ಇಲ್ಲಿ ಒಪ್ಪಂದ, ಅಲ್ಲಿ ದಾಳಿ, ಶ್ವೇತಭವನದಲ್ಲಿ ಪ್ರಶ್ನೆ!

White House
Published on
ಜಗದಗಲ
ಲಡಾಖ್​ನಲ್ಲಿನ ವಾಸ್ತವ ಹತೋಟಿ ರೇಖೆಯಲ್ಲಿ ನಾಲ್ಕೂವರೆ ವರ್ಷಗಳಿಂದ ಇರುವ ಉದ್ರಿಕ್ತ ಸ್ಥಿತಿಯನ್ನು ಶಮನಗೊಳಿಸಲು ಅಕ್ಟೋಬರ್ 21ರಂದು ಭಾರತ ಮತ್ತು ಚೀನಾಗಳ ನಡುವೆ ಆದ ಒಪ್ಪಂದ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮಹತ್ವದ ಬೆಳವಣಿಗೆ. ಹಾಗಂತ ಇದೇನೂ ಉಭಯ ದೇಶಗಳ ನಡುವೆ ಸರಿಸುಮಾರು ಏಳು ದಶಕಗಳಿಂದಲೂ ನಡೆದುಕೊಂಡು ಬಂದಿರುವ ಗಡಿ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಬಿಡುವುದಿಲ್ಲ, 4,388 ಕಿಲೋಮೀಟರ್ ಉದ್ದದ ಗಡಿಯಲ್ಲಿ ಶಾಂತಿಯನ್ನು ಸ್ಥಾಪಿಸುವುದಿಲ್ಲ ಮತ್ತು ನಮ್ಮಚಾಚಾ ನೆಹರು ಹೇಳುತ್ತಿದ್ದಂತೆ ‘ಹಿಂದಿ ಚೀನಿ ಭಾಯಿ ಭಾಯಿ’ ಎಂದು ನಾವೂ ಹೇಳಿಕೊಂಡು ಕುಣಿಯಬೇಕಾಗಿಲ್ಲ. ಈ ಒಪ್ಪಂದ ದಾರಿ ಮಾಡಿಕೊಡುವುದು ನಮ್ಮ ಹತೋಟಿಯ ಲಡಾಖ್ ಮತ್ತು ಚೀನೀ ಹತೋಟಿಯ ಅಕ್ಸಾಯ್ ಚಿನ್ ನಡುವಿನ ವಾಸ್ತವ ಹತೋಟಿ ರೇಖೆಯಲ್ಲಿ ಏಪ್ರಿಲ್ 2020ರಲ್ಲಿ ಇದ್ದ ಸ್ಥಿತಿಗೆ ಹಿಂತಿರುಗುವುದು. ಹಾಗಿದ್ದರೆ ನಾಲ್ಕೂವರೆ ವರ್ಷಗಳ ಹಿಂದೆ ಆದದ್ದೇನು?

ಕೋವಿಡ್ ಸಂಕಟದಲ್ಲಿದ್ದ ಭಾರತದಿಂದ ‘ಇನ್ನಷ್ಟು’ ನೆಲವನ್ನು ಕಿತ್ತುಕೊಳ್ಳುವ ಸಂಚನ್ನು ಚೀನಾ 2020ರ ಮೇ ತಿಂಗಳ ಮೊದಲವಾರದಲ್ಲಿ ಆರಂಭಿಸಿತು. ಪೂರ್ವ ಲಡಾಖ್​ನಲ್ಲಿ ತನ್ನ ಸೇನಾ ಸ್ಥಿತಿಯನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಭಾರತ ಆಗಷ್ಟೇ ನಿರ್ವಿುಸಿದ್ದ 252 ಕಿಲೋಮೀಟರ್ ಉದ್ದದ ‘ದರ್ಪಕ್-ಶ್ಯೋಕ್-ದೌಲತ್ ಬೇಗ್ ಓಲ್ದಿ ರಸ್ತೆ’ (ಡಿಎಸ್​ಡಿಬಿಓ ರಸ್ತೆ) ಚೀನೀ ಕಣ್ಣಿಗೆ ಕಿಸುರಾಗಿದ್ದ ದಿನಗಳು ಅವು. ಅಂತಹ ರಸ್ತೆಗಳನ್ನು ಭಾರತ ನಿರ್ವಿುಸಬಾರದು ಎನ್ನುವ ಒತ್ತಡವನ್ನು 2004-14ರ ಅವಧಿಯಲ್ಲಿ ಯುಪಿಎ ಸರ್ಕಾರದ ಮೇಲೆ ಚೀನಾ ಹೇರಿತು ಮತ್ತು ಭಾರತ ಸರ್ಕಾರ ಅದಕ್ಕೆ ತಲೆಬಾಗಿತ್ತು. ‘ಅಂತಹ ರಸ್ತೆಗಳನ್ನು ನಾವು ನಿರ್ವಿುಸಹೊರಟರೆ ಚೀನಾವನ್ನು ಕೆರಳಿಸಿದಂತಾಗುತ್ತದೆ, ಹಾಗಾಗುವುದು ಬೇಡ’ ಎಂದು ಆಗಿನ ರಕ್ಷಣಾ ಮಂತ್ರಿ ಎ.ಕೆ.ಆಂಟನಿ ಲೋಕಸಭೆಯಲ್ಲೇ ಹೇಳಿದ್ದರು. ನಂತರ ಬಂದ ಎನ್​ಡಿಎ ಸರ್ಕಾರ ಆ ನೀತಿಯನ್ನು ಬದಲಿಸಿ, ಚೀನೀ ಒತ್ತಡಕ್ಕೆ ಸೊಪ್ಪುಹಾಕದೆ ರಸ್ತೆ ನಿರ್ವಣಕ್ಕೆ ತೊಡಗಿತು. ಗಡಿ ಸಂರಕ್ಷಣೆಗೆ ಅಗತ್ಯವೆಂದು ಸೇನೆ ಹೇಳುವ ರಸ್ತೆಗಳ ನಿರ್ವಣಕ್ಕೆ ತೊಡಗಿ, ‘ಅದಕ್ಕಾಗಿ ಸರ್ಕಾರದ ಅನುಮತಿಗಾಗಿ ಕಾಯಬೇಡಿ, ಖರ್ಚೆಷ್ಟು ಎಂದು ಹೇಳಿ ಸಾಕು’ ಎಂದು ಮೋದಿ ಸರ್ಕಾರ ‘ಬಾರ್ಡರ್ ರೋಡ್ಸ್ ಆರ್ಗನೈಜೇೕಷನ್’ (ಬಿಆರ್​ಓ) ಸಂಸ್ಥೆಗೆ ಹೇಳಿದ್ದು ಗಡಿರಕ್ಷಣೆಯ ವಿಷಯದಲ್ಲೊಂದು ಅಭೂತಪೂರ್ವ ಬೆಳವಣಿಗೆ. ಅದರಂತೆ ಸಿದ್ಧವಾದ ರಸ್ತೆಯನ್ನು ಭಾರತಕ್ಕೆ ನಿರುಪಯುಕ್ತಗೊಳಿಸುವ ಉದ್ದೇಶದಿಂದ ಗಲ್ವಾನ್ ನದಿಯ ಮೇಲೆ ಬಿಆರ್​ಓ ನಿರ್ವಿುಸಿದ್ದ ಸೇತುವೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು, ಅದಾಗದಿದ್ದರೆ ಹಾಳುಮಾಡಲು ಚೀನೀ ಸೇನೆ ಹಂಚಿಕೆ ಹಾಕಿತು. ಅದರ ತಯಾರಿಯಾಗಿ ಚೀನೀಯರು ಹತೋಟಿ ರೇಖೆಯ ಉತ್ತರದ ದೆಪ್​ಸಾಂಗ್, ದಕ್ಷಿಣದ ದೆಮ್ೊಕ್ ಮತ್ತವುಗಳ ನಡುವಿನ ಗಗ್ರಾ ಹಾಟ್​ಸ್ಪ್ರಿಂಗ್ಸ್ ಮತ್ತು ಪಂಗೊಂಗ್ ತ್ಸೊ ಸರೋವರದ ತಟದಲ್ಲಿ ಅತಿಕ್ರಮಣವೆಸಗಿದರು. ಚೀನೀ ಸೇನೆ ಜೂನ್ 15ರ ಸಂಜೆ ಗಲ್ವಾನ್ ಮೇಲೆ ಅತಿಕ್ರಮಣವೆಸಗಿತು. ಆಗ ನಡೆದ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಯೋಧರು ಮತ್ತು 42ರಿಂದ 55ರಷ್ಟು ಚೀನೀ ಸೈನಿಕರು ಮರಣಹೊಂದಿದರು. (ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಮಾಜಿ ಚೀನೀ ಸೇನಾಧಿಕಾರಿಯೊಬ್ಬರು ಹೇಳುವ ಪ್ರಕಾರ ಹತರಾದ ಚೀನಿ ಸೈನಿಕರ ಸಂಖ್ಯೆ 108!) ಚೀನಿ ಸೇನೆಗೆ, ಚೀನೀ ಕಮ್ಯೂನಿಸ್ಟ್ ಸರ್ಕಾರದ ಹಮ್ಮಿಗೆ 1979ರಲ್ಲಿ ವಿಯಟ್ನಾಮೀಯರಿಂದ ಬಿದ್ದ ಬರೆಯ ನಂತರ ಜಾಗತಿಕವಾಗಿ ಬಿದ್ದ ಅತಿ ದೊಡ್ಡ ಹೊಡೆತ ಇದು. ಪ್ರತೀಕಾರ ಕ್ರಮವಾಗಿ ಚೀನಾ ಮತ್ತು ಪಾಕಿಸ್ತಾನಗಳೆರಡೂ ಒಟ್ಟುಗೂಡಿ ಕಾರಾಕೊರಂ ಕಣಿವೆಯನ್ನು ಭಾರತದಿಂದ ಬೇರ್ಪಡಿಸಲು ಅದೇ ತಿಂಗಳ ಅಂತ್ಯದಲ್ಲಿ ಸಂಚುಹೂಡಿದವು. ಅದು ವಿಫಲಗೊಂಡದ್ದು ಅಮೆರಿಕದ ಅಂದಿನ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ನೀಡಿದ ಎಚ್ಚರಿಕೆಯಿಂದ. ಪಾಕಿಸ್ತಾನ ಓಡಿಹೋದರೆ, ಚೀನಾ ಮೌನಕ್ಕೆ ಶರಣಾಯಿತು.

ಅಲ್ಲಿಂದೀಚೆಗೆ ಎರಡೂ ದೇಶಗಳ ಮಧ್ಯಮ ಮಟ್ಟದ ಸೇನಾಧಿಕಾರಿಗಳು ಮತ್ತು ರಾಜತಂತ್ರಜ್ಞರು ಮತ್ತೆಮತ್ತೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ, ಸಮಸ್ಯೆಯ ಶಮನಕ್ಕೆ ತೆಗೆದುಕೊಳ್ಳಲಾದ ಎಲ್ಲ ಕ್ರಮಗಳನ್ನೂ ಚೀನಾ ಉಲ್ಲಂಘಿಸಿದೆ, ತಾನು ಕೊಟ್ಟ ಪ್ರತಿಯೊಂದು ವಾಗ್ದಾನವನ್ನೂ ಗಾಳಿಗೆ ತೂರಿದೆ. ಆ ಪ್ರಕಾರ ಸಮಸ್ಯೆಯ ಶಾಂತಿಯುತ ಪರಿಹಾರಕ್ಕೆ ತಾನು ತಯಾರಿಲ್ಲ ಎಂದು ಮತ್ತೆಮತ್ತೆ ಸಾರಿದೆ. ಅಂತಹ ಚೀನಾ ಈಗ ಒಪ್ಪಂದಕ್ಕೆ ಬರಲು ಕಾರಣವೇನು?

ತನ್ನ ಆರ್ಥಿಕ ಕೊರಳನ್ನು ಹಿಚುಕುತ್ತಿದ್ದ ಡೊನಾಲ್ಡ್ ಟ್ರಂಪ್ ಬದಲಿಗೆ ಜೋ ಬೈಡೆನ್ ಅಮೆರಿಕದ ಅಧ್ಯಕ್ಷರಾದದ್ದು ತನಗೆ ವರದಾನ ಎಂದು ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್ ತಿಳಿದದ್ದು 2021ರ ಮೊದಲರ್ಧ ಭಾಗದಲ್ಲಿ ಚೀನೀ ಉದ್ಧಟತನವನ್ನು ಉತ್ತೇಜಿಸಿತು. ಇದರಿಂದ ತೊಂದರೆ ಹೆಚ್ಚಿದ್ದು ಭಾರತ, ತೈವಾನ್ ಮತ್ತು ಫಿಲಿಪ್ಪೀನ್ಸ್​ಗಳಿಗೆ. ಆದರೆ ಅದೇ ವರ್ಷದ ಸೆಪ್ಟೆಂಬರ್ 15ರಂದು ಜಿನ್​ಪಿಂಗ್​ರಿಗೆ ಎರಡು ಹೊಡೆತಗಳು ಬಿದ್ದವು. ಅಂದು ಬಿಜಿಂಗ್​ನಲ್ಲಿ ಅವರ ಮೇಲೆ ಹತ್ಯೆಯ ಪ್ರಯತ್ನ ನಡೆಯಿತು ಮತ್ತು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳು ಒಟ್ಟುಗೂಡಿ ಚೀನಾ ವಿರುದ್ಧ ‘ಆಕಸ್’ (ಅಠಠ್ಟಿಚ್ಝಜಿಚ ಖ್ಞಿಜಿಠಿಛಿಛ ಓಜ್ಞಿಜಛಟಞ ಖ್ಞಿಜಿಠಿಛಿಛ ಖಠಿಚಠಿಛಿಠ, ಅಖಿಓಖಿಖ) ಕೂಟ ರಚಿಸಿಕೊಂಡವು. ಅಲ್ಲಿಗೆ ಅಮೆರಿಕದ ಹೊಸ ಅಧ್ಯಕ್ಷರೊಂದಿಗೆ ತನ್ನ ಮಧುಚಂದ್ರ ಮುಗಿಯಿತು ಎಂದು ಜಿನ್​ಪಿಂಗ್​ರಿಗೆ ಮನವರಿಕೆಯಾಯಿತು. ನಂತರದ ತಿಂಗಳುಗಳಲ್ಲಿ ಚೀನಾದ ರೆಕ್ಕೆಗಳನ್ನು ಕತ್ತರಿಸಲು ಬೈಡೆನ್ ಸರ್ಕಾರ ಹಲವು ಕ್ರಮಗಳಿಗೆ ಮುಂದಾಯಿತು. ಫಿಲಿಪ್ಪೀನ್ಸ್ ಮತ್ತು ತೈವಾನ್​ಗಳಿಗೆ ಬೆಂಬಲವಾಗಿ ನಿಂತದ್ದಲ್ಲದೆ ಭಾರತದೊಂದಿಗೆ ಮಹತ್ವದ ರಕ್ಷಣಾ ಸಹಕಾರದ ಒಪ್ಪಂದಗಳನ್ನು ಬೈಡೆನ್ ಸರ್ಕಾರ ಮಾಡಿಕೊಳ್ಳತೊಡಗಿತು. ಜತೆಗೆ ಪಾಕಿಸ್ತಾನವನ್ನು ಚೀನಾದಿಂದ ದೂರ ಸೆಳೆದು ಆರ್ಥಿಕವಾಗಿ ತನ್ನ ಗುಲಾಮನನ್ನಾಗಿಸಿಕೊಂಡಿತು. ಕಳೆದೊಂದು ವರ್ಷದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟಿಬೆಟ್​ನ ಸ್ವಾತಂತ್ರ್ಯಕ್ಕೆ ಸಮರ್ಥನೆಯಾಗುವಂಥ ಒಂದಕ್ಕಿಂತ ಹೆಚ್ಚು ಸಾಂಕೇತಿಕ ಕ್ರಮಗಳನ್ನೂ ಬೈಡೆನ್ ಸರ್ಕಾರ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಜಿನ್​ಪಿಂಗ್​ಗೆ ಮನವರಿಕೆಯಾಗಿದ್ದು ಏನೆಂದರೆ ಮುಂದಿನ ತಿಂಗಳ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆದ್ದರೂ, ಡೊನಾಲ್ಡ್ ಟ್ರಂಪ್ ಗೆದ್ದರೂ ತನಗೇನೂ ಒಳ್ಳೆಯದಾಗುವುದಿಲ್ಲ ಎಂದು. ಬೈಡೆನ್​ರ ನೀತಿಯನ್ನೇ ಹ್ಯಾರಿಸ್ ಮುಂದುವರಿಸುತ್ತಾರೆ ಮತ್ತು ಟ್ರಂಪ್ ಬಂದರಂತೂ ಕೇಳಲೇಬೇಡಿ. ಚೀನೀ ಅರ್ಥವ್ಯವಸ್ಥೆ ಅಧೋಗತಿಗಿಳಿಯುವುದು ನಿಶ್ಚಿತ. ಅಲ್ಲಿಗೆ ಅದರ ಸೇನಾಶಕ್ತಿಗೂ ಹೊಡೆತ ಬಿದ್ದಂತೆ. ಈ ನಡುವೆ ಯುರೋಪಿಯನ್ ಯೂನಿಯನ್ ಸಹ ವಿದ್ಯುತ್​ಚಾಲಿತ ವಾಹನಗಳ ವಿಷಯದಲ್ಲಿ ಚೀನಾ ವಿರುದ್ಧ ಸಮರವನ್ನೇ ಸಾರಿದೆ.

ಇಂತಹ ಸನ್ನಿವೇಶದಲ್ಲಿ ತಾನು ಎಲ್ಲ ರಂಗಗಳಲ್ಲೂ ಸಮರ ಸ್ಥಿತಿಯಲ್ಲಿ ಇರುವುದು ವಿವೇಕವಲ್ಲ ಎಂದು ಜಿನ್​ಪಿಂಗ್ ಅರಿತಿದ್ದಾರೆ. ಹೀಗಾಗಿಯೇ ಭಾರತದೊಂದಿಗೆ ಈ ಒಪ್ಪಂದ. ಈ ಒಪ್ಪಂದವೂ ಏಕಾಏಕಿ ಆದದ್ದಲ್ಲ. ಇದರ ತಯಾರಿ ಹಲವು ತಿಂಗಳಿಂದಲೂ ತೆರೆಯ ಮರೆಯಲ್ಲಿ ನಡೆಯುತ್ತಲೇ ಇತ್ತು. ಗಗ್ರಾ ಹಾಟ್ ಸ್ರಿಂಗ್ಸ್ ಗಲ್ವಾನ್ ಮತ್ತು ಪಂಗೊಂಗ್ ತ್ಸೊ ವಿಭಾಗಗಳಲ್ಲಿ ಸಮಸ್ಯೆಯ ಶಮನಕ್ಕೆ ಸಹಮತಿ ಸೆಪ್ಟೆಂಬರ್​ನಲ್ಲೇ ಉಂಟಾಗಿತ್ತು. ಅದರ ಸೂಚನೆಯನ್ನು ನಮ್ಮ ವಿದೇಶಮಂತ್ರಿ ಜೈಶಂಕರ್ ಸ್ವಿಜರ್​ಲ್ಯಾಂಡ್​ನಲ್ಲಿ ನೀಡಿದರೆ ಚೀನೀ ವಿದೇಶಾಂಗ ಇಲಾಖೆ ಬೀಜಿಂಗ್​ನಲ್ಲಿ ಹೇಳಿಕೆ ಹೊರಡಿಸಿತ್ತು. ಈಗ ಬಾಕಿ ಉಳಿದಿದ್ದ ದೆಪ್​ಸಾಂಗ್ ಮತ್ತು ದೆಮ್ೊಕ್​ನಲ್ಲೂ ಸೇನಾ ಜಮಾವಣೆ ಮತ್ತು ಯುದ್ಧ ಸನ್ನದ್ಧ ಸ್ಥಿತಿಯಿಂದ ದೂರ ಸರಿಯುವ ನಿರ್ಣಯಕ್ಕೆ ಎರಡೂ ದೇಶಗಳು ಬಂದಿವೆ.

ಭಾರತದೊಂದಿಗೆ ಶಾಂತಿ ಸ್ಥಾಪಿಸಿಕೊಂಡರೆ ಪಶ್ಚಿಮ ಪೆಸಿಫಿಕ್ ವಲಯದಲ್ಲಿ ತಾನು ಅಮೆರಿಕ ಮತ್ತದರ ಸಹಯೋಗಿಗಳೆದುರು ಸದೃಢವಾಗಿ ನಿಲ್ಲಬಹುದು ಎನ್ನುವುದು ಜಿನ್​ಪಿಂಗ್ ತರ್ಕ. ಆದರೆ ಪರಿಸ್ಥಿತಿ ತನಗನುಕೂಲವಾಗುವಂತೆ ತಿರುಗಿದರೆ ಭಾರತದೊಂದಿಗಿನ ಒಪ್ಪಂದವನ್ನು ಜಿನ್​ಪಿಂಗ್ ಗಾಳಿಗೆ ತೂರುವುದು ನಿಶ್ಚಿತ. ಹೀಗಾಗಿ ಭಾರತ ತನ್ನ ಎಚ್ಚರಿಕೆಯಲ್ಲಿ ತಾನಿರಬೇಕು. ಅಮೆರಿಕ ಜತೆಗಿನ ಸ್ನೇಹವನ್ನು ಇನ್ನೂ ದೊಡ್ಡಮಟ್ಟಕ್ಕೆ ವೃದ್ಧಿಸಿಕೊಳ್ಳಬೇಕು. ಜಿನ್​ಪಿಂಗ್​ರನ್ನು ಆತಂಕದಲ್ಲಿಡುವುದೇ ತನ್ನ ಸುರಕ್ಷೆಯ ಅತ್ಯುತ್ತಮ ಮಾರ್ಗ ಎಂದು ಭಾರತ ತಿಳಿಯಬೇಕು. ಶ್ವೇತಭವನದಲ್ಲಿ ಮೂಡಿರಬಹುದಾದ ಯಾವುದೇ ಆತಂಕವನ್ನು ತೆರೆಯ ಹಿಂದೆಯೇ ದೂರ ಮಾಡುವುದು ನವದೆಹಲಿಯ ಆದ್ಯತೆಯಾಗಬೇಕು.

ಈ ನಡುವೆ ಅಂತೂ ಇಂತೂ ಅದು ಆಗಿಯೇಹೋಯಿತು! ಇರಾನ್ ಮೇಲೆ ಇಸ್ರೇಲ್ 25 ದಿನಗಳ ನಂತರ ದಾಳಿ ಮಾಡಿತು. ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ 181 ಕ್ಷಿಪಣಿಗಳ ದಾಳಿ ನಡೆಸಿದ್ದಕ್ಕೆ ಪ್ರತೀಕಾರ ಕ್ರಮವಾಗಿ ಆ ಯೆಹೂದಿ ರಾಷ್ಟ್ರ ಅಕ್ಟೋಬರ್ 26ರಂದು ಈ ಇಸ್ಲಾಮಿಕ್ ಮೂಲಭೂತವಾದಿ ರಾಷ್ಟ್ರದ ಮೇಲೆ ಯುದ್ಧವಿಮಾನಗಳನ್ನು ಬಳಸಿ ದಾಳಿ ಮಾಡಿತು. ಪ್ರತೀಕಾರಕ್ಕಾಗಿ ಇಷ್ಟು ದೀರ್ಘ ಸಮಯವನ್ನು ಇಸ್ರೆಲ್ ಹಿಂದೆಂದೂ ತೆಗೆದುಕೊಂಡಿರಲಿಲ್ಲ. 1948ರ ಮೇ 15ರಂದು ಅದು ಅಸ್ತಿತ್ವಕ್ಕೆ ಬಂದಾಗಿನಿಂದ 2023ರ ಅಕ್ಟೋಬರ್ 7ರವರೆಗೆ ತನ್ನ ವಿರುದ್ಧ ಸುತ್ತಲಿನ ಅರಬ್ ರಾಷ್ಟ್ರಗಳು, ಪ್ಯಾಲೆಸ್ತೀನ್ ಭಯೋತ್ಪಾದಕ ಘಟನೆಗಳು ಎಸಗಿದ ಎಲ್ಲ ದಾಳಿಗಳಿಗೂ ಇಸ್ರೇಲ್​ನದು ತಕ್ಷಣದ ಪ್ರತಿದಾಳಿ. ಈ ಬಾರಿ ಮಾತ್ರ ಆ ‘ರೆಕಾರ್ಡ್’ನಲ್ಲಿ ಬದಲಾವಣೆಯಾಯಿತು.

ಇಂದು ಇಸ್ರೇಲ್​ನ ವಿರೋಧಿಗಳ ನಿಜವಾದ ಅಥವಾ ತೋರಿಕೆಯ ‘ಸಾಮರ್ಥ್ಯ’ ಬೇರೆಯೇ ಆಗಿದೆ, ಪಶ್ಚಿಮ ಏಷ್ಯಾದ ಯುದ್ಧಗಳ ಭೌಗೋಳಿಕ ವ್ಯಾಪ್ತಿ ವಿಸ್ತಾರವಾಗಿದೆ ಮತ್ತು ಅದಕ್ಕನುಗುಣವಾಗಿ ಅಂತಾರಾಷ್ಟ್ರೀಯ ಭೂ-ಸಾಮರಿಕ ವಾಸ್ತವಗಳೂ ಬದಲಾಗಿವೆ. ಇದೆಲ್ಲವುಗಳಿಂದಾಗಿ ಇಸ್ರೇಲ್​ನ ಪ್ರತೀಕಾರಕ್ಕೆ ಬೇಕಾದ ಕಾಲಾವಧಿ, ವಿಧಾನ ಮತ್ತು ಸ್ವರೂಪ ಸಹ ಬೇರೆಯಾಗಿವೆ. ಇವುಗಳನ್ನಿಷ್ಟು ಸ್ಪಷ್ಟವಾಗಿ ಅರ್ಥೈಸಿಕೊಳ್ಳೋಣ.

ಅಕ್ಟೊಬರ್ 26ರ ಬೆಳಕು ಹರಿಯುವುದಕ್ಕೆ ಮೊದಲೇ ಇಸ್ರೇಲ್ ತನ್ನ ಅತ್ಯಾಧುನಿಕ ಎಫ್-35 ಯುದ್ಧವಿಮಾನಗಳನ್ನು ಬಳಸಿ ಇರಾನ್​ನ ಸೇನಾಶಕ್ತಿಗೆ ಸಂಬಂಧಿಸಿದ ಸುಮಾರು 20 ಸ್ಥಳಗಳ ಮೇಲೆ ದಾಳಿಯೆಸಗಿತು. ಇರಾನ್​ನ ಡ್ರೋನ್ ತಯಾರಿಕಾ ಘಟಕಗಳು, ಡ್ರೋನ್ ಮತ್ತು ಕ್ಷಿಪಣಿ ಸಂಗ್ರಹಗಳು, ಶಸ್ತ್ರಭಂಡಾರಗಳು ದಾಳಿಯ ಮುಖ್ಯ ಗುರಿ. ಜತೆಗೆ, ತನ್ನ ರಾಷ್ಟ್ರೀಯ ಸೇನೆಯನ್ನು ಗಡಿಗಳ ರಕ್ಷಣೆಗಾಗಿ ಮಾತ್ರ ಬಳಸುವ ಇರಾನ್ ತನ್ನ ಮೂಲಭೂತವಾದಿ ಸರ್ಕಾರದ ಸಂರಕ್ಷಣೆಗಾಗಿ ಇಟ್ಟುಕೊಂಡಿರುವ ವಿಶೇಷ ‘ಇರಾನಿಯನ್ ರವಲ್ಯೂಷನರಿ ಗಾರ್ಡ್ ಕೋರ್ಸ್’ (ಐಆರ್​ಜಿಸಿ) ಸೇನೆಯ ಮುಖ್ಯ ಕಾರ್ಯಾಲಯ ಮತ್ತು ಅಣುಪರೀಕ್ಷೆಗಾಗಿ ಇರಾನ್ ಸಿದ್ಧಪಡಿಸಿಕೊಂಡಿತ್ತು ಎನ್ನಲಾದ ತಾಣವೊಂದು ಇಸ್ರೇಲಿ ದಾಳಿಗೆ ಗುರಿಯಾಗಿದ್ದವು ಮತ್ತು ಅವುಗಳಲ್ಲಿ ನಾಲ್ವರು ಐಆರ್​ಜಿಸಿ ಸೈನಿಕರು ಬಲಿಯಾಗಿದ್ದಾರೆ. ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರ ಹೇಳಿಕೆಯ ಪ್ರಕಾರ, ‘ಆ ದಾಳಿಗಳು ನಿರ್ದಿಷ್ಟ ಗುರಿಗಳನ್ನು ಹೊಂದಿದ್ದವು ಮತ್ತು ನಿಖರವಾಗಿದ್ದವು’. ಮೂರು ಸುತ್ತುಗಳ ದಾಳಿಗಳ ನಂತರ ಇಸ್ರೇಲ್ ಅಧಿಕೃತವಾಗಿ ಘೊಷಿಸಿದ್ದು ತನ್ನ ಉದ್ದೇಶ ‘ಈಡೇರಿದೆ’ ಎಂದು.

ದಾಳಿಗಳಿಂದ ಇರಾನ್​ಗಾದ ‘ನಷ್ಟ’ವನ್ನು ನೋಡಿದರೆ ಇಸ್ರೇಲ್​ನ ಉದ್ದೇಶ ಸೀಮಿತವಾಗಿತ್ತು. ದಾಳಿಗಳ ಗುರಿ ಇರಾನ್​ನ ಅಣು ಮತ್ತು ತೈಲ ಸ್ಥಾವರಗಳಾಗಿರದೆ ಕೇವಲ ಸೇನೆಗೆ ಸಂಬಂಧಿಸಿದ್ದಾಗಿದ್ದವು. ಆದರೆ ಈಗ ಆಗಿರುವ ದಾಳಿಗಳು ಇರಾನ್ ಸೇನಾ ಸಾಮರ್ಥ್ಯಕ್ಕೆ ತೀವ್ರ ಧಕ್ಕೆಯನ್ನೇನೂ ಮಾಡಿಲ್ಲ. ಅಂದರೆ ಇಸ್ರೇಲಿ ದಾಳಿ ಸಾಂಕೇತಿಕವಾಗಿತ್ತು ಅಷ್ಟೇ. ಇರಾನ್ ಕ್ಷಿಪಣಿಗಳನ್ನಷ್ಟೇ ಹಾರಿಸಿದರೆ ತಾನು ಇರಾನಿ ವಾಯುಪ್ರದೇಶದೊಳಗೆ ತನ್ನ ಯುದ್ಧವಿಮಾನಗಳನ್ನೇ ಕಳುಹಿಸಿ ರಾಜಧಾನಿ ತೆಹರಾನ್ ಮೇಲೆ ಬಾಂಬ್ ಹಾಕಬಲ್ಲೆ, ತನ್ನ ಸಾಮರ್ಥ್ಯವಿದು ಎಂದು ಇಸ್ರೇಲ್ ಇರಾನ್​ಗೆ ತಲುಪಿಸಿದ ‘ಮೆಸೇಜ್’ ಇದು. ಜತೆಗೆ ಇಸ್ರೇಲ್ ತನ್ನ ಜನರಿಗೂ, ಜಗತ್ತಿಗೂ ಒಂದು ‘ಮೆಸೇಜ್’ ತಲುಪಿಸಿದೆ. ಇಸ್ರೇಲ್ ತನ್ನೀ ದಾಳಿಯ ಸೂಚನೆಯನ್ನು ಮಧ್ಯವರ್ತಿಗಳ ಮೂಲಕ ಇರಾನ್​ಗೆ ಮೊದಲೇ ತಲುಪಿಸಿತ್ತಂತೆ! ದಾಳಿ ನಡೆಸುತ್ತೇವೆ, ಆದರೆ ಹೆಚ್ಚಿನ ಹಾನಿಯನ್ನೇನೂ ಮಾಡುವುದಿಲ್ಲ, ನೀವು ನಮ್ಮ ಮೇಲೆ ಎಸಗಿದ ದಾಳಿಗೆ ಇದು ಪ್ರತಿಕ್ರಿಯೆ ಅಷ್ಟೇ. ಇಲ್ಲಿಗೆ ಇಬ್ಬರ ಸ್ಕೋರ್ 1:1 ಅಂದರೆ ಸಮವಾಯಿತು ಎಂಬ ಸೂಚನೆ ಇಸ್ರೇಲ್​ನದು! 26ರಂದೇ ಇರಾನ್​ಗೆ ಅಮೆರಿಕ ಸಹ ಹೇಳಿದ್ದು ಇದನ್ನೇ! ‘ಮೆಸೇಜ್’ ಅರ್ಥಮಾಡಿಕೊಂಡಿದ್ದೇನೆ ಎಂದು ಇರಾನ್​ನ ಸವೋಚ್ಚ ಧಾರ್ವಿುಕ ನೇತಾರ ಆಯತೊಲ್ಲಾ ಆಲಿ ಖಮೆನೀ (ಖೊಮೇನಿ ಅಲ್ಲ, ಆತ ಈಗಿಲ್ಲ) ತೋರಿಸಿದ್ದು ದಾಳಿಯ ಬಗ್ಗೆ ಮಾತಾಡಿದರೂ, ತನ್ನ ದೇಶ ಪ್ರತಿದಾಳಿ ನಡೆಸುತ್ತದೆ ಎಂದು ಹೇಳದಿರುವ ಮೂಲಕ! ಅಂತಾರಾಷ್ಟ್ರೀಯ ರಾಜಕಾರಣ ಹೇಗೆಹೇಗೆಲ್ಲ ನಡೆಯುತ್ತದೆ!

ಆದರೆ ಇದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಿಗೆ ಸಂಬಂಧಿಸಿದಂತೆ ಡೆಮೊಕ್ರಾಟಿಕ್ ಪಕ್ಷದ ತಲೆನೋವನ್ನು ಕಡಿಮೆ ಮಾಡುತ್ತದೆಯೇ? ಈ ಪ್ರಶ್ನೆಗೆ ಉತ್ತರ ಮುಂದಿನ ವಾರದ ಅಂಕಣದಲ್ಲಿ.

                                                               (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net