ಬಿಜೆಪಿ ಸರ್ಕಾರ ಬರಲು ಆನಂದ್‌ಸಿಂಗ್ ಕಾರಣ: ಸಚಿವ ಸೋಮಶೇಖರ್

ST Somashekar and Ananda singh
Published on

ಬಳ್ಳಾರಿ: ‘‘ಸಮ್ಮಿಶ್ರ ಸರ್ಕಾರ ಇದ್ದಾಗ ನಾವೆಲ್ಲ ರಾಜೀನಾಮೆ ಕೊಡ್ತಿವಿ ಕೊಡ್ತಿವಿ ಅಂತ ಹೇಳುತ್ತಿದ್ದೆವೇ ಹೊರತು ತಕ್ಷಣ ಯಾರೂ ಕೊಡಲಿಲ್ಲ; ಎಲ್ಲರಿಗಿಂತ ಮೊದಲು ರಾಜೀನಾಮೆ ಕೊಟ್ಟಿದ್ದು ಆನಂದ್‌ಸಿಂಗ್. ಹಾಗಾಗಿ ಬಿಜೆಪಿ ಸರ್ಕಾರಕ್ಕೆ ನಾಂದಿ ಹಾಡಿದವರು ಅವರೇ’’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

‘‘ಆನಂದ್‌ಸಿಂಗ್ ಮೊದಲು ರಾಜೀನಾಮೆ ನೀಡಿದ್ದರು. ನಂತರ ನಾವು ರಾಜೀನಾಮೆ ಕೊಟ್ಟೆವು. ಹಾಗಾಗಿ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಬಂತು. ಸಮ್ಮಿಶ್ರ ಸರ್ಕಾರ ಪತನಕ್ಕೆ ಮುನ್ನುಡಿ ಬರೆದವರು, ಬಿಜೆಪಿ ಸರ್ಕಾರಕ್ಕೆ ನಾಂದಿ ಹಾಡಿದವರು ಆನಂದಸಿಂಗ್ ಅವರೇ’’ ಎಂದು ಗುಣಗಾನ ಮಾಡಿದರು.

‘‘ಬಿಜೆಪಿಗೆ ಸೇರ್ಪಡೆಯಾದ ಎಂಟಿಬಿ ನಾಗರಾಜ್, ಶಂಕರ್ ಅವರಿಗೆ ಈಗ ಅವಕಾಶ ಸಿಕ್ಕಿದೆ. ಪ್ರತಾಪಗೌಡ ಪಾಟೀಲ್, ಮುನಿರತ್ನ ಚುನಾವಣೆಗೆ ಹೋಗುತ್ತಾರೆ. ಎಚ್. ವಿಶ್ವನಾಥ್‌ಗೂ ಪಕ್ಷ ಸೂಕ್ತ ಸ್ಥಾನ ಮಾನ ಕೊಡುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ನಾನು ಎರಡು ಗಂಟೆ ಮಾತನಾಡಿದ್ದೇನೆ. ಅವರೂ ಒಪ್ಪಿಕೊಂಡಿದ್ದಾರೆ. ಕೋರ್ ಕಮಿಟಿಯಿಂದ ಯಾವುದೇ ರೀತಿಯ ಕಿರಿಕ್ ಇಲ್ಲ’’ ಎಂದು ವಿವರಿಸಿದರು.

ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ತಮಗೆ ತಪ್ಪಲು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಅಂತ ವಿಶ್ವನಾಥ್ ಹೇಳಿರುವುದು ಸರಿಯಲ್ಲ, ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ. ಅವರು ಹೇಗೆ ಟಿಕೆಟ್ ತಪ್ಪಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net