ಇಂದು ಶ್ರೀ ಸಂತ ಸೇವಾಲಾಲ್ 286ನೇ ಜಯಂತಿ; ಮಾನವೀಯತೆಯ ಸೇವಕ ಸಂತ ಸೇವಾಲಾಲ್

ವಿಜಯವಾಣಿ (3)
Published on

(ಲೇಖಕರು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರು)

ಬಂಜಾರರ ಮೂಲಪುರುಷರಾದ ದಾದಮೋಲ ಮತ್ತು ರಾಧಿ ದಾದಿಯರು ಮೂರು ಭಿನ್ನ ಪ್ರದೇಶಗಳಿಂದ ಮೂವರು ಮಕ್ಕಳನ್ನು ದತ್ತು ಪಡೆದರು. ಅವರೇ ಬಂಜಾರರ ರಾಥೋಡರು, ಪೊಮ್ಮಾರ್, ಚವ್ಹಾಣ್ ಆಗಿದ್ದಾರೆ. ಮುಂದೆ ಇವರಿಂದ ಮೂರು ಪ್ರತ್ಯೇಕ ಬಂಜಾರ ಗೋತ್ರಗಳು ಹುಟ್ಟಿಕೊಂಡವು ಎಂಬ ಪ್ರತೀತಿ ಇದೆ. ದಾದಮೋಲ ಕೃಷ್ಣನ ಜೊತೆ ದನಗಾಹಿಯಾಗಿದ್ದರು. ಮೊದಲಿಗೆ ತನ್ನ ಕೊಳಲನ್ನು ಕೃಷ್ಣನಿಗೆ ಕೊಟ್ಟವರು. ಅದೇ ರೀತಿ ಕಾಲಜ್ಞಾನಿ ಸೇವಾಲಾಲರು ಒಬ್ಬ ಮಹಾತ್ಮರಾಗಿ, ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಪುರುಷರಾಗಿದ್ದಾರೆ. ಅಲ್ಲದೆ, ಬಂಜಾರರ ದ್ರಾವಿಡ ಮೂಲದ ಕುಲಗುರು, ಐತಿಹಾಸಿಕ, ಸಾಂಸ್ಕೃತಿಕ ನಾಯಕ, ವೀರಸೇನಾನಿ, ಬ್ರಹ್ಮಚಾರಿ, ಸಮುದಾಯದ ಆರಾಧ್ಯದೈವ, ಆದರ್ಶ ಪುರುಷ, ಗುರು, ಭಾಯಾ (ಅಣ್ಣ)ಆಗಿ ಸಮುದಾಯದ ಮೊದಲ ದಾರಿದೀಪವಾಗಿದ್ದಾರೆ.

ಸೇವಾಲಾಲರು 1739ರ ಫೆಬ್ರವರಿ 15ರ ಸೋಮವಾರ ಬೆಳಗಿನ ಜಾವ 9 ಗಂಟೆಗೆ ಶಿವರಾತ್ರಿಯ ದಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿಯ ಸೂರಗೊಂಡನ ಕೊಪ್ಪ (ಭಾಯಘಡ)ದಲ್ಲಿ ಜನಿಸಿದರು. ಸಂತ ಸೇವಾಲಾಲರ ಜಯಂತಿಯನ್ನು ಸರ್ಕಾರದಿಂದ ಪ್ರತಿವರ್ಷ ಫೆಬ್ರವರಿ 15 ರಂದು ಆಚರಿಸಲಾಗುತ್ತಿದೆ. ‘ರಾಭೇನಿತೋ ಚಾಬೇನ್ ಮಳೇನಿ’ ಅಂದರೆ ‘ಕೆಲಸ ಮಾಡದಿದ್ದರೆ ತಿನ್ನಲು ಸಿಗುವುದಿಲ್ಲ’ ಎಂಬುದು ಸೇವಾಲಾಲರ ನಾಣ್ಣುಡಿ.

‘ಹಾತೇಮ ಕಾಟಿರೆ ಝುಲನರೆ ಗೋರೂರ ತಾಂಡೆನ ಜಾರೋ ಫೆವನರ ತಾಂಡೋ ತಾಂಡೆಮ ಸೀಕವಾಡಿ ದೇವರ’ ಅಂದರೆ, ‘ಕೈಯಲ್ಲಿ ಧ್ವಜ ಹೀಡಿದು, ಬಂಜಾರರ ತಾಂಡಕ್ಕೆ ಹೋಗುವ ತಾಂಡ ತಾಂಡಗಳಲ್ಲಿ ಶಾಲೆ ನೀಡಲು’ ಎಂಬ ಲಾವಣಿ ಹಾಡು ಸೇವಾಲಾಲರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಸಾರುತ್ತದೆ. ಐದು ಸಾವಿರಕ್ಕೂ ಹೆಚ್ಚಿನ ಸಂಸ್ಥಾನಗಳಿಗೆ ರಸ್ತೆ ಇಲ್ಲದಿದ್ದಾಗ ಬಂಜಾರ ಸಮುದಾಯದ ಶ್ರಮಜೀವಿಗಳು ಕಾಡುಹಾದಿಯಲ್ಲಿ ವ್ಯಾಪಾರಕ್ಕಾಗಿ ಸಂಚಾರ ಮಾಡುತ್ತ, ಸರಕು, ಆಹಾರ, ಧಾನ್ಯ, ಉಪ್ಪು, ಬೆಳ್ಳಿ, ಬಂಗಾರದ ಆಭರಣ, ಯುದ್ಧ ಸಾಮಗ್ರಿಗಳನ್ನು ಸಾಗಿಸಿದರು. ಸ್ವಾತಂತ್ರ್ಯ ಹೋರಾಟದಲ್ಲೂ ಪಾತ್ರ ವಹಿಸಿರುವ ಈ ಸಮುದಾಯ ಅನೇಕ ಪ್ರಥಮಗಳನ್ನು ನಾಡಿಗೆ ನೀಡಿದೆ. ಮೊದಲ ಗೋಪಾಲಕರು, ಮೊದಲ ಕಸೂತಿ ಕಲೆ, ಕೃಷ್ಣನಿಗೆ ಮೊದಲು ಕೊಳಲು ಕೊಟ್ಟವರು, ಮೊದಲ ಬೇಟೆಗಾರರು, ಹೀಗೆ ನೂರಾರು ಪ್ರಥಮಗಳನ್ನು ಸಾಧಿಸಿದ ಶ್ರಮಿಕರು, ಪ್ರಾಮಾಣಿಕರು ಹಾಗೂ ನಂಬಿಗಸ್ಥ ಸಿಪಾಯಿಗಳು.

ಗುರು ಸಂತ ಸೇವಲಾಲರು ಸಮುದಾಯದ ಪಂಗಡಗಳಲ್ಲಿ ದೇವರಾಗಿ, ಮೋತಿವಾಳೋ | ಮುತ್ತಿನವನು| ಝಾರಿವಾಳೋ (ಜನರ ಜಂಗುಳಿಯವ), ಧೋಳೊ ಘೊಡೆವಾಳೋ (ಬಿಳಿ ಕುದುರೆಯ), ಬಳಿಪಗಡಿಯವ, ಗರಸ್ಯಾ ಎಂಬ ಎತ್ತಿನವನು, ಲಗ್ಗಿವಾಳೋ ಬಹುತೇಕರಿಗೆ ದೇವರ ನಾಟಿ ವೈದ್ಯ, ಬಾಮಣೀಯ (ಬ್ರಾಹ್ಮಣ), ಸಿಖ್, ಢಾಡಿ (ಮುಸ್ಲಿಂ) ಕಲಾವಿದ, ಢಾಲಿಯಾ, ಶಿಂಗಾಡಿಯಾ, ಭರವಾ, ಧನ್​ಖೋಟ್, ಜೋಗಿ ಮತ್ತೆ ಕೆಲವರಿಗೆ ನಾಯಕ (ಯಜಮಾನ), ಭಾಯಾ (ಅಣ್ಣ), ವೇರಾಳು (ಸೇನಾನಿ), ಹತಾದಿಯಾ (ಗೋಪಾಲಕ). ಹೀಗೆ ಮುಂತಾಗಿ ಬಹು ಆಯಾಮಿಯಾಗಿದ್ದವರು.

ಸೇವಾಲಾಲರ ತಂದೆ ಭೀಮಾನಾಯ್ಕ ದೊಡ್ಡ ವ್ಯಾಪಾರಿಯಾಗಿದ್ದರು. ರಸ್ತೆ ಇಲ್ಲದ ಕಾಲದಲ್ಲಿ ಸರಕುಗಳು, ಆಹಾರ ಸಾಮಗ್ರಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಾಡಿನ ಮಾರ್ಗಗಳಲ್ಲಿ ನೂರಾರು ಎತ್ತುಗಳ ಮೇಲೆ ಸಾಗಿಸುವ ವೃತ್ತಿಯವರಾಗಿದ್ದರು. ಸೇವಾಲಾಲರು 3751 ಹಸುಗಳ ಒಡೆಯರಾಗಿದ್ದರು. ಇವರ ವಿವಿಧ ಸೇವಾ ಮನೋಭಾವದ ಬಗ್ಗೆ ಲಾವಣಿಯ ಮೂಲಕ, ಕಥೆಕಟ್ಟಿ ರಾತ್ರಿ ಇಡೀ ಹಾಡುತ್ತಾರೆ. ‘ಸೇವಾಲಾಲ ಭೀಮನ ಮಗನೆ, ನನ್ನ ಕುಲದ ತಾರೆಯೇ ಕುಲದ ನಗಾರಿಯೇ ಧ್ಯಾನ ಮಾಡುವೆ ನಿಮ್ಮ’ ಎಂದು. ‘ಸೀಕ್ ಸೀಕೋ ಸೀಕನ್ ಸೀಕಾವೋ ಸೀಕೋಜಕೋ ಸೇನಿ ಭಲಾನ್ ಆಂಗ್ ಚಾಲಚ್’ ಅಂದರೆ, ‘ಶಿಕ್ಷಣ ಕಲಿಯಿರಿ. ಕಲಿತು ಕಲಿಸಿರಿ. ಕಲಿತವನು ಸರ್ವರನ್ನೂ ಒಗ್ಗೂಡಿಸಿ ಮುಂದೆ ಸಾಗುತ್ತಾನೆ’ ಎನ್ನುವ ಸೇವಾಲಾಲರ ಮಾತುಗಳು ಈಗಲೂ ಬಡ ಸಮುದಾಯವಾಗಿ ಗುರುತಿಸಿಕೊಂಡ ಎಲ್ಲ ಸಮುದಾಯಗಳು ಅಕ್ಷರಶಃ ಪಾಲಿಸಬೇಕಾಗಿದೆ.

ಸೇವಾಲಾಲರು ಸಮುದಾಯಕ್ಕೆ ಒಂದು ಶಾಸನ, ಪದ್ಧತಿ, ಕರ್ತವ್ಯ, ಹಕ್ಕು, ನ್ಯಾಯಶೀಲತೆ (ಪಂಚಾಯತಿ), ಕಲ್ಪ, ಸತ್ಕಾರ್ಯ, ಕ್ರಿಯೆ, ಗುಣ, ದೈವ, ಧರ್ಮ ಬೃಹದ್ಸೂತ್ರವನ್ನು ಬೋಧಿಸಿದ್ದಾರೆ. ಬಂಜಾರರ ಹಾಗೂ ಸೇವಾಲಾಲರ ಧರ್ಮ: ಕ್ರಿ.ಪೂ 600-300ರ ಕಾಲದಲ್ಲಿಯೇ ಆರಂಭದಲ್ಲಿ ಧರ್ಮಶಾಸ್ತ್ರ ಗ್ರಂಥಗಳಿದ್ದವು. 2ನೇ ಶತಮಾನದಲ್ಲಿ ಅವು ಪ್ರಮಾಣ ಗ್ರಂಥಗಳಾದವು. ಮೇದಾತಿಥಿಯ ಪ್ರಕಾರ ಧರ್ಮವು ಐದು ವಿಧ ಹೊಂದಿದೆ. ಅವು 1. ವರ್ಣ ಧರ್ಮ 2. ಆಶ್ರಮ ಧರ್ಮ 3. ವರ್ಣಾಶ್ರಮ ಧರ್ಮ 4. ನೈಮಿತ್ತಿಕ ಧರ್ಮ 5. ಗುಣಧರ್ಮ. ಈ ಮೇಲಿನ ಧರ್ಮಗಳ ಪ್ರಕಾರ ಪರಿಸರ ಆರಾಧಕ ಸೇವಾಲಾಲರು ಗುಣಧರ್ಮ ಅಥವಾ ಹಳೆಯದಾದ ಬೌದ್ಧ ಧರ್ಮಗ್ರಂಥಗಳು (ಬೌದ್ಧಾಯನ ಧರ್ಮಸೂತ್ರ) ಹೇಳುವ ನಿರ್ದೇಶನಗಳು, ಆಕರಗಳ ಧರ್ಮವನ್ನು (ಪರಿಸರದ ಧರ್ಮ) ಬೋಧಿಸಿದ್ದಾರೆ ಎನ್ನಬಹುದು. ಬೌದ್ಧಾಯನ ಧರ್ಮ ಸೂತ್ರದ ಮೇಲೆ ಗೋವಿಂದಸ್ವಾಮಿ ಸಹ ವ್ಯಾಖ್ಯಾನ ಬರೆದಿದ್ದಾರೆ. ಸೇವಾಲಾಲರು ಎಲ್ಲ ಧರ್ಮಗಳನ್ನು ಸಮನಾಗಿ ಕಾಣಿರಿ ಎಂದರು. ಧರ್ಮ ಮತ್ತು ನೀತಿ ಒಂದೇ ಆಗಿರಬೇಕು ಎಂದು ಹೇಳಿ, ಧರ್ಮಗಳ ನಡುವೆ ಸಮಾನತೆಯನ್ನು ಸಾರಿದರು.

ಸೇವಾಲಾಲರ ಸಮಾಜಸೇವೆ: ಸೇವಾಲಾಲರು ನೋಂದವರ ಕಣ್ಣೀರು ಒರೆಸಿ, ಆತ್ಮಸ್ಥೈರ್ಯ ತುಂಬುತ್ತಿದ್ದರು. ಬಂಜಾರ ಸಮುದಾಯಕ್ಕೆ ಮಾತ್ರ ಸೇವೆ ಮಾಡದೆ ಇತರರಿಗೂ ಸೇವೆ ಸಲ್ಲಿಸುವ ಮಾನವೀಯತೆಯ ನೈಜ ಸೇವಕರಾಗಿದ್ದರು. ಅಲ್ಲದೆ, ಅಪ್ಪಟ ನಾಟಿ ವೈದ್ಯರಾಗಿ, ಅನೇಕರ ಪ್ರಾಣ ರಕ್ಷಣೆ ಮಾಡಿದರು. ಅಲೆಮಾರಿ ಬದುಕಿನಿಂದ ರೋಸಿ ಹೋಗಿದ್ದ ಬಂಜಾರರಿಗೆ ಒಂದೆಡೆ ನೆಲೆ ನಿಲ್ಲುವಂತೆ, ವ್ಯವಸಾಯ, ಪಶುಪಾಲನೆ ಮಾಡುವಂತೆ ಅರಿವು ತುಂಬಿದರು. ಸ್ತ್ರೀಯರಿಗೆ ಪುರುಷ ಸಮಾನವಾದ ಸ್ಥಾನಕ್ಕೆ ಆಗ್ರಹಿಸಿದರು. ಎಲ್ಲರೂ ಸಾಮೂಹಿಕವಾಗಿ ಸೇರಿ ಶುಭಕೋರುವುದು, ಹಬ್ಬ ಆಚರಿಸಲು ಹೇಳಿದರು. ಇಂಥ ಮಹಾಮಹಿಮ ಸೇವಾಲಾಲರು 1806ರ ಡಿಸೆಂಬರ್ 4ರಂದು ಇಹಲೋಕ ತ್ಯಜಿಸಿದರು.

ಸೇವಾಲಾಲ್ ಅವರ ಕಾರ್ಯಗಳನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಬೇಡಿಕೆಯ ಮೇರೆಗೆ ಪ್ರಸಕ್ತ ಸಾಲಿನಲ್ಲಿ ಸರ್ಕಾರವು ಶ್ರೀ ಸಂತ ಸೇವಾಲಾಲ್ ಅವರ ಹೆಸರಿನಲ್ಲಿ 1 ಲಕ್ಷ ರೂ. ಮೊತ್ತದ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ಬಂಜಾರ ಸಮುದಾಯದ ಹಿರಿಯ ಸಾಹಿತಿ ಡಾ. ಬಿ.ಟಿ. ಲಲಿತಾನಾಯಕ್ ಅವರಿಗೆ ಬಂಜಾರ ಅಕಾಡೆಮಿ ವತಿಯಿಂದ ನೀಡಿರುವುದು ವಿಶೇಷವಾಗಿದೆ.

ಬಂಜಾರ ಸಮುದಾಯದ ಸಮಸ್ಯೆಗಳು: ಜೀವನಕ್ಕಾಗಿ ವಲಸೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಲಸೆ ಸಂದರ್ಭದಲ್ಲಿ ಕಬ್ಬು ಕಟಾವು, ಕಾಫಿ ಎಸ್ಟೇಟ್ ಹಾಗೂ ರಸ್ತೆ-ಕಟ್ಟಡಗಳ ಕೆಲಸದಲ್ಲಿ ತೊಡಗುವುದರಿಂದ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿದ್ದು, ಹಾವು ಕಡಿತದಿಂದ ಹಲವು ಸಾವುಗಳು ಸಂಭವಿಸಿವೆ. ದೇಶದ ಅನೇಕ ರಾಜ್ಯಗಳಲ್ಲಿ ಇಂದಿಗೂ ಮಕ್ಕಳನ್ನು ಮಾರಾಟ ಮಾಡಿ ಬದುಕುವಂಥ ದುಸ್ಥಿತಿ ಇದೆ. ವಾರ್ಷಿಕವಾಗಿ 3000ಕ್ಕೂ ಹೆಚ್ಚು ಜನ ಬಂಜಾರರು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಇವರಲ್ಲಿ ಕನಿಷ್ಠ 100 ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಗರ, ಪಟ್ಟಣಗಳಿಗೆ ವಲಸೆ ಬರುವ ಸಾವಿರಾರು ಜನರು ಲೆಕ್ಕಕ್ಕೆ ಸಿಗುತ್ತಿಲ್ಲ.

ಸಮುದಾಯದ ಬೇಡಿಕೆಗಳು: ಬಂಜಾರ ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡಬೇಕು. ತಾಂಡಗಳು ಶೇಕಡ 100ರಷ್ಟು ಕಂದಾಯ ಗ್ರಾಮಗಳಾಗಬೇಕು. ತಾಂಡಗಳಿಗೆ ಶಾಲೆ, ನೀರು, ವಿದ್ಯುತ್, ಬ್ಯಾಂಕ್ ಸೇವೆ, ಹಾಲಿನ ಡೇರಿ, ಸೈಬರ್ ಸೆಂಟರ್, ಗ್ರಂಥಾಲಯ, ವೈದ್ಯಕೀಯ ಸೇವೆ, ಕಸೂತಿ ಕೇಂದ್ರ, ಕಲಾಕೇಂದ್ರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಲಂಬಾಣಿ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net