

ಬೆಂಗಳೂರು: ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರ 64 ನೇ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಸೆ. 22 ಮತ್ತು 23 ರಂದು ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಅನಂತ ನಮನ 64 ಶೀರ್ಷಿಕೆಯ ಅಡಿಯಲ್ಲಿ ವೈವಿಧ್ಯಮಯ-ಪ್ರೇರಣಾದಾಯಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ರಾಜ್ಯಪಾಲ ಥಾವರಚಂದ್ ಗೆಹಲೋಥ್ ಅವರಿಂದ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರದ ಉದ್ಘಾಟನೆ ನೆರವೇರಲಿದೆ. ಅಲ್ಲದೇ, ಈ ಬಾರಿ ದೇಗುಲ ದರ್ಶನ ಕಾರ್ಯಕ್ರಮದಲ್ಲಿ ಹೊಯ್ಸಳರ ಪವಿತ್ರ ವಾಸ್ತುಶಿಲ್ಪಗಳ ಸಮೂಹವನ್ನು ಪ್ರತಿಬಿಂಬಿಸುವ ಅಭೂತಪೂರ್ವ ಹೊಯ್ಸಳರ ಶಿಲ್ಪದರ್ಶನ ಎಂಬ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.
ನಗರದ ಗವಿಪುರಂನ ಅದಮ್ಯ ಚೇತನ ಕಚೇರಿ ಬಳಿ ಇರುವ ಮುಗಜಿ ಧೋಂಡುಸಾ ಸಭಾಂಗಣದಲ್ಲಿ ಎರಡು ದಿನಗಳ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನಂತಕುಮಾರ ಪ್ರತಿಷ್ಠಾನದ ‘ಅನಂತಪಥ’ ಮಾಸಪತ್ರಿಕೆಯ ೩೯ನೇ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಹೊಯ್ಸಳ ನಿರ್ಮಿತ ದೇಗುಲಗಳ, ಶಿಲ್ಪಗಳು ಉತ್ಕೃಷ್ಟ ಕಲಾಪ್ರೌಢಿಮೆಗೆ ಸಾಕ್ಷಿಯಾಗಿದ್ದು, ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವ ಶುಭ ಸಂದರ್ಭದಲ್ಲಿ ಹೊಯ್ಸಳ ಶಿಲ್ಪದರ್ಶನ’ ಶೀರ್ಷಿಕೆಯಡಿ ಹೊಯ್ಸಳ ಅರಸರ ಕಾಲದ ದೇವಾಲಯಗಳ ವಾಸ್ತುಶಿಲ್ಪಗಳ ಚಿತ್ರಗಳು, ’ಹಿಮಾಲಯ ದೃಶ್ಯವೈಭವ’ ಶೀರ್ಷಿಕೆಯಡಿ ಕೈಲಾಸ ಮಾನಸ ಸರೋವರದ ಸುಂದರ ಹಾಗೂ ವಿಸ್ಮಯಕಾರಿ ಚಿತ್ರಗಳು ಮಾತ್ರವಲ್ಲ ಭಾರತೀಯ ಸಂಸ್ಕೃತಿ, ಕಲೆ ಬಿಂಬಿಸುವ ವಸ್ತುಪ್ರದರ್ಶನವೂ ಸಹ ಸಮಾರಂಭದ ಆಕರ್ಷಣೆಯಾಗಿರಲಿದೆ.
ಅನಂತ ನಮನ ಕೃತಿ ಲೋಕಾರ್ಪಣೆ:
ಅನಂತಕುಮಾರರ ಒಡನಾಡಿಗಳ ಆತ್ಮೀಯ ಬರಹಗಳನ್ನು ಒಳಗೊಂಡ ‘ಅನಂತ ನಮನ’ ಕೃತಿಯು ಸೆ.೨೩ ರಂದು ಲೋಕಾರ್ಪಣೆಗೊಳ್ಳಲಿದೆ. ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಗುವುದು. ಎರಡು ದಿನಗಳ ಕಾಲ ನಡೆಯುವ ಈ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಹಾಗೂ ಅನಂತಕುಮಾರ್ ಅವರ ಒಡನಾಡಿಗಳು, ಅಭಿಮಾನಿಗಳು, ಮುಖಂಡರು-ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.
ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರ:
ದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ನ ಇನ್ನೋವೇಟಿವ್ ಸೆಲ್ ಆಗಿರುವ ಇಂಡಿಯನ್ ನಾಲೇಜ್ ಸಿಸ್ಟಮ್ (ಐಕೆಎಸ್) ಅನುದಾನದ ಅಡಿಯಲ್ಲಿ ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಭಾರತೀಯ ಜ್ಞಾನ ಪ್ರಶಿಕ್ಷಣ ಕೇಂದ್ರವನ್ನು ಜಯನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಹಸಿರು ಭಾನುವಾರದ ಮಾದರಿಯಲ್ಲಿ ಹಸಿರು ಜೀವನ ಶೈಲಿ ಪ್ರದರ್ಶಿನಿ ಎಂಬ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದು, ಅನಂತ ಹಸಿರು ಜೀವನ ಶೈಲಿ ಎಂಬ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲಾಗುತ್ತಿದೆ. ನೈಸರ್ಗಿಕ ಸ್ನೇಹಿ ವಸ್ತುಗಳ ಮಾರಾಟದ ಜತೆಗೆ ೬೪ ವಿವಿಧ ಜಾತಿಯ ಗಿಡಗಳು ಮತ್ತದರ ಮಾಹಿತಿ ನೀಡಲಾಗುತ್ತಿದೆ ಎಂದು ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.