ಬಾರ್ಕೂರಲ್ಲಿ ಅಂಗನವಾಡಿ ಶಿಕ್ಷಣ ಭಾರ : ಮೂಲಸೌಕರ್ಯ ಕೊರತೆ ; ಪಾಲಕರ ಅಸಮಾಧಾನ

barkuru
ಬಾರಕೂರಿನ ಮೆರಿನೋಲ್ ಶಾಲಾ ರಂಗಮಂದಿರದಲ್ಲಿರುವ ಅಂಗನವಾಡಿ
Published on

ಬಂಡೀಮಠ ಶಿವರಾಮ ಆಚಾರ್ಯ

ಬಾರ್ಕೂರಿನ ಮೆರಿನೋಲ್ ಶಾಲಾ ರಂಗಮಂದಿರದಲ್ಲಿ ಮಕ್ಕಳ ಪ್ರಾಥಮಿಕ ಪೂರ್ವ ಶಿಕ್ಷಣ ವ್ಯವಸ್ಥೆಯ ಅಂಗನವಾಡಿ ಅನೇಕ ಮೂಲಸೌಲಭ್ಯ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದರ ಕುರಿತು ಮಕ್ಕಳ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾರಕೂರು ನಗರ ಮಧ್ಯಭಾಗ ಹೊಸಾಳ ಗ್ರಾಮದಲ್ಲಿ ಹಲವು ದಶಕದಿಂದ ಮೆರಿನೋಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ರಂಗಮಂದಿರದಲ್ಲಿ ಅಂಗನವಾಡಿ ಕಾರ್ಯನಿರ್ವಹಿಸುತ್ತಿದ್ದು, ಸೂಕ್ತ ವ್ಯವಸ್ಥೆಗಳಿಲ್ಲದೆ ಮಧ್ಯಾಹ್ನದ ಬಳಿಕ ಮಳೆ, ಬಿಸಿಲು ಪುಟಾಣಿ ಮಕ್ಕಳ ಮೇಲೆ ಬೀಳುತ್ತದೆ.

ಮಕ್ಕಳ ಸಂಖ್ಯೆ ಇಳಿಮುಖ

ಬಾಲ್ಯದಲ್ಲಿ ಶಿಕ್ಷಣ ಪಡೆಯುವ ಜಾಗದಲ್ಲಿ ಇಂತಹ ಶಿಕ್ಷೆ ಅನುಭವಿಸುವ ಮಕ್ಕಳ ಮತ್ತು ಪಾಲಕರ ಗೋಳು ಕೇಳುವವರೆ ಇಲ್ಲದಂತಾಗಿದೆ. ಕಳೆದ ವರ್ಷ 20 ಮಕ್ಕಳಿದ್ದು, ಈ ವರ್ಷ ಅಂಗನವಾಡಿಯಲ್ಲಿ 6 ಮಕ್ಕಳಿದ್ದಾರೆ. ಮಕ್ಕಳಿಗೆ ಊಟ ಮಾಡುವ, ಮಲಗುವ, ಆಟ ಆಡುವ ಎಲ್ಲ ಜಾಗವೂ ರಂಗಮಂಟಪದ್ದು, ಒಂದು ಭಾಗದಲ್ಲಿ ಅಡುಗೆ ಕೋಣೆ ಮತ್ತು ಆಹಾರ ಸಾಮಗ್ರಿ ಇರಿಸಲಾಗಿದೆ. ಗ್ಯಾಸ್ ಸೇರಿದಂತೆ ಅತಿ ಉಪಯುಕ್ತ ವಸ್ತುಗಳನ್ನು ಪೆಟ್ಟಿಗೆಯಲ್ಲಿ ಇಡಲಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಪರ್ಧೆ ನಡುವೆ, ಸರ್ಕಾರ ಅಂಗನವಾಡಿಯನ್ನು ಮೇಲ್ದರ್ಜೆಗೇರಿಸುವ ಮತ್ತು ಬೇರೆ ಹೆಸರನ್ನು ಇಡುವ ಯೋಜನೆಗಿಂತ ತೀರಾ ಬಡವರ ಮಕ್ಕಳು ಶಿಕ್ಷಣ ಪಡೆಯಲು ಮೂಲ ವ್ಯವಸ್ಥೆ ಸಂಭಂದ ಪಟ್ಟವರು ಮಾಡಬೇಕಾಗಿದೆ.

ರಕ್ಷಣೆ ಇಲ್ಲ

ಆಹಾರ ಸಾಮಗ್ರಿ ಇಡಲಾದ ಕೋಣೆ ಕಿಂಡಿಬಾಗಿಲು ಇಲ್ಲವಾಗಿ ಪರದೆ ಕಟ್ಟಲಾಗಿದೆ. ಮಕ್ಕಳಿಗೆ ಶೌಚಕ್ಕೆ ಇಲ್ಲಿನ ಪ್ರಾಥಮಿಕ ಶಾಲೆಗೆ ಹೋಗಬೇಕಾಗಿದ್ದು, ಮಕ್ಕಳು ಹೊರಗಡೆ ಹೋಗದಂತೆ ಯಾವುದೇ ರಕ್ಷಣೆ ಇಲ್ಲ. ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಆಳೆತ್ತರದ ಹುಲ್ಲು ಗಿಡಗಂಟಿ ಬೆಳೆದು ಅಪಾಯಕಾರಿಯಾಗಿದೆ. ಅಕ್ಷರ ಕಲಿಸುವ ಕರಿಹಲಗೆ ನೆಲದ ಮೇಲಿದೆ.

ಜಿಲ್ಲೆಯ ನಾನಾ ಭಾಗದಲ್ಲಿ ಇರುವ ಅನೇಕ ಅಂಗನವಾಡಿಗಳಲ್ಲಿ ಎಲ್ಲ ಸೌಲಭ್ಯ ಇದ್ದು ಕೂಡ ಮಕ್ಕಳಿಲ್ಲದೆ ಶಾಲೆ ಮುಚ್ಚುತ್ತಿದೆ. ಈ ಅಂಗನವಾಡಿಯಲ್ಲಿ ನಾವು ಮಕ್ಕಳನ್ನು ಕರೆದುಕೊಂಡು ಬಂದು ನಾವು ಕೂಡ ಅವರೊಂದಿಗೆ ಇದ್ದು ಮನೆಗೆ ಕರೆದುಕೊಂಡು ಹೋಗಬೇಕಾದ ಸ್ಥಿತಿ. ಶಾಲೆಯಂತಿರದಿದ್ದರೂ ಶಿಕ್ಷಣ ಇದೆ ಎನ್ನುವ ಒಂದೇ ಕಾರಣಕ್ಕೆ ನಮ್ಮ ಮಕ್ಕಳನ್ನು ಸೇರಿಸಿದ್ದೇವೆ.
ಅಶ್ವಿನಿ ಆಚಾರ್ಯ, ಮಕ್ಕಳ ಪಾಲಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net