ಅಮರಾವತಿ: ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದ ತೆಲುಗು ದೇಶಂ ಅಭ್ಯರ್ಥಿ ಡಾ. ಪೆಮ್ಮಸಾನಿ ಚಂದ್ರಶೇಖರ್ ಅವರು ಲೋಕಸಭೆ ಚುನಾವಣೆಯ ಕಣದಲ್ಲಿರುವ ದೇಶದ ಅತ್ಯಂತ ಶ್ರಿಮಂತ ಅಭ್ಯರ್ಥಿಗಳಲ್ಲಿ ಒಬ್ಬರೆನಿಸಿದ್ದಾರೆ. ಅನಿವಾಸಿ ಭಾರತೀಯರಾಗಿದ್ದ ಇವರು ನಾಮಪತ್ರ ಸಲ್ಲಿಸಿದ್ದು ಒಟ್ಟು ಆಸ್ತಿ ಮೌಲ್ಯ ಸುಮಾರು 5,785 ಕೋಟಿ ರೂ.ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇವಿಎಂ ಮತ್ತು ವಿವಿಪ್ಯಾಟ್ ಮತಗಳ ತಾಳೆ ವಿವಾದ: ತೀರ್ಪು ಕಾಯ್ದಿರಿಸಿದ ಕೋರ್ಟ್
ವಿವಿಧ ವ್ಯಾಪಾರ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಚಂದ್ರಶೇಖರ್ ಬಳಿ 2,316 ಕೋಟಿ. ರೂ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದು, ಅವರ ಪತ್ನಿ ಕೊನೇರು ಶ್ರೀರತ್ನ ಬಳಿ 2,289 ಕೋಟಿ ರೂ. ಮೌಲ್ಯ ಚರಾಸ್ತಿ ಇರುವುದಾಗಿ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ. ಇದಲ್ಲದೆ 72 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಚಂದ್ರಶೇಖರ್ ಹೊಂದಿದ್ದು ಅವರ ಪತ್ನಿ ಬಳಿ 34 ಕೋಟಿ, ರೂ ಮೌಲ್ಯದ ಸ್ಥಿರಾಸ್ತಿ ಇದೆ. ಇದರ ಜೊತೆಗೆ ಜಗತ್ತಿನ್ನಲ್ಲೇ 101 ಕಂಪೆನಿಗಳಲ್ಲಿ ಈ ದಂಪತಿ ಜಂಟಿ ಷೇರುಗಳನ್ನು ಹೊಂದಿದ್ದಾರೆ.
ಉದ್ಯಮಿಯಾಗಿರುವ ಚಂದ್ರಶೇಖರ್ ಅಮೆರಿಕದಲ್ಲಿ ವ್ಯಾಸಂಗ ಮಾಡಿ ಅಲ್ಲೇ ಉಳಿದುಕೊಂಡಿದ್ದರು. ಈಗ ಭಾರತಕ್ಕೆ ಮರಳಿ ಬಂದು ರಾಜಕೀಯ ಪ್ರವೇಶ ಮಾಡಿದ್ದರು. ವೈಎಸ್‌ಆರ್‌ಸಿಪಿ ಪಕ್ಷದ ಅಭ್ಯರ್ಥಿ ಕೆ ವೆಂಕಟ ರೋಸಯ್ಯ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಉದ್ಯಮಿಯಾಗಿರುವ ಚಂದ್ರಶೇಖರ್ ಆಂಧ್ರಪ್ರದೇಶದ ಎನ್ಟಿಆರ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ, ಅಮೆರಿಕದ ಪೆನ್ಸಿಲ್ವೇನಿಯಾದ ಡ್ಯಾನಿವಿಲ್ಲೆಯಲ್ಲಿರುವ ಗೀಸಿಂಗರ್ ವೈದ್ಯಕೀಯ ಕಾಲೇಜಿನಿಂದ ಆಂತರಿಕ ವೈದ್ಯಕೀಯದಲ್ಲಿ MD ಅನ್ನು ಪೂರ್ಣಗೊಳಿಸಿದ್ದಾರೆ. ಅಪಾರ ಸಂಪತ್ತು ಮತ್ತು ಪ್ರಭಾವಿಗಳಾಗಿದ್ದರೂ, ಡಾ. ಚಂದ್ರಶೇಖರ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ.
175 ವಿಧಾನಸಭೆ ಸದಸ್ಯ ಬಲ ಮತ್ತು 25 ಲೋಕಸಭಾ ಕ್ಷೇತ್ರಗಳಲ್ಲಿರುವ ಆಂಧ್ರಪ್ರದೇಶದಲ್ಲಿ ಮೇ 13 ರಂದು ಏಕಕಾಲದಲ್ಲಿ ಮತದಾನ ನಡೆಯಲಿದ್ದು ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಎನ್‌ಡಿಎ ಮೈತ್ರಿ ಪಕ್ಷಗಳ ನಡುವಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಟಿಡಿಪಿಗೆ 144 ಅಸೆಂಬ್ಲಿ ಮತ್ತು 17 ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಬಿಜೆಪಿ ಆರು ಲೋಕಸಭೆ ಮತ್ತು 10 ವಿಧಾನಸಭೆ ಸ್ಥಾನಗಳನ್ನು ಸ್ಪರ್ಧಿಸಲಿದೆ. ಜನಸೇನಾ ಎರಡು ಲೋಕಸಭೆ ಮತ್ತು 21 ವಿಧಾನಸಭಾ ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ.
ಆಂಧ್ರ ಚುನಾವಣೆ: ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ…?