VIDEO| ಹೆದ್ದಾರಿಯಲ್ಲಿ ಅಪಾಯಕಾರಿ ವ್ಹೀಲಿಂಗ್​; ಬ್ರಿಡ್ಜ್​ನಿಂದ ಬೈಕ್​ ಕೆಳಗೆಸೆದ ಸಾರ್ವಜನಿಕರು!

Wheeling
Published on

ಬೆಂಗಳೂರು: ಹೆದ್ದಾರಿ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಅಪಾಯಕಾರಿ ವ್ಹೀಲಿಂಗ್​ ಮಾಡಿ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಪುಂಡರ ವಿರುದ್ಧ ರೊಚ್ಚಿಗೆದ್ದು ಅವರ ಬೈಕ್​ ಕಸಿದು ಸೇತುವೆಯಿಂದ ಕಳೆದೆ ಎಸೆದಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಅಡಕಮಾರನಹಳ್ಳಿಯಲ್ಲಿ ನಡೆದಿದೆ.

ಪ್ರಕರಣದ ಹಿನ್ನೆಲೆ

ವಾರಾಂತ್ಯದ ಹಿನ್ನೆಲೆಯಲ್ಲಿ ಕೆಲ ಪುಂಡರ ಗುಂಪು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್​ ಮಾಡುತ್ತಿದ್ದರು. ಆ ಮೂಲಕ ಬೇರೆ ವಾಹನಗಳಿಗೆ ಆತಂಕ ಹುಟ್ಟಿಸುತ್ತಿದ್ದರು. ಈ ವೇಳೆ ಯುವಕನೊಬ್ಬ ವಾಹನಕ್ಜೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ವಾಹನ ಸವಾರರು ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಬೈಕ್​ಗಳನ್ನು ಬೆನ್ನಟ್ಟಿ ಹಿಡಿದು ಬೈಕ್​ ಕಿತ್ತುಕೊಂಡು ಬ್ರಿಡ್ಜ್​ನಿಂದ ಸರ್ವೀಸ್​ ರಸ್ತೆಗೆ ಎಸೆದಿದ್ದಾರೆ. ಇದನ್ನು ಕಂಡು ಕಕ್ಕಾಬಿಕ್ಕಿಯಾದ ಪುಂಡರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ವಿಭಾಗದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಬೈಕ್​ ವ್ಹೀಲಿಂಗ್​ನಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಬೈಕ್​ ಮಾಲೀಕ ಯಾರು, ಅದನ್ನು ಬಳಸುತ್ತಿದ್ದ ಯುವಕರು ಯಾರು ಎಂಬುದನ್ನು ಪತ್ತೆ ಹಚ್ಚಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತು ಬೈಕ್​ ಸವಾರ ಹಾಗೂ ಸಾರ್ವಜನಿಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸರಿಯಾದ ಶಿಕ್ಷೆ ಎಂದ ಜನ

ಇನ್ನು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವ್ಹೀಲಿಂಗ್​ ಮಾಡುವವರಿಗೆ ಇದೇ ರೀತಿ ಮಾಡಿದರೆ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಬಹುದು ಎಂದಿದ್ದಾರೆ. ಬೈಕ್ ಕೆಳಗೆ ಎಸೆದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದು, ಇಂತಹ ಪುಂಡರಿಗೆ ಕಾನೂನು ಭಯವಿಲ್ಲ, ಪೊಲೀಸರು ಕೂಡ ಏನೂ ಮಾಡದೇ ಇದ್ದಾಗ ಜನರೇ ಇಂತಹ ಕೆಲಸ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net