ಮನೋಲ್ಲಾಸ: ಹಾಸ್ಯಪ್ರಜ್ಞೆ ಉತ್ತಮ ವಿಧಾನ

Joker Symbolic image
Published on

| ದೀಪಶ್ರೀ ಎಸ್. ಕೂಡ್ಲಿಗಿ

ಸಿಗ್ನೋರ್ ಎಂಬ ವ್ಯಾಪಾರಿ ಹಲವು ವರ್ಷಗಳ ಹಿಂದೆ ಇಟಲಿಯಲ್ಲಿ ವಾಸ ಮಾಡುತ್ತಿದ್ದ. ಅವನಿಗೆ ಜೀವನದಲ್ಲಿ ಒಮ್ಮೆಯಾದರೂ ಕೊಕ್ಕರೆ ಮಾಂಸವನ್ನು ತಿನ್ನುವ ಆಸೆ ಇತ್ತು. ಮನೆಗೆ ಅತಿಥಿಗಳು ಆಗಮಿಸಿದ ಸಮಯವನ್ನು ಕಂಡು ಊರಿನ ಸಮೀಪವಿದ್ದ ಕೆರೆಗೆ ತೆರಳಿ ಉತ್ತಮವಾದ ಕೊಕ್ಕರೆಯನ್ನು ಹುಡುಕಿ ಮನೆಗೆ ತಂದ. ಅಡುಗೆಯವನ ಕೈಗೆ ಕೊಕ್ಕರೆ ಕೊಟ್ಟು, ಅತಿಥಿಗಳು ಶಹಭಾಷ್ ಎನ್ನುವ ಹಾಗೆ ಅಡುಗೆ ಮಾಡು ಎಂದು ಆಜ್ಞಾಪಿಸಿದನು. ಅಡುಗೆಯವನು ಸರಿಯೆಂದು, ಕೊಕ್ಕರೆಯನ್ನು ಅಡುಗೆ ಮನೆಗೆ ತೆಗೆದುಕೊಂಡು ಹೊರಟ. ಸ್ವಲ್ಪ ಹೊತ್ತಿನ ನಂತರ ಕೊಕ್ಕರೆಯ ಸ್ವಾದಿಷ್ಟ ಅಡುಗೆ ತಯಾರಾಯಿತು. ಅದೇ ಸಮಯದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಸುಂದರ ತರುಣಿ ಮಾಂಸದ ಸುವಾಸನೆಗೆ ಆಕರ್ಷಿತಳಾದಳು. ಈ ಮಾಂಸದ ಅಡುಗೆಯನ್ನು ತನಗೆ ಕೊಡುವಂತೆ ಕೇಳಿದಳು. ಅಡುಗೆಯವ ನಿರಾಕರಿಸಿದಾಗ, ಆಕೆ ಕೊಕ್ಕರೆಯ ಒಂದು ಕಾಲನ್ನು ಕೊಡು ಎಂದು ಕೇಳಿಕೊಂಡಳು. ಅವಳ ವಿನಂತಿಗೆ ಅಡುಗೆಯವ ಸಮ್ಮತಿಸಿದ.

ರಾತ್ರಿ ಸಿಗ್ನೋರ್ ಊಟಕ್ಕೆ ಕುಳಿತಾಗ ಕೊಕ್ಕರೆಯ ಒಂದೇ ಕಾಲು ಇರುವುದು ಕಂಡು ಅಡುಗೆಯವನನ್ನು ಕರೆದು ಪ್ರಶ್ನಿಸಿದ. ‘ಇಲ್ಲ ಸರ್, ಕೊಕ್ಕರೆಗೆ ಒಂದೇ ಕಾಲಿತ್ತು’ ಎಂದ ಅಡುಗೆಯವ. ‘ನಾನೇನು ಮೂರ್ಖನೆಂದು ತಿಳಿದಿರುವೆಯಾ’ ಎಂದು ಕುಪಿತನಾದ ಸಿಗ್ನೋರ್. ಇಬ್ಬರ ವಾದ ತಾರಕಕ್ಕೇರಿತು. ಅತಿಥಿಗಳ ಮುಂದೆ ವಾಗ್ವಾದ ಸರಿಯಲ್ಲ ಎಂದು ತಿಳಿದು ಸಿಗ್ಮೋರ, ‘ನಾಳೆ ನನಗೆ ಒಂದು ಕಾಲಿನ ಕೊಕ್ಕರೆಯನ್ನು ತೋರಿಸು’ ಎಂದು ಊಟ ಮಾಡಿದ. ಬೆಳಗ್ಗೆ ಅಡುಗೆಯವನೊಂದಿಗೆ ಸಿಗ್ನೋರ್ ಒಂಟಿ ಕಾಲಿನ ಕೊಕ್ಕರೆಯನ್ನು ಕಾಣಲು ಹೊರಟ. ಇವರ ಜೊತೆಗೆ ಒಬ್ಬ ಅತಿಥಿಯೂ ಹೊರಟ. ಮೂವರೂ ಕೆರೆಯ ಬಳಿ ಬಂದಾಗ ಕೊಕ್ಕರೆಗಳು ಒಂದೇ ಕಾಲಿನಲ್ಲಿ ನಿಂತಿರುವುದನ್ನು ಕಂಡು ಅಡುಗೆಯವನಿಗೆ ಖುಷಿಯಾಯಿತು.

‘ನೋಡಿ ಸರ್, ಅಲ್ಲಿ ನಾ ಹೇಳಿದ್ದೆ ಸತ್ಯ. ಕೊಕ್ಕರೆಗಳಿಗೆ ಒಂದೇ ಕಾಲು’ ಎಂದು ಹೇಳಿದ. ಸಿಗ್ನೋರ್ ಜೋರಾಗಿ ಚಪ್ಪಾಳೆ ತಟ್ಟಿದ ಮರುಕ್ಷಣವೇ ಎಲ್ಲಾ ಕೊಕ್ಕರೆಗಳು ಮಡಚಿದ್ದ ಮತ್ತೊಂದು ಕಾಲನ್ನು ಹೊರತೆಗೆದು ಹಾರಿದವು. ‘ನೋಡಿದೆಯಾ ಮೂರ್ಖ! ಕೊಕ್ಕರೆಗೆ ಎರಡು ಕಾಲು’ ಎಂದ. ‘ಆದರೆ, ನೀವು ನಿನ್ನೆ ಊಟಕ್ಕೆ ಕುಳಿತಾಗ ಜೋರಾಗಿ ಚಪ್ಪಾಳೆ ತಟ್ಟಿದರೆ ಕೊಕ್ಕರೆ ಮತ್ತೊಂದು ಕಾಲು ಕಾಣುತ್ತಿತ್ತು’ ಎಂದು ಅಡುಗೆಯ ಹೇಳಿ, ನಡೆದ ಸತ್ಯವನ್ನು ತಿಳಿಸಿದಾಗ ಎಲ್ಲರೂ ನಗೆಗಡಲಲ್ಲಿ ತೇಲಿದರು. ಈ ರೀತಿ ಜಗಳಕ್ಕೆ ಮಾಡಿಕೊಡಬಹುದಾದ ಘಟನೆಯು ಹಾಸ್ಯಪ್ರಜ್ಞೆಯ ಮೂಲಕ ತಿಳಿಯಾಯಿತು. ಪರಿಹಾಸ್ಯ, ಅಪಹಾಸ್ಯಕ್ಕೆ ದಾರಿ ಮಾಡಿಕೊಡದೆ, ಸಂದರ್ಭದ ಅಗತ್ಯಕ್ಕೆ ತಕ್ಕಂತೆ ಹಾಸ್ಯಪ್ರಜ್ಞೆಯನ್ನು ಮಾತಿನ ಧಾಟಿಯ ಮೂಲಕ ಮೆರೆಯಬೇಕು. ವಾದ-ಪ್ರತಿವಾದ ನಡೆದು ಜಗಳಕ್ಕೆ ದಾರಿ ಮಾಡಿಕೊಡುವುದನ್ನು ತಪ್ಪಿಸಲು ಹಾಸ್ಯಪ್ರಜ್ಞೆ ಉತ್ತಮ ವಿಧಾನವಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net