ವಿಜಯವಾಣಿ ಸುದ್ದಿಜಾಲ ಬೈಂದೂರು
ಶಾಲಾ ಸಂಸತ್ತು ಕೇವಲ ಬಿರುದು ಮತ್ತು ಜವಾಬ್ದಾರಿ ನೀಡುವುದಲ್ಲ. ಇದು ಸಾಮರ್ಥ್ಯ ಗುರುತಿಸುವಿಕೆ, ಬೆಳವಣಿಗೆ ಮತ್ತು ಶ್ರೇಷ್ಠತೆ ಪ್ರಯಾಣಕ್ಕೆ ಬದ್ಧತೆಯಾಗಿದೆ. ಅಲ್ಲದೆ ನಾಯಕತ್ವ ಮತ್ತು ಜವಾಬ್ದಾರಿ ಸಾರ ಪ್ರದರ್ಶಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬೈಂದೂರು ಠಾಣಾ ಉಪನಿರೀಕ್ಷಕ ನವೀನ್ ಗೋರ್ಕರ್ ಹೇಳಿದರು.
ಬೈಂದೂರಿನ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ 2024-25ರ ಶೈಕ್ಷಣಿಕ ಅವಧಿ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಬಾಲ್ಯದಲ್ಲಿ ಕಲಿಸಿದ ಶಿಸ್ತು, ಸಂಯಮ, ಧೈರ್ಯ ಭವಿಷ್ಯ ರೂಪಿಸುತ್ತದೆ. ಇಂದಿನ ಮಕ್ಕಳು ಬಹಳ ಬೇಗ ಔಪಚಾರಿಕ ಶಿಕ್ಷಣ ರಂಗ ಪ್ರವೇಶಿಸುತ್ತಾರೆ ಮತ್ತು ದಿನದ ಬಹಳಷ್ಟು ಸಮಯ ಔಪಚಾರಿಕ ಶಿಕ್ಷಣಕ್ಕಾಗಿ ವ್ಯಯಿಸುತ್ತಾರೆ. ಹಾಗಾಗಿ ಅವರಿಗೆ ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಶಿಕ್ಷಣದ ಅರಿವು ಸಿಗದಿದ್ದರೆ ಶಾಶ್ವತವಾಗಿಯೇ ವಂಚಿತರಾಗುತ್ತಾರೆ ಎಂದರು.
ಚುನಾಯಿತ ಹೆಡ್‌ಗರ್ಲ್ ಮೆಹೆಕ್ ಮತ್ತು ಹೆಡ್‌ಬಾಯ್ ನಫೀಸ್ ತಮ್ಮನ್ನು ಪರಿಚಯಿಸಿಕೊಂಡರು. ಮುಖ್ಯ ಶಿಕ್ಷಕಿ ಅಮಿತಾ ಶೆಟ್ಟಿ, ಕಾರ್ಯಕ್ರಮ ಉದ್ಘಾಟಿಸಿ, ಸದಸ್ಯರಿಗೆ ಬ್ಯಾಡ್ ನೀಡಿದರು. ವಿದ್ಯಾರ್ಥಿ ಪರಿಷತ್ ಸದಸ್ಯರು ಶಾಲಾ ಧೈಯವಾಕ್ಯವನ್ನು ಗೌರವಿಸುವ ಪ್ರತಿಜ್ಞೆ ಮಾಡಿದರು. ಶಿಕ್ಷಕ ಜಗದೀಶ್ ನಾಯ್ಕ ಇದ್ದರು. ಸಹಶಿಕ್ಷಕಿಯರಾದ ಅನುಷಾ ಸ್ವಾಗತಿಸಿದರು. ಅನಿತಾ ಹಾಗೂ ರೇಷ್ಮಾ ಅಡಪ್ಪಾ ಕಾರ್ಯಕ್ರಮ ನಿರೂಪಿಸಿದರು. ವಿನುತಾ ವಂದಿಸಿದರು.