾಬಾರ್ಡ್ ಅಮೆರಿಕದ ಹಿಂದೂ ಮತ್ತು ಇಸ್ಕಾನ್ ಅನುಯಾಯಿ, ವಾಲ್ಝ್ ಚೀನಾಗೆ ದುಃಸ್ವಪ್ನ, ಮಸ್ಕ್ ಹೊಸದಾಗಿ ಸೃಷ್ಟಿಯಾಗಿರುವ ‘ಸರ್ಕಾರಿ ದಕ್ಷತಾ ವಿಭಾಗ’ದ ಮುಖ್ಯಸ್ಥ. ತಮ್ಮ ‘ಜವಾಬ್ದಾರಿ’ಯನ್ನು ನಿಷ್ಠೆಯಿಂದ ನಿರ್ವಹಿಸಲಾರಂಭಿಸಿರುವ ಮಸ್ಕ್ ಸರ್ಕಾರದ ಅನಗತ್ಯ ಹಾಗೂ ವ್ಯರ್ಥ ಖರ್ಚುಗಳನ್ನು ನಿಲ್ಲಿಸಹೊರಟು ಕರಾಳ ಯುಎಸ್​ಎಐಡಿಯನ್ನೇ ಬಂದ್ ಮಾಡಿದ್ದಾರೆ. ಇದರಿಂದಾಗಿ ಬಾಂಗ್ಲಾದೇಶದ ಯೂನುಸ್ ಸರ್ಕಾರಕ್ಕೆ ಸಿಗುತ್ತಿದ್ದ ಹಣವಷ್ಟೇ ನಿಂತಿಲ್ಲ, 2014ರಿಂದೀಚೆಗೆ ನಮ್ಮಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡು ದೇಶದ, ಅಭಿವೃದ್ಧಿಯ, ಸರ್ಕಾರದ ವಿರುದ್ಧ ದುಷ್​ಪ್ರಚಾರದಲ್ಲಿ ತೊಡಗಿರುವ ಕೆಲ ಆನ್​ಲೈನ್ ಮಾಧ್ಯಮಗಳು ಹಾಗೂ ಎನ್​ಜಿಓಗಳೂ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ.

ಫೆಬ್ರವರಿ 14ರಂದು ಸುಮಾರು ನಾಲ್ಕು ತಾಸುಗಳ ಕಾಲ ಮಾತುಕಥೆ ನಡೆಸಿದ ಮೋದಿ ಮತ್ತು ಟ್ರಂಪ್ ರಕ್ಷಣಾ ಸಹಯೋಗ, ದ್ವಿಪಕ್ಷೀಯ ವ್ಯಾಪಾರ, ತಂತ್ರಜ್ಞಾನ, ಅಣು ವಿದ್ಯುತ್ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮಹತ್ವದ ಒಪ್ಪಂದಗಳಿಗೆ ಸಹಿಹಾಕಿದ್ದಾರೆ. ಇವುಗಳಲ್ಲಿ ನಾವು ಪ್ರಮುಖವಾಗಿ ಪರಿಗಣಿಸಬೇಕಾದ್ದು ರಕ್ಷಣಾ ಸಾಮಗ್ರಿಗಳ ಕುರಿತಾಗಿ ಟ್ರಂಪ್ ತಳೆದಿರುವ ನಿಲುವುಗಳ ಬಗ್ಗೆ. ಅವುಗಳ ಮಹತ್ವ ಅಡಗಿರುವುದು ಕಳೆದ ವಾರ ಬೆಂಗಳೂರಿನಲ್ಲಿ ಜರುಗಿದ ‘ಏರೋಇಂಡಿಯಾ 2025’ರಲ್ಲಿ ನಮ್ಮ ವಾಯುದಳದ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರ ಮಾತುಗಳಲ್ಲಿ.  ದ್ವಿರಂಗ ಯುದ್ಧದ ಅಪಾಯದಲ್ಲಿ ಸದಾ ಇರುವ ನಮ್ಮ ವಾಯುದಳಕ್ಕೆ ಅಗತ್ಯವಿರುವುದು 42 ಸ್ಕ್ವಾಡ್ರನ್​ಗಳು. ಆದರೆ ಈಗ ನಮ್ಮಲ್ಲಿರುವುದು 31 ಸ್ಕ್ವಾಡ್ರನ್​​ಗಳು ಮಾತ್ರ! ಜತೆಗೆ ಹಳೆಯದಾಗಿಹೋಗಿರುವ ಮಿಗ್ ಸರಣಿ ಹಾಗೂ ಮಿರಾಜ್​ಗಳನ್ನು ಹೆಚ್ಚು ಕಾಲ ಬಳಕೆಯಲ್ಲಿಡುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ.

ಅತ್ಯಾಧುನಿಕ ಯುದ್ಧವಿಮಾನಗಳನ್ನು ಆಮದು ಮಾಡಿಕೊಳ್ಳುವುದು ವಿವಿಧ ಕಾರಣಗಳಿಂದಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ನಮ್ಮ ಎಚ್​ಎಎಲ್ ಅಗತ್ಯ ಹಾಗೂ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ. ಒಪ್ಪಂದದ ಪ್ರಕಾರ ಅದು 40 ತೇಜಸ್ ಹಗುರ ಯುದ್ಧವಿಮಾನಗಳನ್ನು 2016ರಲ್ಲಿ ವಾಯಪಡೆಗೆ ನೀಡಬೇಕಾಗಿತ್ತು. 2024 ಕಳೆದರೂ ಇನ್ನೂ ಒಂದು ಯುದ್ಧವಿಮಾನವೂ ಪೂರೈಕೆಯಾಗಿಲ್ಲ! 83 ತೇಜಸ್ ಮಾರ್ಕ್ 1ಎ ವಿಮಾನಗಳಿಗಾಗಿ 2021ರಲ್ಲಿ ಮಾಡಿಕೊಂಡ ಒಪ್ಪಂದವನ್ನೂ ಎಚ್​ಎಎಲ್ ಪಾಲಿಸಿಲ್ಲ. 2024ರಲ್ಲಿ 11 ವಿಮಾನಗಳ ಪೂರೈಕೆಯಾಗಬೇಕಾಗಿತ್ತು. ಆದರೆ ಅದಾಗಿಲ್ಲ. ಇದರ ಬಗ್ಗೆ ನಿರಾಸೆ ವ್ಯಕ್ತಪಡಿಸಿದ ವಾಯುಸೇನೆಯ ಮುಖ್ಯಸ್ಥರು ‘ನನಗೆ ಎಚ್​ಎಎಲ್ ಮೇಲೆ ವಿಶ್ವಾಸವಿಲ್ಲ’ ಎಂದು ನೇರವಾಗಿ ಹೇಳಿದರು!

‘ಅಣ್ವಸ್ತ್ರಸ್ಪೋಟದಿಂದಾಗಿ ವಿದೇಶಗಳು ನಮ್ಮ ಮೇಲೆ ವಿಧಿಸಿದ ನಿರ್ಬಂಧಗಳಿಂದಾಗಿ ಅಗತ್ಯ ತಂತ್ರಜ್ಞಾನ ನಮಗೆ ಸಿಗುತ್ತಿಲ್ಲ, ಎಲ್ಲವನ್ನೂ ನಾವೇ ಅಭಿವೃದ್ಧಿಗೊಳಿಸುವುದು ಸಮಯ ತೆಗೆದುಕೊಳ್ಳುತ್ತಿದೆ’ ಎಂದು ಎಚ್​ಎಎಲ್ ಹೇಳಿದೆ. ಇದು ವಾಸ್ತವವೂ ಹೌದು. ತೇಜಸ್​ನ ಇಂಜಿನ್​ಗಳನ್ನು ಎಚ್​ಎಎಲ್ ಸ್ವತಃ ತಯಾರಿಸುವುದಿಲ್ಲ. ಅವುಗಳಿಗಾಗಿ ಅಮೆರಿಕದ ಜಿಇ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಅವುಗಳ ಪೂರೈಕೆ ಇನ್ನೂ ಆಗಿಲ್ಲ. ಆದರೆ ಆ ಕಾರಣದಿಂದಾಗಿ ನಮ್ಮ ವಾಯುದಳಕ್ಕೆ ಯುದ್ಧವಿಮಾನಗಳ ಪೂರೈಕೆಯಲ್ಲಿ ಇಷ್ಟು ನಿಧಾನದ ಬೆಳವಣಿಗೆ ದೇಶದ ರಕ್ಷಣೆಯ ದೃಷ್ಟಿಯಿಂದ ಒಳ್ಳೆಯದಲ್ಲ.

ಈಗ ಅತ್ಯಾಧುನಿಕವಾದ ಐದನೆಯ ತಲೆಮಾರಿನ, ಅಂದರೆ ರೆಡಾರ್​ಗಳ ಕಣ್ಣುತಪ್ಪಿಸಿ ಹಾರಬಲ್ಲ, ಎಫ್-35 ಯುದ್ಧವಿಮಾನಗಳನ್ನು ಭಾರತಕ್ಕೆ ನೀಡಲು ಟ್ರಂಪ್ ಮುಂದೆ ಬಂದಿದ್ದಾರೆ. ಇದೇ ಸಮಯದಲ್ಲಿ ತನ್ನ ಐದನೆಯ ತಲೆಮಾರಿನ ಯುದ್ಧವಿಮಾನ ಎಸ್​ಯುು-57 ಅನ್ನು ಭಾರತಕ್ಕೆ ನೀಡಲು ರಷ್ಯಾ ಕೂಡ ಆಸಕ್ತಿ ತೋರಿದೆ. 85-100 ಮಿಲಿಯನ್ ಡಾಲರ್ ಮೌಲ್ಯದ ಎಫ್-35ಗಿಂತಲೂ 35-40 ಮಿಲಿಯನ್ ಡಾಲರ್ ಬೆಲೆಯ ಎಸ್​ಯುು-57 ಮಿತವ್ಯಯಕಾರಿ, ನಿಜ. ಆದರೆ ಅದರ ಸಮರಕ್ಷಮತೆ ಇನ್ನೂ ಪರೀಕ್ಷೆಗೆ ಒಳಪಟ್ಟಿಲ್ಲ. ಜತೆಗೆ ಯೂಕ್ರೇನ್ ಯುದ್ಧದಿಂದಾಗಿ ಅವುಗಳ ತ್ವರಿತ ತಯಾರಿಕೆಯ ಬಗ್ಗೆ ಅನುಮಾನಗಳಿವೆ. ಬದಲಿಗೆ, ಲಾಕ್​ಹೀಡ್ ಮಾರ್ಟೀನ್ ಕಂಪನಿಯ ಸುಮಾರು ಒಂದು ಸಾವಿರ ಎಫ್-35ಗಳನ್ನು ಇಸ್ರೇಲ್​ನಲ್ಲಿ ಬಳಕೆಯಲ್ಲಿವೆ ಮತ್ತು ಅವುಗಳ ಸಮರಕ್ಷಮತೆ ವಿಶ್ವಾಸಾರ್ಹವೆನಿಸಿದೆ. ಅವುಗಳ ತ್ವರಿತ ಪೂರೈಕೆಯೂ ಸಾಧ್ಯವಿದೆ.

ನಮ್ಮಲ್ಲೀಗ ಐದನೆಯ ತಲೆಮಾರಿನ "Advanced Medium Combat Aircraft' (ಎಎಂಸಿಎ) ಅಭಿವೃದ್ಧಿ ಆರಂಭವಾಗಿದ್ದರೂ ಅವುಗಳು ನಮ್ಮ ವಾಯುಪಡೆಯ ಕೈಗೆ ಸಿಗಲು ಕನಿಷ್ಠ ಹತ್ತುವರ್ಷಗಳಾದರೂ ಬೇಕು. ಚೀನಾ ಈಗಾಗಲೇ ಐದನೆಯ ತಲೆಮಾರಿನ ಯುದ್ಧವಿಮಾನಗಳನ್ನು ಹೊಂದಿದೆ ಮತ್ತದನ್ನು ಪಾಕಿಸ್ತಾನಕ್ಕೆ ಕೊಡುವ ಮಾತನ್ನೂ ಆಡಿದೆ. ಹೀಗಾಗಿ ಹೆಚ್ಚು ಕಾಯದೆ ಎಫ್-35 ಯುದ್ಧವಿಮಾನಗಳನ್ನು ಪಡೆದುಕೊಳ್ಳುವುದು ವಿಹಿತ. ಎಫ್-35 ಜತೆಗೆ ಕೃತಕ ಬುದ್ಧಿವಂತಿಕೆಯ ಬಳಕೆ ಹೊಂದಿದ ಡ್ರೋನ್​ಗಳು, ಟ್ಯಾಂಕ್-ನಿರೋಧಕ ಜಾವೆಲೀನ್ ಕ್ಷಿಪಣಿಗಳು, ಮತ್ತು ಸ್ಟೈಕರ್ ಸಮರವಾಹನಗಳನ್ನೂ ಭಾರತಕ್ಕೆ ನೀಡಲು ಟ್ರಂಪ್ ಆಡಳಿತ ಮುಂದೆಬಂದಿದೆ. ಟ್ರಂಪ್​ರ ಈ ಎಲ್ಲ ಉತ್ಸುಕತೆ ಭಾರತಕ್ಕೆ ಅನುಕೂಲ ಒದಗಿಸುವುದಷ್ಟೇ ಅಲ್ಲ.

ಈಗ ವಾರ್ಷಿಕ 129 ಬಿಲಿಯನ್ ಡಾಲರ್ ಇರುವ ದ್ವಿಪಕ್ಷೀಯ ವ್ಯಾಪಾರವನ್ನು ಇನ್ನು ಐದೇ ವರ್ಷಗಳಲ್ಲಿ 500 ಬಿಲಿಯನ್ ಡಾಲರ್​ಗಳಿಗೇರಿಸಲು ಉಭಯ ನೇತಾರರು ತೆಗೆದುಕೊಂಡಿರುವ ನಿರ್ಧಾರ ಯಶಸ್ವಿಯಾಗಬೇಕಾದರೆ ಭಾರತಕ್ಕೆ ಬೃಹತ್ ಪ್ರಮಾಣದಲ್ಲಿ ಯುದ್ಧಸಾಮಗ್ರಿಗಳ ರಫ್ತು ಅತ್ಯಗತ್ಯ ಎಂದು ವ್ಯವಹಾರಸ್ಥ ಟ್ರಂಪ್​ಗೆ ಗೊತ್ತಿದೆ. ಇದರ ಅನುಕೂಲ ಪಡೆದುಕೊಳ್ಳುವ ವಿವೇಕ ಮೋದಿಯವರಲ್ಲಿದೆ. ಇದರಿಂದಾಗಿ ಭಾರತ-ಅಮೆರಿಕ ಸಂಬಂಧಗಳು ಫಾಸ್ಟ್​ಟ್ರಾ್ಯಕ್​ಗೇರುವುದು ಸಹಜವೇ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net