ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಮೆಗಾ ಹರಾಜು ಸೇರಿದಂತೆ ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾ ವಲಯದ ಗಮನ ಸೆಳೆಯುತ್ತಿದೆ. ಈ ವರ್ಷಾಂತ್ಯ ಅಥವಾ 2025ರ ಆರಂಭದಲ್ಲಿ ನಡೆಯಲಿರುವ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಫ್ರಾಂಚೈಸಿಗಳು ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಆರ್ಸಿಬಿ ಒಂದು ಹೆಜ್ಜೆ ಮುಂದಿದೆ ಎಂದರೆ ತಪ್ಪಾಗಲಾರದು.
ಈ ಬಾರಿಯ ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಬೇಕು ಅನ್ನೋ ಯೋಚನೆಯಲ್ಲಿ ಆರ್ಸಿಬಿ ಫ್ರಾಂಚೈಸಿ ಪ್ಲ್ಯಾನ್ ಮಾಡಿಕೊಂಡಿದೆ. ಅದಕ್ಕೂ ಮುನ್ನವೇ ತಮಗೆ ಬೇಕಾದ ಆಟಗಾರರನ್ನು ರೀಟೇನ್ ಮಾಡಿಕೊಳ್ಳಬೇಕಿದೆ. ಅದರಂತೆ ಈಗಾಗಲೇ ಮಾಜಿ ನಾಯಕ ವಿರಾಟ್ ಕೊಹ್ಲಿ, ವೇಗಿ ಮೊಹಮ್ಮದ್ ಸಿರಾಜ್ ಸೇರಿದಂತೆ ಓರ್ವ ವಿದೇಶಿ ಆಟಗಾರನನ್ನು ರೀಟೇನ್ ಮಾಡಿಕೊಂಡಿರುವ ಆರ್ಸಿಬಿ ನಾಯಕ ಫಾಫ್ರನ್ನು ಪಟ್ಟಿಯಿಂದ ಕೈಬಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ: ಆತ ತಂಡದಲ್ಲಿ ಇರುತ್ತಾನೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ; ಜಯ್ ಷಾ ಹೀಗೆನ್ನಲು ಕಾರಣವೇನು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಆಗಸ್ಟ್ 13ರಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಫಾಫ್ಗೆ ಕೊಕ್ ಕೊಟ್ಟು ಅವರ ಸ್ಥಾನಕ್ಕೆ ಬದಲಿಯಾಗಿ ಕೆ.ಎಲ್. ರಾಹುಲ್ರನ್ನು ಕರೆತರಲು ಫ್ರಾಂಚೈಸಿ ಚಿಂತನೆ ನಡೆಸಿದೆ. ಇದಲ್ಲದೆ ಫಾಫ್ ಡುಪ್ಲೆಸಿಸ್ ಅವರನ್ನು ರಿಲೀಸ್ ಮಾಡಿ ಮತ್ತೆ ಮೆಗಾ ಆಕ್ಷನ್ನಲ್ಲಿ ಖರೀದಿಸುವ ಬಗ್ಗೆ ಆರ್ಸಿಬಿ ಯೋಚಿಸುತ್ತಿದ್ದು, ಮೆಗಾ ಹರಾಜಿನಲ್ಲಿ ಅಳೆದು ತೂಗಿ ಬಿಡ್ ಮಾಡಲು ಮುಂದಾಗಿದೆ.
ಏಕೆಂದರೆ ಪ್ರತಿಬಾರಿಯೂ ಆರ್ಸಿಬಿ ಪಾಲಿಗೆ ಮುಳುವಾಗಿರುವುದು ಬೌಲಿಂಗ್ ವಿಭಾಗ ಎಂದರೆ ತಪ್ಪಾಗಲಾರದು. ಎಷ್ಟೇ ದೊಡ್ಡ ಮೊತ್ತ ಪೇರಿಸಿದರು ಅದನ್ನು ರಕ್ಷಿಸಿಕೊಳ್ಳುವಲ್ಲಿ ಬೌಲರ್ಗಳು ವಿಫಲರಾಗಿದ್ದಾರೆ. ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಬೌಲರ್ ಹಾಗೂ ಸ್ಪಿನ್ನರ್ಗಳ ಮೇಲೆ ಕಣ್ಣಿಟ್ಟಿರುವ ಆರ್ಸಿಬಿ ಅತ್ಯುತ್ತಮರನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಲು ಮುಂದಾಗಿದೆ. ಅಂತಿಮವಾಗಿ ಯಾರೆಲ್ಲಾ ಆರ್ಸಿಬಿ ಪಾಲಾಗಲಿದ್ದಾರೆ ಎಂಬುದನ್ನು ಮೆಗಾ ಹರಾಜಿನವರೆಗೂ ಕಾದು ನೋಡಬೇಕಿದೆ.