ದೀಪಾವಳಿಗೆ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ 'ಡ್ರೀಮ್ ಗರ್ಲ್'

ananya
Published on

ಮುಂಬೈ: ಅನನ್ಯಾ ಪಾಂಡೆ...ಬಾಲವುಡ್​ ಕ್ರೇಜ್​ ಇರುವ ಹೀರೋಯಿನ್​. 24ವರ್ಷದ ಅನನ್ಯಾ ಇಷ್ಟು ಚಿಕ್ಕವಯಸ್ಸಿಗೇ ಸಾಕಷ್ಟು ಸಂಪಾದನೆ ಮಾಡಿದ್ದು, ಮುಂಬೈನಲ್ಲಿ ಹೊಸ ಮತ್ತು ಅದ್ದೂರಿ ಮನೆಯನ್ನು ಖರೀದಿಸಿದ್ದಾರೆ. 'ಗೃಹ ಪ್ರವೇಶ' ಪೂಜೆಯೊಂದಿಗೆ ಧನ್ತೇರಸ್ ಅನ್ನು ಆಚರಿಸಿದ್ದಾರೆ. ಈ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಾಕಿ 'ಇದು ನನ್ನ ಹೊಸ ಮನೆ' ಎಂದು ಸಂತಸದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮೊದಲ ಫೋಟೋದಲ್ಲಿ ಅನನ್ಯಾ ಹಳದಿ ಸಲ್ವಾರ್ ಸೂಟ್‌ನಲ್ಲಿ ಕರಮುಗಿದು ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಇದು ಆಕೆಯ ಹೊಸ ಮನೆಯಲ್ಲಿ ನಡೆದ ಪೂಜೆಯ ಚಿತ್ರ. 2ನೇ ಪೋಸ್ಟ್‌ನಲ್ಲಿ ಹೊಸ್ತಿಲಲ್ಲಿ ತೆಂಗಿನಕಾಯಿ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಇದರ ಜತೆಗೆ “ನನ್ನ ಸ್ವಂತ ಮನೆ, ನಿಮ್ಮೆಲ್ಲರ ಪ್ರೀತಿ ಇರಲಿ, ಹೊಸ ಆರಂಭಕ್ಕೆ .. ಹ್ಯಾಪಿ ಧನ್ತೇರಸ್.” ಎಂದು ಬರೆದುಕೊಂಡಿದ್ದಾರೆ.

ಇನ್ನು ಅನನ್ಯಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸ್ನೇಹಿತರು, ಕುಟುಂಬ ಮತ್ತು ಹಿಂದಿ ಚಲನಚಿತ್ರ ಸಹೋದ್ಯೋಗಿಗಳು ನಟಿಗೆ ವೈಯಕ್ತಿಕ ಸಾಧನೆಗಾಗಿ ಅಭಿನಂದನೆಗಳನ್ನು ಕಳುಹಿಸಿದ್ದಾರೆ. ಟೈಗರ್ ಶ್ರಾಫ್ ತಮ್ಮ ಪೋಸ್ಟ್ ಅಡಿಯಲ್ಲಿ ಕಾಮೆಂಟ್ ಮಾಡಿ "ವಾವ್ ಅನನ್ಯಾ ಅಭಿನಂದನೆಗಳು" ಎಂದು ಹೇಳಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ, “ಅಭಿನಂದನೆಗಳು ನನ್ನ ಪ್ರೀತಿಯ ಅನನ್ಯಾ. “ವಾವ್! ಇದು ತ್ವರಿತವಾಗಿದೆ. ಈ ಮನೆಯು ನಿಮಗೆ ಅಪಾರ ಅದೃಷ್ಟ ಮತ್ತು ಸಂತೋಷವನ್ನು ನೀಡಲಿ ಎಂದಿದ್ದಾರೆ.

ಅನನ್ಯಾ ಅವರ ತಾಯಿ ಭಾವನಾ ಪಾಂಡೆ “ನಿನ್ನ ಬಗ್ಗೆ ತುಂಬಾ ಹೆಮ್ಮೆ ಇದೆ” ಎಂದಿದ್ದು, ಶರ್ವರಿ, ಮಾಳವಿಕಾ ಮೋಹನನ್, ಗೌಹರ್ ಖಾನ್, ಅಮೃತಾ ಅರೋರಾ, ಶನಯಾ ಕಪೂರ್, ಸನ್ಯಾ ಮಲ್ಹೋತ್ರಾ ಮತ್ತು ಮಹೀಪ್ ಕಪೂರ್ ಕೂಡ ನಟಿಗೆ ಶುಭ ಹಾರೈಸಿದ್ದಾರೆ.

ಅನನ್ಯಾ ನಟ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆ ಅವರ ಪುತ್ರಿ. ಆಕೆ 2019 ರ ಚಲನಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ 2 ನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಇತ್ತೀಚೆಗೆ ಕರಣ್ ಜೋಹರ್ ಅವರ ಟಾಕ್ ಶೋ, ಕಾಫಿ ವಿತ್ ಕರಣ್ನಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ಕಾಣಿಸಿಕೊಂಡರು.

ಅನನ್ಯಾ ಆಯುಷ್ಮಾನ್ ಖುರಾನಾ ಅವರೊಂದಿಗೆ ಡ್ರೀಮ್ ಗರ್ಲ್ 2 ನಲ್ಲಿ ನಟಿಸಿದ್ದು, ಪ್ರಸ್ತುತ ಅವರು ಸಿದ್ಧಾಂತ್ ಚತುರ್ವೇದಿ ಮತ್ತು ಆದರ್ಶ್ ಗೌರವ್ ಅವರ ಮುಂದಿನ ಚಿತ್ರ ಖೋ ಗಯೇ ಹಮ್ ಕಹಾನ್‌ಗಾಗಿ ತಯಾರಿ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net