

ಅಮರಾವತಿ: ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ತೆಲಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ಸಿಐಡಿ ಇಂದು ಬೆಳಿಗ್ಗೆ ನೋಟಿಸ್ ಜಾರಿಗೊಳಿಸಿದೆ.
ಆಂಧ್ರಪ್ರದೇಶದ ಹೊಸ ರಾಜಧಾನಿಯಾಗುತ್ತಿರುವ ಅಮರಾವತಿಯಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದ ವೇಳೆ ಅಪಾರ ಪ್ರಮಾಣದ ಭೂ ಹಗರಣ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ಅವರು ಪ್ರಕರಣದ ತನಿಖೆಯನ್ನು ಇತ್ತೀಚೆಗೆ ಸಿಐಡಿ ಗೆ ವಹಿಸಿದ್ದರು.
ಸಿಐಡಿ ನೋಟಿಸ್ ಪ್ರಕಾರ ನಾಯ್ಡು ಅವರು ಖುದ್ದು ವಿಚಾರಣೆಗೆ ಹಾಜರಾಗಬೇಕಿದೆ. ಅಲ್ಲದೇ ಅವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ನಾಯ್ಡು ಮೇಲೆ ಸಿಐಡಿ 120b, 166,167, and 217 ಅಡಿ ಪ್ರಕರಣ ದಾಖಲಿಸಿದೆ. ಅಲ್ಲದೇ ಅವರಿಗೆ ಬಂಧನದ ಭೀತಿಯೂ ಕಾಡುತ್ತಿದೆ.
ಸಿಐಡಿ ನೋಟಿಸ್ ಜಾರಿಗೊಳಿಸಿರುವ ಸಂಗತಿ ಆಂಧ್ರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ. ಸಿಎಂ ಜಗನಮೋಹನ್ ರೆಡ್ಡಿ ಹಗೆತನ ಸಾಧಿಸುತ್ತಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ. ನಾಯ್ಡು ಅವರಿಗೆ ಸಿಐಡಿ ನೋಟಿಸ್ ನೀಡಿರುವ ಸಂಗತಿ ಟ್ವಿಟ್ಟರ್ನಲ್ಲಿ ಟ್ರಂಡಿಂಗ್ ಆಗಿದ್ದು, ಟಿಡಿಪಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಪರ ವಿರೋಧದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.