

ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ, ಮಧುಮೇಹದಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ 50 ವರ್ಷ ತುಂಬುವ ಮೊದಲೇ ಹಲವರು ಮೃತಪಡುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 110 ವರ್ಷ ಬದುಕಿದ್ದು, ಈಗಲೂ ಆರೋಗ್ಯವಾಗಿದ್ದಾರೆ. ಅಷ್ಟೇ ಅಲ್ಲ ಆತ ಒಂಟಿ ಜೀವನ ನಡೆಸುತ್ತಿದ್ದಾನೆ.
ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ' ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್' . ಕಳೆದ ತಿಂಗಳು ತಮ್ಮ 110 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 100 ವರ್ಷ ಮೇಲ್ಪಟ್ಟಿದ್ದರೂ ಉತ್ತಮ ಜೀವನ ನಡೆಸುತ್ತಿರುವ ವಿಶ್ವದ ಅದ್ಭುತ ವ್ಯಕ್ತಿಗಳಲ್ಲಿ ಇವರೂ ಒಬ್ಬರು.
ಡ್ರಾನ್ಸ್‌ಫೀಲ್ಡ್ ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಶಿಸ್ತಿನಿಂದ ಬದುಕಲು ಕಲಿತರು. ಮೇಲಾಗಿ ಇನ್ನೂ ಮನೆಗೆಲಸಕ್ಕೆ ಯಾರನ್ನೂ ನೇಮಿಸಿಕೊಂಡಿಲ್ಲ. ಆತ ತನ್ನ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತಾನೆ. ಆಹಾರವನ್ನೂ ಆತನೇ ತಯಾರಿಸಿ ತಿನ್ನುವುದು ಮತ್ತೊಂದು ವಿಶೇಷ.
ತನ್ನ ಮೂರಂತಸ್ತಿನ ಮನೆಯನ್ನು ತಾನೇ ಸ್ವಚ್ಛಗೊಳಿಸುತ್ತಾನೆ. ಅದೂ ಅಲ್ಲದೆ, ತಾನೇ ಮಾರುಕಟ್ಟೆಗೆ ಹೋಗಿ ಮನೆಗೆ ಬೇಕಾದ್ದನ್ನು ತರುತ್ತಾನೆ.
ಡ್ರಾನ್ಸ್ಫೀಲ್ಡ್ 1914 ರಲ್ಲಿ ಜನಿಸಿದರು. ಆತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿಲ್ಲ. ಮೊಣಕಾಲು ನೋವು ಬಿಟ್ಟರೆ ಬೇರೆ ಯಾವುದೇ ಕಾಯಿಲೆ ಇಲ್ಲ ಎಂದು ಆತನೇ ಹೇಳುತ್ತಾನೆ.
ಡ್ರಾನ್ಸ್‌ಫೀಲ್ಡ್ 20 ವರ್ಷದವರೆಗೆ ಸಿಗರೇಟ್ ಸೇದುತ್ತಿದ್ದರು. 15 ರಿಂದ 70 ವರ್ಷ ವಯಸ್ಸಿನವರೆಗೆ ಕೆಲಸ ಮಾಡಿದ್ದಾರೆ. ಅವರು ಹ್ಯಾಂಬರ್ಗರ್ಗಳು, ಹಾಲು ಚಾಕೊಲೇಟ್, ಇಟಾಲಿಯನ್ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ. ಕೆಲವೊಮ್ಮೆ ಬಿಯರ್ ಕೂಡ ಕುಡಿಯುತ್ತಾರೆ. ಪ್ರತಿದಿನ ಕಾಫಿ ಕುಡಿಯಲು ಇಷ್ಟಪಡುತ್ತಾರೆ ಎಂದು ಎಂದು ಅವರ ಮೊಮ್ಮಗಳು ಹೇಳಿದ್ದಾರೆ.
ನನ್ನಲ್ಲಿರುವ ಏಕೈಕ ಮಂತ್ರವೆಂದರೆ ನಾನು ಇಷ್ಟಪಡುವದನ್ನು ಮಾಡುವುದು, ಅದು ನಮ್ಮನ್ನು ಮಾನಸಿಕವಾಗಿ ಸದೃಢವಾಗಿರಿಸುತ್ತದೆ ಎಂದು ವಿನ್ಸೆಂಟ್ ಡ್ರಾನ್ಸ್‌ಫೀಲ್ಡ್ ಹೇಳಿದರು.