ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ 'ಅನಿಮಲ್​'; ಕಂಡ ಗಳಿಕೆಯೆಷ್ಟು?

Untitled design (98)
Published on

ಮುಂಬೈ: ಬಾಲಿವುಡ್​ ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಅನಿಮಲ್'​ ಸಿನಿಮಾ ಶುಕ್ರವಾರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರವು ಬಾಕ್ಸ್​ ಆಫೀಸ್​​ ಕಲೆಕ್ಷನ್​ನಲ್ಲಿ ಉತ್ತಮ ಗಳಿಕೆಯನ್ನು ಕಂಡಿರುವುದು ಇದೀಗ ಚಿತ್ರತಂಡಕ್ಕೆ ಭಾರೀ ಸಂತಸ ತಂದಿದೆ.

ಚಿತ್ರವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದ್ದು, ಮೊದಲ ದಿನವೇ 61 ಕೋಟಿ ರೂಪಾಯಿ ಗಳಿಕೆಯನ್ನು ಕಂಡಿದೆ. ಈ ಮೂಲಕ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ ಚಿತ್ರಗಳಾಗಿ ಹೊರಹೊಮ್ಮಿದ 'ಪಠಾಣ್' ಮತ್ತು 'ಗದರ್ 2' ನಿರ್ಮಿಸಿದ ದಾಖಲೆಗಳನ್ನು ಸದ್ಯ 'ಅನಿಮಲ್' ಹಿಂದಿಕ್ಕಿದೆ.

ಜಾಗತಿಕವಾಗಿ ಚಿತ್ರವು 116 ಕೋಟಿ ರೂ. ಕೆಲೆಕ್ಷನ್​ ಮಾಡಿದ್ದು, ಕೇವಲ ಭಾರತದಲ್ಲಿ ಹಿಂದಿ ಆವೃತ್ತಿಯೊಂದರಿಂದಲೇ ಮೊದಲ ದಿನದಲ್ಲಿ 50 ಕೋಟಿ ರೂ. ಗಳಿಸಿದೆ. ಉಳಿದ 11 ಕೋಟಿ ರೂ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳಿಂದ ಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ಪತಿ ರಣಬೀರ್​ಗೆ ಬೆಂಬಲಿಸಲು ಮೊದಲ ಶೋಗೆ ಆಗಮಿಸಿದ ಪತ್ನಿ ಆಲಿಯಾ ಭಟ್​ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದರು. ಥಿಯೇಟರ್‌ಗಳತ್ತ ಆಗಮಿಸುತ್ತಿರುವ ಸಿನಿಪ್ರೇಕ್ಷಕರಿಂದ ಚಿತ್ರಮಂದಿರಗಳು ಹೌಸ್‌ಫುಲ್ ಆಗುತ್ತಿದ್ದು, ಹೆಚ್ಚಿನ ಪ್ರದರ್ಶನದ ಬೇಡಿಕೆಯನ್ನು ಪೂರೈಸಲು ಥಿಯೇಟರ್ ಮಾಲೀಕರು ಬೆಳಗ್ಗೆ ಮತ್ತು ಮಧ್ಯರಾತ್ರಿಯ ನಂತರ ಹೆಚ್ಚುವರಿ ಶೋಗಳನ್ನು ಸೇರಿಸಲು ಮುಂದಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net