

ವಿಜಯವಾಡ: ವಿಚ್ಛೇದನ ನೀಡುವಂತೆ ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಅತ್ತೆಯನ್ನು ಅಳಿಯನೊಬ್ಬ ಸಾರ್ವಜನಿಕವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ನಾಗಮಣಿ(47) ಎಂದು ಗುರುತಿಸಲಾಗಿದ್ದು, ರಾಜೇಶ್(37) ಎಂಬಾತನೇ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಈಗಾಗಲೇ ರಾಜೇಶ್ ಹಾಗೂ ಆತನ ಪತ್ನಿಯ ವಿಚ್ಛೇದನದ ಅರ್ಜಿಯು ನ್ಯಾಯಾಲಯದ ಮುಂದೆ ಬಾಕಿ ಇದೆ. ಆದರೆ ಪತ್ನಿಯಿಂದ ದೂರವಾಗಲು ಆಕೆಯ ಕುಟುಂಬಸ್ಥರೇ ಕಾರಣವೆಂದು ಆತ ಭಾವಿಸಿದ್ದ.
ಇದನ್ನೂ ಓದಿ: ಹಿಜಾಬ್ಗೆ ಆಕ್ಷೇಪ: ಪ್ರಾಂಶುಪಾಲರು ಸೇರಿ ಮೂವರು ಶಿಕ್ಷಕರ ವಿರುದ್ಧ ದೂರು ದಾಖಲು
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಚನುಮೋಲು ವೆಂಕಟರಾವ್ ಮೇಲ್ಸೇತುವೆ ಬಳಿ ಆರೋಪಿಯು ತೆಂಗಿನಕಾಯಿ ಕತ್ತರಿಸಲು ಬಳಸುವ ಕುಡುಗೋಲಿನಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಈ ಕುರಿತು ಮಾತನಾಡಿರುವ ಪೋಲೀಸರು, ರಾಜೇಶ್ ತನ್ನ ಮಗಳಿಗೆ ವಿಚ್ಛೇದನ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿದ ಆರೋಪದ ಮೇಲೆ ನಾಗಮಣಿ ವಿರುದ್ಧ ದ್ವೇಷವನ್ನು ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತ ರೊಚ್ಚಿಗೆದ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)