

ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ಮನೆ, ಆಸ್ತಿ ಮತ್ತಿತರ ಕಡೆಗಳಿಂದ ವಶಪಡಿಸಿಕೊಂಡ ನಗದು ಎಣಿಕೆಯನ್ನು ಭಾನುವಾರದೊಳಗೆ ಮುಗಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಡಿಸೆಂಬರ್ 6 ರಂದು ದಾಳಿಗಳು ಪ್ರಾರಂಭವಾಗಿದ್ದು, ಅಧಿಕಾರಿಗಳು ಒಟ್ಟು 176 ಬ್ಯಾಗ್‌ಗಳಲ್ಲಿ 140 ಬ್ಯಾಗ್‌ಗಳ ಎಣಿಕೆಯನ್ನು ಪೂರ್ಣಗೊಳಿಸಿದ್ದಾರೆ. ಹಣದ ಎಣಿಕೆ ಭಾನುವಾರ ರಾತ್ರಿಯೂ ಮುಂದುವರಿದಿದೆ.
ಐಟಿ ಅಧಿಕಾರಿಗಳ ಪ್ರಕಾರ, ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಆಸ್ತಿಗಳ ಮೇಲೆ ಇಲಾಖೆಯ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ ನಗದು 300 ಕೋಟಿ ರೂ.ಗೆ ತಲುಪುವ ಸಾಧ್ಯತೆಯಿದೆ, ಇದು ಒಂದೇ ಕಾರ್ಯಾಚರಣೆಯಲ್ಲಿ "ಅತಿ ಹೆಚ್ಚು ಹಣ" ವಶಪಡಿಸಿಕೊಂಡಿರುವುದಾಗಿದೆ.
176 ಬ್ಯಾಗ್‌ಗಳಲ್ಲಿ ನಗದು ಇದ್ದು, 140 ಅನ್ನು ಎಣಿಕೆ ಮಾಡಲಾಗಿದೆ. ಮೂರು ಬ್ಯಾಂಕ್ ಗಳ 50 ಅಧಿಕಾರಿಗಳು ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದು, 40 ಯಂತ್ರಗಳನ್ನು ನಿಯೋಜಿಸಲಾಗಿದೆ. ಸೋಮವಾರದಿಂದ ಸಾಮಾನ್ಯ ಬ್ಯಾಂಕಿಂಗ್ ಸಮಯ ಪ್ರಾರಂಭವಾಗಲಿದ್ದು, ಯಂತ್ರಗಳನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಬೇಕಾಗಿರುವುದರಿಂದ ಭಾನುವಾರ ರಾತ್ರಿಯಿಡೀ ಹಣ ಎಣಿಕೆಯನ್ನು ಮುಗಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ಹೇಳಿದರು.
ಎಣಿಕೆಗೆ ಗಮನಾರ್ಹ ಪ್ರಮಾಣದ ನಗದು ಉಳಿದಿರುವ ಕಾರಣ, ಪ್ರಕ್ರಿಯೆಯನ್ನು ವೇಗಗೊಳಿಸಲು ಹೆಚ್ಚುವರಿ ನಗದು-ಎಣಿಕೆ ಯಂತ್ರಗಳು ಮತ್ತು ಮಾನವಶಕ್ತಿಯನ್ನು ಬಳಸಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಎಣಿಕೆ ಯಂತ್ರಗಳು ಕೈಕೊಟ್ಟರೆ ಸರಿಪಡಿಸಲು ಇಜಿನಿಯರ್‌ಗಳು ಸಹ ಸ್ಥಳದಲ್ಲಿ ಇದ್ದಾರೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಒಡೆತನದ ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ಕಾರ್ಖಾನೆ, ಕಚೇರಿಗಳು, ಮನೆಗಳಿಂದ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಧೀರಜ್ ಸಾಹು ಅವರ ವಿಸ್ತೃತ ಕುಟುಂಬವು ಪ್ರಮುಖ ಮದ್ಯ ತಯಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಮತ್ತು ಅವರು ಒಡಿಶಾದಲ್ಲಿ ಅಂತಹ ಹಲವಾರು ಕಾರ್ಖಾನೆಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಕಂಪನಿ ಅಧಿಕಾರಿಗಳು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ಈ ನಡುವೆ ಅಪಾರ ಪ್ರಮಾಣದ ನಗದು ಪತ್ತೆಯಾದ ಕಾರಣ ಕಾಂಗ್ರೆಸ್ ಧೀರಜ್ ಸಾಹುರಿಂದ ಅಂತರ ಕಾಯ್ದುಕೊಂಡಿದೆ. ಅಧಿಕಾರಿಗಳು ಹಣವನ್ನು ಪತ್ತೆ ಮಾಡಿದ್ದಾರೆ, ಇದಕ್ಕೆ ಅವರು ಮಾತ್ರ ವಿವರಿಸಬೇಕು ಎಂದು ಎಐಸಿಸಿ ಜನರಲ್ ಸೆಕ್ರೆಟರಿ ಜೈರಾಮ್ ರಮೇಶ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.