ದುರಂತದಿಂದ ಅಂತ್ಯವಾದ ಪ್ರೇಮ

Love Failure
Published on

AA

aa kshana
ಅಂದು ಸೋಮವಾರ. ಎಂದಿನಂತೆ ಹೊಲಕ್ಕೆ ಹೋಗಲು ತಯಾರಾದ ಸಂತೋಷ್ ತನ್ನ ಒಬ್ಬಳೇ ಮಗಳು 19 ವರ್ಷ ವಯಸ್ಸಿನ ರಾಧಿಕಾಳ ಜತೆ ಉಪಾಹಾರ ಸೇವಿಸಲು ಕಾಯುತ್ತಿದ್ದ. ರಾಧಿಕಾ ಅವರಿದ್ದ ಗ್ರಾಮದಿಂದ 20 ಕಿ.ಮೀ. ದೂರದಲ್ಲಿದ್ದ ಜಿಲ್ಲಾ ಕೇಂದ್ರದ ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿದ್ದಳು. ಎಂಟೂವರೆಯಾದರೂ ಅವಳು ಕೋಣೆಯಿಂದ ಹೊರಗೆ ಬಾರದಿದ್ದಾಗ ಸಂತೋಷ್ ಪತ್ನಿಗೆ ಮಗಳ ರೂಮಿಗೆ ಹೋಗಿ ನೋಡಲು ಸೂಚಿಸಿದ. ಎಷ್ಟೇ ಬಡಿದರೂ ರಾಧಿಕಾ ಬಾಗಿಲನ್ನು ತೆರೆಯಲಿಲ್ಲ. ಆಗ ಸಂತೋಷ್ ಮನೆಯ ಹೊರಗೆ ಹೋಗಿ ಮಗಳ ಕೊಣೆಯ ಮುಚ್ಚಿದ ಕಿಟಕಿ ದೂಡಿದ. ಎದುರಿಗೆ ಕಂಡ ದೃಶ್ಯ ಆಘಾತಕಾರಿ. ರಾಧಿಕಾ ತನ್ನ ದುಪಟ್ಟಾದಿಂದ ಫ್ಯಾನ್​ಗೆ ನೇಣು ಹಾಕಿಕೊಂಡಿದ್ದಳು. ಸಂತೋಷ್ ಓಡಿಹೋಗಿ ರೂಮಿನ ಬಾಗಿಲನ್ನು ಒದ್ದು ತೆರೆದು ಬೇಗಬೇಗನೇ ಮಗಳನ್ನು ಕೆಳಗಿಳಿಸಿದ. ಆದರೆ ರಾಧಿಕಾ ಸತ್ತು ಸಾಕಷ್ಟು ಹೊತ್ತಾಗಿತ್ತು.

ಕೂಡಲೇ ಸಂತೋಷ್ ಪೊಲೀಸ್ ಠಾಣೆಗೆ ದೂರನ್ನಿತ್ತ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ಸಂತೋಷ್​ನ ಮನೆಗೆ ಬಂದು ಶವದ ಮೇಲೆ ಪಂಚನಾಮೆ ಮಾಡಿದರು. ಕುತ್ತಿಗೆ ಸುತ್ತ ಕುಣಿಕೆಯ ಗುರುತಿನ ಹೊರತಾಗಿ ದೇಹದ ಮೇಲೆ ಯಾವುದೇ ಗಾಯವಿರಲಿಲ್ಲ. ರಾಧಿಕಾ ಡೆತ್​ನೋಟ್ ಏನನ್ನಾದರೂ ಇಟ್ಟಿದ್ದಾಳೆಯೇ ಎಂದು ಕೊಣೆಯಲ್ಲಿ ಹುಡುಕಿದಾಗ ಅಂತಹ ಯಾವುದೇ ಕಾಗದ ಸಿಗಲಿಲ್ಲ. ‘ರಾಧಿಕಾಗೆ ಜೀವನದಲ್ಲಿ ಜಿಗುಪ್ಸೆಯಾಗುವಂಥ ಯಾವ ಕಾರಣವೂ ಇರಲಿಲ್ಲ, ಆಕೆ ನಗುನಗುತ್ತಲೇ ಇರುತ್ತಿದ್ದಳು ಹಾಗೂ ಎಲ್ಲರೊಂದಿಗೂ ಹೊಂದಿಕೊಂಡು ಹೋಗುತ್ತಿದ್ದಳು. ಖಿನ್ನತೆಯಂತೂ ಇರಲಿಲ್ಲ. ನಿನ್ನೆ ರಾತ್ರಿಯೂ ನಾರ್ಮಲ್ ಆಗಿದ್ದಳು, ಇದ್ದಕ್ಕಿದ್ದಂತೆ ಏಕೆ ಹೀಗೆ ಮಾಡಿಕೊಂಡಳೆಂದು ತಮಗೆ ತಿಳಿಯದಾಗಿದೆ’ ಎಂದು ಸಂತೋಷ್ ಮತ್ತವನ ಪತ್ನಿ ಪೊಲೀಸರಿಗೆ ಹೇಳಿದರು.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆ ನೇಣು ಹಾಕಿಕೊಂಡು ಸತ್ತಿರುವುದನ್ನು ಖಾತ್ರಿ ಮಾಡಿ ಸಾವು ಸಂಭವಿಸಿ ಹನ್ನೆರಡು ಗಂಟೆಗಳು ಕಳೆದಿರಬಹುದೆಂದು ವರದಿ ಮಾಡಿದರು. ಪೊಲೀಸರು ರಾಧಿಕಾಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. ಆಕೆ ಪ್ರತಿದಿನ ಮನೆಯಿಂದ ಸರ್ಕಾರಿ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಳು. ಅದೇ ಬಸ್ಸಿನಲ್ಲಿ ಅಕ್ಕಪಕ್ಕದ ಗ್ರಾಮಗಳ ಹಲವಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ಪ್ರತಿನಿತ್ಯ ಪ್ರಯಾಣ ಮಾಡುತ್ತಿದ್ದರು. ಅವರಲ್ಲಿ ಕೆಲವರು ತನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ಶೇಖರ್ ಎನ್ನುವವನೊಡನೆ ರಾಧಿಕಾ ಹೆಚ್ಚಿನ ಗೆಳೆತನ ಬೆಳೆಸಿದ್ದಳೆಂದು ತಿಳಿಸಿದರು.

ರಾಧಿಕಾಗಿಂತ ಒಂದು ವರ್ಷ ಹಿರಿಯನಾಗಿದ್ದ ಶೇಖರ್ ಮೂರನೇ ವರ್ಷದ ಬಿ.ಕಾಂ. ಓದುತ್ತಿದ್ದ. ಪೊಲೀಸರು ಕಾಲೇಜಿಗೆ ಹೋಗಿ ವಿಚಾರಿಸಿದಾಗ ಶೇಖರ್ ಆ ದಿನ ಕಾಲೇಜಿಗೆ ಬಂದಿರಲಿಲ್ಲ. ಏತನ್ಮಧ್ಯೆ ರಾಧಿಕಾಳ ಕಾಲೇಜಿಗೆ ಒಂದು ಕಿ.ಮೀ. ದೂರದಲ್ಲಿದ್ದ ರೈಲ್ವೆ ಹಳಿಗಳ ಮೇಲೆ ಯುವಕನೊಬ್ಬ ಓಡುತ್ತಿದ್ದ ರೈಲಿಗೆ ತಲೆಯೊಡ್ಡಿ ಸತ್ತನೆಂಬ ಮಾಹಿತಿ ರೈಲ್ವೆ ಪೊಲೀಸರಿಗೆ ಬಂದಿತು. ಅವರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋದರು. ಮೃತ ಯುವಕನು 20 ವರ್ಷ ವಯಸ್ಸಿನವನಾಗಿದ್ದ. ಆತನ ಪ್ಯಾಂಟ್ ಜೇಬಿನಲ್ಲಿ ಕಾಲೇಜಿನ ಗುರುತಿನ ಚೀಟಿ ಇತ್ತು. ಅದರಲ್ಲಿ ಆತನ ಹೆಸರು ಶೇಖರ್ ಎಂದು ನಮೂದಿಸಿತ್ತು. ಇದಲ್ಲದೆ ಜೇಬಿನಲ್ಲಿ ಒಂದು ಕಾಗದವಿತ್ತು. ಅದರಲ್ಲಿ ಹೀಗೆ ಬರೆದಿತ್ತು:

‘ನಾನು ಮತ್ತು ನನ್ನ ಕಾಲೇಜಿನ ರಾಧಿಕಾ ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಮನಸಾರೆ ಪ್ರೀತಿಸುತ್ತಿದ್ದೆವು. ನಾವಿಬ್ಬರೂ ಬೇರೆ ಬೇರೆ ಜಾತಿಗಳಿಗೆ ಸೇರಿದ್ದೆವು. ನನಗೆ ನೌಕರಿ ಸಿಕ್ಕ ನಂತರ ನಾವಿಬ್ಬರೂ ಓಡಿಹೋಗಿ ಮದುವೆಯಾಗಬೇಕೆಂದು ತೀರ್ವನಿಸಿದ್ದೆವು. ಆದರೆ ಈ ಬಗ್ಗೆ ನಾವು ನಮ್ಮ ಹಿರಿಯರೊಂದಿಗೆ ರ್ಚಚಿಸಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ರಾಧಿಕಾ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕೇಳಿ ನನಗೆ ತಡೆಯಲಾರದ ದುಃಖವಾಯಿತು. ಅವಳಿಲ್ಲದೆ ನಾನು ಬದುಕಿದ್ದು ಏನು ಪ್ರಯೋಜನ ಎಂದೆನಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾವಿಬ್ಬರೂ ಈ ಜೀವನದಲ್ಲಿ ಒಂದಾಗದಿದ್ದರೂ ಪರಲೋಕದಲ್ಲಿ ಒಂದಾಗುತ್ತೇವೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’-ಶೇಖರ್.

ಶೇಖರ್ ಹಾಗೂ ರಾಧಿಕಾಳ ಮನೆಯವರನ್ನು ಯುವ ಪ್ರೇಮಿಗಳ ಪ್ರೇಮದ ಬಗ್ಗೆ ವಿಚಾರಿಸಿದಾಗ ಅವರೆಲ್ಲರೂ ತಮಗೇನೂ ಈ ಬಗ್ಗೆ ತಿಳಿದಿಲ್ಲವೆಂದರು. ಎರಡೂ ಪ್ರಕರಣಗಳು ಬೇರೆ ಬೇರೆ ಠಾಣೆಗಳಲ್ಲಿ ನಡೆದಿದ್ದರಿಂದ, ಎರಡರ ತನಿಖೆಗಳೂ ಬೇರೆ ಬೇರೆಯಾಗಿಯೇ ಮುಂದುವರಿದವು. ಏತನ್ಮಧ್ಯೆ ಆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಮಾರಂಭವೊಂದರಲ್ಲಿ ಭಾಗವಹಿಸಲು ರಾಧಿಕಾ ಮತ್ತು ಶೇಖರ್ ಓದುತ್ತಿದ್ದ ಕಾಲೇಜಿಗೆ ಹೋದರು. ಆಗ ಅವರಿಗೆ ಇಬ್ಬರು ವಿದ್ಯಾರ್ಥಿಗಳ ಸಂಭಾಷಣೆ ಕೇಳಿಸಿತು. ‘ಪಾಪ, ತಮ್ಮ ಖಾಸಗಿ ವಿಡಿಯೋ ವೈರಲ್ ಮಾಡಿಕೊಂಡು ಇಬ್ಬರೂ ಪ್ರಾಣ ಕಳೆದುಕೊಂಡರು’ ಎಂದು ಆ ವಿದ್ಯಾರ್ಥಿಗಳು ಹೇಳಿದರು. ಇದನ್ನು ಕೇಳಿದ ಅಧಿಕಾರಿ ಆ ವಿದ್ಯಾರ್ಥಿಗಳ ಬಳಿಗೆ ಹೋಗಿ ಏನಾಯಿತೆಂದು ವಿಚಾರಿಸಿದಾಗ ಅವರಿಬ್ಬರೂ ಹಿಂಜರಿದರು. ಕಡೆಗೆ ಅವರನ್ನು ಪುಸಲಾಯಿಸಿ ಮಾಹಿತಿ ತೆಗೆದಾಗ ತಿಳಿದುಬಂದದ್ದೇನೆಂದರೆ ರಾಧಿಕಾ ಮತ್ತು ಶೇಖರ್ ಪರಸ್ಪರ ಪ್ರೀತಿಸುತ್ತಿದ್ದು ಹಲವಾರು ದಿನಗಳು ತರಗತಿಗಳನ್ನು ಬಂಕ್ ಮಾಡಿ ಸಿನಿಮಾ, ರೆಸ್ಟೋರೆಂಟ್​ಗೆ ಹೋಗಿ ಸಮಯ ಕಳೆಯುತ್ತಿದ್ದರು. ಆದರೆ ಇಬ್ಬರೂ ತಮ್ಮ ಪಾಠಗಳನ್ನು ಚೆನ್ನಾಗಿ ಓದುತ್ತಿದ್ದು ಟೆಸ್ಟ್​ಗಳು ಹಾಗೂ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತಿದ್ದುದರಿಂದ ಅವರಿಬ್ಬರ ಮೇಲೆ ಶಿಕ್ಷಕರು ದೂರು ನೀಡಿರಲಿಲ್ಲ. ಸುಮಾರು ಒಂದು ತಿಂಗಳ ಹಿಂದೆ ಅವರಿಬ್ಬರ ಖಾಸಗಿ ವಿಡಿಯೋ ವೈರಲ್ ಆದ ಕಾರಣಕ್ಕೆ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು.

ಅಲ್ಲಿಂದಲೇ ಆ ಹಿರಿಯ ಅಧಿಕಾರಿ ಪ್ರಕರಣದ ತನಿಖಾಧಿಕಾರಿಯನ್ನು ಸ್ಥಳಕ್ಕೆ ಕರೆಸಿ ಆ ಇಬ್ಬರೂ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಲು ಸೂಚಿಸಿದರು. ತನಿಖಾಧಿಕಾರಿ ವೈರಲ್ ಆದ ವಿಡಿಯೋದಲ್ಲಿ ಏನಿತ್ತು ಎಂದು ಅವರಿಬ್ಬರನ್ನೂ ಕೇಳಿದಾಗ ಮೃತ ಯುವ ಜೋಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದುದನ್ನು ಅದರಲ್ಲಿ ಚಿತ್ರಿಸಲಾಗಿತ್ತು ಎಂಬ ಉತ್ತರ ಬಂದಿತು. ‘ಆ ವಿಡಿಯೋದ ಕ್ಲಿಪಿಂಗ್ ನಿಮ್ಮ ಬಳಿ ಇದೆಯೇ?’ ಎಂದು ಕೇಳಿದಾಗ ಅವರಿಬ್ಬರೂ ಇಲ್ಲವೆಂದರು. ಕಡೆಗೆ ತನಿಖಾಧಿಕಾರಿಗೆ ಒಬ್ಬ ವಿದ್ಯಾರ್ಥಿಯ ಮೊಬೈಲ್ ಫೋನಿನಲ್ಲಿ ಆ ವಿಡಿಯೋ ಸಿಕ್ಕಿತು. ಅದು ಅವನಿಗೆ ವಾಟ್ಸ್​ಆಪ್ ಗುಂಪೊಂದರಿಂದ ಫಾರ್ವರ್ಡ್ ಆಗಿತ್ತು. ಅದು ಮೂರು ನಿಮಿಷಗಳ ವಿಡಿಯೋ ಕ್ಲಿಪ್ ಆಗಿದ್ದು ಅದರಲ್ಲಿ ಮೃತ ಯುವಕ ಮತ್ತು ಯುವತಿ ಯಾವುದೋ ಕಟ್ಟಡದ ತಾರಸಿಯ ಮೇಲೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ದೃಶ್ಯಗಳಿದ್ದವು.

ಆ ವಿಡಿಯೋವನ್ನು ಯಾರು ತೆಗೆದರು? ಯಾವಾಗ ತೆಗೆದರು ಎನ್ನುವ ಬಗ್ಗೆ ಪೊಲೀಸರು ಫಾರೆನ್ಸಿಕ್ ತನಿಖೆ ಆರಂಭಿಸಿದರು. ವಿಡಿಯೋವನ್ನು ತೆಗೆದು 25 ದಿನಗಳಾಗಿದ್ದು, ಅದನ್ನು 300 ಜನರು ನೋಡಿದ್ದರು ಎಂದು ತಿಳಿಯಿತು. ಆ ಎಲ್ಲ ಮೊಬೈಲ್ ಫೋನ್​ಗಳ ಮಾಲೀಕರನ್ನು ಪತ್ತೆಮಾಡಿ ಕಡೆಗೂ ಆರಂಭದಲ್ಲಿ ಯಾವ ಫೋನಿನಿಂದ ವಿಡಿಯೋ ಕಳಿಸಲಾಯಿತು ಎಂದು ಪತ್ತೆ ಮಾಡಲಾಯಿತು.ಆ ವಿಡಿಯೋ ಚಿತ್ರೀಕರಣ ಮಾಡಿದವನು ಅದೇ ಕಾಲೇಜಿನಲ್ಲಿದ್ದ ಒಬ್ಬ ಅಟೆಂಡರ್ ಎಂದು ತಿಳಿದ ಕೂಡಲೇ ಅವನನ್ನು ಪೊಲೀಸ್ ಠಾಣೆಗೆ ಕರೆಸಿ ಕೂಲಂಕಶವಾಗಿ ವಿಚಾರಣೆ ಮಾಡಿದಾಗ ಆತ ಹೀಗೆಂದ:

‘ಕೆಲ ದಿನಗಳ ಹಿಂದೆ ಹಳೆಯ ಕಡತಗಳನ್ನು ತಾರಸಿಯ ಮೇಲಿರುವ ರೆಕಾರ್ಡ್ ಕೋಣೆಯಲ್ಲಿಡಲು ನನಗೆ ನಮ್ಮ ಪ್ರಾಂಶುಪಾಲರು ಆದೇಶಿಸಿದ ಮೇರೆಗೆ ನಾನು ಕಾಲೇಜಿನ ತಾರಸಿಗೆ ಹೋದೆ. ಆಗ ಸಮಯ ಮಧ್ಯಾಹ್ನ ಹನ್ನೆರಡೂವರೆಯಾಗಿತ್ತು. ತಾರಸಿಯ ಒಂದು ಮೂಲೆಯಲ್ಲಿ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿತ್ತು. ಅದನ್ನು ನೋಡಿದ ಕೂಡಲೇ ಉದ್ರೇಕಗೊಂಡ ನಾನು ಮೊಬೈಲ್ ಫೋನನ್ನು ಹೊರತೆಗೆದು ಅವರಿಬ್ಬರು ಮಾಡುತ್ತಿದ್ದುದನ್ನು ಅವರಿಗೆ ತಿಳಿಯದಂತೆ ರೆಕಾರ್ಡ್ ಮಾಡಿಕೊಂಡೆ. ಅವರಿಬ್ಬರೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಆಗಿದ್ದರು. ಆನಂತರ ಆ ವಿಡಿಯೋವನ್ನು ನನ್ನ ಕೆಲವು ಸ್ನೇಹಿತರಿಗೆ ಮತ್ತು ವಿದ್ಯಾರ್ಥಿಗಳಿಗೆ ತೋರಿಸಿದೆ. ಅವರದನ್ನು ತಮ್ಮ ಮೊಬೈಲ್​ಗಳಿಗೆ ವಾಟ್ಸ್​ಆಪ್ ಮೂಲಕ ಕಳಿಸಲು ಕೋರಿದಂತೆ ನಾನು ಕಳಿಸಿದೆ. ಸುಮಾರು ದಿನಗಳ ನಂತರ ಆ ವಿಡಿಯೋ ವೈರಲ್ ಆಯಿತು’.

ಒಬ್ಬರ ಖಾಸಗಿ ಕ್ಷಣಗಳನ್ನು ಅವರಿಗೆ ಅರಿವಿಲ್ಲದಂತೆಯೇ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುವುದು ಮಾಹಿತಿ-ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾದ ಕಾರಣ ಪೊಲೀಸರು ಅವನನ್ನು ಬಂಧಿಸಿದರು. ಆತ್ಮಹತ್ಯೆಗೆ ಪ್ರಚೋದಿಸಿದ ಅಪರಾಧವನ್ನೂ ಆ ಪ್ರಕರಣಕ್ಕೆ ಜೋಡಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಮಾಡಿದರು. ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ.

ಹದಿಹರಯದ ಯುವಕ-ಯುವತಿಯರು ಯೌವ್ವನದ ಹುರುಪಿನಲ್ಲಿ ಸಾರ್ವಜನಿಕರಿಗೆ ಪ್ರವೇಶವಿರುವ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರ ಅಪಾಯವನ್ನು ಅರಿಯಬೇಕಲ್ಲದೆ ಖಾಸಗಿ ಕ್ಷಣಗಳ ವಿಡಿಯೋ ಮಾಡುವ ಚಾಳಿಯ ಅಪಾಯವನ್ನೂ ಮನಗಾಣಬೇಕಾಗಿದೆ. 17ನೇ ಶತಮಾನದಲ್ಲಿಯೇ ಫ್ರೆಂಚ್ ಕಾದಂಬರಿಕಾರ ಫ್ರಾಂಕ್ವಾ ಡೆ ಲಾ ರಾಕ್ ಫೌಕಾಲ್ಡ್ ಹೇಳಿದ ಮಾತುಗಳು ನೆನಪಿನಲ್ಲಿರಲಿ: ‘ಕಾಮೋದ್ರೇಕವು ಅತಿ ಬುದ್ಧಿವಂತರನ್ನೂ ಅವಿವೇಕಿಗಳನ್ನಾಗಿ ಮಾಡುತ್ತದೆ’. ಈ ಅವಿವೇಕವೇ ಎರಡು ಯುವ ಜೀವಗಳ ಅಕಾಲಿಕ ಮರಣಕ್ಕೆ ಕಾರಣವಾದದ್ದು ದುರದೃಷ್ಟಕರ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net